ಒಂದು ದೊಡ್ಡದಾದ ಬೆಲೂನನ್ನು ಕಂಡರೆ ಎಲ್ಲರಿಗೂ ತಮಾಷೆ
ಅದನ್ನು ಹಿಡಿದೆತ್ತಿ ಒಡೆಯಬೇಕೆನ್ನುವ ವಿಚಿತ್ರ ಆಸೆ
ಆದರೆ ನಿಜಕ್ಕೂ ಒಂದು ದೊಡ್ಡ ಬೆಲೂನಿನಷ್ಟು ಮಜವಾದ ವಸ್ತು
ಈ ಲೋಕದಲ್ಲಿ ಇನ್ನೊಂದಿಲ್ಲ ಎಂಬುದು ಎಲ್ಲರಿಗೂ ಗೊತ್ತು
ಉದಾಹರಣೆಗೆ ಒಂದು ಕೋಳಿಮೊಟ್ಟೆಯನ್ನು ತೆಗೆದುಕೊಳ್ಳಬಹುದು
ಎಷ್ಟೆ ನಯವಿದ್ದರೂ ಒಡೆದರೆ ಗೋಜಲಾಗುತ್ತದೆ ಅದು
ಅಥವಾ ವೆಂಕಣ್ಣಯ್ಯನವರ ಬಕ್ಕತಲೆಯನ್ನು ನೋಡಿ, ಹೇಗೆ
ಒಳಗೆಷ್ಟೇ ಖಾಲಿಯಾಗಿದ್ದರೂ ಬೆವರುತ್ತದೆ ಹೊರಗೆ
ಒಂದು ಬೆಲೂನು ಮೊದಲಿನಿಂದಲೂ ಬೆಲೂನಾಗಿರುವುದಿಲ್ಲ
ಅದನ್ನು ಊದಿ ದೊಡ್ಡದು ಮಾಡಿದಾಗಲೆ ಮೊದಲಾಗುತ್ತದೆ ಎಲ್ಲ
ಸಂತೆಯಿಂದ ಮನೆಗೆ ತರುವುದಕ್ಕಿಲ್ಲ, ಅಷ್ಟರಲ್ಲೆ ಸುರುವಾಯಿತು ಕಷ್ಟ
ಒಂದು ಬೆಲೂನನ್ನು ಎದುರಿಸುವುದೆಂದರೆ ಮಕ್ಕಳಂತೆ ದೊಡ್ಡವರಿಗೂ ಇಷ್ಟ
ಎಷ್ಟಾದರೂ ನಾವು ಮನುಷ್ಯರು ಬುದ್ಧಿವಂತರಾದ್ದರಿಂದ
ಅದನ್ನು ಸಂಹರಿಸುವುದು ಸುಲಭ-ಬರೇ ಒಂದು ಸೂಜಿಯಿಂದ
ಅಥವ ಎರಡು ಕೈಗಳ ನಡುವೆ ಇರಿಸಿ ಅಮುಕುವುದರಿಂದ
ಭಾರವಾದ ವಾಹನಗಳನ್ನು ಹಾಯಿಸುವುದರಿಂದ.
*****