ನಮ್ಮ ಮನೆಯ ಪಕ್ಕದಲ್ಲೊಂದು
ಕಟ್ಟುವ ಹೊಸಮನೆಗೆ
ಕಲ್ಲು ಇಟ್ಟಿಗೆ ಹೊರಲು
ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ
ರಂಭೆಯಂತಿದ್ದಾಳೆ
೫’ – ೫” ಎತ್ತರ
ಅಳತೆಗೆ ತಕ್ಕಂತೆ
ಅಂಗಾಂಗಗಳು, ಹರಿದ
ಸೀರೆಯಲ್ಲೂ ಎದ್ದುಕಾಣುವ
೧೮ರ ಲಕ್ಕಿ ಊರ್ವಶಿ
ಯೌವನದರಿವಿಲ್ಲದ ಲಕ್ಕಿ
ಸೀರೆ ಕಚ್ಚಿ ಹಾಕಿ; ದೊಗಲಿ ಜಂಪರು ತೊಟ್ಟು
ಮಂದಹಾಸ ತುಳಿಕಿಸುತ್ತ
ತಗ್ಗು ದಿನ್ನೆಗಳಲ್ಲಿ
ಮೆಟ್ಟಲುಗಳ ಮೇಲೆಲ್ಲ ಓಡಾಡುತ್ತಿದ್ದಂತೆ
ಸಹ ಕೆಲಸಗಾರರಿಗೆ
ಹುರುಪಾಗಿಸುತ್ತಾಳೆ
ಬೆಳಗಿನಿಂದ ಸಂಜೆಯವರೆಗೆ
ಕೋತಿಗಳು
ಸಿನೇಮಾದ ತುಣುಕುಗಳನ್ನೆಲ್ಲ
ಹಾಡುತ್ತವೆ.
ಅವಳು ಹೊತ್ತು ತಂದ
ಇಟ್ಟಿಗೆ ಬುಟ್ಟಿ ಇಳಿಸಿಕೊಳ್ಳಲು
ಸ್ಪರ್ಶದ ನೆಪಕ್ಕೆ
ನಾ ಮುಂದು ತಾ ಮುಂದು
ಎಂದು ಹಲ್ಲು ಕರಿಯುತ್ತ
ಜಿಗಿದಾಡುತ್ತವೆ.
ಉರಿಬಿಸಿಲೆಲ್ಲ
ಬೆಳದಿಂಗಳ ತಂಪುಇಂಪು
ಅನ್ನುತ್ತವೆ
ಮನೆ ಕಟ್ಟುತ್ತ
ತಮ್ಮ ಬರಡು ಒಡಲೊಳಗೇ
ಕನಸುಗಳು ಕಟ್ಟಿಕೊಳ್ಳುತ್ತವೆ.
ಮಿದುಳು ಚಿಗಿಸಿಕೊಳ್ಳುತ್ತ
ಬದುಕುವ ಭರವಸೆ
ಕೊಡಬೇಕೆಂದು ಒಳಗಿಂದೊಳಗೇ
ಒದ್ದಾಡಿಕೊಳ್ಳುತ್ತವೆ.
ಮಣ್ಣು ಇಟ್ಟಿಗೆ ಹೊತ್ತ
ಗಟ್ಟಿ ಮುಟ್ಟಿ ಲಕ್ಕಿ
ಯಾವೊಂದಕ್ಕೂ ತಲೆಕೆಡಿಸಿಕೊಳ್ಳದೇ
ನಗಬೇಕೆಂದಾಗ ನಕ್ಕು
ಅಳಬೇಕೆಂದಾಗ ಅತ್ತು
ಭಾವನೆಗಳು ಹೊರಗೆಡವಿ
ಮನೆ ತಲುಪುತ್ತಾಳೆ
ಸೆರ ಕುಡುಕ ಅಪ್ಪ ತೂಗಾಡುತ್ತ
ಮನಗೆ ಬರುವನು
ಹೆಂಡ ಇಲ್ಲದ ಊಟಕ್ಕೆ
ಅವ್ವ ಒದೆತ ತಿನ್ನುತ್ತಾಳೆ
ವಾರಾಂತ್ತ್ಯದ ಲಕ್ಕಿಯ ರೊಕ್ಕ
ಅಪ್ಪನ ಸೆರೆಗಾಗುವಾಗ;
ಅವ್ವ ಅನುಕಂಪಿಸಿ
ಕಣ್ಣೀರಿಡುವಾಗ;
ಮನೆ ಕಟ್ಟುವ ಮಾಲಿಕ
ಗುಡಿಸಿಲಿನೊಳಗೆ
ಹೆಜ್ಜೆ ಹಾಕುವನು.
ಲಕ್ಕಿಯ ಹೊಳಪು ಕಣ್ಣು
ಬಿರುಸು ದೇಹ ನೋಡಿ
ಕ್ಷಣದಲ್ಲಿ ವಿಕೃತ
ಕನಸುಗಳು ಚಿಗಿಸಿಕೊಂಡು
ಅವಳಪ್ಪನ ಮುಂದೆ
ಹಣ ಎಸೆದು ಕೈಹಿಡಿದಾಗ
ಲಕ್ಕಿಯ ಇಡಿಯಾದ ದೇಹ
ಶಕ್ತಿ ದುರ್ಗೆಯಾಗಿ
ಇವನ ಕತ್ತು ಹಿಸುಕಿ
ಬಾಸುಂಡೆ ಹಾಕುತ್ತದೆ.
ಚೆಲ್ಲು ಹುಡುಗಿಯಂತಿರುವ
ಈ ಗಂಭೀರ ಹುಡುಗಿಯ ಮುಂದೆ
ಮಾಲೀಕ ಕ್ಷುದ್ರನಾಗಿ
ಹೊರಬಿದ್ದ,
ಮರುದಿನ ಗುಜು ಗುಜು
ಲಕ್ಕಿ ಕೆಲಸಕ್ಕೆ ಬರಲಿಲ್ಲ
ಮಾಲಕನ ಮನೆ ಕಟ್ಟುವ
ಕೋತಿಗಳು ಈಗ
ಜಿಗಿದಾಡದೇ
ಕೆಲಸದಲ್ಲಿ ನಿಧಾನಿಸುತ್ತ
ಮಗ್ನವಾಗಿದ್ದರೆ
ಲಕ್ಕಿಗೆ ಈಗ
ಹರೆಯದ ಅಪಾಯ
ಗೊತ್ತಾಗಿ
ಅದಕ್ಕೆ ಶಾಪ ಹಾಕುತ್ತ
ಹೊದಿಕೆಯೊಳಗೆ ಬಿಕ್ಕಳಿಸುಕ್ತಿದ್ದಾಳೆ.
ಲಕ್ಕಿ ಇಲ್ಲದ….
ಕೋತಿಗಳ ಹಾಡುಗಳಿಲ್ಲದ…
ಸಪ್ಪೆ ಕಟ್ಟಡ
ನಿಧಾನಕ್ಕೆ ಏರುತ್ತಿದೆ
ಮಾಲಿಕನ ಸಮಾಧಿಗಾಗಿಯೋ
ಎಂಬಂತೆ….
*****