ಪ್ರಿಯ ಸಖಿ,
ಮನೆಯ ಪಕ್ಕದ ಮುಳ್ಳು ಕಂಠಿಗಿಡದ ಎತ್ತರದ ಕೊಂಬೆಯಲ್ಲಿ ಗೀಜಗವೊಂದು ಗೂಡು ಕಟ್ಟಲಾರಂಭಿಸಿದೆ. ಮೊದಲಿಗೆ ಎಲ್ಲಿಂದಲೋ ಒಂದಿಷ್ಟು ಹುಲ್ಲು, ನಾರು ತಂದು ಹಾಕಿಕೊಳ್ಳುತ್ತದೆ. ನಿಧಾನಕ್ಕೆ ಗೂಡು ನಿರ್ಮಾಣಗೊಳ್ಳಲಾರಂಭಿಸುತ್ತದೆ.
ಗೀಜಗಕ್ಕೆ “ಇಂಜಿನೀಯರ್ ಹಕ್ಕಿ” ಎಂದೂ ಹೆಸರಿದೆಯಂತೆ. ನಿಜಕ್ಕೂ ಒಂದೊಂದು ಹುಲ್ಲು ಎಳಸನ್ನೂ ಸೂಕ್ಷ್ಮವಾಗಿ ಹೆಣೆಯುವ ಅದರ ಕಲೆಗಾರಿಕೆಗೆ ಗೀಜಗವೇ ಸಾಟಿ. ಚಾಪೆ ಹೆಣೆದಂತೆ ಒತ್ತೊತ್ತಾಗಿ ಪದರಗಳಮ್ನ ಹೆಣೆದು ಗೋಡೆಗಳನ್ನು ಸೃಷ್ಟಿಸಿ ಗಿಡಕ್ಕೆ ತೂಗುಬಿದ್ದಂತೆ ಗೂಡು ತಯಾರಾಗುತ್ತದೆ. ಗೂಡಿನ ಕೆಳಭಾಗದಲ್ಲಿ ಒಳಹೋಗಲೆಂದು ಪುಟ್ಟ ಪ್ರವೇಶದ್ವಾರ. ಉದ್ದಕ್ಕೆ ಕೊಳವೆಯಾಕಾರಕ್ಕೆ ಮೂಡಿದ ಆ ಪ್ರವೇಶದ್ವಾರದಿಂದ ಗೂಡಿನೊಳಗೆ ಒಂದೂ ಗುಟ್ಟು ಹೊರಬರುವಂತಿಲ್ಲ! ಗೂಡು ಕಟ್ಟಿದ ಮಾರನೇ ದಿನವೆಲ್ಲಾ ಗೀಜಗ ತನ್ನ ಕೊಕ್ಕಿನಿಂದ ಎಲ್ಲಿಂದಲೋ ಹಸಿಮಣ್ಣು ತಂದು ಗೂಡಿನೊಳಗೆ ಹೋಗುತ್ತಿತ್ತು. ಮಣ್ಣು ಏಕಿರಬಹುದು? ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಮುಸ್ಸಂಜೆ ಹೊತ್ತಿನಲ್ಲಿ ಒಂದೆರಡು ಮಿಂಚು ಹುಳುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಗೀಜಗ ಗೂಡು ಹೊಕ್ಕಿದ್ದು ಕಂಡಿತು. ಇದೂ ಯಾತಕ್ಕೆಂದು ತಿಳಿಯಲಿಲ್ಲ. ಅದರ ಆಹಾರವಿರಬಹುದೇನೋ ಎಂದುಕೊಂಡರೂ, ಅದರ ಆಹಾರವಾಗಿದ್ದರೆ ಸಿಕ್ಕಲ್ಲೇ ತಿಂದು
ಮುಗಿಸಿಬಿಡುತ್ತಿತ್ತು. ಮಾನವರಂತೆ ಮನೆಗೆ ತಂದು ಪರಿಷ್ಕರಿಸಿ ತಿನ್ನಬೇಕೆಂದೇನಿಲ್ಲವಲ್ಲಾ ಎಂದೂ ಅನ್ನಿಸಿತು.
