“ದಿನಬಳಕೆಯ ಮಾತನ್ನು ಕುರಿತು ಹಲವು ಮುಖ್ಯ ವಿಚಾರಗಳನ್ನು ಕೇಳಬೇಕೆಂಬ ಅಪೇಕ್ಷೆಯನ್ನು ಜೀವಜಂಗುಳಿಯು ವ್ಯಕ್ತಪಡಿಸಿತು.
ಅದಕ್ಕೆ ಸಂಗನುಶರಣನು ಪಡಿನುಡಿಕೊಟ್ಟುದು ಏನಂದರೆ- “ಮಾತು ಭಾವಪ್ರಕಟನೆಗೆ ಮಾತಿಲ್ಲದ ಭಾವಕ್ಕೆ
ಸಂಪೂರ್ಣ ಬೆಲೆ ಬರಲಾರದು.
ಭಾವನೆಯೊ೦ದಿಗೆ ಮಾತು ಸಮಬೆರಕೆಯಾಗಿ ಬರುತ್ತಿರಬೇಕು.
ಮಾತು ಬೆಳೆದು ಭಾವನೆ ಕುಳ್ಳಾದರೆ ಜೊಳ್ಳು ಬೆಳೆಯುತ್ತದೆ. ಭಾವನೆ ಯಷ್ಟು ಮಾತು ವಿಶಾಲವಾಗದಿದ್ಧರೆ ಮೊಟಕಾಗುತ್ತದೆ.
ಸತ್ಯದ ಸೇವೆಗಾಗಿ ಮಾತು ಪ್ರಕಟವಾಗುವುದು ಧರ್ಮ. ಮಾತು ಪ್ರಚೋದನೆ ಮಾಡುವದು; ಮೌನವು ಕಾರ್ಯಮಾಡುವದು.
ಮಾತು ನಿರರ್ಥಕವಾಗಬಾರದು. ಅರ್ಥವಿಲ್ಲದ ಮಾತು ನಿರರ್ಥಕ; ವ್ಯರ್ಥ.
ನಾಲಗೆ ಕುಲದ ಕುರುಹಾದರೆ, ಮಾತು ಸಂಸ್ಕೃತಿಯ ಚಿಹ್ನ. ಮಾತಿನಿಂದ ಸ೦ಸ್ಕೃತಿಯನ್ನು ಗುರುತಿಸುವ೦ತೆ, ಮಾತಿನಿಂದ ಬದುಕಿದ ಅ೦ತಸ್ತವನ್ನು ಅಳೆಯಬಹುದಾಗಿದೆ.
ಮಾತಿನ ಬಹುಳತೆಯಲ್ಲಿ ಭಾವನೆಯು ಬತ್ತುವದು. ಮಾತಿನ ಮಕ್ಕಳಿಗಿಲ್ಲ ಜಗದೀಶನೊಲುಮೆ. ಮಾತಿನ ಸೆಳವಿವಲ್ಲಿ ಸಿಕ್ಕವನು ನೆಲೆಗಾಣನು. ತೀರವನ್ನು ತಲಪನು. ಮಾತಿನ ಗೆಲ್ಲ-ಸೋಲದಲ್ಲಿ ಅಜಾತನ ಅರಿಯಬಾರದು.
ಮಾತು ಭಾವವನ್ನು ಬಾಣದ೦ತೆ ಹೊರತೂರಿದರೂ ಹೂವಿವ೦ತೆ ಹೃದಯವನ್ನು ತಗುಲುತ್ತಿರಬೇಕು. ಮಾತು ಪ್ರಿಯವಿರಬೇಕು; ಮೃದುವಿರಬೇಕು.
ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ.
ವಾಕ್‌ಶಕ್ತಿಯು ದೇವನಡಿಗೆ ಅರ್ಪಿಸಿದ ಮಾಹಾಸ್ತ್ರ. ದೇವಕಾರ್ಯಕ್ಕಾಗಿ ಅದರ ವಿನಿಯೋಗವಾಗಬೇಕಾಗಿದೆ. ಅದು ಹಗುರು ಕೆಲಸವಲ್ಲ. ತಪಸ್ಸಿನಂತೆ ಬಿಗಿ. ತಪಸ್ಸೇ ಅಹುದು.
ಮೃದುವಚನವೇ ಸಕಲ ತಪ೦ಗಳಯ್ಯ.
ಮೃದುವಚನವೇ: ಸಕಲ ಜಪ೦ಗಳಯ್ಯ.
ಸದುವಿನಯವೇ ಸದಾಶಿವನ ಒಲುಮೆಯಯ್ಯ.
ಕೂಡಲಸಂಗಮದೇವಯ್ಯ ವ೦ತಲ್ಲದೊಲ್ಲವಯ್ಯ.
