ಫ್ರೆಂಚ್ ಕ್ರಾಂತಿಯ
ಅರುಸೊತ್ತಿಗೆಗಳ ವೈಭವದ ದಾಖಲೆಗಳ
ಸ್ತಂಭಗಳಡಿಯಲಿ ಭೀಭತ್ಸ ರಕ್ತದ
ವಾಸನೆಯ ಗೊರಲಿಗಳು
ಶತ ಶತಮಾನಕ್ಕೂ ಕಥೆಗಳನ್ನು ಹೇಳುತ್ತಲೇ ಇವೆ.
ಚಕ್ರವರ್ತಿಗಳ ದರ್ಪ, ಅರಮನೆ
ಓಪೆರಾ, ಕಾನಕಾರ್ಡ್ ಚೌಕ ನೋಡುತ್ತಿದ್ದಂತೆಯೇ
ಐಫಲ್ ಟವರ್‌ದ ತುತ್ತ ತುದಿಗೇರುತ್ತೇನೆ.
ಮೋನಾಲಿಸಾ ನಗುತ್ತಾಳೆ
ಯಾರಿವಳು ಎಂದು ದಿಟ್ಟಿಸಿ ನೋಡುವಾಗ
ಸೊಕ್ಕಿನ ಮೃದು ಹೆಣ್ಣಾಗಿ ಗಂಭೀರವಾಗುತ್ತಾಳೆ.
ಚರ್ಚಿನ ಪಾದ್ರಿಗಳು ಬೆಚ್ಚನೆಯ ಉದ್ದನೆಯ
ಬಟ್ಟೆಯೊಳಗೆ, ತಿಳಿ ಬೆಳಕಿನ ಕಿರಣಗಳೊಳಗೆ
ಮಾನವೀಯತೆಯ ಮೇರುತ್ವ ಹೇಳುತ್ತಿದ್ದರೆ
ಕಲಾಕಾರರು ನೆಳಲು ಬೆಳಕಿನೊಳಗೆ
ಅರೆನಗ್ನ ಚಿತ್ರಗಳ. ನಿಸರ್ಗಗಳ
ಕಲ್ಪನಾತೀತ ಮಿಂಚುಗಳನ್ನು ಹರೆಯಿಸಿದ್ದಾರೆ.
ಝಗ ಝಗಿಸುವ ‘ಶ್ಯಾಸ್’
ಫ್ಯಾಶನ್‌ಹೌಸ್ ಸುಗಂಧ ಹೊಳೆಯೊಂದಿಗೆ
ತೇಲುವ ಸೀಮೋಲ್ಲಂಘನ
ವಿಜ್ಞಾನ ತಂತ್ರಜ್ಞಾನಗಳಿರುವಾಗ
ಮತ್ತೊಂದೆಡೆ ಜಿಗುಪ್ಸಿಸುವ
ಕ್ಯಾಬರೆಗಳಲ್ಲಿ ಮೈಮರೆತ
ಜನರನ್ನು ನೋಡಿ ನಮ್ಮ
ಮುದಿ ಯಕ್ಷಗಂಧರ್ವರೂ
ಮೇನಕಾ ತಿಲೋತ್ತಮೆಯರೂ
ನಾಚಿ ಹೊಟ್ಟೆ ಉರಿಸಿಕೊಳ್ಳುತ್ತಾರೇನೋ –
ಬೆಳಕಿಗೆ ಕರಗದ ಬಜಾರುಗಳು ನೋಡಿ
ಸುಸ್ತಾದ ಸೂರ್ಯ
ತಾನೂ ನಾಚಿಕೆ ಬಿಟ್ಟು
ಗಿಡಮರಗಳ ಸಂದಿಗೊಂದಿಗಳೊಳಗಿಂದ ಹಾಯ್ದು
ಕನ್ನೆಯರ ಕೆನ್ನೆ ಕಚ್ಚುತ್ತಾ
‘ತೆರಿ ಪ್ಯಾರಿ ಪ್ಯಾರಿ ಪ್ಯಾರಿಸ್ ಸೂರತ್ ಕೋ’
ಎಂದು ಕಣ್ಣುಹೊಡೆದು
ಸಿಳ್ಳು ಹೊಡೆಯುತ್ತ ತಿರುಗುತ್ತಿದ್ದಾನೆ.
*****