ಯುಗಯುಗಗಳೇಕಾಂತ ಗೀತಹಾಡುತನಂತ
ನೋವಿನಲಿ ಕಾತರಿಸೆ ನನ್ನ ಉಷೆ ಬಂದೆ!
ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರುಹಣತೆ
ಅರ್ಪಿಸಿದೆ. ನೀನೊಪ್ಪಿ ಒಲವ ಬಾಳಿಸಿದೆ!
ನಾನು ಕವಿ-ನೀ ಕಾವ್ಯ ನಾ ಬರೆದ ಗೀತಗಳು
ನಿನ್ನ ಒಲವಿನ ನೂರು ಸೊಗಸು ನೆರಳು.
ನೀ ಬೆಳೆಸಿ ಬಾಳಿಟ್ಟ ನನ್ನ ಕಾವ್ಯದ ಬಳ್ಳಿ
ಹೂವಿಡುವ ಮುನ್ನವೇ ನೀ ಬಾಡಿಹೋದೆ!
ಅಂದು ನೀನಿದ್ದಾಗ ಈ ಕವಿತೆಗಳ ಮಾಲೆ
ಒಲವ ಮಂಗಳ ಸೂತ್ರ ನಿನ್ನ ಕೊರಳಲ್ಲಿ!
ಆ ಅಸೆ ಇಂದೆಲ್ಲಿ-ಇವು ನಿನ್ನ ನೆನಪಿನಲಿ
ಒಲವು ನೀಡುತಲಿರುವ ಭಾವದಶ್ರುಗಳು!
*****