ಹಳೇ ಹಂಚಿನ ಕಟ್ಟಡವಿದ್ದರೆ
ಅದರ ಸುತ್ತ ಕಾಂಪೌಂಡಿದ್ದರೆ
ಎದುರು ದೊಡ್ಡ ಮರಗಳಿದ್ದರೆ
ಕೋಣೆಗಳೊಳಗೆ ಫೈಲುಗಳಿದ್ದರೆ
ಅವುಗಳ ಹಿಂದೆ ಗುಮಾಸ್ತರರಿದ್ದರೆ
ವೆರಾಂಡದಲ್ಲಿ ವೆಂಡರರಿದ್ದರೆ
ಕೈಚಾಚುವ ಜವಾನರಿದ್ದರೆ-ಅಷ್ಟಕ್ಕೇ
ಅದೊಂದು ತಾಲೂಕಾಪೀಸು ಆಗುತ್ತದೆಯೆ?
ಇಲ್ಲ. ಗೋಡೆಗೆ ವೀಳ್ಯದ ಸುಣ್ಣ ಮೆತ್ತುವ
ಬಾಗಿಲಿನಿಂದ ಬಾಗಿಲಿಗೆ ಅಲೆಯುವ
ಮೋರೆಯಿಂದ ಧೋ ಎಂದು ಬೆವರುವ
ನಿರೀಕ್ಷೆಯಿಂದ ಎತ್ತಲೂ ನೋಡುವ
ವಿವಿಧ ಭಂಗಿಗಳಲ್ಲಿ ಕಾಯುವ
ಕಾಯಿಸಲ್ಪಡುವ
ಮಂದಿಯಿದ್ದರೇನೆ ಅದೊಂದು ತಾಲೂಕಾಪೀಸು
ಇಲ್ಲದಿದ್ದರೆ ಎಂಥ ಆಪೀಸು?
*****