Home / ಲೇಖನ / ಪತ್ರ / ಪೂರ‍್ಣಿಮ – ೨

ಪೂರ‍್ಣಿಮ – ೨

ಹೃದಯೇಶ್ವರಿ.

ಏಕಾಕಿಯಾಗಿರುವೆ, ಹೆದರಬೇಡ, ಧೈರ್ಯವಾಗಿರು ಎಂದು ಒಂದು ಮಾತನ್ನೂ ನಿನಗೆ ಬರೆಯದೆ ನಾನು ಮತ್ತು ನನ್ನ ಕೆಲಸ ಇಷ್ಟನ್ನೇ ಕುರಿತು ಬರೆಯುತ್ತಿದ್ದರೆ ನಿನಗೆ ಕೋಪ ಬಂದಿರಬಹುದು. ಅದರಿಂದಲೆ ಒಂದು ವಾರವಾಗಿದ್ದರೂ ನೀನು ಪತ್ರವನ್ನೇ ಬರೆದಿರುವುದಿಲ್ಲ.

ಇಲ್ಲ, ನಿನಗೆ ಕೋಪ ಬರುವುದಿಲ್ಲ. ನನ್ನನ್ನು ಬಲ್ಲೆ ನೀನು. ಹದಿನೈದು ವರುಷಗಳಲ್ಲಿ ಕಳೆದ ಅಗಲಿಕೆಯ ಮೂರು ನಾಲ್ಕು ವರುಷಗಳನ್ನು ಬಿಟ್ಟರೂ ಹನ್ನೆರಡು ವರುಷ, ನನ್ನ ನೆರಳಾಗಿ ನಿಂತು, ನನ್ನ ಬೆಳಕಾಗಿ ಬಳುಕಿದ ನೀನು, ನನ್ನ ಬಗ್ಗೆ ಎಂದೂ ಸಿಟ್ಟು ಮಾಡಿಕೊಳ್ಳಲಾರೆ. ಸಿಟ್ಟು ಬಂದರೂ ಅದು ಬಹು ಸಿಹಿಯ ಸಿಟ್ಟು, ಹೌದು ನೆನಪಿಗೆ ಬಂತು. ಒಂದು ಸಾರಿ ಮಾತ್ರ ಅರ್ಥವೇಕೆ ಅನರ್ಥವನ್ನೇ ಮಾಡಿಕೊಂಡಿದ್ದೆ. ನೆನಪಿದೆಯೆ? ಅಂದು ನಿನ್ನ ಸ್ನೇಹಿತೆ ಆ ಮದುವೆಯಾಗದ, ಬಲಿತ ಕನ್ಯೆ, ಚಪಲತೆಯನ್ನೇ ಚಪ್ಪರಿಸುತ್ತಿದ್ದ ಆ ಚಪಲಾಕ್ಷಿ ನನ್ನನ್ನು ನೋಡಿ ಚಲಿತಳಾದಳೆಂದೋ, ಅಥವಾ ಆಕೆಯನ್ನು ನಾನು ಕಣ್ಣು ಬಿಟ್ಟು ನೋಡಿದನೆಂಬ ಆರೋಪದ ಮೇಲೂ, ಗಂಟುಮೂಟೆ ಕಟ್ಟಿ ಗಂಟುಮುಖ ಹಾಕಿಕೊಂಡು ಕುಳಿತುಕೊಂಡಿದ್ದೆಯಲ್ಲಾ ನನ್ನ ನಿಮ್ಮ ನೆಂಟು ಹರಿಯಿತೆಂದು. ತುಂಟ ರೋದನವನ್ನು ಮಾಡಿ ಗಂಟಲು ಗೀಚಿಕೊಂಡೆ, ಜ್ಞಾಪಕವಾಯಿತೇನು?