ಒರಟು ಮಾತು ಬಾಯಿಂದ ನುಸುಳಿ ನಮಗರಿಯದ೦ತೆ ಪಾಪದ ರಾಸಿಯನ್ನು ಬೆಳೆಸುವದು. ತುಸು ಜಾಗರೂಕತೆಯಿಂದ ಒಳ್ಳೆಯ ಮಾತಾಡಿದರೆ ಪುಣ್ಯ ಬೆಳೆಯುವುದು. ಮೃದುಮಾತು ಪ್ರಿಯಕರವೂ ಆಗಿರುತ್ತದೆ ಪ್ರಿಯಕರವಾದ ಮಾತು ಆಡಿದವರನ್ನು ಬದುಕಿಸುತ್ತದೆ; ಕೇಳಿದವವನ್ನೂ ಬದುಕಿಸುತ್ತದೆ. ಆದ್ದರಿಂದ ಮಾತೇ ತನ್ನ ಮಿತ್ರ, ಮಾತೇ ತನ್ನ ಶತ್ರು. ಕಠಿಣವಾಗಿ ಮಾತನಾಡಿ ಅನ್ಯರನ್ನು ಕೊಂದು ಹಾಕುವದರಿಂದ ತನ್ನ ಕೊಲೆಯನ್ನೂ
ಕರೆತಂದು ಸಿದ್ಧಗೊಳಿಸಿದಂತಾಗುತ್ತದೆ.
ಹಾವಾಡಿಗ ಹಾವನಾಡಿಸುವಲ್ಲಿ ತನ್ನ ಕಾಯ್ದುಕೊಂಡು
ಹಾವನಾಡಿಸುವ೦ತೆ,
ಆವ ಮಾತನಾಡಿದರೂ ತನ್ನ ಕಾಯ್ದು ಆಡಬೇಕು,
ಅದೆಂತೆಂದೊಡೆ, ತನ್ನ ವಚನವೇ ತನಗೆ ಹಗೆಯಹುದಾಗಿ.
ಅನ್ನಿಗರಿಂದ ಬಂದಿತೆನಬೇಡ.
ಅಳಿವುದು ಉಳಿವುದು ತನ್ನ ವಚನದಲ್ಲಿಯೇ ಅದೆ,
ನಿಜಗುರು ಸ್ವತ೦ತ್ರ ಸಿದ್ಭಲಿ೦ಗೇಶ್ವರಾ.
ಹಗೆಯೂ ಕೆಳೆಯೂ ತನ್ನ ವಚನವೇ. ಬೇರಿಲ್ಲ.
ಮಾತಿನಿಂದ ಅನ್ಯರನ್ನು ನೋಯಿಸದಿದ್ಧರೆ ತೀರಲಿಲ್ಲ. ಮಾತಿನಿಂದ ಅನ್ಯರನ್ನು ಮನ್ನಿಸುವುದಕ್ಕೆ ಶಕ್ಯವಿದೆ. ಮಾತು ಮನ್ನಣೆಗೆ ಮಹಾ ಸಾಧನ. ಮನ್ನಣೆಗಾಗಿ ಉಪಯೋಗವಾಗಲಾರದ ಮಾತು ಪ್ರಭುವಿನ ಕೋಪಕ್ಕೆ ಕಾರಣ. ಅಂಥ ಅಪರಾಧಕ್ಕಾಗಿ ದೇವನು ಕಠೋರವಾಗಿ ಶಿಕ್ಷಿಸದೆ ಇರಲಾರನು.
ಏನು ಬ೦ದಿರಿ, ಹದುಳವಿದ್ದಿರಿ, ಎ೦ದರೆ
ನಿಮ್ಮ ಮೈಸಿರಿ ಹಾರಿ ಹೋಹುದೇ?
ಕುಳ್ಳಿರಿ ಎ೦ದರೆ ನೆಲಕುಳಿಹೋಹುದೇ?
ಒಡನೆ ನುಡಿದರೆ ಶಿರ ಹೊಟ್ಟೆ ಒಡೆವುದೇ?
ಕೊಡಲಿಲ್ಲದಿದ್ದಂದು ಗುಣವಿಲ್ಲದಿದ್ದರೆ
ಮೂಗುಕೊಯ್ಯದೆ ಮಾಣ್ಪನೇ ಕೂಡಲಸ೦ಗಯ್ಯ.
