ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು. ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ಭೂಮಿ ಸಂತೋಷದಿಂದಲೇ ಗಮನಿಸಿತ್ತು. ಆಗೆಲ್ಲಾ ಅತ್ಯಂತ ಉತ್ಸಾಹದಿಂದ ಬೀಗಿಕೊಂಡಿದ್ದ ಅಡಿಗಲ್ಲುಗಳು ದಿನಗಳೆದಂತೆ ಅನಾಥ ಪ್ರಜ್ಞೆಯಿಂದ ನರಳತೊಡಗಿದ್ದವು.
ಋತುಮಾನದ ವೈಪರೀತ್ಯಗಳಿಗೆ ಸಿಕ್ಕು ಕೆಲವು ಅಡಿಗಲ್ಲಗಳು ಸೊರಗಿದ್ದರೆ ಇನ್ನೂ ಕೆಲವು ವಿಧ್ವಂಸಕರ ದಾಳಿಗೆ ಸಿಕ್ಕು ವಿರೂಪಗೊಂಡಿದ್ದವು. ಅವುಗಳಿಗೆ ಆಧಾರವಾಗಿದ್ದ ಗೋಡೆಗಳು ಕುಸಿದು ಹೋಗಿದ್ದವು. ಅಸ್ತಿತ್ವಕ್ಕಾಗಿ ಚಡಪಡಿಸುತ್ತ ಅವಶೇಷಗಳಂತೆ ನಿಂತಿರುವ ಅಡಿಗಲ್ಲುಗಳಿಗೆ ದನಕರುಗಳು ಮೈತಿಕ್ಕಿ ತಮ್ಮ ತುರಿಕೆಯನ್ನು ಶಮನಗೊಳಿಸಿಕೊಳ್ಳುತ್ತಿದ್ದವು. ನಾಯಿಗಳು ಆರಾಮಾಗಿ ಬಂದು ಉಚ್ಚೆ ಹೊಯ್ದರೆ, ಕಾಗೆಗಳು ಮಲ ವಿಸರ್ಜಿಸುತ್ತಿದ್ದವು.
ಅದನ್ನೆಲ್ಲವನ್ನು ಮೌನವಾಗಿ ಅನುಭವಿಸುತ್ತಿರುವ ಅಡಿಗಲ್ಲುಗಳನ್ನು ಕಂಡು ಭೂಮಿ ಒಂದಿನ “ಅಡಿಗಲ್ಲುಗಳೇ, ಏನಿದು ನಿಮ್ಮ ಅವಸ್ಥೆ? ನಿಮ್ಮ ಸ್ಥಿತಿ ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ” ಎಂದು ಮರುಕ ವ್ಯಕ್ತಪಡಿಸಿತು.
“ನಮ್ಮ ಹಣೆಯ ಬರಹ ಇದು. ಎನು ಮಾಡುವುದು?” ಅಡಿಗಲ್ಲು ತಹತಹಿಸಿದ್ದವು.
“ಬಹಳ ವರ್ಷಗಳ ಹಿಂದೆಯೇ ನೀವು ಭವ್ಯ ಕಟ್ಟಡಗಳ ಭಿತ್ತಿಗಳಲ್ಲಿ ಕಂಗೊಳಿಸಬೇಕಾಗಿತ್ತು.”
“ದೇವರು ನಮಗೆ ಅಂಥ ಭಾಗ್ಯ ನೀಡಲಿಲ್ಲ.”
“ನೀವು ಶಾಸನ ಪ್ರಭುಗಳ ಅಮೃತಹಸ್ತಗಳಿಂದ ಪ್ರತಿಪ್ಠಾಪನೆಗೊಂಡಿದ್ದೀರಿ” ಅಭಿಮಾನ ವ್ಯಕ್ತಪಡಿಸಿತು ಭೂಮಿ.
“ಹೌದು, ನಾವು ಶಾಪಗ್ರಸ್ಥರಾಗಿ ಇಲ್ಲಿ ಬಿದ್ದಿರುವುದಕ್ಕೆ ರಾಜಕಾರಣಿಗಳಮೃತಹಸ್ತಗಳೇ ಕಾರಣ” ನಿಟ್ಟುಸಿರಿದವು ಅಡಿಗಲ್ಲು.
*****