ಬ್ಯಾಂಕುಗಳಲ್ಲಿ ಅಥವಾ ದೊಡ್ಡ ವ್ಯಾಪಾರಿ ಕಂಪನಿಗಳಲ್ಲಿ ಲಕ್ಷ ಲಕ್ಷ ಕೋಟಿ ಹಣವನ್ನು ಅತಿಬೇಗನೆ ಎಣಿಸಬೇಕಾಗುತ್ತದೆ. ಮನುಷ್ಯನ ಎಣಿಸುವಿಕೆಯ ವೇಗದಲ್ಲಿ ಸ್ವಲ್ಪ ನೆನಪು ಹುಸಿಯಾದರೂ ಎಣಿಕೆ ತಪ್ಪಾಗಿ ಮುಂದೆ ಅನೇಕ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಸಮಯವೂ ಹೆಚ್ಚುಬೇಕಾಗುತ್ತದೆ. ಇದನ್ನೆಲ್ಲ ಪರಿಹರಿಸಿ ಕರಾರುವಾಕ್ಕಾದ ಫಲಿತಾಂಶ ನೀಡುವ ವಿಜ್ಞಾನದ ಹೊಸ ಅವಿಷ್ಕಾರವು “ನೋಟುಗಳನ್ನು ಎಣಿಸುವ ಯಂತ್ರವನ್ನೇ ಕಂಡುಹಿಡಿದಿದೆ. ಸಮಯದ ಉಳಿತಾಯ, ಕರಾರುವಾಕ್ಕು ಲೆಕ್ಕ ಜಾಣ್ಮೆಯ ಲೆಕ್ಕಾಚಾರಕ್ಕಾಗಿ ಈ ಯಂತ್ರ ಬಹುಬೇಗನೆ ಜನಪ್ರಿಯವಾಗತೊಡಗಿದೆ. ಮತ್ತು ಬಹುಸಾಮರ್ಥ್ಯವನ್ನು
ಹೊಂದಿದೆ. ಇದೊಂದು ಎಲೆಕ್ಟ್ರಾನಿಕ್ ಯಂತ್ರ. ಈ ಯಂತ್ರದ ವಿಶಿಷ್ಟತೆ ಎಂದರೆ ಹೊಸ ಮತ್ತು ಹಳೆಯ, ಸುಕ್ಕುಗಟ್ಟಿದ ಮತ್ತು ಹರಿದು ಹೋಗಿರುವ ಬಿಡಿಯಾಗಿರುವ ಮತ್ತು ಕಟ್ಟಿರುವ ಎಲ್ಲ ವಿಧವಾದ ನೋಟುಗಳನ್ನು ಎಣಿಸಬಹುದು.
ಇದು ಹಗುರವಾದ ಅಚ್ಚುಕಟ್ಟಾದ ಯಂತ್ರ. ಇದಕ್ಕೆ ಹೆಚ್ಚಿನ ಸ್ಥಳಬೇಕಿಲ್ಲ ಬ್ಯಾಂಕಿನಲ್ಲಿ ಪ್ರತಿಯೊಬ್ಬ ಖಜಾಂಚಿಯು ಎಣಿಸಿದ ನೋಟುಗಳು ಸಂಖ್ಯೆಯನ್ನು ಈ ಯಂತ್ರ ಮುದ್ರಿಸಿಡುತ್ತದೆ. ಜಪಾನಿನ ಮತ್ತು ಸಂಯುಕ್ತ ಸಂಸ್ಥಾನದ ಅನೇಕ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ನೋಟುಗಳನ್ನು ಎಣಿಸುವ ಯಂತ್ರಗಳನ್ನು ತಯಾರಿಸುತ್ತಿದ್ದು ವಿಶ್ವವ್ಯಾಪಿಯಾಗುತ್ತಲಿವೆ.
“ಟೆಲ್ಲಾಕ್-೫” ಎಂಬುದು ಸುಪ್ರಸಿದ್ಧವಾದ ನೋಟು ಎಣಿಸುವ ಯಂತ್ರ. “ಮುಸಾ೮” ಜಪಾನ್ ಸಂಸ್ಥೆಯಲ್ಲಿ ತಯಾರಿಸಲಾಗುತ್ತಿದ್ದು ಜೆ. ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ಮತ್ತು ಕ್ಯಾಲ್ಕ್ಯೂಲಸ್ ಲಿ|| ಗಳಿಂದ ಸರಬರಾಜಾಗುತ್ತದೆ. ಈ ಯಂತ್ರವನ್ನು ಆಗಲೇ ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಸ್ಥಾಪಿಸಲಾಗಿದೆ. ಇದರಂತೆ “ಯೂನಿಟೇಕ್” “ಜಯಿಸುಮಿ” “O.B.M- 1010” (ನೋಟು ಎಣಿಸುವ ಯಂತ್ರ) ಇದು ಒಂದು ನಿಮಿಷಕ್ಕೆ ಒಂದು ಸಾವಿರ ನೋಟುಗಳನ್ನು ಎಣಿಸುತ್ತದೆ. ನೋಟುಗಳ ಸಂಖ್ಯೆ ಹಾಗೂ ಹಣದ ಮೊತ್ತವನ್ನು ತೋರಿಸುವ ಏಳು ಅಂಕಿ L.E.D). ಪ್ರದರ್ಶನ ಇದರಲ್ಲಿದೆ. ಒಂದರಿಂದ ೯೯೯ ನೋಟುಗಳನ್ನು ಎಣಿಸುವಾಗ ಸ್ವಯಂ ಚಾಲಿತ ನಿಲುಗಡೆಯನ್ನು ಒದಗಿಸುತ್ತದೆ. G.N.E-1-W ಮತ್ತು G.E.2-8/9F.B-200 ಈ ಎರಡು ಹೆಸರಿನ ನೋಟು ಎಣಿಸುವ ಯಂತ್ರಗಳನ್ನು ಗ್ಲೋರಿ ಜಪಾನ್ ಸಂಸ್ಥೆಯು ತಯಾರಿಸುತ್ತಿದೆ. ಈ ಯಂತ್ರಗಳು ಕ್ರಮವಾಗಿ ಒಂದು ನಿಮಿಷಕ್ಕೆ ೧,೫೦೦ ಮತ್ತು ೧,೦೦೦ ನೋಟುಗಳನ್ನು ಎಣಿಸುವ ವೇಗವನ್ನು ಹೊಂದಿವೆ. ಸಮಗ್ರ ಪ್ರದಕ್ಷಿಣೆ (ಸರ್ಕ್ಯೂಟ್) ಮತ್ತು ಸಿಲಿಕಾನ್ ವಲ್ಕಲ ಕ್ರಾಂತಿಯಿಂದ ಇವೆಲ್ಲ ಸಾಧ್ಯವಾಗಿದೆ.
*****
ಲೇಖಕ: ಚಂದ್ರಶೇಖರ್ ಧೂಲೇಕರ್