ಮನೆಗೆ ಬ೦ದವರನ್ನು ಸತ್ಕರಿಸುವದಕ್ಕೆ ಆರ್ಥಿಕಾನುಕೂಲತೆ ಇಲ್ಲದಿರಬಹುದು. ಉಣಿಸು-ತಿನಿಸುಗಳಿಗೆ ಅಸಮರ್ಥವಾದ ಬಡತನವಿರಬಹುದು. ಆಸನ–ಗದ್ದುಗೆಗಳನ್ನು ಕೊಡಲಿಕ್ಕಾಗದ ದರಿದ್ರತೆಯಿರಬಹುದು. ಆದರೆ ಅರ್ಥವುಳ್ಳ ನಾಲ್ಕು ಒಳ್ಳೆಯ ಮಾತುಗಳೂ ಇರದ ಅಷ್ಟ ದರಿದ್ರರು ಯಾರಾದರೂ ಇರಬಲ್ಲರೇ? ಕುಳಿತುಕೊಳ್ಳು- ವುದಕ್ಕೆ ಸ್ಥಳವೂ ಇಲ್ಲದೆ ನೆಲಬಿಟ್ಟು ಅಂತರದಲ್ಲಿ ಮನೆಮಾಡಿದ ಬಡವರು ಎಲ್ಲಿಯಾದರೂ ಇರಬಲ್ಲರೇ? ಬಂದವರು ಕೇಳುವ ಮಾತಿಗೆ ಮರುನುಡಿಯೂ ಅಭಾವವಿರುವ ದಟ್ಟದರಿದ್ರರು ಎಂದಾದರೂ ಇರಬಲ್ಲರೇ? ಮಾತಾಡಿದರೆ ತಲೆಯೂ ಒಡೆಯುದಿಲ್ಲ; ಹೊಟ್ಟೆಯೂ ಒಡೆಯುದಿಲ್ಲ. ಅ೦ಥ ನಡುವಳಿಯುಳ್ಳವರ ಮೂಗನ್ನು ಮಾತ್ರ ದೇವನೇ ಕೊಯ್ದು ಹಾಕಬಲ್ಲನು. ಅಂದರೆ ಅವರನ್ನು ಕಠೋರವಾಗಿ ಶಿಕ್ಷಿಸಬಲ್ಲನು.
ಮಾತು ಲೋಕಗಳನ್ನು ಕಟ್ಟಿಕೊಳ್ಳಬಲ್ಲ ಸತ್ವಪೂರಿತ ತತ್ವವಾಗಿದೆ. ಅದು ದೇವ ಲೋಕವನ್ನು ಕಟ್ಟಿಕೊಳ್ಳಬಹು- ದಾದಂತೆ, ಮರ್ತ್ಯಲೋಕವನ್ನೂ ಕಟ್ಟಿಕೊಳ್ಳಬಹುದು. ಸತ್ಯನುಡಿದರೆ ದೇವಲೋಕವಾಯಿತು. ಮಿಥ್ಯ ನುಡಿದರೆ ಮರ್ತ್ಯಲೋಕವಾಯಿತು. ಮಿಥ್ಯದ ನುಡಿಯಿರುವಲ್ಲಿ ಕುನ್ನಿ ಮಾನವನೇ ಮೆಚ್ಚದಿರುವಾಗ, ಮಹಾದೇವನ ಮೆಚ್ಚಿಕೆಯೆಂತು ದೊರಕುವದು?
ಸ್ವಾಮಿಭ್ಯತ್ಯ ಸಂಬಂಧಕ್ಕೆ ಆವುದು ಪಥವೆಂದರೆ
ದಿಟವ ನುಡಿವುದು, ನುಡಿದಂತೆ ನಡೆವುದು.
ನುಡಿದು ಹುಸಿವ ನಡೆದು ತಪ್ಪುವ
ಪ್ರಪ೦ಚಿಯನೊಲ್ಲ ಕೂಡಲಸಂಗಮದೇವ.
ನುಡಿ ದಿಟಿವಾದರೆ ತೀರಲಿಲ್ಲ. ನುಡಿದುದನ್ನು ದಿಟಮಾಡಿ ತೋರಿಸ ಬೇಕಾದರೆ, ಅದರ೦ತೆ ನಡೆದು ತೀರ- ಬೇಕಾಗುವದು. ಆವಾಗ ನುಡಿ ದಿಟವಾಯಿತು. ನುಡಿಯೂ ಹುಸಿ, ನಡೆಯೂ ತಪ್ಪು ಎಂದಾಗ ಸಂಪೂರ್ಣ ಹುಸಿ
ನುಡಿಯಾಯಿತು. ಪ್ರಪ೦ಚದೊಳಗೆಲ್ಲ ಈ ವರ್ಗದ ಜನರೇ ತುಂಬಿಕೊಂಡಿದ್ದುಂಟು. ಅಂಥ ಪ್ರಪಂಚಿಗಳು ದೇವರಿಗೆ ಬೇಡವಾದವರು. ದೇವಭಕ್ತರು: ಹುಸಿಗೆ ಹೆದರುತ್ತಾರೆ. ಹುಸಿಯೆಂದರೆ ಅವರ ಮೈ ಕೊಳೆಯಾಗುತ್ತದೆ; ಮನವು
ಮಲಿನವಾಗುತ್ತದೆ. ನಾಲಗೆ ಕುಲಗೆಡುತ್ತದೆ. ಅವರಿಗೆ ಹುಸಿಯೇ ಹೊಲೆಯಾಗಿರುತ್ತದೆ. ಅವರ ಭಕ್ತಿಯೂ ಜೊಳ್ಳು. ಅಂಥ ಭಕ್ತಿಗೆ ಬೆಳೆಯೂ ಟೊಳ್ಳು.
