Home / ಲೇಖನ / ಪತ್ರ / ಪೂರ‍್ಣಿಮ – ೩

ಪೂರ‍್ಣಿಮ – ೩

ಏಕೆ ನನ್ನೊಡತಿ,
ಮನಸ್ಸಿಗೆ ಬಹುವಾಗಿ ಹಚ್ಚಿಕೊಂಡಂತಿದೆ? ನಿನ್ನ ಪತ್ರವನ್ನು ನೋಡಿದರೆ ಗಾಬರಿ, ದುಃಖ, ಕಷ್ಟ ಎಲ್ಲವನ್ನೂ ಮೇಳವಿಸಿಕೊಂಡು ಬರೆದಂತಿರುವುದು. ಹೋಗುವಾಗ ನೀನು ನನಗೆ ಕೊಟ್ಟ ಅಭಯದಾನವನ್ನು ಮರೆತೆಯೇನು? “ನನ್ನ ಸೀರೆಯನ್ನು ವೀರಗಚ್ಚೆಯಾಗುಡುವೆನು. ಶ್ರೀಮತಿ …….. ಯಾಗದೆ, ಶ್ರೀಮಾನರಾಗುವೆನು. ನೀವು ನನ್ನ ಯೋಚನೆ ಬಿಡಿರಿ. ಸಂಸ್ಥೆಯನ್ನು ಊರ್ಜಿತಗೊಳಿಸಿ. ಅದರಿಂದ ನಿಮಗೆ ಶಾಶ್ವತವಾದ ಹೆಸರು ಬರುವುದು ಎಂದು ಆಶೀರ್ವದಿಸಿ ಹೋದವಳು ನೀನು. ನಿನ್ನ ಧೈರ್ಯವೆಂಬ ಉರುಗೋಲೇ ನನ್ನ ಜೀವನದ ಸಂಕೋಲೆಗಳನ್ನು ಬಡಿದೋಡಿಸುವ ಬಾರುಗೋಲು. ಅದನ್ನು ಕಿತ್ತುಕೊಂಡು ನನ್ನನ್ನು ಹೆಳವನನ್ನಾಗಿ ಮಾಡಬೇಡ.
ಬಾಳಿನಲಿ ಬಲು ಬಯಕೆ,
ಒಲುಮೆಯಾ ನನ್ನಾಕೆ.
ನಾಳಿನಲಿ ಬದುಕೆಂಬ
ಹುರುಪನೀವಳು ಆಕೆ”
ಎಂದು ನನ್ನಾಕೆಯನ್ನು ಕುರಿತು ಕವನ ಕಟ್ಟಿ ನಾನು ಕುಣಿದಾಗ, ತಾಳ ಗೂಡಿಸಿ, ಸ್ವರಗೊಟ್ಟು `ಯಾರಾಕೆ’ ಎಂದು ನೀನಂದ ಆ ದಿವ್ಯ ದಿನವನ್ನು ಇನ್ನೊಮ್ಮೆ ನೆನಸಿಕೋ. ಅಂದು ನೀನು ನನಗೆ ಶಕ್ತಿದೇವಿಯಾಗಿ ಕಂಡೆ. ಮುಚ್ಚಿನಗುವ ಮುಗುಳು ನಗೆಯಲ್ಲಿ ಅಭಿಮಾನವು ಕೋಡಿಯೊಡೆದಿದ್ದಿತು. ನಿನ್ನ ಗಾತ್ರವಿಲ್ಲದ ಸೊಂಟಕ್ಕೆ ಅಪಾರವಾದ ಧೈರ್ಯದ ಸುತ್ತ ಪಟ್ಟಿಯಂತೆ ಕಂಡಿತು. ನೀನು ಸೆರಗು ಸುತ್ತಿ ನನ್ನನ್ನು