ಒಂದು ಚಣದ ಆವೇಶದಲ್ಲಿ ಮೇಲಿಂದ ಇಳಿದು ಬಂದು
ತುಂಬಿಯೊಡಲು ಜೇನಾಗಿ ಹೂವಿನಲಿ ಮಧುರ ಮಧುವ ತಂದು
ಬಿಂದು ಬಿಂದು ಸಿಹಿ ನೀರ ಧಾರೆ ಅದಕಾಯ್ತು ದಿನದ ಅನ್ನ
ಕುಂದು ಕೊರತೆಗಳ ನಗೆಯ ಅಲೆಗಳಲಿ ತೇಲಿಸಿತು ತನ್ನ
ಎಲೆಯ ಗಾಳಿಯುಲಿಯಾಗಿ ತೇಲಿ ನಲಿದಾಡಿ ಹೂವ ಹನಿಯು
ತಲೆಯ ತುಂಬ ಸವಿಗನಸ ತುಂಬಿ ತುಂಬಿಗಳ ರಸದ ಗನಿಯು
ಅದರ ಇದರ ಬಾಯಿಯಲಿ ಜೊಲ್ಲು ಹನಿ ಬೀಳೆ ಅಮೃತವೆಂದು
ಉದರ ಭರಿಸಿ ನಾಲಗೆಯ ಚಲಿಸಿ ಕಹಿಗೊಲಿದು ಸಿಹಿಯದೆಂದು
ನೀಲಿ ಮೈಯನಲೆದಾಡಿ ದುಡಿಯುತಿಹ ಬಿಂದು ಬಿಂದು ಕರೆಗೆ
ಸಾಲು ಪುಳಕ ಮೈಗಾಗೆ ತಿರೆಯ ಹನಿ ಒಳಗೆ ಒಳಗೆ ಕೊರಗೆ
ಬಿಂದು ಕರಗಿ ಹೊರನೋಟದಲ್ಲಿ ಬರಿಗುಳ್ಳೆಯಾಗಿ ಹೊಳೆದು
ಅಂದವೆಂದು ಬಂಧಿಸಲು ಅದನು ಏನೇನೊ ಕವಚ ತಳೆದು
ಬಿಂದುವೊಂದು ಇದು ಅಂದಗುಂದಿ ಕಳೆಗುಂದುತಿಹುದು ಇಲ್ಲಿ
ಚೆಂದ ಚೆಲುವುಗಳು ಕಂದಿ ಕರಗಿರಲು ಕರೆಯು ಮಾತ್ರದಲ್ಲಿ
ಒಂದು ಬಿಂದು ನೂರೊಂದು ವೇಷಗಳ ಅಂಗ ಅಂಗಿಯಾಯ್ತ
ಚೆಂದ ಚೆಂದವೆಂದಂದಗೆಟ್ಟರೂ ಅದುವೆ ದೊಂದಿಯಾಯ್ತು
ಹನಿಯ ಮೋಹ ಹನಿಗೂಡಿ ಹಳ್ಳದಲಿ ಬಿರಿದು ಮುಚ್ಚಿ ಹೋಯ್ತು
ತನಗೆ ತಾನೆ ಕಂದಕದಿ ಧುಮುಕಿ ಆ ರೂಪ ಕೊಚ್ಚಿ ಹೋಯ್ತು
ನುಚ್ಚು ನೂರು ಛಿದ್ರಗಳ ತಾಳಿ ಬಂಡೆಗಳ ಮೇಲೆ ಢಿಕ್ಕಿ
ಹುಚ್ಚು ಹಿಡಿದು ಎಳೆಎಳೆಯ ನಾಡಿ ಕೂದಲಲೆ ಹರಣಸಿಕ್ಕಿ
ಉಬ್ಬಿ ಒಡೆದು ಮತ್ತುಬ್ಬಿಯುಬ್ಬಿ ಉದರಕ್ಕೆ ಬರಿಯ ಬೇನೆ
ಹಬ್ಬಿ ಬೆಳೆವ ಹಂದರದ ಮೇಲೆ ಬೀಳುತಿರೆ ಬೆಂಕಿ ಸೋನೆ
ಬಿದ್ದ ಅಗುಳ ನನ ನನಗೆ ಎಂದು ಮುಗಿಬಿದ್ದವೆಷ್ಟೊ ಮೀನು
ಹದ್ದು ಕಚ್ಚಿ ಕಣ ಕಣವನೆಲ್ಲ ಬರುಸೂರೆ ಗೈಯೆ ತಾನು
ಎಲ್ಲ ಮೀನುಗಳು ಕಿತ್ತು ತಿಂದರೂ ನೀರಿನೊಡನೆ ಬೆರೆತು
ಇಲ್ಲವಾದರೂ ಇರುವ ಛಲದ ಸೂತ್ರವನೆ ಅರಿತು ಕುರಿತು
ಚಿಮ್ಮಿ ಚೀರುತಿಹ ಛಿದ್ರ ತುಂತರಲೆ ಅಯಸ್ಕಾಂತ ಸೆಳೆತ
ಹೊಮ್ಮಿ ತೋರಿತಿದೆ ಕಂಡು ಕಾಣದೆಯೆ ರೂಹುಗೊಡುವ ಹರಿತ
ಬಿಂದು ಅಳಿಯಿತೋ ಬಿಂದು ಬೆಳೆಯಿತೋ ಅಂತು ರೂಪ ಹೋಯ್ತು
ತಿಂದು ಕಳೆಯಿತೋ ಕೊಂದು ನರಳಿತೋ ಬಿಕ್ಕು ಬೀಗಿ ಹೋಯ್ತು
ಕಣ್ಣಿನಂಚಿನಲಿ ಉರುಳಿ ಬೀಳ್ವ ಕರುಳುಗಳ ಬಿಂದು ಮಾಲೆ
ಹಣ್ಣಿನಲ್ಲಿ ಹರಿದು ಕಾಣದೆಯೆ ಉಳಿದ ಬೀಜಕ್ಕೆ ಭವ್ಯ ಲೀಲೆ
*****