ದೇವನಲ್ಲಿ ಬೆಳಕಿನ ಲೋಕಗಳಿವೆಯಂತೆ;
ಆಲ್ಲಿ ಪರಂಜ್ಯೋತಿ ಬೆಳಗುತಿದೆಯಂತೆ:
ಅವನೆಲ್ಲ ಕಾಣಲಿಲ್ಲ ನಾನು.
ಮುನ್ನೀರಿನಾಳದಲಿ ಹವಳ-ಮುತ್ತಿವೆಯಂತೆ,
ಬಣ್ಣ ಬಣ್ಣದ ಪಡುಶಿಲೆಗಳಿವೆಯಂತೆ:
ಅವನೆಲ್ಲ ಪಡೆಯಲಿಲ್ಲ ನಾನು.
ಕು೦ಗನು ಬಲ್ಲನು ಹಸಿರ ಕೆಳಗಣ ಕತ್ತಲೆ-ಬೆಳಕನು!
ಅನುಭಾವಿಗಳಿಗೆ ವಿದಿತವಲ್ಲವೆ ಬೆಳಕಿನ ಬಳ್ಳಿಗಳು?
ಆದರೆ ಹೃದಯ-ಹೃದಯದಲಿದ್ದ ದೇವನನ್ನು ತಿಳಿಯಬಯಸಿದಂತೆ
ಸಮುದ್ರದ ಬಣ್ಣಬಣ್ಣದಲ್ಲಿ ತರಂಗ-ತರಂಗದಲ್ಲಿ ಕಂಡೆ
ಹೊಸದೊಂದು ವಿಲಾಸವನು:
ಇಲ್ಲಿಯ ಮೂಡು-ಮುಳುಗುಗಳಲ್ಲಿ ಕಂಡೆ
ಮುನ್ನೀರ ಒಳಗುಹೊರಗೆನು.
ಖಂಡಖಂಡಗಳನ್ನು ಹೊಂದಿಸಿ, ತನ್ನೆದೆಯ ಮೇಲೆ
ಜಾತಿಜಾತಿಯ ಮಾನವರನು ತೇಲಿಬಿಟ್ಟು
ವಿಶ್ವಕುಟುಂಬಿಯಾದ ಪಾಂಗಿನಲಿ ಕಂಡೆ,-
ಅದರ ದೈವಿಕತೆಯನು!
*****

