ಒರಗಿನಿಂತಾಗ ನಿಮ್ಮ ತಂದೆ ಅನೇಕ ಸಾರಿ, ನನ್ನ ಮಗಳು ಗಂಡಸಾಗಿ ಹುಟ್ಟಬೇಕಾಗಿದ್ದಿತು ಎಂದು ಅನ್ನುವರಲ್ಲದೆ, ಇನ್ನೊಂದು ಕ್ಷಣ ತಡವಾಗಿ ಹುಟ್ಟಿದ್ದರೆ ಗಂಡು ಮಗುವಾಗಿ ಹುಟ್ಟು ಬೇಕಾಗಿದ್ದಿತೆಂದು ಜಾತಕ ಗುಣಿಸಿದ ಪುರೋಹಿತರು ಹೇಳಿದುದನ್ನೇ ಮತ್ತೆ ಮತ್ತೆ ತಮ್ಮ ಅಳಿಯನ ಎದುರಿಗೇ ಹೆಮ್ಮೆಯಿಂದ ಹೇಳಿಕೊಳ್ಳುವರು. “ಹೌದು ನಿಮ್ಮ ಮಗಳು ಅದಕ್ಕೇ ಗಂಡುಬೀರಿಯಗಿರುವದು” ಎಂದು ಹೇಳಿ ಅವರನ್ನು ರೇಗಿಸಲೇ ಎಂದು ಧೈರ್ಯ ಬರುವುದು. ಸೋದರ ಮಾವನೆಂಬ ಸಲುಗೆಯಿದ್ದರೂ ಹೆಣ್ಣು ಕೊಟ್ಟ ಮಾವನೆಂಬ ಗೌರವವು ಅಡ್ಡ ಬರುವುದು.
ಇಂತಹ ನನ್ನ “ಗಂಡುಬೀರಿ” ಈಗ ಹೆಣ್ಣು ಬೀರಿಯಾಗಿ ಕಣ್ಣೀರು ಕರೆಯುತ್ತಿರುವಂತಿದೆ! ಅಕ್ಕ ಪಕ್ಕದವರ ಸುಖ ಸೊಬಗನ್ನು ನೋಡಿದರೆ ಕಣ್ಣುರಿಬರುವ ಸ್ವಭಾವ ನಿನಗೆ ಮೊದಲಿನಿಂದಲೂ ಇಲ್ಲ. “ರನ್ನ ಚಿನ್ನಗಳೇನು ಚೆನ್ನ-ಓ ಚೆನ್ನ-ನೀನೇ ನನಗೆ ಬಲು ಚೆನ್ನ” ಎಂದು ಕಷ್ಟ ಪಟ್ಟು ಪ್ರಾಸಗೂಡಿಸಿ ಹಾಡಿದ ನೀನೇ, ಇಂದು ಅಧೀರತೆಯಿಂದ ನನ್ನ ಧೈರ್ಯವನ್ನು ಅಲುಗಿಸುತ್ತಿರುವೆ. ನಾನೂರು ಮೈಲಿ ದೂರದಲ್ಲಿರುವ ನೀನು ನಂಟರಿಷ್ಟರಾರೆಂಬುದನ್ನೂ ಗುರುತು ಅರಿಯದೆ, ಮೂರು ಮಕ್ಕಳ ಮಧ್ಯದಲ್ಲಿ ಕುಳಿತು ಏಕಾಕಿನಿಯಾಗಿ ಜೀವನದ ದಿನಗಳನ್ನು ನೂಕುತ್ತಿರುವ ನಿನಗೆ, ನಿನ್ನ ನೆಮ್ಮದಿ, ಮಕ್ಕಳ ನೆಮ್ಮದಿಗಿಂತಲೂ ನನ್ನ ನೆಮ್ಮದಿಯ ಬಗ್ಗೆ ಇರುವ ಆತುರ, ಕಾತುರ, ಕಳವಳ, ಇವನ್ನು ಕಂಡರೆ, ನಿನ್ನನ್ನೂ ನಿನ್ನ ಪಾಡಿಗೆ ಅಷ್ಟುದೂರ ಬಿಟ್ಟಿರುವ ಪಕ್ಷ ನಿರ್ದಯತ್ವದ ಬಗ್ಗೆ ನಾಚಿಕೆ ನನಗೇ ಬರುವುದು. ಆದರೂ ವಿಧಿಯ ವಿಧಿ ಇಂತಿದೆ ಎಂದು ತಿಳಿದುಕೊಂಡಾಗ, ಕಳೆದ ಜೀವನದ ಸಿಹಿ-ಸವಿಗಳು ನೆತ್ತಿಗೇರಿದಾಗ ಪತ್ರ ಬರೆಯದೆ ವಿಧಿಯಿಲ್ಲ. ಪತ್ರವು ಸ್ವಲ್ಪು ಉದ್ವಿಗ್ನಮಯವಾಗಿದ್ದರೆ, ನೀನು ಇಷ್ಟೊಂದ ಚಲವಿಚಲಿತಳಾಗಿಬಿಡುವಿ. ನನಗಿಂತ ನೀನು ಗಟ್ಟಿಗಳೆಂದು ಭಾವನೆಗಳನ್ನು ಒತ್ತಿಕ್ಕದೆ ಬರೆಯುವೆನು. ಹೀಗಾದರೆ ಇನ್ನು ಮುಂದೆ ಬರಿಯ ಕವಿಯ ಕಲ್ಪನಾ ಸಾಮ್ರಾಜ್ಯದಲ್ಲಿ ವಿಹರಿಸಿ ವಿಹಂಗಮದಲ್ಲಿ ಆಶಾ ಭವನಗಳನ್ನು ಕಟ್ಟುವ ಮಾತುಗಳಿಂದ ಕೂಡಿದ ಪತ್ರವನ್ನು ಬರೆಯುವೆನು. ಆದರೆ ರಸಮಯವಾದರೂ, ಶುಷ್ಕವಾದ ಆ ಪತ್ರಗಳಿಂದ ನನ್ನ ಶ್ರಮ ನಿಷ್ಪಲವಾಗುವುದು. ಅನುಭವಿಸದೆ ಇರುವುದನ್ನು ಅನುಭವಿಸಿದವನಿಗಿಂತ ಹೆಚ್ಚಾಗಿ ನಟಿಸಿ ಬರೆಯುವುದು ನನಗೆ ಬರದು. ನಾನು ಏನನ್ನು ನಿನ್ನಲ್ಲಿ ಕಂಡೆನೋ, ನಿನ್ನೊಂದಿಗೆ ಉಂಡೆನೋ, ನಿನ್ನ ಕಣ್ಣುಗಳಲ್ಲಿ ನನ್ನ ಕಣ್ಣುಗಳನ್ನು ಕೂಡಿಸಿ ಜಗತ್ತನ್ನು ನೋಡಿದೆನೋ ಅದನ್ನು ಮಾತ್ರ ಬರೆಯಬಲ್ಲೆನು! ಇದು ನಿನಗೆ ನೋವನ್ನು ಮರುಕಳಿಸುವುದಾದರೆ ಪತ್ರವನ್ನು ಬರೆಯುವುದನ್ನೇ ನಿಲ್ಲಿಸಿ ಬಿಡುವೆನು. ನಾನು ನಿನ್ನ ಪತ್ರಗಳಿಂದ, ನೀನು ನನ್ನ ಪತ್ರಗಳಿಂದ ಜೀವಿಸ ಬೇಕೆಂಬುದರ ರಹಸ್ಯವನ್ನು ಅರಿಕುಕೊ೦ಡಿರುವೆಯಷ್ಟೆ?
