ಯಾವ ದೇವಿಯೋ ಯಾವ ವಿನೋದಕೊ
ನಮ್ಮನೆಸೆದಳೀ ಮಾಯೆಯಲಿ,
ಬಾ ಒಲವೇ ಮೈಮರೆಯುವ ನಾವು
ಪ್ರೇಮದ ಮಧು ವೈಹಾಳಿಯಲಿ
ಸ್ನೇಹದ ಹೊನಲಲಿ ವಿನೋದದಲೆಯಲಿ
ಬಯಕೆಯಾಳದಲಿ ಮೀಯೋಣ
ಬಗೆಬಗೆ ರಂಗಿನ ಗಂಧವನಗಳಲಿ
ಪರಿವೆಯೆ ಇಲ್ಲದೆ ಅಲೆಯೋಣ
ಪುಲಕಿತ ವಕ್ಷಸ್ಥಳದಲಿ ತೂಗುವ
ನಿನ್ನೀ ಮಲ್ಲಿಗೆ ಮಾಲೆಯನು
ತೋಯಿಸು ಈ ಸವಿರಾತ್ರಿಯಲಿ
ಮೋಹದ ಮದಿರಾ ಜಲದಲ್ಲಿ
ಬಾಡಿಹೋಗುವುದು ಈ ಮಾಲೆ
ನಾಳಿನ ಸೂರ್ಯನ ಝಳದಲ್ಲಿ,
ಬಾಡುವ ಮುನ್ನ ಹಾಡುವೆನು
ಪ್ರೀತಿಯ ಸಾರವ ಈಗಿಲ್ಲಿ.
***
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.