ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು
ಮನಸಿನ ಮೂಸೆಯ ಭಾವದ ಕುದಿಗಳು
ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು ||ಪ||
ಅಂತರಂಗದಲಿ ರಿಂಗಣಗುಣಿಯುತ
ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು
ಒಳ ತಲ್ಲಣಗಳ ಪಲ್ಲವಿ ನರಳುತ
ಹೂವು ಅರಳಬೇಕು ಸುಗಂಧ ಸುತ್ತ ಹರಡಬೇಕು ||೧||
ಎಲ್ಲ ದಿಕ್ಕುಗಳ ಎಲೆ ಕಡ್ಡಿಗಳನು
ತಂದು ಹೆಣೆಯಬೇಕು ಕನಸಿನ ಗೂಡು ಕಟ್ಟಬೇಕು
ಆಶೆಯ ಮರಿಗಳ ಹಸಿವು ನೋವುಗಳ
ಅಳುವು ನಿಲ್ಲಬೇಕು ನಗುವಿನ ಹಕ್ಕಿ ಹಾಡಬೇಕು ||೨||
ಛಿದ್ರ ಭಿದ್ರ ತುಂಡುಗಳ ಜೋಡಿಸುತ
ಕನ್ನಡಿ ನಗಬೇಕು ತಿಳಿವಿನ ಬಿಂಬ ಕಾಣಬೇಕು
ಸಂದು ಗೊಂದುಗಳ ಕಂದಕ ಸೆರೆಗಳ
ತೂರಿ ಚಿಮ್ಮಬೇಕು ಹಾಡಿನ ಹೊಳೆಯು ಹೊಮ್ಮಬೇಕು ||೩||
ಹರಿದು ಕೊಳೆಯುವೀ ಎಳೆಗಳ ಕಲೆಸುತ
ಬಟ್ಟೆ ನೇಯಬೇಕು ಬಾಳಿಗೆ ಬಟ್ಟೆದೋರಬೇಕು
ಗೊಬ್ಬರ ಕೊಳೆಗಳ ಈ ನೆಲದಿಂದಲೆ
ಗಿಡವು ಮೂಡಬೇಕು ಜೀವನ ರಸಫಲ ಬಿಡಬೇಕು ||೪||
ದಿನ ದಿನ ಸಾಗುವ ಸಂಜೆ ಬೆಳಗುಗಳ
ಬಣ್ಣ ಬಳಸಬೇಕು ಸಂಧ್ಯಾ ರಾಗ ಹರಿಯಬೇಕು
ಮುದಿ ಸಂಜೆಗೆ ಹಸುಗಂದನ ಎಳೆ ನಗೆ
ಬೆಸುಗೆಯಾಗಬೇಕು ಚೇತನ ಸೆಲೆಯು ಸದಾ ಬೇಕು ||೫||
ಹೇಡಿತನದ ಹುಳು ಹತ್ತಿದ ಜೀವಕೆ
ಜೀವ ಸತ್ವ ಬೇಕು ಹಾಡಿನ ಶಕ್ತಿ ತುಂಬಬೇಕು
ದೇಶದ ಹೃದಯವು ದುಡಿಯುವ ಕೈಗಳ
ನಾಡಿ ಹಿಡಿಯಬೇಕು, ಜನಮನದಾಳ ಮಿಡಿಯಬೇಕು ||೬||
ಕಣ್ಣೀರಿನ ಧಾರೆಗಳನು ಒರೆಸುವ
ಕೈಯಿದಾಗಬೇಕು ದುಡಿಯುವ ಕೈಗೆ ಬಾಗಬೇಕು
ಒಣಗಿದ ಮರುಭೂಮಿಗಳೆದೆಯೊಳಗಡೆ
ಒಲವು ಹರಿಯಬೇಕು ಹಿಗ್ಗಿನ ತೋಟವರಳಬೇಕು ||೭||
ದುಷ್ಟ ಶಕ್ತಿಗಳ ಮುಳ್ಳುಕಳ್ಳಿಗಳ
ಕೊಚ್ಚಿ ಹಾಕಬೇಕು ಹಾಡಿದು ಕತ್ತಿಯಾಗಬೇಕು
ಮೋಸ ವಂಚನೆಯ ಸ್ವಾರ್ಥ ಚಿಂತನೆಯ
ಕಸವ ಸುಡಲು ಬೇಕು ಬೆಂಕಿಯು ಹಾಡಿದಾಗಬೇಕು ||೮||
ದುರ್ಬಲರಿಗೆ ಬಲವೀಯುತ ಕೊಬ್ಬಿದ
ಖೂಳರೆದೆಗೆ ಬಾಣಾ ಸಾರ್ಥಕ ಹಾಡಿನ ಪರಿ ಕಾಣಾ
ದಿನ ದಿನ ಹೊಸ ಹೊಸ ಚೆಲುವನು ತಾಳುತ
ಹಾಡು ಕುಣಿಯಬೇಕು ಕಾಲದ ಹೆಜ್ಜೆ ಮೇಳಬೇಕು
*****************