ಇನ್ನು, ಹಿತೋಪದೇಶ ಸಾಕು ಪತ್ರ ಈಗಾಗಲೇ ಉದ್ದವಾಗಿದೆ. ಇಷ್ಟೊಂದು ಗಂಭೀರವಾದ ಉಪದೇಶವನ್ನೂ ಮಾಡಿದ ನಾನು ಒಮ್ಮೆ ನಿನ್ನನ್ನು ನಗಿಸಬೇಡವೆ? ಜಗದ ಉದ್ದಗಲವನ್ನು ಮೀರಿ ನಿಂತಿರುವ ಮನದ ವಿಸ್ತಾರದಲ್ಲಿ ಕೈಚಾಚಿ ನಿನ್ನ ಮುಟ್ಟು ಬೇಕಾದರೆ ಈ ಚರ್ಮದ ಕೈಗಳು ಸಾಲವು. ಕಲ್ಪನಾ ಸಾಮ್ರಾಜ್ಯದಲ್ಲಿ ಪ್ರೇಮ ರಸದಿಂದ ಎರಕ ಹೊಯ್ದ ಕೈಗಳು ಬೇಕು.
ನೆನಪು ಹತ್ತಿದರೆ, ಇರುವೆಯ ಸಾಲಿನಂತೆ, ಎಲ್ಲವೂ ಒಮ್ಮೆಲೆ ಸಾಲು ಸಾಲಾಗಿ ಬಂದು ನಿಲ್ಲುವವು. ಯಾವುದನ್ನು ಆರಿಸಿಕೊಳ್ಳಲಿ ನಿನ್ನನ್ನು ಕೆಣಕಲು? ಶೃಂಗಾರ ರಸದ ಆ ಹದಿನೈದು ವರ್ಷದ ಹಿಂದಿನ ರಾತ್ರಿಗಳನ್ನು ನೆನಸಿಕೊಡಲೇ? ಆ ಹೊಸಹಸಿರು ಬಳೆಗಳ ಸದ್ದು ಅಂತಃಪುರದಿಂದ ಹೊರಬಿದ್ದು, ಹೊರಗಿನ ಅತ್ತೆ ಮಾವಂದಿರಿಗೆ ಕೇಳಿಸಿತೆ೦ದು ಎಲ್ಲ ಬಳೆಗಳನ್ನು ಹಿಂಗೈಗೆ ಸರಿಸಿಕೊಂಡು ನನ್ನ ಬಳಿಗೆ ಬಂದು ಕುಳಿತಾಗ, ನಾನು ತುಸು ಗಟ್ಟಿಯಾಗಿ ಮಾತನಾಡಿದರೆ, ಸದ್ದು ಎಂದು ಅದುಮುತ್ತಿದ್ದ ನಿನ್ನ ಪೇಚಾಟವನ್ನು ನೆನಪಿಗೆ ತಂದರೆ ನಿನಗೆ ನಗು ಬರುವುದೇ? ಅತಿಯಾಗಿ ನಗಬೇಡ, ಅಜೀರ್ಣವಾದೀತು.
ಸ್ಪ್ರಿಂಗಿನ ಮಂಚ, ಅದಕ್ಕೂ ನಿನ್ನ ಕಟ್ಟಾಣತಿಯೆ? ಕಿರ್ರೆಂದು ಶಬ್ದ ಮಾಡಬೇಡವೆಂದು ಅದಕ್ಕೆ ಬುದ್ಧಿ ಹೇಳುತ್ತಿದ್ದೆ. ಅದು ಅವಿಧೇಯವಾಗಿ ವರ್ತಿಸಿದರೆ ಅದರ ಸಹವಾಸನ್ನೂ ಜೊತೆಗೆ ನನ್ನ ಸಹವಾಸವನ್ನು ಬಿಟ್ಟ ಭೂಶಾಯಿಯಾಗುತ್ತಿದ್ದ ಆ ಮಧು-ಚಂದ್ರಮದ ರಾತ್ರಿಗಳನ್ನು ನೆನಪಿಗೆ ತಂದರೆ, ನಿನ್ನ ಗಲ್ಲ ಕೆಂಪೇರುವುದೆ? ನೋಡಿಕೊ ಒಮ್ಮೆ ಕನ್ನಡಿಯನ್ನು.