ಮಾರನೆಯ ದಿನ ಬೆಳಗಾಗುವುದರಲ್ಲಿ ಒಂದಿದ್ದ ಗೀಜಗ ಎರಡಾಗಿವೆ. ಇನ್ನೊಂದು ಗೀಜಗ ಹೆಣ್ಣಿರಬಹುದೆಂದು ಊಹಿಸಿದೆ. ಸ್ವಲ್ಪದಿನಗಳವರೆಗೂ ಹೆಣ್ಣು ಗೀಜಗ ಗೂಡಿನಿಂದ ಹೊರಗೇ ಬರಲಿಲ್ಲ. ಗಂಡು ಗೀಜಗವೇ ಹೆಣ್ಣಿಗೂ ಆಹಾರ ತಂದುಕೊಡುತ್ತಿತ್ತೇನೋ? ಬಹುಶಃ ಹೆಣ್ಣು ಗೀಜಗ ಮೊಟ್ಟೆ ಇಟ್ಟಿರಬಹುದೇ? ಊಹೆ ನಿಜವಾಗಿತ್ತು. ಒಂದು ಬೆಳಗ್ಗೆ ಗೂಡಿನಿಂದ ಮರಿ ಗೀಜಗಗಳ ಕಿಚಿಪಿಚಿ ಕೇಳಲಾರಂಭಿಸಿತ್ತು. ಗಂಡು ಹೆಣ್ಣು ಗೀಜಗಗಳೆರಡು ಎಲ್ಲಿಗೆಲ್ಲಿಗೋ ಹಾರಿ ಹೋಗಿ ಆಹಾರ ತಂದು ಮರಿ ಗೀಜಗಗಳಿಗೆ ತುತ್ತುಣಿಸುವ ದೃಶ್ಯ ಮನೋಹರವಾಗಿತ್ತು. ತಿಂದಷ್ಟು ಆಹಾರಕ್ಕಾಗಿ ಅರಚುವ ಅವುಗಳ ಹೊಟ್ಟೆ ಬಾಕತನ ಆಶ್ಚರ್ಯ ತರಿಸುತ್ತಿತ್ತು.
ಕೆಲ ದಿನಗಳ ನಂತರ, ಸಂಸಾರ ಸಮೇತ ಗೀಜಗ ಅದೆಲ್ಲಿಗೆ ಹಾರಿ ಹೋಯ್ತೋ! ಮತ್ತೆ ಹಿಂದಿರುಗಬಹುದೆಂದು ಕೆಲ ದಿನ ಕಾಯ್ದು ಕೊನೆಗೊಮ್ಮೆ ಗೀಜಗನ ಗೂಡಿನ ಒಳಗನ್ನು ನೋಡುವ ಕುತೂಹಲದಿಂದ ಗೂಡು ಕಿತ್ತು ತಂದು ಒಳಗೆಲ್ಲಾ ಪರೀಕ್ಷಿಸಿದರೆ ಗೂಡಿನ ಒಳಭಾಗದಲ್ಲಿ ಮೆತ್ತಿದ್ದ ಹಸಿಮಣ್ಣು ಒಣಗಿ ನಿಂತಿದೆ. ಜೊತೆಗೆ ಆ ಮಣ್ಣಿನ ಮೇಲೆ ಮೆತ್ತಿಕೊಂಡು ಸತ್ತ ಮಿಂಚಿನ ಹುಳುಗಳು! ಅಬ್ಬಾ ಗೀಜಗನ ಜಾಣ್ಮೆಯೇ! ತನ್ನ ಮನೆಗೆ ಬೆಳಕು ಮಾಡಿಕೊಳ್ಳಲು ದಿನವೂ ಒಂದೊಂದು ಜೀವಂತ ಮಿಂಚು ಹುಳ ತಂದು ಅಂಟಿಸಿ ಅದು ಸತ್ತರೆ ಇನ್ನೊಂದು ಅಂಟಿಸಿಕೊಳ್ಳುವ ಈ ಜಾಣ್ಮೆ ಗೀಜಗಕ್ಕೆ ಯಾರು ಕಲಿಸಿದರು? ಅಪಾರ ಜೀವರಾಶಿಯ ಆಗರವಾಗಿರುವ ಈ ಸೃಷ್ಟಿಯಲ್ಲಿ ಯಾವ ಜೀವಿಗೆ ಯಾವ ಜಾಣ್ಮೆಯಿದೆಯೋ ತಿಳಿದುಕೊಳ್ಳುವ ಕುತೂಹಲ, ವ್ಯವಧಾನ, ಸಮಯ ನಮಗಿರಬೇಕಲ್ಲವೇ ಸಖೀ?
*****