ಹುಸಿಯೆಂಬುದು ಹೊಲೆ
ಶಿವಭಕ್ತಂಗೆ ಹುಸುಯೆಂಬುದುಂಟೇ ಅಯ್ಯ?
ಹುಸಿಯನಾಡಿ ಲಿಂಗವ ಪೂಜಿಸಿದಡೆ
ಜೊಳ್ಳ ಬಿತ್ತಿ ಫಲವನರಸುವ೦ತೆ ಕಾಣಾ
ಚೆನ್ನಮಲ್ಲಿಕಾರ್ಜುನಾ
ಹುಸಿಯನ್ನರಿಯದ ಮಹಾಮಹಿಮರ ಮಾತು, ವಾಕ್‌ಶಕ್ತಿಪೂರಿತವಾಗಿ ವಚನ ಎನಿಸಿಕೊಂಡಿದೆ. ಅವರ ಮಾತು ಮಿ೦ಚಿವ ಶಲಾಕೆ. ಮುತ್ತಿನ ಹಾರದಂತೆ ಆವರ ನುಡಿ. ಅವು ಸತ್ಯದ ಕವಚ ಧರಿಸಿದ್ದರಿ೦ದ ಅಧರಕ್ಕೆ ಸುಲಭ- ವಾಗಲಿಕ್ಕಿಲ್ಲ. ಹುಸಿನುಡಿದು ರೂಢಿಗೊಂಡ ಬಾಯಿಗೆ ಅವು ಕಹಿ. ಆಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ. ಬದುಕಿಗೆ ಪೌಷ್ಟಿಕ. ಬಾಳಿಗೆ ಕಲ್ಯಾಣಕರ. ಅ೦ತೆಯೇ–
ಆದ್ಯರ ವಚನ ಪರುಷಕಂಡಯ್ಯ,.
ಸದಾಶಿವನೆಂಬ ಲಿಂಗವ ನಂಬುವುದು,.
ನಂಬಲೊಡನೆ ನೀ ವಿಜಯಕಂಡಯ್ಯ,.
ಆಧರಕ್ಕೆ ಕಹಿ, ಉದರಕ್ಕೆ ಸಿಹಿ.
ಕೂಡಲಸಂಗನ ಶರಣರವಚನ ಬೇವಸವಿದಂತೆ.
ರೂಢಿಯಿ೦ದ ಬೇವಿಗೆ ಕಹಿಯೆನ್ನಬೇಕಾಗಿದೆ. ಆರು ರಸಗಳಲ್ಲಿ ಯಾವುದು ಉಚ್ಚ, ಯಾವುದು ನೀಚ? ಸಿಹಿ ಸೇರಲಾರದ ರಸಿಕರಿರುವಂತೆ, ಕಹಿ ಸೇರದ ರಸಿಕರೂ ಇರಬಹುದು. ಸಿಹಿಯೆಂದರೆ ಉತ್ತಮವಾದ ರಸವೆಂದೂ
ಕಹಿಯೆಂದರೆ ಅಧಮವಾದ ರಸವೆಂದೂ ತಿಳಿಯುವ ಕಾರಣವಿಲ್ಲ. ಆರೂ ರಸಗಳು ಒಂದೇ ವರ್ಗದವು. ಅವುಗಳನ್ನೆಲ್ಲ ಒ೦ದೇ ನಾಲಗೆಯು ಪರೀಕ್ಷಿಸಬಲ್ಲದು.