ಈಗ ಅದನ್ನೆಲ್ಲಾ ನೆನಸಿಕೊಂಡರೆ, ನಿನಗೇ ನಗು ಬರುವುದಲ್ಲವೆ. ಅಲ್ಲವೇ ಪೂರ‍್ಣೀ, ನೀನೇ ನಿನ್ನ ಸ್ನೇಹಿತೆಯೆಂದು ಮನೆಗೆ ಕರೆದುಕೊಂಡು ಬಂದೆ. ಬಹು ಸುಸಂಸ್ಕೃತೆ ಎಂದು ಗುರುತು ಮಾಡಿಸಿದೆ. ನನ್ನಲ್ಲಿ ಆಕೆಗೆ ಅಣ್ಣನಿಗಿಂತ ಹೆಚ್ಚಾದ ಪೂಜನೀಯ ಭಾವನೆಯಿದೆಯೆಂದು ನೀನೇ ಬಡಾಯಿ ಕೊಚ್ಚಿಕೊಂಡೆ. ಆದರೇ ಕೊನೆಗೆ ಪಾಪ, ಧೈರ್ಯವಾಗಿ ನನ್ನ ಕಡೆಗೆ ನೋಡುತ್ತಲಿದ್ದ ಅದು ನಿನ್ನೆದುರಿನಲ್ಲೇ ಭಯ ಇಲ್ಲದೆ ಮಾತನಾಡಿಸುತ್ತಿದ್ದ ಆ ಮಲೆನಾಡ ಹುಡುಗಿಯನ್ನು, ಒಂದೇ ನಿಮಿಷದಲ್ಲಿ ಎಂತಹ ದೂರಿಗೆ ಗುರಿಮಾಡಿದೆ. ನನ್ನ ಕಡೆಗೆ ಉರಿಗಣ್ಣನ್ನು ಬಿಟ್ಟೆ. ಒಂದು ದಿನ ಉಪವಾಸ ಮಾಡಿದ ನಂತರ, ಕಣ್ಣೀರು ಹರಿದು ಹರಿದು ಕೆನ್ನೆಗೆ ಶೀತವಾದ ಮೇಲೆ, ನನ್ನ ಭಾವಚಿತ್ರವನ್ನು ಮೊಗಚಿದ ಮೇಲೆ, ನನಗೊಂದು ಸಾರಿ, ಮುಳ್ಳಕ್ಕಿಯ ಅನ್ನವನ್ನು ಹಾಕಿ ಒಂದು ದಿನ ವಯಸ್ಸಾದ ಹುಳಿಯನ್ನು ಹಾಕಿದ ಮೇಲೆ, ನಿನ್ನ ಕೋಪ ಶಾಂತವಾಯಿತು! ಆಗ ನಾನು ಬಹಳ ಸಹಿಸಿಕೊಂಡೆನಲ್ಲವೆ? ಇಲ್ಲದಿದ್ದರೆ ತಪ್ಪಾಯಿತೆಂದು ನೀನು ಸುಲಭವಾಗಿ ಅನ್ನುತ್ತಿದ್ದೆಯೇನು!

ಮತ್ತೆ ಅಂತಹ ಪ್ರಸಂಗ ಬಂದಿಲ್ಲ. ಸದ್ಯ ಬರದಿರಲಿ.

