ಮೇಲೆ ಚಂದ್ರಾಮ
ಇಲ್ಲಿ ಚಿಗುರೆಲೆ ಬಳ್ಳಿ
ಅದರಲ್ಲಿ ಬಿಟ್ಟ ಅಮೃತಕಲಶ
ಮೇಲೊಂದು ಜೇನತೊಟ್ಟು
ಈ ತಂಬೂರಿ ಕುಂಬಳಕಾಯಿ
ಅದರಲ್ಲಿ ಹೃದಯ ಮೀಟಿ ಹಾಡುವ ಸೃಷ್ಟಿಗೀತೆ
ಈ ದೇಗುಲ
ಕಲೆಯುಸಿರಾಡುವ ಸ್ತಂಭಗಳು
ನವರಂಗದ ಮೇಲೆಕೆಳಗಿರಿಸಿದ
ಅರಳಿದ ಕಮಲ
ಇದರೊಂದು ರನ್ನ
ದ್ವಾರವ ಸಮೆದನೋ!
ಈ ರಸವಾಹಿನಿಯ
ಸೇತುಗಟ್ಟಿದ ಕಣ್ಣ ಕಂಡರಸಿ
ಚೆಲುವಿನೆಳೆಯೆಳೆಯ
ಗಂಟು ಕಟ್ಟಿದನೋ
ಅಥವಾ ಈ ಕಣ್ಣಿಂದ
ಈ ಕುಸುರಿದ್ವಾರದಿಂದ
ತನ್ನ ಸೃಜನವ ಪ್ರಾರಂಭಿಸಿ
ಒಂದೊಂದಾಗಿ ಅದರ ಸುತ್ತಮುತ್ತ,
ಮೇಲೆ ಕೆಳಗೆ ಸೇರಿಸಿದನೋ
ತನ್ನ ಸೃಷ್ಟಿಗೆ ತಾನೇ
ಹಿಗ್ಗಿ ಮಗುವಿನಂತೆ
ಚಪ್ಪಾಳೆ ತಟ್ಟಿ ಕುಣಿದಾಡಿ ಈ ಹಿಗ್ಗು
ಹೊಳೆಯಲೀಜಾಡಿದನೋ ತಿಳಿಯದು
*****