ಬೇವು ಸವಿಯುವದು ಸುಖಕರವಾಗಿಲ್ಲದಿರಬಹುದು. ಆದರೆ ಅದರಿ೦ದಾಗುವ ಪರಿಣಾಮವು ಸುಖದಾಯಕವೆನ್ನುವುದರಲ್ಲಿ ಸಂಶಯವೇ ಇಲ್ಲ. ಹೀನ ಮನದವರೊಡನೆ ಮಾತನಾಡಿ ಏನೂ ಗಳಿಸದಿದ್ಧವನು, ಮಹಾನುಭಾವರನ್ನು ಮಾತನಾಡಿಸಿ ಆಗಾಧವಾದ ಜ್ಞಾನಸಂಪತ್ತನ್ನು ಪಡೆಯಬಹುದಾಗಿದೆ. ಹೀನ ಮನದವರು ಕೆರೆ-ಹಳ್ಳ-ಬಾವಿಗಳಿದ್ದಂ೦ತೆ. ಅಗಾಧಮಹಿಮರು ವಾರಿಧಿ ಯಿದ್ದ೦ತೆ. ಕೆರೆಹಳ್ಳಬಾವಿಗಳು ಮೈದೆಗೆದರೆ ಗುಳ್ಳೆ, ಗೊರಚೆ, ಚಿಪ್ಪುಗಳೇ ಕಾಣಿಸಿಕೊಳ್ಳುವಪು. ವಾರಿಧಿ ಮೈದೆಗೆರೆ ರತ್ನಗಳು ಹೊಳೆದು ಬರುವವು. ಆದ್ಯರು ಮನಬಿಚ್ಚಿ ಮಾತಾಡಿದರೆ, ಹೊಟ್ಟೆಬಿಚ್ಚಿ ಒಡನುಡಿದರೆ ಲಿಂಗವನ್ನು ಕಾಣಬಹುದು.
ಆದ್ಯರೆಂದರೆ ಮಾತಿನಂತೆ ಮನವಿದ್ದ ಮತಿವಂತರು. ಅವರು ನುಡಿದರೆ ಶಾಸ್ತ್ರ, ನಡೆದರೆ ಧರ್ಮ ಆಗುತ್ತದೆ. ಮಾತಿಗೂ ಮನಕ್ಕೂ ತಳಕು ಇಲ್ಲದ ಜಂಗುಳಿಯು ಶಾಸ್ತ್ರವೋದಿದರೂ ವ್ಯರ್ಥ; ಪುರಾಣ ಕೇಳಿದರೂ ವ್ಯರ್ಥ. ಕಬ್ದುನ ಕೋಡಗವನ್ನು ಪರುಷ ಮುಟ್ಟಿದರೆ ಹೊನ್ನಿನ ಕೋಡಗವೆನಿಸುವ ದಲ್ಲವೆ ಇನ್ನೇನೂ ಆಗಲರಿಯದು. ಮಾತಿಗೂ ಮನಕ್ಕೂ ತಳಕು ಇಲ್ಲದವರು ಯಾವ ಜಾತಿಗೆ ಸೇರಿವವರೋ ತಿಳಿಯದು. ಕುಲಜರಂತೂ ಅಲ್ಲ; ದೇವನೊಲಿದ ಜಾತಿಯವರಂತೂ ಮೊದಲಲ್ಲ. ಮಾತಿನ ಮಲ್ಲಣೆಯಿ೦ದ ಅವರು ವಿವಿಧ ಲಾಗುಗಳನ್ನು ಹಾಕಬಲ್ಲರು. ತಂತಿಯ ಮೇಲೆ ಕುಣಿಯ ಬಲ್ಲರು. ಕೋಲು ಹಿಡಿದು ನೆಗೆಯಬಲ್ಲರು. ಇವೆಲ್ಲ ಲಕ್ಷಣಗಳು ಡೊಂಬರ ಜಾತಿಯನ್ನು ನೆನಪಿಗೆ ತರುತ್ತವೆ.
ನೂರನೋದಿ ನೂರಕೇಳಿದರೇನು?
ಆಶೆ ಹರಿಯದು ರೋಷಬಿಡದು.
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿಡೊಂಬರ
ನೋಡಿ ನಗುವ.
ನಮ್ಮ ಕೂಡಲಸ೦ಗಮದೇವ.
