ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ಯಾಕೋ || ಪ ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅ.ಪ.||
ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾದುವುದ್ಯಾಕೋ || ೧ ||
ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ || ೨ ||
*****