ಹಾರೋಹಳ್ಳಿ ಶ್ರೀನಿವಾಸ ಅಯ್ಯರ್ ದೊರೆಸ್ವಾಮಿ ಅವರು ಎಚ್.ಎಸ್.ದೊರೆಸ್ವಾಮಿ ಎಂದೇ ಪ್ರಸಿದ್ಧರು ಸ್ವಾತಂತ್ರ – ಸ್ವಾಭಿಮಾನದ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ ಅವರಿಗೀಗ ತೊಂಬತ್ತರ ಸಂಭ್ರಮ (ಜ: ಏಪ್ರಿಲ್ ೧೦. ೧೯೧೮). ಗುರುವಾರ ‘ದೊರೆಸ್ವಾಮಿ-೯೦ ರ ಆಚರಣೆ. ಈ ಸಂದರ್ಭದಲ್ಲಿ ಗಾಂಧಿವಾದಿ ಸಾಗಿಬಂದ ಬದುಕಿನ ಕೆಲವು ಚಿತ್ರಗಳು.
ಅದು ೧೯೭೮ನೇ ಇಸವಿ. ಎಚ್.ಎಸ್.ದೊರೆಸ್ವಮಿ ಅವರ ೬೦ನೇ ಹುಟ್ಟುಹಬ್ಬದ ಕಾರ್ಯಕ್ರಮ. ಆ ಸಭೆಯಲ್ಲಿ ದೊರೆಸ್ವಾಮಿ ಅವರಿಗೆ ಖಾದಿ ಬಟ್ಟೆಗಳ ಉಡುಗೊರೆ ನೀಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಹೇಳಿದ್ದು: ‘ದೊರೆಸ್ವಾಮಿ ಉದ್ದಕ್ಕೂ ನನಗೆ ವಿರೋಧವಾಗಿಯೇ ಕೆಲಸ ಮಾಡಿದರು ಅವರು ನನ್ನೊಡನೆ ಕೂಡಿ ಕೆಲಸ ಮಾಡಿದ್ದರೆ ನಾನು ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಿದ್ದೆ’.
ಕೆಂಗಲ್ ಮಾತಿನಲ್ಲಿ ವಿಷಾದವಿತ್ತು. ಆದರೆ ದೊರೆಸ್ವಾಮಿ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದುದು ಅವರೇ. ವಿಧಾನ ಪರಿಷತ್‍ಗೆ ನಾಮಕರಣ ಮಾಡಲು ಕೆಂಗಲ್‍ಗೆ ಮನಸ್ಸಿತ್ತು. ಆದರೆ, ‘ದೊರೆಸ್ವಾಮಿ ನನಗೆ ಲಾಯಲ್ ಆಗಿರಬೇಕು’ ಎನ್ನುವ ಷರತ್ತು ಅವರದಾಗಿತ್ತು. ಅಭಿಮಾನಧನರಾದ ದೊರೆಸ್ವಾಮಿ ಅವರಿಂದ ಇಂಥ ನಿಷ್ಟೆ ಬಯಸುವುದು ಹೇಗೆ ಸಾಧ್ಯ? ಪರಿಣಾಮವಾಗಿ ಕೆಂಗಲ್ ಹಾಗೂ ದೊರೆಸ್ವಾಮಿ ದಾರಿಗಳು ಬೇರೆಯಾದವು.
ಹಾಗೆ ನೋಡಿದರೆ ದೊರೆಸ್ವಾಮಿ ಅವರಿಗೆ ಕೆಂಗಲ್‍ರ ಕುರಿತು ಅಪಾರ ಗೌರವವಿತ್ತು. ಅವರ ದೇಶಪ್ರೇಮದ ಬಗ್ಗೆ ದಕ್ಷತೆಯ ಬಗ್ಗೆ ಮೆಚ್ಚುಗೆಯಿತ್ತು. ಆದರೆ ಕೆಂಗಲ್ ಬಯಸಿದ ‘ಕುರುಡು ನಾಯಕ ನಿಷ್ಟೆ’ ದೊರೆಸ್ವಾಮಿಯವರಿಗೆ ಒಗ್ಗದ ಗುಣ. ಕಾಂಗ್ರೆಸ್ ಕಾರ್ಯಕರ್ತರಾಗಿದ್ದುಕೊಂಡೇ, ಪಕ್ಷದಲ್ಲಿನ ಸರ್ವಾಧಿಕಾರದ ವಿರುದ್ಧ ದನಿಯೆತ್ತಿದ್ದ ಪ್ರಜಾತಂತ್ರ ಪ್ರೇಮಿಯವರು.
