ಹೊಸ ಹರಯದಲಿ ಹೂವು ಅರಳುತ್ತ ಮೊಗೆಮೊಗೆದು
ಮಾಧುರ್ಯವನು ಬೀರಿ ಹಿಗ್ಗಿನಲಿ ಕುಣಿಯುತಿರೆ
ದೂರದಿಂ ಹಾರುತ್ತ ದುಂಬಿ ಅದರೆಡೆ ನಡೆದು
ತನ್ನಿಚ್ಛೆ ಝೇಂಕರಿಸಿ ಹೂಂಕರಿಸಿ ಹೂವಿನೆಡೆ
ದಿಟ್ಟಿಸುತ ಸುತ್ತೆಲ್ಲ ಸುತ್ತಿ ಸುಳಿದಾಡುವೊಲು,
ಸಾವ ಛಾಯೆಯು ಬಂದು ಮನದ ಹಿನ್ನೆಲೆಯಲ್ಲಿ
ಗುಂಯ್ಗುಟ್ಟಿ ಕೊರಗಿಸಿದೆ-ಮನಸು ಕಾತರಿಸಿಹುದು
-“ಹರೆಯದಲೆ ಬೀಳುವುದೆ ಸಾವಿನಾಟಗಳಲ್ಲಿ?”-
ನಿನ್ನ ತುಟಿಗಳಲಿರುವ ಕಲ್ಪನೆಯ ರಸದೂಟ
ಕಣ್ಣ ಮಿಂಚಲಿ ಕೂಡಿ ಹೊಂಚುತಿಹ ಹೊಸಹಾಸ
ಹೊತ್ತಿಸಿದ ಎಳೆಯ ನಗು ಮನಕೆ ಮಾಡಿದ ಮಾಟ,
ಆ ರೂಪ, ಆ ನೋಟ, ಸೌಂದರ್ಯದಾಸೆಳೆತ
ನನಸಿನಲಿ ದೊರಕದಿಹುದಲ್ಲಿ ದೊರಕುವುದೆಂಬ
ಇಂಬಿರಲು, ಸಾವನಪ್ಪುವ ಆಸೆ ಎದೆ ತುಂಬ!
*****