ಮೋಡಿಕಾರ ಮುತ್ತಯ್ಯನ ಚೀಲದಿ
ಅಯ್ದೆಂದರೆ ಅಯ್ದೇ ಒಡವೆಗಳು
ಹುಲ್ಲು ಕಡ್ಡಿಗಳ ಕಟ್ಟೊಂದಿಹುದು
ಇನಿತರಿಂದಲೆ ಬೆರಗಿನಾಟವನು ಹೂಡಿಹನು
ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ
ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು
ರತ್ನ ವಜ್ರಾದಿಗಳ ತಾಮ್ರ ತವರಿದ್ದಲಿಯ
ಲವಣಾದಿ ಉಪ್ಪುಗಳ ಕಡಲುಕಣಿ ರಚಿಸಿಹನು
ಹುಲ್ಲುಗಳ ಬಗೆಯೇಸು, ಹಣ್ಣುಗಳ ವಿಧವೇಸು?
ಮಣ್ಣುಗಳ ಬಣ್ಣಗಳನೆಣಿಸಲಹುದೇ?
ಕಲ್ಲುಗಳ ಜಾತಿಯನು ಗುಣಿಸಲಹುದೇ?
ಮೂಳೆನರನೆತ್ತರದ ಚೀಲುಗಳ ರಚಿಸಿ
ತನ್ನ ಕಟ್ಟಿನ ಕಡ್ಡಿ ಅದರ ನೆತ್ತಿಗೆ ಚುಚ್ಚಿ
ಮಂತ್ರವನ್ನು ಸುರಿದರೆ ಆ ಗೊಂಬೆಗುಸಿರು
ನುಡಿಯುವದು-ನಲಿಯುವದು-ಕುಣಿಯುವುದು-ಕುಡಿಯುವದು
ಗೊಂಬೆಗಳ ಗುಣಗಣದ ಹೊಲಬನರಿವುದಸಾಧ್ಯ!
ಕೋಟಿರೂಪದ ಕೀಲು ಬೆರಗುಗೊಳಿಸುವ ಒಗಟು !
ನೆತ್ತಿಯಿಂದಾ ಕಡ್ಡಿ ಕಿತ್ತಿ ಕಡೆದೆಗೆದೊಗೆಯೆ
ನಿಂತ ನಿಂತಲ್ಲಿಯೇ ಆ ಗೊಂಬೆ ಬೀಳುವದು
ರಕ್ತಮಾಂಸಗಳೆಲ್ಲ ಅಯ್ದೊಡವೆಯಾಗುವವು
ಮಾಡುವನು ಆಡುವನು ತಾನೋಡಿ ನಲಿಯುವನು
ಆಟ ಸಾಕೆಂದೆನಿಸೆ ಮುರಿದು ಮೊಟ್ಟೆಯಕಟ್ಟಿ
ಮತ್ತೊಂದು ಹೂಡುವನನು
ಇವನೆಂಥ ಮೋಡಿಕಾರನಯ್ಯ!
ಮಂತ್ರಗಳ ಶಕ್ತಿಯೇನು, ತಂತ್ರಗಳಯುಕ್ತಿಯೇನು?
ಆಟ ಹೂಡಿದ ದಿವಸನೆಂದೆಂದೋ ಏನೋ !
ಮುಗಿವ ಮಿತಿ ತಿಳಿವುದೇನೋ?
*****
ಪುಸ್ತಕ: ಸಾಗರ ಸಿಂಪಿ