ಗಣೇಶಬಂದ
ಕಾಯ್ ಕಡುಬು ತಿಂದ,
ಇನ್ನೂ ಬೇಕು ಅಂದ
ಹೊಟ್ಟೆ ಬಿರಿಯ ಮೆಂದ
ಕಾಯಿ ಕಡುಬಿನ್ ಜೊತೆಗೆ
ಕರಿಗಡುಬನ್ನೂ ಬಾರಿಸ್ದ
ಐದ್ ಸುತ್ತಿನ್ ಚಕ್ಲೀನ
ಹೊಟ್ಟೆಯೊಳಗೆ ತೂರಿಸ್ದ
ಸಿಹಿ ಹೂರಣ ತುಂಬಿದ್ದ
ಒಂದು ತಟ್ಟೆ ಮೋದಕ
ಹೊಟ್ಟೇ ಮೂಲೇಲ್ ಇಳ್ಸಿ
ಕುಡಿದ ಕೊಳಗ ಪಾನಕ
ಹೊಟ್ಟೆ ಭಾರ ಆಗ್ಹೋಯ್ತು
ನಡಿಯೋಕ್ ಆಗದೆ ಹೋಯ್ತು
ಅಲ್ಲೇ ಒಂದು ಇಲೀ ಮರಿ
ಸಂತೆಗೆ ಹೋಗ್ತಾ ಇತ್ತು.
ಡೊಳ್ಳು ಹೊಟ್ಟೆ ಗಣಪ
ಇಲೀ ಮೇಲೆ ಕೂತ,
ಸುಮ್ನೆ ಇರದೆ ಇಲಿಗೆ
ಕೊಟ್ಟ ಎರಡು ಲಾತ!
ಇಲಿಗೆ ಕೋಪ ಬಂತು
ಕೆಳಕ್ಕೆ ಕೆಡವಿ ಓಡ್ತು,
ಗಣಪನ ಹೊಟ್ಟೆ ಒಡೆದು
ಕಡುಬು ಚೆಲ್ಲಿಹೋಯ್ತು!
ಚೆಲ್ಲಿದ ಕಡುಬನ್ ಎತ್ತಿ ಗಣಪ
ಹೊಟ್ಟೆ ಒಳಗೆ ಹಾಕ್ದ
ಅಲ್ಲೇ ಮಲಗಿದ ಹಾವನ್ನು
ಹೊಟ್ಟೆ ಸುತ್ತ ಬಿಗಿದ
ಭಲೆ ಭಲೆ ಗಣಪ
ತಿಂಡಿ ಪೋತ ಠೊಣಪ!
ಕಡುಬು ಬೇಕಾ ಇನ್ನೂನೂ
ಮನೆ ಹತ್ರ ಬಾಪ್ಪ!
*****