ಮಾತು ಬಲ್ಲವರು ಮಾಣಿಕ ತರಬಹುದು. ಹಗ್ಗದ ಬಲೆಯಲ್ಲಿ, ಮೃಗ ಪಕ್ಷಿಗಳನ್ನು ಹಿಡಿದಂತೆ ಮಾತಿನಬಲೆಯಲ್ಲಿ ಮೃಗಜೀವಿಗಳನ್ನು ಹಿಡಿಯಬಹುದು. ಮನಕ್ಕೆ ಹೊಂದಿಕೆಯಿಲ್ಲದ ಮಾತು ಇಂದು ಹಳೆಯ ಪುರಾಣಗಳಾಗಿ ಕುಳಿತವು. ಮನವನ್ನು ಕಟ್ಟಿಕೊಳ್ಳದ ಮಾತು ಮಹಾದೇವವನ್ನು ಕಟ್ಟಿ ನಿಲ್ಲಿಸುವುದೇ? ಮನಕ್ಕೆ ಗಂಟುಗೊಳ್ಳದ ಮಾತು ಗಾಳಿಗೆ ತೂರಿದ ತರಗೆಲೆ; ಮುಗಿಲಿಗೇರಿದ ಗಾಳಿಪಟ ಹೇಗೆ ಆದೀತು? ಮಾತು ಮನಸ್ಸಿಗೆ ನಿಲುಕುವ ವರೆಗೆ ಶಾಸ್ತ್ರವು ಪಠನೀಯವಾಯ್ತು. ವೇದಾ೦ತ ಆಚರಣೀಯವಾಯ್ತು. ಪುರಾಣ ಪಥ್ಯಕರ ಪಾನೀಯವಾಯ್ತು. ಆದರೆ ಮನಸ್ಸಿನ ನಿಲುವಿಗೆ ಮೀರಿ ಆಚೆಗೆ ನಿಂತ ಮಾತು, ಬರಿ ಬಾಯ ಬುರಡೆ; ಗಂಟೆಯ ನಾದ; ಅರ್ಥವಿಲ್ಲದ ಗಳಹು. ಅಂತೆಯೇ ವೇದ ವಾಕ್ಯ ವಿಚಾರಕ್ಕೆ ಬೀಜವಾದರೆ, ಶಾಸ್ತ್ರವಾಕ್ಯವು ಸಂದೇಹಕ್ಕೆ ಬೀಜವಾಯ್ತು. ಪುರಾಣವಾಕ್ಯ ಪುಣ್ಯದ ಬೀಜವಾದರೆ ಭಕ್ತಿಯ ಫಲ ಭವಕ್ಕೆ ಬೀಜವಾಯ್ತು. ಒಟ್ಟಾರೆ ಮಾತು ಒಡನುಡಿಯಾಗಿರಲಿ, ಮೌನ ಸೂಚಕವಾಗಿರಲಿ. ಅದು ಮನಕ್ಕೆ ನಿಲುಕುವಂತಿರಬೇಕು. ಮನವನ್ನು ಸಂಗಡಿಸಿ ಬರುತ್ತಿರಬೇಕು. ಅದಿಲ್ಲದ ಮಾತು ಆಕಾಶಕ್ಕೆ ಬಿದ್ದ ತೂತು. ಅದು ಶಾಸ್ತ್ರವೂ ಅಲ್ಲ; ವೇದಾ೦ತವೂ ಆಲ್ಲ.
ಶಾಸ್ತ್ರವೆ೦ಬುದು ಮನ್ಮಥ ಶಾಸ್ತ್ರವಯ್ಯ.
ವೇದಾ೦ತವೆ೦ಬುದು ಮೂಲಮನೋವ್ಯಾಧಿಯಯ್ಯ.
ಪುರಾಣವೆಂಬುದು ಮೃತವಾದವರ ಗಿರಾಣವಯ್ಯ.
ತರ್ಕವೆಂಬುದು ಮರ್ಕಟದಾಟವಯ್ಯ.
ಆಗಮವೆಂಬುದು ಯೋಗದ ಗೊರವಯ್ಯ.
ಇತಿಹಾಸವೆ೦ಬುದು ರಾಜರ ಕಥಾ ಭಾಗವಯ್ಯ,
ಸ್ಮೃತಿಯೆಂಬುದು ಪಾಪಪುಣ್ಯ ವಿಚಾರವಯ್ಯ.
ಆದ್ಯರ ವಚನವೆಂಬುದು ಬಹು ವೇದ್ಯವಯ್ಯ,
ನಮ್ಮ ಕಪಿಲಸಿದ್ಧ ಮಲ್ಲಿಕಾರ್ಜುನನ ತಿಳಿಯಲಿಕ್ಕೆ.
ಮಾತು ಮೃತಪಟ್ಟು ಶಾಸ್ತ್ರ- ಪುರಾಣವಾಗಿ ಕುಳಿತಿದೆ. ಮಾತು ಕೈ-ಕಾಲು ಕಳಕೊಂಡು ಆಗಮ ಇತಿಹಾಸವಾಗಿ ನಿಂತಿದೆ. ಮಾತು ಜೀವಕಳಕೊಂಡು ಸ್ಮೃತಿವೇದಾಂತವಾಗಿ ಬಿದ್ದುಕೊಂಡಿದೆ. ಮಾತು ಮನದೊಡೆಯನನ್ನು ಸಂಧಿಸಲಾರದು. ಮೌವನೇ ಮನದ ಜಗುಲಿಯನ್ನೇರಿ ಜಗದೀಶನನ್ನು ಅಲುಗಾಡಿಸಬಹದು; ನಲುಗಾಡಿಸಬಹುದು. ಮೌನಭಾಷೆಯೇ ಅಂತರ೦ಗದ ಅರಸನಾಡುವ ತಿಳಿನುಡಿ. ಮಾತಿನ ಗಲಭೆ ಅಂತರ೦ಗದ ಅರಮನೆಗೆ ಹೊರಟ ಪ್ರಯಾಣ. ಮೌನಭಾಷೆ ಅರಸನೊಡನಾಡುವ ಏಕಾಂತದ ಒಡ ನುಡಿ. ನಾಲಿಗೆ ಕಟ್ಟುವ ಮಾತಿನ ಮಾಲೆಯಲ್ಲಿಸಿಕ್ಕುಬೀಳಲಿಕ್ಕೆ ಆತನೇನು ರೂಪತೊಟ್ಟವನೇ? ಕೈಗೆ ಸಿಗಲಿಕ್ಕೆ ದೇಹ ತಳೆದವನೇ? ಅಂಥ ಪ್ರಯತ್ನವೇ
ವ್ಯರ್ಥ; ಮರುಳನ ಆಟ.
