ಎಲೆ ಮಾನವ ನವಮಾನವ ಆಥುನಿಕತೆ ದಾನವಾ
ಎತ್ತ ನಿನ್ನ ಪಯಣ ಮತಿಯ ಮನವ ಮರೆತ ಮಾನವಾ ||೧||
ದೇವನೊಂದು ಸೃಷ್ಟಿಸಿರಲು ನೀನೆ ಬೇರೆ ಗೈಯುವೇ
ನಿನ್ನ ನೀನು ಕಾಯ್ದುಕೊಳಲು ನಿನಗೆ ನೀನೆ ಸಾಯುವೇ ||೨||
ನಡೆದು ದುಡಿದು ತಿನ್ನು ಬಾಳೊ ಕೈಕಾಲ್ಗಳ ಬಳಸುತ
ಎಂದು ದೇವ ಸೃಷ್ಟಿಸಿರಲು ಸುಖಕೆ ನೀನು ಎಳಸುತ ||೩||
ಮೈಗಳ್ಳನೆ ದುಡಿಮೆ ಉಳಿಸಿ ದೈವದ್ರೋಹ ಗೈಯುವೆ
ಯಂತ್ರಗಳಲಿ ಸುಲಭತೆಯಲಿ ಸಂತಸವನು ಅರಸುವೆ ||೪||
ಪ್ರಕೃತಿ ಮಾತೆ ಇರುವ ರೀತಿಯಲ್ಲಿ ನೀನು ಬಿಡದಿಹೆ
ವಿಕೃತಿ ಮಾಡಿ ಶೋಧಗೈವ ಸೋಗಿನಲ್ಲಿ ಕೆಡುತಿಹೆ ||೫||
ಅಡವಿ ಬಿಟ್ಟು ಗವಿಯ ಬಿಟ್ಟು ಪ್ರಕೃತಿಯಿಂದ ದೂರ ಬಂದೆ
ನಗರಗಳಲಿ ಹೊಸತು ಕಂಡು ಪ್ರಕೃತಿಯನ್ನೆ ದೂರಿ ನಿಂದೆ ||೬||
ಸಾಯಲಂಜಿ ಮೃತ್ಯುವನ್ನು ಗೆಲ್ಲಲೆಂದು ಯತ್ನಿಸಿರುವೆ
ಸಾವಕಾಶವಾಗಿ ನಿನ್ನ ಗೋರಿ ನೀನೆ ಕಟ್ಟುತಿರುವೆ ||೭||
ವಿಜ್ಞಾನದ ಕತ್ತಿಯನ್ನು ಹಿಡಿದು ಬಾಳ ಕೆತ್ತುತಿರುವೆ
ಒಳ ಸತ್ಯವ ಕಾಣಲೆಂದು ಸೀರೆಯನ್ನೆ ಕಿತ್ತುತಿರುವೆ ||೮||
****