ಕೆಂಪು ಸಮುದ್ರದ ಕನ್ಯೆ
ಸೂರ್ಯನಿಗೆ ಪ್ರಾರ್ಥಿಸಿಕೊಂಡಾಗ
ಕನಸಿನ ಮುತ್ತುಗಳು ಮಾಲೆಯಾಗಿ
ಜೇನು ಹೊಳೆಯಾಗಿ ಕಾಮನ ಬಿಲ್ಲಾಗಿ
ಬೆಳದಿಂಗಳಾಗಿ
ಬಿಸಿಯುಸಿರಿನಲಿ ಕೆನ್ನೆ ಕಚ್ಚಿದ
ಕೆಂಪು ಕೆನ್ನೆ ಅರಳಿಕೊಂಡು
ಮತ್ತೇರಿದಾಗ
ಕನ್ಯೆಯ ಒಡಲಾಳದಲ್ಲಿ
ಮುಂಜಾವಿನ ಮೊಗ್ಗುಗಳು
ಅರಳಿ ಬಸಿರಿನಲಿ
ಮುತ್ತು ರತ್ನ ಹವಳಗಳ ದಿಬ್ಬಾಗಿ
ನಾಚಿಕೆಯಿಂದ ಪ್ರಸವಿಸಿದ
ಜೀವಂತ ವಿರಾಟ್ ಸ್ವರೂಪಿಣಿ
“ಎಷ್ಟು ಬಣ್ಣ ಎಷ್ಟು ಬೆಡಗು
ಕಡಲೇ ನಿನ್ನ ಒಡಲಲಿ
ಹರೆಯ ತರುವ ಕನಸಿನಂಥ
ಸೊಗಸು ನಿನ್ನ ಮಡಿಲಲಿ”
ಬಿಸಿಲು ಕಿರಣಗಳ ಕಾಮನ ಬಿಲ್ಲಿನಡಿ
ಕಣ್ಣು ಮುಚ್ಚಾಲೆಯ ಹವಳಗಳು
ಮುಟ್ಟಿದರೆ ಮುನಿಯುವ ಜೆಲ್ಲಿ ಫಿಶ್
ಸಮುದ್ರದಾಳದ ನಕ್ಷತ್ರ ಮೀನು
ಆಳಕ್ಕಿಳಿದಾಗ ಬೆವರು, ಜಿಗುಟು
ಸೀ ವೀಡ್ಸ್ ಸ್ನಾನದ ಹೊಸತನ
ತಿಳಿ ನೀರಿನ ಬಣ್ಣದ ಮನೆಯ
ಸುಂದರಿಯರು ನಗುವಾಗ
ಸ್ತಬ್ಧ ಆಳಗಳ ಅಂತ
ಗೊತ್ತಿರದ ಹಾಯಿಗಳು
ದೂರದ ಲಂಗರಿಗೆ ಸಿಕ್ಕಿಸಿಕೊಳ್ಳಲು
ಓಡುತ್ತವೆ.
(ಸೌದಿ ಅರೇಬಿಯಾ ಹಾಗೂ ಆಫ್ರಿಕಾಗಳ ನಡುವಿರುವ ‘ಕೆಂಪು ಸಮುದ್ರ’ ಕುರಿತು)
*****
ಪುಸ್ತಕ: ಗಾಂಜಾ ಡಾಲಿ