ಸುರಿಯುತ್ತಿರುವ ಮಂಜಿನೊಳಗಿಂದಲೇ ಮುಂದರಿಯಬೇಕು
ಮುಂಜಾವದ ಬಸ್ಸು. ಘಟ್ಟಗಳ ಬದಿಯ ಟಾರು ರೋಡಿನ ಮೇಲೆ
ತಿರುವುಗಳಲ್ಲಿ ಮರೆಸಿಕೊಂಡು, ಅಲ್ಲಲ್ಲಿ ಕಾಣಿಸಿಕೊಂಡು
ಇಳಿದರೂ ಇಳಿದ ಆಳ ಗೊತ್ತಾಗಬೇಕಾದರೆ ಹಿಂತಿರುಗಿ
ನೋಡಬೇಕು ಹಿಂದೆ ಬಿಟ್ಟ ಶಿಖರಗಳನ್ನು.
ಕಾಡುಮರಗಳ ಸಂದಿಯಿಂದ ಆಗಾಗ ಬೀಳುವ ಬಿಸಿಲಿಗೆ
ಕಿಟಕಿ ಬದಿ ಕುಳಿತ ಹರೆಯದ ಹುಡುಗಿಯ ಕೂದಲು ಗೊತ್ತಿಲ್ಲದೆ
ಕೆಂಬಣ್ಣವಾಗುತ್ತದೆ. ಮಡಿಕೇರಿಯ ಪೇಟೆ ಬಿಡುವಾಗ
ಬರೇ ರೇಖಾಚಿತ್ರವಾಗಿದ್ದ ಆ ಮುಖದಲ್ಲಿ ನಾವು ದಾರಿ
ಸಾಗಿದಂತೆ ಚೂಪಾದ ಮೂಗು, ತೆರೆದ ತುಟಿಗಳು, ಕಣ್ಣುಗಳು
ಸ್ಪಷ್ಟವಾಗಿ ಮೂಡುತ್ತವೆ. ಮತ್ತೆ ಎಲ್ಲಿ ಘಟ್ಟ ಕೊನೆಯಾಯಿತು,
ಎಲ್ಲಿ ಕರಾವಳಿ ಮೊದಲಾಯಿತು-ಆ ಎತ್ತರದಿಂದ
ಈ ತೀರ ಹೇಗೆ ತಲಪಿದೆವು ಇದೊಂದೂ
ಗೊತ್ತಾಗುವುದಿಲ್ಲ.
*****