ಎಲ್ಲಕ್ಕಿಂತ ಸೊಗಸು. ನನ್ನ ಮಾವನ ಮನೆಯಲ್ಲಿ ಸಿಂಗರಿಸಿದ ಮಂಚಕ್ಕೇರಿದ ನನ್ನ ಮೊದಲ ರಾತ್ರಿಯನ್ನು ನೆನಸಿಕೊಳ್ಳುವುದು.
ಅಲ್ಲವೇ ಪೂರ‍್ಣೀ, ನಿನಗೆ ಅಂದೇಕೆ ಅಷ್ಟು ನಾಚಿಕೆ ಬಂದಿತ್ತು? ನಾನೇನು ಅಂದು ತಾನೇ ವಿದೇಶದಿಂದ ಬಂದು ನಿನ್ನ ಕೈ ಹಿಡಿದಿದ್ದೆನೆ? ನನ್ನನ್ನು ಅದುವರೆಗೂ ಎಲ್ಲಿಯೂ ನೋಡದಿದ್ದಷ್ಟು ಹೊಸ ತನವನ್ನು ತೋರಿಸಿದೆಯಲ್ಲಾ? ಎಷ್ಟು ಜನರು ಕಷ್ಟ ಪಡಬೇಕಾಯಿತು ನಿನ್ನನ್ನು ಕತ್ತು ಹಿಡಿದು ಬಾಗಿಲ ಒಳಕ್ಕೆ ನೂಕಲು, ನೂಕಿಸಿಕೊಂಡು ಬಂದ ನೀನು ಅಂದು ನನ್ನಿಂದಲೂ ನೂಕಿಸಿಕೊಂಡೇ ಹೊರಗೆ ಹೋಗುತ್ತಿದ್ದೆ. ಅಷ್ಟು ಸಿಟ್ಟನ್ನು ತಂದಿತ್ತು ಆ ನಿನ್ನ ಬಗ್ಗಿಸಿದ ತಲೆ, ಎತ್ತಿ ನಿಲ್ಲಿಸಿದರೂ ಎದ್ದು ಆ ನಿನ್ನ ನಿಲ್ಲದೆ ತಲೆ, ಅಂದು ಎಂದೂ ಬರದ ಸಹನೆ ನನಗೆ ಬಂದಿತ್ತು! ಅದು ನಿನ್ನ ಸುದೈವ.
ನಿನಗೇನು ಗೊತ್ತು? ನೀನು ನಿಮ್ಮ ತಾಯಿಯ ಹೊಟ್ಟೆಯಲ್ಲಿರುವಾಗಲೇ ಆ ಮಹಾ ಮಾತೆ, ನನ್ನ ಮತ್ತು ನಿನ್ನ ಅಜ್ಜಿ, ನಿನ್ನನ್ನು ಹೆಣ್ಣೆಂದು ಕಂಡುಕೊಂಡರಂತೆ. ಆಗಲೇ ನಿಶ್ಚಿತಾರ್ಥ ಈ ಹೆಣ್ಣು ಇವನಿಗೆ ಎಂದು. ತೊಟ್ಟಿಲಲ್ಲಿ ನೀನು ಅವತರಿಸಿದೊಡನೆ ಮತ್ತೊಮ್ಮೆ ಸಾಕ್ಷಿ ಪೂ‍ರ‍್ವಕವಾದ ನಿಶ್ಚಿತಾರ್ಥ; ನೀನು ಬೆಳೆದು ಹೆಣ್ಣಾಗುತ್ತಿರುವಾಗ; ನಾನು ರಜದಲ್ಲಿ ಊರಿಗೆ ಬಂದರೆ ನಿನಗೆ ನಿತ್ಯ ಶೃಂಗಾರ, ನಿತ್ಯ ನಾಚಿಕೆ, ನಿತ್ಯ ಕೀಟಲೆ; ಹೀಗಾಗಿ ಹುಡುಗರು ಆಟದ ಗೊಂಬೆಗಳಿಗೆ ಗಂಡು-ಹೆಣ್ಣೆಂದು ಕರೆದು ಮದುವೆ ಮಾಡುವಂತೆ ನನ್ನ ಅಜ್ಜಿ ನಮ್ಮಿಬ್ಬರಿಗೂ ಪುರೋಹಿತರ ಮಂತ್ರವಿಲ್ಲದೆ, ತಾಲಿಯ ಬಿಗಿತವಿಲ್ಲದೆ, ನೆಂಟರಿಗೆ ಊಟ ಉಪಚಾರಗಳಿಲ್ಲದೆ ಗಂಡ ಹೆಂಡತಿಯರನ್ನಾಗಿ ಮಾಡಿ ಬಿಟ್ಟಿದ್ದಳು. ಗಂಡು-ಹೆಣ್ಣುಗಳಾಗಿ ನಾವು ಬೆಳೆಯಲಿಲ್ಲ. ನೀನು ಅತ್ತೆಯ ಮಗಳಾಗಿ ನಾನು, ಮಾವನ ಮಗನಾಗಿ ಬೆಳೆಯಲಿಲ್ಲ. ಗಂಡ ಹೆಂಡತಿಯಾಗಿ ಬೆಳೆದು ಬಂದೆವು. ಅಂತಹ ನಿನ್ನ ಹಳೆಯ ಗಂಡನಾದ ನನ್ನನ್ನು ನೋಡಿ ಹುಲಿಯನ್ನು ನೋಡಿದ ಹಸುವಿನಂತೆ ಬೆದರಿದೆಯೇಕೆ? ಆ ಬೆದರು ಮುಖದಲ್ಲಿ ಲಲ್ಲೆಯಾಡುತ್ತಿದ್ದ  ಲಾವಣ್ಯವನ್ನು ಅನುಭವಿಸುತ್ತಿದ್ದ ನನಗೆ ನಿನ್ನ ಈ ಬೆದರಿಕೆಯ ಬಗ್ಗೆ ನಗು ಮತ್ತು ಕೋಪ ಎರಡೂ ಸಮವಾಗಿ ಬಂದವು. ನಾನೇನು ಅಂದು ಹುಲಿಯ ವೇಷವನ್ನು ಹಾಕಿಕೊಂಡು ಬಂದಿದ್ದೆನೆ? ಮಾವನವರು ಪ್ರೀತಿಯಿಂದ ಕೊಡಿಸಿದ ಮೇಲುಕೋಟೆ ಪಂಚೆಯ ಪಂಚಕಚ್ಚೆ, ನಾನೊಪ್ಪಿ ಒಲಿಸಿಕೊಂಡ ಮಿರು ಮಿರುಗು ರೇಶಿಮೆಯ ಜುಬ್ಬ, ಮೀಸೆ ಕಾಣದ ಮುಖ, ಇವುಗಳಿಂದ ನಿನ್ನಷ್ಟು ಚೆಲುವಿಲ್ಲದ್ದರೂ ನಿನಗೆ ತಕ್ಕಷ್ಟು ಚೆಲುವನಾಗಿದ್ದರೂ, ನೀನು ಮೂಕಿಯಾಗಿ ಕುಳಿತರೆ ಕೋಪ ಬರುವುದಿಲ್ಲವೇ? ನೀನೇ ಹೇಳು ನೋಡೋಣ?