ದೊರೆಸ್ವಾಮಿಯವರ ಎಚ್ಚರದ ಮನೋಭಾವ ಹಾಗೂ ಸ್ವಾಭಿಮಾನದ ಗುಣಕ್ಕೆ ಮೇಲಿನ ಪ್ರಸಂಗ ಒಂದು ಉದಾಹರಣೆ ಮಾತ್ರ. ಅವರ್‍ಅ ಬದುಕಿನ ಹಾದಿ ಸರಳತೆ ಹಾಗೂ ಸ್ವಾಭಿಮಾನದ ರೂಪಕ.
ದೊರೆಸ್ವಾಮಿ ಎಂದಕೂಡಲೇ ತಕ್ಷಣಕ್ಕೆ ನೆನಪಾಗುವುದು ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಮಾತು. ಆದರೆ ಅವರು ಹೋರಾಟದಲ್ಲಿ ಭಾಗವಹಿಸಿ ಈಗ ವಿಶ್ರಾಂತ ಜೀವನ ಅನುಭವಿಸುತ್ತಿರುವ ಯೋಧರ ಗುಂಪಿಗೆ ಸೇರಿದವರಲ್ಲ. ಬದುಕೇ ಒಂದು ಹೋರಾಟ ಎನ್ನುವ ಮನೋಭಾವ ಅವರದು. ಗಾಂಧಿ, ವಿನೋಬಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರು ದೊರೆಸ್ವಾಮಿ ಮೇಲೆ ಪ್ರಭಾವ ಬೀರಿದ ತ್ರಿಮೂರ್ತಿಗಳು. ಗಾಂಧಿಯ ಚರಕ, ವಿನೋಬಾರ ಭೂದಾನ, ಜೆಪಿ ಅವರ ಸರ್ವೋದಯ ಸಿದ್ಧಾಂತಗಳನ್ನು ದೊರೆಸ್ವಾಮಿ ತಮ್ಮ ಬದುಕಿನ ವಿಧಾನವನ್ನೇ ಆಗಿಸಿಕೊಂಡರು.
೧೯೪೨ರ ಚಲೇಜಾವ್ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೊರೆಸ್ವಾಮಿಯವರು ಸ್ವಾತಂತ್ರ್ಯ ಚಳವಳಿಯಲ್ಲಿ ಮಾತ್ರವಲ್ಲ ಸ್ವಾತಂತ್ರಾ ನಂತರವೂ (೧೯೭೫ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ) ಜೈಲು ಅನುಭವಿಸಿದ್ದು ದೇಶದ ರಾಜಕಾರಣದ ವ್ಯಂಗ್ಯ.
ಸ್ವಾತಂತ್ರ್ಯ ಚಳವಳಿ- ಏಕೀಕರಣ ಚಳವಳಿಯಿಂದ ಹಿಡಿದು ಮೊನ್ನಮೊನ್ನೆಯ ಕೈಗಾ ಹೋರಾಟದವರೆಗೂ ಅವರ ಸಾತ್ವಿಕ ಹೋರಾಟದ ಹೆಜ್ಜೆಗಳಿವೆ. ಜಾತೀಯತೆ ವಿರುದ್ಧದ ಅವರ ಹೋರಾಟ ನಿರಂತರ. ‘ನೈಸ್ ಕಾರಿಡಾರ್’ ಯೋಜನೆ ವಿರುದ್ಧ ಮೊದಲು ದನಿಯೆತ್ತಿದ್ದೇ ಅವರು.
‘ಪೌರವಾಣಿ’ ಪತ್ರಿಕೆ ಸಂಪಾದಕರಾಗಿ ಏಕೀಕರಣ ಚಳುವಳಿಯಲ್ಲಿ ದೊರೆಸ್ವಾಮಿ ವಹಿಸಿದ ಪಾತ್ರ ಅನನ್ಯವಾದುದು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಪೌರವಾಣಿ’ ಮುಟ್ಟುಗೋಲಿಗೆ ಒಳಗಾದಾಗ, ಹಿಂದೂಪುಕ್ಕೆ ತೆರಳಿ ಅಲ್ಲಿಂದ ಪತ್ರಿಕೆ ಮುದ್ರಿಸಿ ಬೆಂಗಳೂರಿಗೆ ಪತ್ರಿಕೆ ಕಳುಹಿಸುತ್ತಿದ್ದರು.
ಮೈಸೂರಿನಲ್ಲಿ ದೊರೆಸ್ವಾಮಿ ‘ಸಾಹಿತ್ಯ ಮಂದಿರ’ ಪುಸ್ತಕದ ಅಂಗಡಿ ನಡೆಸುತ್ತಿದ್ದಾಗ, ಆ ಆಂಗಡಿ ತ.ಸು.ಶಾಮರಾಯ, ಆರ್.ಕೆ.ಲಕ್ಷಣ್, ಎಸ್.ವಿ.ಪರಮೇಶ್ವರ ಭಟ್ಟ, ಕೆ.ಎಸ್.ನರಸಿಂಹುಸ್ವಾಮಿ ಸೇರಿದಂತೆ ಹಲವು ಸಾಹಿಕಿಗಳ ಹರಟೆ ಕೇಂದ್ರವಾಗಿತ್ತು. ಕೆಎಸ್‍ನ ಅವರ ಎರಡನೇ ಕವನ ಸಂಕಲನ ‘ಐರಾವತ’ವನ್ನು ಪ್ರಕಟಸಿದ್ದು ದೊರೆಸ್ವಾಮಿ ಅವರೇ.
ದೇಶದ ಪ್ರಮುಖ ಸ್ವಾತಂತ್ರ್ಯ ಚಳವಳಿಗಾರರಂತೆ ದೊರೆಸ್ವಾಮಿ ಅವರ ವ್ಯಕ್ತಿತ್ವವೂ ಬಹುಮುಖಿಯಾದುದು. ಮರದ ವ್ಯಾಪಾರಿಯಾಗಿ, ಪುಸ್ತಕದಂಗಡಿ ಮಾಲೀಕನಾಗಿ, ಪ್ರಕಾಶಕನಾಗಿ, ಪತ್ರಕರ್ತನಾಗಿ, ಶಿಕ್ಷಕನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಅವರು ಬದುಕಿನ ಸಾಧ್ಯತೆಗಳನ್ನು ಶೋಧಿಸಿದವರು. ವಾಲಿಬಾಲ್ ಅವರಿಗೆ ತುಂಬಾ ಪ್ರಿಯವಾದ ಆಟ. ಕಾಲೇಜು ತಂಡದಲ್ಲಿ ಹಿಟ್ಟರ್ ಆಗಿದ್ದವರು. ಸಾರ್ವಜನಿಕ ಜೀವನದಲ್ಲೂ ಅವರದ್ದು ‘ಹಿಟ್ಟರ್’ ಪಾತ್ರ. ವಿಪರ್ಯಾಸ ನೋಡಿ, ೯೦ರ ಇಳಿವಯಸ್ಸಲ್ಲೂ ಅವರು ‘ಹಿಟ್ಟರ್’ ಪಾತ್ರ ಮುಂದುವರಿಸಲಿಕ್ಕೆ ಸಾಕಷ್ಟು ಅವಕಾಶಗಳನ್ನು ನಾವು ರೂಪಿಸುತ್ತಿದ್ದೇವೆ!
ಏಪ್ರಿಲ್ ೧೦, ೨೦೦೮
*****