ಕಣ್ಗೆ ಕಾ೦ಬಡೆ ರೂಪವಲ್ಲ, ಕೈಗೆ ಸಿಲುಕುವಡೆ ದೇಹಿಯಲ್ಲ.
ನಡೆದಡೆ ಗಮನಿಯಲ್ಲ, ನುಡಿದಡೆ ವಾಚಾಳನಲ್ಲ.
ನಿಂದಿಸಿದವಗೆ ಹಗೆಯಲ್ಲ,ಹೊಗಳಿದವರಿಗೆ ಕೆಳೆಯಲ್ಲ.
ಗುಹೇಶ್ವರನ ನಿಲವು ಮಾತಿನ ಮಾಲೆಗೆ ಸಿಲುಕುವುದೇ?
ಸಿದ್ಧ ರಾಮಯ್ಯ ನೀನು ಮರುಳಾದೆಯಲ್ಲ!
ಮಾತಿನ ಮಾಲೆ ವ್ಯವಹಾರದ ಮತಿವಂತರಿಗೇ ಭೂಷಣ. ವ್ಯವಹಾರ ದಲ್ಲಿಯೇ ಅದರ ಪ್ರಯೋಜನ. ಮೌನ ಅಲೌಕಿಕವಾದರೆ ಮಾತು ಲೌಕಿಕ, ವ್ಯಾವಹಾರಿಕ. ಲೌಕಿಕರಿಗೆ ಮಾತಿನ ಪ್ರಯೋಜನವಾದಷ್ಟು ಇನ್ನಾರಿಗೂ
ಆಗದು.
ಮಾತುಗ೦ಟತನದಿಂದ ಎಷ್ಟು ಮಾತಾಡಿದರೇನು?
ಕಾಮಿನಿಯರ ಕಾಲದೆಸೆಯಲ್ಲಿ ಸಿಕ್ಕಿ;
ಕ್ರೋಧದ ದಳ್ಳುರಿಯಲ್ಲಿ ಬೆಂದು,
ಆಶೆಯೆಂಬ ಪಾಶ ಕೊರಳಲ್ಲಿ ಸುತ್ತಿ
ಅದೇಕೋ ಅದೇತರ ಮಾತೆಂದನಂಬಿಗರ ಚೌಡಯ್ಯ,
ಜಗದೀಶ್ವರನನ್ನು ಒಲಿಸುವ ಪರಿಯೆ೦ದು ಹೇಳಿದ ಉಪಾಯ ಹುಸಿ ನುಡಿಯಲುಬೇಡವೆಂದೂ, ಅಸಹ್ಯವ ನುಡಿಯಲು ಬೇಡವೆ೦ದೂ, ತನ್ನ ಬಣ್ಣಿಸಬೇಡ-ಇದಿರು ಹಳಿಯಲು ಬೇಡವೆಂದೂ ಹೇಳಿಲ್ಲವೇ? ಆ ಮಾತಿನಲ್ಲಿ ಮಾತಿನ ಮೀಮಾಂಸೆಯೆಲ್ಲ ಬಂದು ಹೋಗುತ್ತದೆ. ಸತ್ಯವಾದ ಮೃದುವಾದ ಮಾತು ಯೋಗ್ಯ; ಆತ್ಮಸ್ತುತಿ-ಪರನಿಂದೆ ಹೊಲ್ಲ. ಮಾತು ವಾಙ್ಮಯ ತಪಸ್ಸಾಗುವದಕ್ಕೆ ಇಷ್ಟೇ ಸಾಕು.
ಮಾತಿನ ಮಾಲೆಯಲ್ಲಪ್ಪುದೇ ಭಕ್ತಿ?
ಮಾಡಿ ಸವಿಯದನ್ನಕ್ಕರ,
ಮನ ಸವಿಯದನ್ನಕ್ಕರ,
ಧನ ಸವಿಯದನ್ನಕ್ಕರ-ಅಪ್ಪುದೇ ಭಕ್ತಿ?
