ಗೆಸ್ ಮಾಡ್ದಂಗೆ ಆತ್ ನೋಡ್ರಿ. ಗೋಡ್ರನ ಎಗೆನೆಸ್ಟ್ ಮಾಡ್ಕೊಂಡೋರ ಆಯಸ್ಸಾರ ಲೆಸ್ ಆಯ್ತದೆ ಇಲ್ಲ ಪವರ್ರಾನ ಮಿಸ್ ಆಯ್ತದೆ. ಆಹಿಂದ ಸಮಾವೇಸ ಮಾಡಿ ಬೀಗ್ತಿದ್ದ ಸಿದ್ರಾಮುದೀಗ ತ್ರಿಸಂಕು ಸ್ಥಿತಿ. ಆವಯ್ಯ ಕುಂಟಿಕ್ಯಂಡು ಓಡಾಡಾದು ನೋಡಿದ್ರಂತೂ ಕಳ್ಳು ಕಿತ್ತು ಬತ್ತದೆ. ಏನೇ ಹೇಳ್ರಿ ನಮ್ಮ ಹಿಂದುಳಿದ ಜನಾಂಗದೋವ್ಕೆ ವಸಿ ಬುದ್ದಿ ಕಮ್ಮಿ, ರೋಸ ಜಾಸ್ತಿ. ಈಬತ್ತಿಯೋರಂಗೆ ಬತ್ತಿ ಇಕ್ಕಾಕೂ ಬರಲ್ಲ. ಒಕ್ಕಲಿಗರಂಗೆ ಒಳಗುದ್ದು ಇಕ್ಕಿ ಮೊದ್ಲೇ ಅಬ್ಯಾಸಿಲ್ಲ ಬ್ರಾಂಬ್ರಂಗೆ ಜನಿವಾರ್ದಾಗೆಯ ಉರ್ಲು ಹಾಕಾದೊ ತಿಳೀದು. ಹಿಂಗಾಗಿ ದುಡ್ಕಿ ಗಣಪತಿ ಮಾಡು ಅಂದ್ರೆ ಅವರಪ್ಪನ್ನ ಮಾಡೋಕ್ಕೋಗಿ ಬೆಣೆ ತಕ್ಕಂಡ ಮಂಗ್ಯಾನಂಗೆ ಆಗಿಬಿಡ್ತವೆ. ಸಮಾವೇಸದಾಗೆ ಅವರಿವರು ಸಿದ್ರಾಮಣ್ಣ. ಸಿಎಂ ಆಗ್ತಾನೆ ಅಂತ ಆವೇಸ್ದಾಗೆ ಒದರಾಡಿದ್ದೇ ಬಂತು ಭಾಗ್ಯ. ಡೆಲ್ಲಿಯಿಂದ ಬಂದೋರೆ ಗೋಡ್ರು ಅಗ್ದು ಅಲವಾಗೋದರು. ಜೆಡಿಎಸ್‌ನಿಂದ ವಿಶೇಷ ಕೋರ್ಟು ಕಂಡೆಕ್ಟ್ ಮಾಡಿದರು. ಮಗನೆ ಪ್ರಾಸಿಕ್ಯೂಟರ್, ಅಪ್ಪನೇ ಜಡ್ಜು. ದಾದಿಲ್ಲ ಫಿರ್ಯಾದಿ ಅಪರಾಧಿನೂ ಕಟಕಟೆಗೆ ಕರೀಲಿಲ್ಲ. ಪಿಪಿ ಕೊಮಾರಣ್ಣನ ಆರ್ಗ್ಯುಮೆಂಟ್ ಹಿಂಗ ನಡೀತು. ಅನ್‌ಕೊಶ್ಚನಬಲ್ ಲೀಡರ್ ಗೋಡ್ರ ಆಜ್ಞೆಯ ಕಾಲಲೀ ಒದ್ದು ಸಿದ್ರಾಮು ಸಮಾವೇಸಕ್ಕೆ ಹೋಗಿದ್ದು ಮೊದಲನೇ ಅಪರಾಧ. ಇದು ಸ್ವಾಮಿ ದ್ರೋಹವೆಂದು ಪರಿಗಣಿಸಲಾಗಿದೆ. ತಾನೊಬ್ನೆ ದಲಿತರ, ಸಾಬರ, ಬಿಸಿಗಳ ದೋಸ್ತು; ಉಳಿದೋರು ದುಶ್ಮನ್‌ಗಳು ಅಂತ ಪಬ್ಲಿಸಿಟಿ ತಗೊಂಡಿದ್ದು ಎರಡನೇ ಆಪರಾಧ. ಇದು ಮಿತ್ರ ದ್ರೋಹ. ನಾಮಕಾವಸ್ತೆ ದೋಸ್ತಿಯಾಗಿರೋ ಕಾಂಗೈ ಕೋತಿಗಳ ಚೊತೆನಾಗೆ ದೋಸ್ತಿ ಮಾಡಿ ಅಪ್ಪಿ ಮುದ್ದಾಡಿದ್ದು ಮೂರನೇ ಅಪರಾಧ. ಇದು ನಂಬಿಕೆ ದ್ರೋಹವೆಂತಲೇ ಪರಿಗಣಿಸಲಾಗಿದೆ ಮೈಲಾರ್ಡ್. ಸಭೆನಾಗೆ ತಾನೇ ಮುಂದಿನ ಸಿಎಂ ಅಂತ ಭಟ್ಟಂಗಿಗಳಿಂದ ತುತ್ತೂರಿ ಊದಿಸಿಕೊಂಡು ಹೊಟ್ಟೆ ಉರಿಸಿದ್ದು, ಕರುನಾಡು ಜನತೆಗೆ ಮಾಡಿದ ಅಪರಾಧವೆಂದು ಏಳು ವಿಧಾನಪರಿಷತ್ತು ಮೆಂಬರ್ಸು, ಐವತ್ಮೂರು ಸಾಸಕರು ದೂರು ಸಲ್ಲಿಸಿದ್ದಾರೆಂದು ಮೈಪ್ರಿನ್ಸ್ ಕೊಮಾರಣ್ಣ ರಾಗಾಲಾಪ ಮಾಡಿದಾಗ ಗೋಡ್ರು, ತಮಗಿಷ್ಟವಾಗುವಂತೆಯೇ ಸ್ವರ ಲಯ ಮಾಡಿ ರಾಗಾಲಾಪ ಮಾಡುತ್ತಿರುವ ಮಗನ ವಕಾಲತ್ತಿಗೆ ಬೆಕ್ಕಸಬೆರಗಾಗಿ ತಲೆದೂಗಿದರು. ಎನಿ ಕೊಶ್ಚನ್ ಫ್ರಂ ಡಿಫೆನಸ್ ಅಂತ ಕಟಕಟೆಯತ್ತ ನೋಡಿದರು. ಕಟಕಟೆ ಖಾಲಿ! ಸಮಾವೇಶ ಮಾಡಿದ್ದು ಓಪನ್ ಆಗಿ ಸಾಬೀತಾಗಿರುವಾಗ ಕ್ರಾಸ್ ಎಕ್ಸಾಂ ಏಕೆ? ಕೋರ್ಟ್ಗೆ ಬೇಕಿರೋದು ಸತ್ಯ ಅಲ್ಲ ಸಾಕ್ಷಿ. ೫೩ ಸಾಕ್ಷಿಗಳು ನಮ್ಮ ಕಡೆಗವರೆ. ಕಾರಣ ಆಪರಾಧಿಗೆ ತಕ್ಕ ಶಿಕ್ಸೆ ಜಾರಿಗೊಳಿಸಬೇಕೆಂದು ಪರಿಪರಿಯಾಗಿ ಬೇಡುವೆ ಯುವರ್ ಆನರ್ ಎಂದು ಸೆಕೆಂಡ್ ಸನ್ ತಿಂಡಿಪ್ಲೇಟು ಗುದ್ದಿದ. ಹುಸಿನಗೆ ಬೀರಿ ಸ್ವಾಟೆ ಓರೆ ಮಾಡಿದ ಗೋಡ್ರು ಜಡ್ಜ್ ಮೆಂಟ್ ನೀಡಿಯೇ ಬಿಟ್ಟರು. ನಮ್ಮ ಕೊಮಾರಣ್ಣ ವಾದದಲ್ಲಿ ಸಿದ್ರಾಮು ಮಾಡಿದ ದ್ರೋಹ, ಪಟ್ಟ ಸಮೇತ ಬಯಲಾಗಿದೆಯಲ್ರಪ್ಪಾ. ಅಪರಾಧಿನಾ ಮತ್ತೆ ಕರೆಸಿ ಮತ್ತೆ ತಿಂಗಳುಗಟ್ಟಲೆ ಕೇಸ್ ನಡೆಸೋದು ಅಪರಾಧವೆ. ಜಸ್ಸೀಸ್ ಡಿಲೆ ಈಸ್ ಜಸ್ವೀಸ್ ಡಿನೆ ಅಂಬೋ ಮಾತಿಗೆ ಬೆಲೆಕೊಟ್ಟು ಅಪರಾಧಿ ಸಿದ್ರಾಮುನಾ ಅಟ್ ದಿ ಫಸ್ಟ್ ಶಾಸಕಾಂಗ ಪಕ್ಷದ ನಾಯಕತ್ವದಿಂದ ಕಿಕ್ಡ್ ಅಂಡ್ ಲೆಗ್ಡ್ ಔಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ತಟ್ಟನೆ ಎದ್ದು ನಿಂತ ಕೊಮಾರಣ್ಣ; ಜಸ್ಟ್ ಎ ಮಿನಿಟ್ ಮೈ ಲಾರ್ಡ್. ಸಿದ್ರಾಮುಗೆ ಸಾಥ್ ಕೊಟ್ಟು ಸಿದ್ರಾಮು ನಿಯತ್ತು ಕೆಡಿಸಿದ ಸಾಡೆಸಾತಿಗಳಾದ ಡಾಕ್ಟರ್-ಕಂ-ಪೇಶಂಟ್ ಮಾದೇವು, ಬಚ್ಚಾ ಜಾರ್ಕಿ ಹೊಳಿಗೂ ಶಿಕ್ಷೆ ಆಗಲೇಬೇಕೆಂದು ಹಠ ಹಿಡಿಯಬೇಕೆ. `ತಥಾಸ್ತು’ ಅಂದ ಗೋಡ್ರು ಸಭಾಸದರ ಕಡೆಗೆ ಓರೆನೋಟ ಬೀರಿ, ಮತ್ತೊಂದು ಮಾತೂ ಹೇಳೋದ್ಯೆತ್ರಪಾ ಬ್ರದರ್ಸ್ ನಮ್ಮ ಮುಂದಿನ ಡಿಸಿಎಂ ಯಾರು ಗೂತ್ತೆ? ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ, ಹೆಸರಿನಾಗೆ ಎಂಪಿ ಇದ್ದರೂ ಜನ್ಮದಲ್ಲೆ ಎಂಪಿ ಆಗದ ಸಜ್ಜನ. ಸಾಹಿತ್ಯ, ನಾಟ್ಕ ಅಂದ್ರೆ ಜೀವಾನೇ ಬಿಡೋ ಜಂಗಮಯ್ಯ ಪ್ರಕಾಶು ಅಂತ ಹೇಳ್ಲಿಕ್ಕೆ ನಾನು ಇಚ್ಛೆಪಡ್ತೀನಿ. ಎಲ್ಲೆಡೆ ಒಮ್ಮತದ ಚಪ್ಪಾಳೆ. ವಿರೋಧಿಸಲಾಗದೆ ಅವಿರೋಧ ಆಯ್ಕೆಗೆ ಸಿಂಧ್ಯಾನೂ ಸಹಿ ಹಾಕಿದ್ದಾತು – ಗೋಡ್ರ ರಾಜಕೀಯ ಅಂದ್ರೇನೆ ಹಿಂಗೆ.
ಬಯಸದೆ ಬಂದ ಭಾಗ್ಯ ಅಂತ ಪ್ರಕಾಶು ಹಿಗ್ಗಿ ಹೀರೇಕಾಯಾದ್ರೆ, `ಬಯಸದೆ ಬಂದ ಬ್ಯಾನಿ’ ಅಂದ್ಕೊಂಡ ಸಿದ್ರಾಮು, ಸಭೆ ಕರೆಯೋ ಆಧಿಕಾರ ಇರೋದು ನನ್ಗೆ ಮಾತ್ರ. ಈ ಸಿಳ್ಳೆಕ್ಯಾತರ ಕಳ್ಳ ಸಭೆ ಅಸಿಂಧು ಅಂತ ಕಲ್ಡಿ ಹೊಯ್ಕೊಂಡಂಗೆ ಹೊಯ್ಕೋತಾ ೪ನೇ ತಾರೀಕು ಕರೆದು ಸಭೆನಾಗೆ ನಾಕು ಪ್ಲಸ್ ಮೂರು ಜನ ಶಾಸಕರು ಕಂಡು ಬಂದಾಗ ಸಿದ್ರಾಮು ಸಭೆ ಪೋಸ್ಟ್‌ಫೋನಾತು. ಆದ್ರೂ ಸಿದ್ರಾಮು ಮ್ಯಾಗೆ ಗೋಡ್ರಿಗೆ ಅಗ್ದಿ ಪ್ರೇಮ. `ಪಾಪ, ಆವಯ್ಯ ಅಹಿಂದ ಸಮಾವೇಶ ಮಾಡ್ಕೊಂಡು ಹಾಯಾಗಿರ್ಲಿ. ಜಗತ್ತೆಲ್ಲಾ ರೌಂಡ್ ಹೊಡಿಲಿ. ಜನರಲ್ಲಿ ಜಾಗೃತಿ ತರಲಿ. ನಮ್ಗೂ ವಸಿ ಗೈಡ್ ಮಾಡ್ಲಿ. ಐ ಅಪ್ರಿಸಿಯೇಟ್ ಹಿಮ್ ಅಂಡ್ ಮೋರ್ ಓವರ್ ನೂ ಕೊಶ್ಚನ್ ಆಫ್ ಎನಿ ಫರದರ್ ಆಕ್ಷ್ಯನ್. ಲೆಟ್ ಹಿಮ್ ಗೋ ಫಾರ್ ಗುಡ್ ಕಾಸ್, ಅಂತ ಆಸೀರ್ವಾದಾನೂ ಮಾಡಿಬಿಟ್ಟರು. ಸಿದ್ರಾಮು ಕಾಂಗ್ರೆಸ್ ಸೇರಲ್ಲ ಅಂತ ಸೇಮ್ ಸಾಂಗ್ ಸೇಮ್ ಟ್ಯೂನ್ ಹಾಡ್ತಾ ಇಸ್ವನಾತು ರೇವು ಡಿಕೆಶಿ ಸಹವಾಸ ಮಾಡಿದ್ದು, ಕಾಗೆ ಸಂಗ ಮಾಡಿ ಗರುಡ ಪಕ್ಸಿ ಹಾಳಾತು ಅನ್ನಂಗಾಗೇತೀಗ. ಜೆಡಿಯುನ ಒಂಟಿ ಪಕ್ಷಿ ಸೋಮಸೇಕ್ರ `ಸಿದ್ದು, ನಾವು ಹೆಣ ಹೊರಕಿದ್ದಂಗೆ ಪಕ್ಷದಾಗೆ ನಾಕು ಜನ ಇದೀವಿ. ಬಾಯಿ ಬಡ್ಕೊಳ್ಳೋಕೆ ಒಬ್ಬ ಬೇಕಾಗೈತಿ ನೀನು ಬಾರಯ್ಯಾ’ ಅಂತ ವೀಳ್ಯ ಕೊಟ್ಟವನೆ. ಜಾರ್ಜೂ ಬಂದು ಹೋಗಿದ್ದಾತು. ಇದತ್ಲಾಗಿರ್ಲಿ ಸಿದ್ರಾಮುಗೆ ಹತ್ತಿದ ಬೆಂಕಿನಾಗೆ ಕೂಗುಮಾರಿ ಯಡೂರಿ ಮುಖ್ಯಮಂತ್ರಿ ಆದಂಗೆ ಕಾಯಿಸ್ಕೋತಾ ಏನೇನೋ ಕನಸು ಕಾಣ್ತಾ, ಜೆಡಿಎಸ್ನೋರು ಕರಿದಿದ್ದರೊ ತಾನೇ ಕೂಡಾವಳಿ ಮಾಡ್ಕೊಂಬೋಕ ರೆಡಿ ಆಗಿದ್ಲಂತೂ ನಗೆ ಪಾಟ್ಲಾಗೋತು. ಏತಿ ಅಂದ್ರೆ ಪ್ರೇತಿ ಅಂದ ಜ್ಯೂ. ನರಸಿಮ್ರಾಜು ಅನಂತಿ ಸುತ್ರಾಂ ಒಪ್ಪಲಿಲ್ಲ. ಯಡೂರಿ ರಾಂಗ್ ಆಗಿ ಹಳೆ ಚೆಡ್ಡಿ ಬಿಚ್ಚಿ ಎಸೆಯೋಕೆ ನಿಂತಾಗ ಗೋಯಲ್ಲು, ವೆಂಕಯ್ಯನಾಯ್ಡು, ನರಹರಿ ಅಂಬೋ ಬಿಜೆಪಿ ಹಿರೇರೆಲ್ಲಾ ಕಂಗಾಲಾಗಿ ಕರುನಾಡಿಗೆ ಬಂದು ಯಡೂರಿ ಕಾಲ ಹಿಡಿದರು. ನೀನೆ ನನ್ನ ಭಾವಿ ಮುಖ್ಯಮಂತ್ರಿ. ಅನಂತೂನ ಕರ್ನಾಟಕದಾಗೆ ಕಾಲೇ ಇಕ್ಕದಂತೆ ಮಾಡ್ತೀವಿ ಅಂತ ವಚನಕೊಟ್ಟರು. ಯಡೂರಿ ನಂಬಕ್ಕಿಲ ಅಂದಾಗ ರಾಜಕಾರಣಿ- ಕಂ – ಸ್ವಾಮಿ ಸಾಕ್ಷಾತ್ ಪೇಜಾವರರೇ ಫೋನ್ನಾಗೆ ಆಣೆ ಪ್ರಮಾಣ ಮಾಡಲಾದ ಮೇಲೆಯೇ ಯಡೊರಿ ಅನಂತಿಯ ಹ್ಯಾಂಡ್ಲ್ ಹೊಡೆದದ್ದು. ಇದನ್ನೆಲ್ಲಾ ನೋಡ್ತಾ ಕುಹಕ ನಗೆ ಬೀರಿದ ಗೋಡ ಆಂಡ್ ಹಿಸ್ ಸನ್ನು, “ನಮ್ಮ ಪಕ್ಷದ ಮ್ಯಾಗೆ ವಿಶ್ವಾಸವಿಟ್ಟು ತಾನಾಗಿಯೇ ಬರೋರಿಗೆ ವೆಲ್ ಕಂ” ಅಂತ ಮೀಸೆ ತೀಡಿದ್ದೇ ತೀಡಿದ್ದು. ರಾಜಕೀಯ ಹೊಡೆತ ಒಂಡ್ಕಡೆ, ಮಳೆ ಚಳಿಗಾಳಿ ಪ್ರವಾಹಗಳ ಅಬ್ಬರ ಒಂದ್ಕಡೆ. ಹಿಂಗಾಗಿ ಅದುರುಬಿದ್ದು ನಡಗುತ್ತಾ ಮಾರಿ ದದ್ದರಿಸಿಕೊಂಡಂತಾಗಿರುವ ದಬರಿಮೋರೆ ಧರಂಸಿಂಗ್, ಗೋಡ್ರ ಹುಕುಂನಂಗೆ ರಾಜ್ಕಪಾಲರ್ನ ಮೀಟ್ ಮಾಡಿ ಸಿದ್ದು ಮಾದೇವು ಜಾರ್ಕಿಹೊಳೆಯೋರನ ಸಾರಾಸಗಟಾಗಿ ಅಧಿಕಾರದಿಂದ ಕಿತ್ತು ಹಾಕಿ ಏದುಸಿರು ಬಿಡ್ಲಿಕ್ ಹತ್ತೇತೆ. ಸಿದ್ದುಗೆ ಆದ ಅನ್ಯಾಯ ನೋಡಿ ತಾಳ್ಳಿಕ್ಕಾಗ್ದೆ ಅಹಿಂದ ಕಾರ್ಯಕರ್ತರು ಊರ್ ಊರ್ನಾಗೆ ಬಸ್ಸು ಸುಡ್ತಾ ಗೋಡ್ರ ಪ್ರತಿಕೃತಿಗೆ ಬೆಂಕಿ ಇಕ್ಕಿ ದೊಂಬಿ ಮಾಡ್ತಾ ಅವರೆ. ಹಿಂದುಳಿದ ಸ್ವಾಮಿಗುಳೂ ಮುನಿಸಿಕೊಂಡವರೆ. ಈ ಗೋಡ ಹಿಟ್ಲರ್, ವಂಚಕ ಅಂದ್ರೂ ಸಾಂತವಾಗಿರೋ ಗೋಡ್ರು, “ನನ್ನ ಗೊಂಬಿಗೆ ಯಾಕ್ರಪಾ ಬೆಂಕಿ ಇಕ್ತೀರಾ? ಸ್ವತಃ ನನ್ಗೇ ಇಕ್ಕಿ ಬೂದಿ ಮಾಡಿದ್ರೂವೆ ಬೂದಿಯಿಂದಲೇ ಎದ್ದು ಬರೋ ಫೀನಿಕ್ಸ್ ಪಕ್ಷಿ ಇದ್ದಂಗೆ ನಾನು” ಅಂತ ದೊಂಬಿಕೋರರಿಗೆ ಸೆಡ್ಡು ಹೊಡಿತಾ ಮುಂದೆ ಮಾಡಬೇಕಾದ ಹಿಕ್‌ಮತ್‌ನ್ನೆಲ್ಲಾ ಸೈಲೆಂಟಾಗಿ ಸೈಡ್ನಾಗಿದ್ದು ಮಾಡ್ತಾ ಅವರೆ. ಇನ್ನು ಏನೇನಾತದೋ ಕಾರೈಕಲ್ ಶನೇಶ್ವರನೇ ಬಲ್ಲ.
*****
( ದಿ. ೨೪-೦೮-೨೦೦೫)