ತಾಳು-ಅದೇನೋ ಹೊರಗಡೆ, ಚೀರಾಟ ಕೂಗಾಟ ಕೇಳಿ ಬರುತ್ತಿದೆ ……ಹೋಗಿ ನೋಡಿಬಂದೆನು. ಹತ್ತು ನಿಮಿಷಗಳ ದೃಶ್ಯವದು. ನೀನೂ ನೋಡುವಂತಹದಿತ್ತು. ನಾನಿರುವ ಪಕ್ಕದ ಮನೆಯ ಪಕ್ಕದಲ್ಲಿ ಒಂದು ಮನೆ ಇರುವುದಷ್ಟೆ. ಬೀಡಿ ಸಿಗರೇಟು ಬೀಡಾ ಅಂಗಡಿಯನ್ನು ಗಂಡಹೆಂಡಿರಿಬ್ಬರೂ ಸೇರಿ ನಡೆಸುತ್ತಿರುವರು. ಗಂಡನಿಗೆ ಒಂದು ಕಾಲು ಮಾತ್ರವಿಲ್ಲ. ಹೆಂಡತಿಗೆ ಕೈಕಾಲು, ಬಾಯಿ, ಎಲ್ಲವೂ ಸರಿಯಾಗಿದೆ. ಗಂಡನಷ್ಟೆ ಎತ್ತರ. ವಯಸ್ಸು ಮೀರಿದ್ದರೂ ಪ್ರಾಯವಾರದಿರುವ ದಿಟ್ಟತನ, ಸೌಂದರ‍್ಯದ ಹೆಸರೆತ್ತದಿರುವುದೇ ಸರಿ. ನಾನು ಪ್ರತಿದಿನವೂ ಅಂಗಡಿಯ ಮುಂದೆ ಹಾಯುವಾಗ ಇವರಿಬ್ಬರೂ ಎಲೆ ಯಡಿಕೆ ಜಗಿಯುತ್ತಿದ್ದು ಸಾಲ ಸೋಲಗಳ, ವ್ಯಾಪಾರ ವ್ಯವಹಾರಗಳ ಮಾತುಕತೆಯನ್ನಾಡುತ್ತಿದ್ದುದನ್ನು ಕೇಳುತ್ತಲೇ ಇದ್ದೆನು. ಆದರೆ ಇಂದು ಕೇಳಿದುದೇ ಬೇರೆ. ನೋಡಿದುದೇ ಬೇರೇ. ಅವರಿಬ್ಬರ ನಡುವೆ ನಡೆದ ವಾಗ್ ಯುದ್ಧಕ್ಕಿಂತ ಮಲ್ಲಯುದ್ಧವೇ ಚೆನ್ನಾಗಿತ್ತು. ಕಾಲಿಲ್ಲದ ಗಂಡ ಕಾಳಿಯಂತಹ ಹೆಂಡತಿಯ ಕೋಪಕ್ಕೆ ತುತ್ತಾದ ಪ್ರಸಂಗವನ್ನು ನಾನು ನೋಡಿದುದು ಇದೇ ಮೊದಲು, ನಡು ಬೀದಿಯಲ್ಲಿ, ಗಂಡನ ಕೈಗೆ ತನ್ನ ತಲೆಯ ಕೂದಲು ಸಿಕ್ಕುವ ಮೊದಲೇ ಅವನ ಕತ್ತನ್ನು ಬಗ್ಗಿಸಿಕೊಂಡು ಉರುಳಾಡಿಸಿ, ಎದೆ ಬೆನ್ನುಗಳ ಮೇಲೆ ಗುದ್ದುತ್ತಿರುವ ಭೈರವಿಯ ಬೆನ್ನು ಮಾತ್ರ ನನಗೆ ಕಾಣಿಸುತ್ತಿತ್ತು. ಮುಖವನ್ನು ನೋಡಲು ಪ್ರಯತ್ನಿಸಲಿಲ್ಲ. “ಒಲಿಯದಿದ್ದನಾರಿ ಮಾರಿ” ಎಂಬುದು ನೆನಪಿಗೆ ಬಂದಿತು. ಗಂಡನೂ ಕೋಪಿಷ್ಟ. ಆದಷ್ಟು ವರಸೆಗಳಿಂದಲೇ ಹೆಂಡತಿಯೊಡನೆ ಕುಸ್ತಿ ಮಾಡಿದ. ಕೊನೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಗೃಹಸ್ಥರು ಈ ಹೆಂಡತಿಯು ಗಂಡನಿಗೆ ಹಾಕಿದ್ದ ಕತ್ತರಿ ಕಾಲಿನ ಹಿಡಿತವನ್ನು ಬಿಡಿಸಬೇಕಾಯಿತು. ಕುಂಟ ಗಂಡನು ಏದುತ್ತಿದ್ದನೇ ಹೊರತು, ತುಂಟ ಹೆಂಡತಿಗೆ ಸ್ವಲ್ಪವೂ ಆಯಾಸವಾಗಿರಲಿಲ್ಲ. ಆಕೆ ಇನ್ನೂ ಬೀದಿಯ ಬಾಗಿಲಲ್ಲಿ ನಿಂತು ಚಡಪಡಿಸುತ್ತಿರುವಳು. ಆತ ಮಾತ್ರ ಮನೆಯೊಳಕ್ಕೆ ಹೋಗಿಯೇ ಬಿಟ್ಟನು. ಪೂರ‍್ಣೀ, ನಾನೂ ಒಳಗೆ ಬಂದವನೇ ನನ್ನ ಕೈ ಕಾಲುಗಳೆಲ್ಲಾ ಸರಿಯಾಗಿವೆಯೇ ನೋಡಿ ಕೊ೦ಡೆನು. ಮತ್ತು ಅಲ್ಲಿಯೇ ಇದ್ದ ನಿನ್ನ ಭಾವಚಿತ್ರವನ್ನೂ ನೋಡಿಕೊಂಡೆ. ಸ್ವಲ್ಪ ಸಮಾಧಾನವಾಯಿತು. ನನಗೂ ನಿನಗೂ ಮದುವೆಯ ಮೊದಲೇ ಒಪ್ಪಂದವಾಗಿದೆಯಲ್ಲವೆ! ನೀನು ಲಂಗದ ಹುಡುಗಿಯಾಗಿದ್ದಾಗಲೇ “ನೀವು ನಿಮ್ಮ ಅಪ್ಪನು ನನ್ನ ಅತ್ತೆಯನ್ನು ಹೊಡೆಯುವಂತೆ, ನೀವೂ ನನ್ನನ್ನು ಹೊಡೆಯದಿದ್ದರೆ, ಮಾತ್ರ ನಿಮ್ಮನ್ನು ಮದುವೆಯಾಗುವೆನೆಂದು ನೀನು ಒಬ್ಬಳೇ ನನ್ನನ್ನು ಕದ್ದು ಬಾವಿಯ ಹಿಂದೆ ನಿಂತು ಕೇಳಿದ್ದೆ. ನಾನು ಹೊಡೆಯುವುದಿಲ್ಲವೆಂದೂ ಕೈಮೇಲೆ ಕೈಹಾಕಿ, ಜೊತೆಗೆ ನಿನ್ನ ಗಲ್ಲವನ್ನೂ ಚಿವುಟಿದೆ. ಇಲ್ಲಿನವರೆಗೂ ನನ್ನ ಮಾತನ್ನು ನಾನು ನಡೆಸಿಕೊಂಡು ಬಂದಿರುವೆನು. ಇನ್ನು ಮೇಲಾದರೂ ನಡೆಸಿಕೊಂಡು ಬರುವೆನಲ್ಲವೆ?

ಮಾನವ ಜೀವನಕ್ಕೆ ನಾನಾ ಮುಖಗಳಿವೆ. ನನ್ನ ನಿನ್ನೊಂದು ಅನುಭವವು ಜೀವನದ ಒಂದು ಮುಖ ಮಾತ್ರ. ನಾವು ಅನುಭವಿಸಿದುದು ಮಾತ್ರ ಜೀವನಾನುಭವವಲ್ಲ. ನಾನು ಇಂದು ನೋಡಿದುದೂ ಜೀವನವೇ, ಅದೂ ಜೀವನದ ಇನ್ನೊಂದು ಮುಖವೇ. ಹೀಗೆ ನೋಡುವುದರಿಂದಲೂ ನಮಗೆ ಅಪಾರ ಲಾಭವಿದೆ. ನೋಡುವ ದೃಷ್ಟಿಯಲ್ಲಿ ನೋಡುವುದಕ್ಕಾಗಿ ಮಾತ್ರ ನೋಡಬೇಕು. ಅನುಭವಕ್ಕಾಗಿ ಜೀವನವೆಂದರೆ ಅದೊಂದು ಅನುಭವಗಳ ನೆನಹಿನಿಂದ ರೂಪುಗೊಳ್ಳುವ ಒಂದು ಚಿತ್ರಕಲೆ. ಉಚ್ಚ ಸಾಹಿತಿಯೊಬ್ಬನು ಜೀವನದ ಬಗ್ಗೆ ಅಂದಿರುವ ಮಾತುಗಳು ಎಷ್ಟು ಸೊಗಸಾಗಿವೆ ನೋಡು “ಜೀವನ ಪುಸ್ತಕದ ಮೊದಲ ಹಾಳೆಯಲ್ಲಿ ವಸಂತಮಾಸದ ಉದ್ಯಾನವನವಿದೆ. ಅ ಉದ್ಯಾವನದಲ್ಲಿ ಗಂಡು ಹೆಣ್ಣಿನ ಅನುರಾಗದ ಮೊದಲ ಚಿತ್ರ ಸಿಕ್ಕುವುದು. ಅದೇ ಪುಸ್ತಕದಕೊನೆಯ ಹಾಳೆಯನ್ನು ತಿರುವಿನೋಡು. ಅಲ್ಲಿ ಅದೇ ಗಂಡು ಹೆಣ್ಣುಗಳು ಒಂದೆಡೆ ಕುಳಿತು, ಸಣ್ಣ ಹುಡುಗರಿಗೆ ಅಜ್ಜಿ ತನ್ನ ಅನುಭವಗಳನ್ನು ಕತೆಯ ರೂಪದಲ್ಲಿ ಹೇಳುವಂತೆ, ತಮ್ಮ ಜೀವನದಲ್ಲಿ ತಾವು ಅದುವರೆಗೆ ಹೊಂದಿದ ಸುಖ ದುಃಖಗಳನ್ನು ಒಂದೊಂದಾಗಿ ನೆನಿಸಿಕೊಂಡು ಹೇಳಿಕೊಳ್ಳುವುದನ್ನು ಕಾಣಬಹುದು.” ಎಂದು ಬರೆದಿರುವನು, “ನೆನಹು ಬಾಳಿನ ಬುತ್ತಿ” ಎಂದು ನಾನು ನೀನು ಅಡಿಗೆ ಮಾಡುವಾಗ ಬಿಡದೆ ಬೆನ್ನು ಬಿದ್ದು, ಒಂದೊಂದೇ ಘಟನೆಯನ್ನು ಹೇಳುತ್ತಿರಲ್ಲವೆ? ಕಷ್ಟವನ್ನು ಕೇಳಿದಾಗ ಉಸ್ಸೆಂದು ಒಲೆಯ ಮೇಲಿನ ಅಕ್ಕಿಯಲ್ಲಿ ನೀರಿಲ್ಲದಂತೆ ನೀನು ಮಾಡುತ್ತಿದ್ದೆ? ಸುಖದ ಘಟನೆಗಳನ್ನು ಬಿತ್ತರಿಸಿದಾಗ, ಪಲ್ಯಕ್ಕೆ ಹೆಚ್ಚು ತುಪ್ಪ ಹಾಕಿ ಒಗ್ಗರಿಸುತ್ತಿದ್ದೆ. ಮತ್ತು ನಾನೇ ತಂದಿರಿಸಿದ್ದ ಒಣ ದ್ರಾಕ್ಷಿ ಬಾದಾಮಿಯನ್ನು ನನಗೆ ತಿನ್ನಿರೆಂದು ಗೋಗರೆದು ಕೊಡುತ್ತಿದ್ದೆ. ಈಗಲೂ ಅಡಿಗೆಯ ಮನೆಯ ಕಡೆಗೆ ತಿರುಗಿ ನೋಡುವೆನು. ನೀನಿದ್ದಾಗ ಬರುತ್ತಿದ್ದ ಆ ಠೊಣೆಯ ಬೆಕ್ಕೂ ಸಹಿತ ಅತ್ತ ಕಡೆಗೆ ತಿರುಗಿಯೂ ನೋಡುವುದಿಲ್ಲ. ಅದಕ್ಕೇನು ಅಗ್ಗ ಅಲ್ಲಿ. ಸ್ನೇಹಿತರೂ ಬರುವರು. ಅನೇಕರಿಗೆ ನೀನಿಲ್ಲದಿರುವುದೇ ಗೊತ್ತಿಲ್ಲ. ಅವರ ಮೂಗು ಒಳಗಿನ ಕಾಫಿಯ ವಾಸನೆಯನ್ನು ಹಿಡಿಯಲು ಹೋಗುವುದು, ನನಗೆ ಅಯ್ಯೋ ಪಾಪವೆನಿಸುವುದು. ಮಾತು ಕತೆಯ ಮಧ್ಯದಲ್ಲಿ ನನ್ನ ಈ ಏಕಾಕಿತನವು ಅವರಿಗೆ ಗೊತ್ತಾದಾಗ, ಅವರು ನಿಷ್ಟುರವಾಗಿ, ನೀವು ಮನೆಯವರನ್ನು ಕಳುಹಿಸಬಾರದಿತ್ತು. ಎಂದು ಆಗ್ರಹದಪೂರ್ವಕವಾಗಿ ಹೇಳಿಬಿಡುತ್ತಿದ್ದರು. ಅವರಿಗೆ ಸಿಕ್ಕುವ ಕಾಫಿಯ ದೃಷ್ಟಿಯಿಂದಲ್ಲ. ನನ್ನ ಇಳಿಮುಖವನ್ನು ನೋಡಲಾರದ ಮಮತೆಯಿಂದ. ಅವರಿಗೇನು ಗೊತ್ತು ನನ್ನ ವಿಧಿಯ ವಿನ್ಯಾಸ ಬಾಳಿನ ಒಳತೆರೆ, ಯಾರಿಗಾಗಿಯೋ ಏತಕ್ಕಾಗಿಯೋ ಏನೋ, ೧೯೪೭ರ “ಮಹಾರಾತ್ರಿ” ಯಿಂದ ಆರಂಭವಾದ ನನ್ನ ಈ ಅಗಲಿಕೆಯ ನಾಟಕಕ್ಕೆ ಇನ್ನೂ ಕೊನೆಯಂಕವೇ ಬಂದಿಲ್ಲ. ಈ ನನ್ನ ನಾಟಕದ ಹಲವು ದೃಶ್ಯಗಳಲ್ಲಿ ನೀನು ಆಗಂತುಕೆಯಾಗಿ ಆಗಾಗ ಬರುವುದೂ ಈ ನಾಟಕಕಾರನ ಒಂದು ಚಲ್ಲಾಟವಾಗಿದೆ.