ಕೊನೆಗೆ ನನ್ನ ಸಹಾಯಕ್ಕೆ ಬಂದವರಾರು ಗೊತ್ತೆ? ಹೇಳಿಬಿಡಲೆ? ಸಿಟ್ಟು ಬಂದು ಅಲ್ಲಿ ನನ್ನ (ಚಿತ್ರದ) ಗಾಜನ್ನು ಹೊಡೆದೀಯೆ? ಅಟ್ಟದ ಮೇಲಿದ್ದ ಶ್ರೀಮಾನ ಮಾರ್ಜಲರಾವ. ಅದಕ್ಕೆ ನನ್ನ ಕಷ್ಟ ಅರ್ಥವಾಗಿರಬಹುದು, ನಿನ್ನ ಮೌನವೂ ಸೇರದಿರಬಹುದು. ಒಮ್ಮೆಲೆ ಅಟ್ಟದ ಮೇಲಿದ್ದ ಪಾತ್ರೆಯನ್ನು ಉರುಳಿಸಿತು. ಶಬ್ದ ಸ್ವಲ್ಪವಾಗಲಿಲ್ಲ. ನಿಶ್ಯಬ್ದವಾದ ರಾತ್ರಿಯಲ್ಲಿ ಈ ಶಬ್ದವೇ ನಿನ್ನನ್ನು ಅಲುಗಿಸಿತು. ಮೂರು ಮೊಳದ ದೂರದಲ್ಲಿದ್ದ ತಲೆ ತಗ್ಗಿಸಿ ಅಶೋಕವನದಲ್ಲಿ ಸೀತೆ ಕುಳಿತಂತೆ ಕುಳಿತಿದ್ದ ನೀನು ಒಮ್ಮೆಲೆ ಬೆಕ್ಕು ಹಾಕಿದಂತೆ ಹಾರಿದೆ ನನ್ನ ಪಕ್ಕಕ್ಕೆ! ಮುಂದಿನದನ್ನು ಬರೆದು ಬಿಟ್ಟರೆ ನೀವೆಷ್ಟು ಬಣ್ಣಗೇಡಿಗಳು ರಸಾಭಾಸಿಗಳು ಎಂದು ಬಯ್ಯುವೆ ಎಂಬ ಹೆದರಿಕೆಯಿಂದ ಬರೆಯುತ್ತಿಲ್ಲ. ಅದೋ ಮಧ್ಯರಾತ್ರಿಯ ಹನ್ನೆರಡು ಬಡೆಯುತ್ತಿದೆ. ಆಕಳಿಕೆಯ ಜೊತೆಗೆ ಮೈಮುರಿತನವೂ ಬರುತ್ತಿದೆ. ಆದ್ದರಿಂದ ಈ ಪತ್ರವನ್ನು ಇಷ್ಟಕ್ಕೆ ಮುಗಿಸುವನು. ನಿದ್ರೆಯ ರಾಜ್ಯದಲ್ಲಿ ಬೆಂಗಳೂರು-ಹುಬ್ಬಳ್ಳಿಗಳ ದೂರದ ವಿಚಾರವಿಲ್ಲ. ಕಣ್ಣು ಮುಚ್ಚಿದ ಕೂಡಲೇ ನಾನು ಅಲ್ಲಿಗಾದರೂ ನೀನು ಇಲ್ಲಿಗಾದರೂ ಬರಲೇ ಬೇಕಲ್ಲವೆ? ಇಳಿ ವಯಸ್ಸಾಯಿತೆಂದು ನೀನು ಇನ್ನಷ್ಟು ಮಂದಗಮನೆಯಾಗಿ ಬರಬೇಡ. ನಾನು ಬಯಸಿದ ನಿಮಿಷದಲ್ಲಿ ಗಂಧರ್ವರಿತ್ತ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಬಿಡು. ನೀನು ಹಾರಿಬರದಿದ್ದರೆ ನಾನು ಕಲ್ಪನೆಯೆಂಬ ಕೀಲ್ಗುದುರೆಯ ಮೇಲೆ ಕುಳಿತು ಬಂದುಬಿಡುವೆನು. ಮನೆಯ ಬಾಗಿಲ ಚಿಲಕವಿದ್ದರೇನು ಮನದ ಬಾಗಿಲು ತೆರೆದಿರುವುದಲ್ಲವೆ? ನೀನು ಆಘ್ರಾಣಿಸುತ್ತಿರುವ ಗಾಳಿಯಲ್ಲಿನ ತಂಪು ಹವವಾಗಿ ನಾನು ಬರುತ್ತಿರುವೆನು. ನನ್ನನ್ನು ತಡೆಯಬಲ್ಲವರಿಲ್ಲ. ಗುಡನೈಟ,
ಇತಿ ನಿನ್ನವನೇ
*****
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...