ಕೂಡಲಸ೦ಗಮದೇವನೊಲಿವರೆ ಸರಸವಾಡುವನು.
ಸೈರಿಸದನ್ನಕ್ಕ ಅಪ್ಪುದೇ ಭಕ್ತಿ?
ಮೌನದಲ್ಲಿ ಉ೦ಡ ಅನುಭವದ ಸುಧೆಯನ್ನು ಮಾತಿನಿಂದ ಉಸುರ ಬಹುದು. ಅನುಭವಕ್ಕಾಗಿ ಹಸಿದವರ ಮುಂದೆ ಮೌನಮುರಿದು ಮಾತಾಡಿ ಹಸಿವೆ ಹಿಂಗಿಸಿಕೊಂಡ ಪರಿಯನ್ನು ಉಸುರಬಹುದು. ಮುರಿದ ಮೌನವು ನಿರರ್ಥಕವಲ್ಲದ ಮಾತುಬಳಸಿ ತನ್ನ ಅನುಭವವನ್ನು ಸ್ಫುರಿಸಬಹುದು. ಅಲ್ಲಿ ಸಹ ಅನುಭವಕ್ಕಾಗಿ ಹಸಿವೆ ಅವಶ್ಯ. ಹಸಿಯದ ಕರುವಿಗೆ ತೊರೆವು ಬಿಡದ ಅವೇ ತಕ್ಕುದು. ಇಲ್ಲವಾದರೆ ಅಲ್ಲಿ ವ್ಯರ್ಥವಾದ ಬುಡಬುಡಿಕೆ.
ನಾನೊಂದು ನುಡಿದರೆ ತಾವೊಂದು ನುಡಿವರು.
ತಾವೊಂದು ನುಡಿದರೆ ನಾನೆಂದು ನುಡಿವೆನು.
ಇದು ಕಾರಣ ಅವರಿಗೆ, ನಮಗೆ ಮೇಳವಿಲ್ಲ.
ಮೇಳವಿಲ್ಲವ ಬಳಿಕ ಅನುಭವಗೋಷ್ಠಿಯಿಲ್ಲ.
ಅನುಭಾವಗೋಷ್ಠಿಯಿಲ್ಲದೆ ಗುಹೇಶ್ವರನು ಇಲ್ಲಿಲ್ಲ
ಕೇಳಾ ಚೆನ್ನಬಸವಾ.”
ಜಗಜ್ಜನನಿಯು ಮಾತು ಮುಗಿಸುವುದಕ್ಕಾಗಿ ಮೌನಮುರಿದು ತಮ್ಮ ಮ೦ಗಲಸ೦ದೇಶವನ್ನು ಈ ಪ್ರಕಾರ ಗಂಭೀರ ಮಾತುಗಳಲ್ಲಿ ಬೀರಿದ್ದು ಹೇಗೆಂದರೆ-
“ಹದಗೆಟ್ಟ ಮಾತಾಳಿತನ ತೊಲಗಿ ನಿರರ್ಥಕವಲ್ಲವ ಮಾತುಗಳನ್ನು ಅರಿತು ಆಡುವದು ಜಗತ್ತಿಗೆ ಆವಶ್ಯಕವಾದ ವಿಷಯವಾಗಿದೆ. ಯಾಕೆಂದರೆ ಈಗ ಜಗತ್ತು ನಿರರ್ಥಕ ಶಬ್ದಗಳಿಂದ ಕಿವುಡುಗಟ್ಟಿಹೋಗಿದೆ. ಅದಕ್ಕೆ ಯೋಗ್ಯವಾದ ಮದ್ದು ಎಂದರೆ, ಅವ್ಯರ್ಥವಾದ ಮಾತು. ಮಾತು ಕಾರ್ಯಕ್ಕೆ ಪ್ರೇರಣೆ ಅಹುದು. ಮೌನವೇ ಪ್ರತ್ಯಕ್ಷಕಾರ್ಯ ನಿಜವೇ. ಕಾರ್ಯಕ್ಕೆ ಪ್ರೇರಣೆ ಸಾಕಷ್ಟಾಗಿದೆ; ಆದ್ದರಿಂದ ಮಾತು ಸಾಕು, ಪ್ರತ್ಯಕ್ಷ ಕಾರ್ಯ ಆರಂಭವಾಗಿಲ್ಲ. ಆದ್ದರಿ೦ದ ಮೌನಬೇಡ. ನಿರರ್ಥಕವಲ್ಲದ ಮಾತು ಬೇಕು. ನಿರರ್ಥಕವಲ್ಲದ ಮಾತೇ ಬೇಕು!”