“ಮಹಾರಾತ್ರಿ” ಗೌತಮಬುದ್ಧನಾದ ಮಹಾರಾತ್ರಿ, ನನ್ನ ಪಾಲಿಗೂ ಒಂದು ಸಾರಿ ಬಂದಿತ್ತಲ್ಲವೇ? ಯಶೋಧರಳಂತೆ ನೀನು ಗಂಡನ ದೇಶತ್ಯಾಗವನ್ನು ತಿಳಿಯದೆ ಮಲಗಿರಲಿಲ್ಲ. ಎಚ್ಚರವಾಗಿಯೇ ಇದ್ದೆ. ನಾನು ದೇಶಭ್ರಷ್ಟನಾಗಿರುವೆನು, ಎಂದು ಕಾತರದಿಂದ ಅನ್ನುತ್ತಿರುವಾಗ, “ಅದು ನಿಮ್ಮ ಅಭ್ಯುದಯಕ್ಕೆ” ಎಂದು ಅಶರೀರವಾಣಿಯಾಗಿ ಹೇಳಿದವಳು ನೀನು. ಆದರೆ ನಿನಗೆ ಗೊತ್ತಿತ್ತು ನಾನು ಬುದ್ಧನಾಗುವುದಿಲ್ಲವೆಂಬುದು, ಮರಳಿ ಬರುವನೆಂಬ ವಿಶ್ವಾಸವೂ ನಿನ್ನಲ್ಲಿ ಇದ್ದಿತು. ನಾನು ಬುದ್ಧನಾಗಲಿಲ್ಲ ನಿಜ. ಮರಳಿ ನಿನ್ನಲ್ಲಿಗೆ ಬಂದೆನೂ ಹೌದು. ಆದರೆ ಅಂದಿನಿಂದಲೇ ನನ್ನ ಜೀವನದ ಉತ್ತರಾರ್ಧವು ಪ್ರಾರಂಭಿಸಿತೆಂಬುದನ್ನು ಮರೆಯುವಂತಿಲ್ಲ. ಕುಲುಮೆಯಲ್ಲಿ ಬೇಯುತ್ತಿದ್ದರೂ, ಕಮ್ಮಾರನ ಸುತ್ತಿಗೆಯ ಪೆಟ್ಟನ್ನು ತಿನ್ನುತ್ತಿದ್ದರೂ, ಏಟು ಬಿದ್ದಂತೆ ನಾನು ಮೂರ್ತಿಯಾಗುತ್ತಿರುವೆನು. ಅದೊಂದೇ ನೆಮ್ಮದಿಯಿಂದ ನೀನು ನನ್ನ ಅಗಲಿಕೆಗೆ ಸಮಾಧಾನವನ್ನು ತಂದುಕೊಳಬೇಕು.

ಏಕೋ ಪತ್ರ ಮುಗಿಯುವಂತಿಲ್ಲ. ಮತ್ತೆ ಬರೆಯುವುದು ಇದ್ದೇ ಇದೆ. ಇಷ್ಟಕ್ಕೆ ಇಂದು ಮುಗಿಸುವೆನು.

ಓಹೋ ಮರೆತಿದ್ದೆ, ಒಳಗಿನ ಗಂಡ ಹೆಂಡಿರ ಜಗಳದ ಮಂಗಳವನ್ನು ಹೇಳುವುದನ್ನು ಅರ್ಧ ಬರೆದ ಪತ್ರವನ್ನು ಮುಗಿಸಬೇಕೆಂದು ಸಂಜೆ ಕಚೇರಿಯಿಂದ ಮನೆಗೆ ಬಂದೆನು. ಅದೇ ಜಗುಲಿ. ಅಲ್ಲಿ ಎಂದಿನಂತೆ ಕುಂಟ ಗಂಡ, ತುಂಟ ಹೆಂಡತಿ ಇಬ್ಬರೂ ಅಡಿಕೆ ಎಲೆ ಜಗಿಯುತ್ತ ಕುಳಿತಿರುವರು. ಅಕ್ಕ ಪಕ್ಕದವರು ತಿರುಗಿ ನೋಡುವಷ್ಟು ನಗುವು ಅವರಿಬ್ಬರ ಸಲ್ಲಾಪಗಳಿಂದ ಮಧ್ಯೆ ವರ್ತಿಸುತ್ತಿತ್ತು. ಜೀವನ ಗಂಡು ಹೆಣ್ಣಿನ ಬೆಸುಗೆ ಎಂತಹದು? ಆದ್ದರಿಂದಲೇ ನಮ್ಮ ಹಿರಿಯರು ‘ಗಂಡ ಹೆಂಡಿರ ಜಗಳ ಉಂಡು ಮಲಗುವತನಕ’ ಎಂದಂದರು. ಆದರೆ ನನ್ನ ನಿನ್ನ ಪತ್ರವ್ಯವಹಾರ ಜೀವನದ ಉದ್ದಕ್ಕೂ ನಡೆಯುವುದು.

ಇಂದು ಗುರುವಾರ ನನ್ನ ಗುರುದೇವನ ಪ್ರಾರ್ಥನಾದಿನ. ಮುಂಜಾನೆ ಪ್ರಾರ್ಥನೆ ಮುಗಿದು ಸಂಜೆ ವಾರದ ದಿನಚರಿ ಬರೆಯುವನೆಂದು ಕುಳಿತುಕೊಂಡಾಗ, ನಿನ್ನ ಹಿಂದಿನ ಪತ್ರಕ್ಕೆ ಉತ್ತರ ಕೊಡಬೇಕೆ೦ಬ ಅಂತರ್ ಪ್ರೇರಣೆಯಾಯಿತು.

ನಿನ್ನ ಪತ್ರ ಚಿಕ್ಕದಾಗಿದ್ದರೂ ಹತ್ತಾರು ಸಲ ಓದುವಂತೆ ಬರೆದಿರುವೆ. ಕ್ಷಮಿಸು; ತಡೆಯಲಾರದೆ ನಿನ್ನ ಪತ್ರವನ್ನೂ ನನ್ನ ಆತ್ಮೀಯರೊಬ್ಬರಿಗೆ ಓದಿ ತೋರಿಸಿದೆನು. ಅದರಲ್ಲೇನು ಭಯ? ಜಗತ್ತಿಗೆ ಹೇಳಬೇಕಾದ ಮಾತನ್ನೇ ನೂರು ವರ್ಷದ ಮುದುಕಿ ಹೇಳಿದಂತೆ ಹೇಳಿರುವಿ.

ನೀನು ಬರೆದಿರುವಂತೆ ನನಗೆ ಬಡತನವು ವೃದ್ದಾಪ್ಯವನ್ನೂ ತಂದಿರುವುದು ಸುಳ್ಳಲ್ಲವಾದರೂ, ಈ ಮುಪ್ಪಿನ ಜೊತೆಗೆ ಜಗತ್ತಿನ ಜೀವಾಳ ಬರದಿದ್ದರೆ, ನನಗೆ ಬಂದ ಮಹಾ ವಿಪತ್ತುಗಳಲ್ಲಿ ನಾವು ನೆಲೆ ಕಾಣದೆ ಮುಳುಗಿಹೋಗುತ್ತಿರಲಿಲ್ಲವೇ?

ನಿಜ, ಜನರು ತಮಗೆ ಬೇಕಾದಾಗ, ತಲೆಯಮೇಲೆ ಹೊತ್ತು ಕುಣಿಸುವರು. ಬೇಡಾದಾಗ, ಕಾಲು ಕೆಳಗೆ ಹಾಕಿ ತುಳಿದುಬಿಡುವರು. ದಯದಾಕ್ಷಿಣ್ಯವಿಲ್ಲ. ಇದು ಜಗತ್ತಿನ ಬಹು ಜನರು ಅನುಭವಿಸುತ್ತಿರುವ ಅನುಭವ; ಪರಿತಪಿಸುತ್ತಿರುವ ಪರಿಶ್ರಮ, ಬೇಡವೆಂದರೆ ಬಿಡುವುದೆ? ನಾವು ಮನುಷ್ಯರಲ್ಲವೆ? ನೀನು ನಿನ್ನ ಪತ್ರದಲ್ಲಿ ಬಹು ಸೊಗಸಾದ ಉಪಮೆಯನ್ನು ಕೊಟ್ಟರುವಿ ‘ಜನರು ಗುಡ್ಡದ ಮೇಲೆ ಏರಿಸುವಾಗ ಮೆಟ್ಟಿಲುಗಳಿಲ್ಲದೆ ಮೇಲೇರಿಸವರು, ಇಳಿಸುವಾಗ ಹಿಂದುರುಗಿ ನೋಡಿದರೆ ಮೂಳೆ ನುಚ್ಚಾಗುವಂತೆ ತಳ್ಳಿಬಿಡುವರು. ದಯ ದಾಕ್ಷಿಣ್ಯ ಆ ಮೇಲೆ.’

ನಾನು ಈ ಹಿಂದೆ ದುಡಿಯುತ್ತಿದ್ದ ಆ ಸಂಸ್ಥೆಯಲ್ಲಿ ತಾಯಿಯಾಗಲ್ಲದಿದ್ದರೂ ಅದರ ದಾಯಿಯಾಗಿ ದುಡಿಯುತ್ತಿದ್ದೆ. ಶ್ರೀಮಂತ ತಾಯಿ, ಮಗುವನ್ನು ಕಷ್ಟ ಪಟ್ಟು ಹೊರುವಳು, ನಿಜ. ಆದರೆ ಆದರೆ ಆ ಮಗುವಿಗೆ ಶೀತೋಷ್ಣವಾಗದಂತೆ ನೋಡಿಕೊಳ್ಳುವುದು ಆಕೆಗೆ ಬರದು. ಕಲಿಯಲೂ ಬೇಸರ. ಹೀಗಾಗಿ ನಂಬಿಗೆಯ ಸೇವಕಿಯೊಬ್ಬಳ ಮಡುಲಿಗೆ ಈ ಮಗು ಬೀಳುವುದು. ಮಗುವಿಗೆ ಹಾಲು ಕುಡಿಸಿದರೆ ತನ್ನ ಸೌಂದರ್ಯ ಬತ್ತಿ ಹೋಗುವುದು ಎನ್ನುವರೋ ಉಂಟು. ಅಂತಹ ಸಮಯದಲ್ಲಿ ಈ ಸೇವಕಿಯ ಶೀಶೆಯ ಹಾಲನ್ನು ಕುಡಿಸುವಳು. ತನಗೊಂದು ಹಾಲು ಕೂಸಿದ್ದರೆ, ತನ್ನ ಎದೆಯ ಹಾಲನ್ನೂ ಕುಡಿಸಿ ಶಿಶುವನ್ನು ಸಾಕುವಳು. ಬೆಳೆಯುತ್ತಿರುವ ಮಗುವಿಗೆ ತಾಯಿ ದಾಸಿಯವರ ಮಧ್ಯೆ ಇರುವ ಅಂತರ ಎಂತು ತಿಳಿಯಬೇಕು? ಅದು ದಾಯಿಯನ್ನೇ ತಾಯಿಯೆಂದು ಕರೆಯಲಾರಂಭಿಸುವುದು. ಮಗುವಿಗೆ ಈಗ ಲಾಲಿ ಹೇಳಿ ಬೆನ್ನು ತಟ್ಟಿ ಮಲಗಿಸುವುದು ಬೇಕಾಗಿಲ್ಲ. ತಾನಾಗಿ ತಾನೇ ಮಲಗಿಕೊಳ್ಳುವುದು. ಅಂಬೆಗಾಲಿಡುವುದು. ಆದರೆ ದಾಯಿಯನ್ನು ತಾಯಿಯಂತೆ ನೋಡುವುದನ್ನು ಮಾತ್ರ ಬಿಡಲಿಲ್ಲ. ಇನ್ನುಳಿದಿರುವುದು ಮಗುವನ್ನು ತಳ್ಳುವ ಗಾಡಿಯಲ್ಲಿ ಕೂಡಿಸಿಕೊಂಡು ಗಾಳಿಗೆ ಅಡ್ಡಾಡಿಸುವುದು. ಇಷ್ಟರಲ್ಲಿಯೇ ಈ ಕೆಲಸಕ್ಕೆ ಮಾತುಗಾತಿ ಸೇವಕಿಯೊಬ್ಬಳು ಬಂದು ಕೈಬಾಯಿ ತಿರುವುತ್ತ ತಾನೇ ನೂರೊಂದು ಮಕ್ಕಳನ್ನು ಸಾಕಿದ ಕತೆಯನ್ನು ಹೇಳುವಳು, ತಾಯಿಗೆ ಆಸೆ ತನ್ನ ಮಗು ಅಂತಹವರ ಕೈಯಲ್ಲಿ ಬೆಳೆಯಲೆಂದು. ಸರಿ; ಹೊರಗೆ ಮಗುವನ್ನು ಅಡ್ಡಾಡಿಸುವ ಕೆಲಸವು ಅವಳಿಗೆ ಹೋಗುವುದು. ಎತ್ತಿದವರ ಕೈ ಕಣಸು ಎನ್ನುವಂತೆ ಆ ಮಗು ಅವಳನ್ನು ಹೊಂದಿಕೊಳ್ಳುವುದಕ್ಕೆ ತೊಡಗುವುದರಲ್ಲಿಯೇ ಮನೆಯ ಯಜಮಾನಿ ತಾಯಿಗೆ ಈ ಇಬ್ಬರ ದಾಯಿಯರ ಅವಶ್ಯಕತೆಯೇ ಬೀಳುವುದಿಲ್ಲ. ಇಂತಾಯಿತು ನನ್ನ ಉದ್ಯೋಗ ಕ್ಷೇತ್ರದ ಪದಭ್ರಷ್ಟತೆಯ ಕತೆ.

ಈಗಲಾದರೂ ಏನು? ನಾನು ಸುತ್ತು ಮುತ್ತಲೂ ಕುಹಕತನವನ್ನು ಕಣ್ಣಾರೆ ಕಾಣುತ್ತಿರುವೆನು. ಅಸೂಯೆಯನ್ನು ಅನುಭವಿಸುತ್ತಿರುವೆನು. ಕಣ್ಣಿನಲ್ಲಿ ಕೀಳುತನದ ನೋಟವನ್ನು ನೋಡುತ್ತಿರುವೆನು. ತೃಪ್ತಿಗಾಗಿ ಏನುಬೇಕಾದರೂ ಮಾಡುವ, ಮಾಡಲಾಗದಿದ್ದರೆ, ಸುಳ್ಳನ್ನು ಹೇಳಿಯಾಗಲೀ ಒಡೆಯನನ್ನು ರಮಿಸುವ ಸೇವಾವೃತ್ತಿಯ ಮಹಾ ಮೂರ್ಖರನ್ನೂ ನೋಡಿ ನೋಡಿ ಸಾಕಾಗಿದೆ. ನನ್ನ ಸತ್ಯದ ಶಕ್ತಿಯಿಂದ ಇವೆಲ್ಲವನ್ನು ನಿವಾರಿಸುವಷ್ಟು ಅಂತರ ಶಕ್ತಿ ನನಗೆ ಬರುವದೇ? ನೆಮ್ಮದಿಯಿಲ್ಲ. ಇದೆಲ್ಲಾ ಬುಡ ಬುಡಿಕೆಯ ಆಟ, ಸ್ವಲ್ಪ ತಾಳು, ಎಲ್ಲವೂ ಸರಿಹೋಗುವುದು ಎಂದು ಒಮ್ಮೊಮ್ಮೆ ನನಗೇ ನಾನೇ ಬುದ್ಧಿ ಹೇಳಿ ಕೊಳ್ಳುವೆನು. ಆದರೂ ಹಿಂದಿನ ನೆನಪು ಮನಸ್ಸಿಗೆ ಬಂದಾಗ ಮಾತ್ರ ಶರಣು ಶರಣು ಎಂದು ಹೇಳಿ ಓಡಿ ಹೋಗುವಂತಾಗುತ್ತಿದೆ. ಮನೆಗೆ ಬಂದು ಗುರುರಾಯರ ಚರಣದಲ್ಲಿ ತಲೆ ಇಟ್ಟೊಡನೆಯೇ ಛೇ, ಛೇ ಇಂತಹುದದಕ್ಕೆ ಚಲಿತನಾಗುವುದೇ! ಇದು ಬಲಿತ ಮನೋ ವೃತ್ತಿಯವನಿಗಲ್ಲ! “ತಾಳು, ತಾಳಿದವನು ಬಾಳಿಯಾನು” ಎನ್ನಿಸುವ ಧ್ವನಿ ಕೇಳಿಬರುವುದು, ಜಗತ್ತು ವಿಸ್ತಾರವಾಗಿದೆ; ಅದೇನೋ ಬೊಗಸೆಯಗಲವಿಲ್ಲ ಎಂಬ ಧೈರ‍್ಯ ಬರುವುದು. ಏನೋ ವಿಷಯಾಂತರವಾಯಿತು. ಈ ಪತ್ರ ಇಷ್ಟಕ್ಕೆ ಸಾಕು.

ಇತಿ ನಿನ್ನ ಪತಿ,
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...