ಇಂದು ಮಾರ್ಚ ೮. ಅಂತರಾಷ್ಸ್ರೀಯ ಮಹಿಳಾ ದಿನ. ಅಂತರಾಷ್ಟೀಯ ಮಟ್ಟದಲ್ಲಿ, ರಾಷ್ಟ್ರ ರಾಜ್ಯಮಟ್ಟದಲ್ಲಿ ಕೊನೆಗೆ ಎಲ್ಲ ಜಿಲ್ಲೆ ತಾಲೂಕು ಹೋಬಳಿಗಳಲ್ಲೂ ಇಡೀ ತಿಂಗಳುದ್ದಕ್ಕೂ ಮಹಿಳಾ ಸಮಾವೇಶಗಳು, ಸಮಾರಂಭಗಳು, ಘೋಷಣೆಗಳು ಹೋರಾಟಗಳು ಹೀಗೆ ನಡೆಯುತ್ತಲೇ ಇರುವುದು. ೧೯೧೦ ಮಾರ್ಚ ೮ ರಂದು ಸುಮಾರು ನೂರು ವರ್ಷಗಳ ಹಿಂದೆ ಪ್ರಾನ್ಸಿನ ಕ್ಲಾರಾ ಜಟ್ಕನ್ ಎಂಬ ಕಮ್ಯುನಿಷ್ಟ ಮಹಿಳೆಯ ಪ್ರಯತ್ನದಿಂದ ಶ್ರಮಿಕ ಮಹಿಳೆಯರಿಗಾಗಿ ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ ಪ್ರಾರಂಭವಾಯಿತು. ಆದರೆ ಕಾಲಕ್ರಮೇಣ ಮಾರ್ಚ ೮ ಸಾಮಾನ್ಯವೆಂಬಂತೆ ಎಲ್ಲ ವರ್ಗದ ಮಹಿಳಾ ದಿನಾಚರಣೆಯಾಗಿ ಆಚರಿಸಲ್ಪಡುತ್ತಿದೆ. ೧೯೭೫ ನೇ ವರ್ಷವನ್ನು ಅಂತರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಲ್ಪಟ್ಟಿತ್ತು. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಸಕ್ರೀಯ ಭಾಗವಹಿಸುವಿಕೆ, ಹಕ್ಕು ಸ್ವಾತಂತ್ರ್ಯಗಳ ಅನುಭವಿಸುವಿಕೆ ಇತ್ಯಾದಿಗಳ ಕುರಿತ ಪ್ರಜ್ಞಾವಂತ ಮುನ್ನೆಡೆಗೆ ಮಹಿಳಾ ದಿನ ವೇದಿಕೆಯಾಗಿದೆ. ನಮ್ಮಂತಹ ಮಹಿಳೆಯರು ದಿನವೂ ಸಮಾನತೆಯ ಹಾದಿಯಲ್ಲಿಯೇ ಎಲ್ಲವನ್ನೂ ತೂಗಿ ಸಮಬಾಳ್ವೆಯ ಮಂತ್ರವನ್ನು ದಿನವೂ ಪಠಿಸುತ್ತಿದ್ದರೂ, ವರ್ಷಕ್ಕೊಮ್ಮೆ ಸಂಭ್ರಮಿಸುವ ದಿನಾಚರಣೆಯ ಅಗತ್ಯತೆ, ಕಾರ್ಯಮಹತ್ವ, ಅದರ ಫಲಪ್ರದತೆ ಇವು ಒಂದಿಡಿ ವರ್ಷ ಕೆಲಸಮಾಡುವ ಉದ್ದೇಶದಿಂದಲೇ ಆಗಿರುತ್ತವೆ.
Time is Now ಇದು ೨೦೧೮ರ ಮಹಿಳಾ ದಿನದ ಧ್ಯೇಯ ವಾಕ್ಯ. ಜಾಗತಿಕ ಮಟ್ಟದಲ್ಲಿ ಮಹಿಳಾ ಹಕ್ಕುಗಳು, ಸಮಾನತೆ, ಮತ್ತು ನ್ಯಾಯಕ್ಕಾಗಿ ಈ ಮುನ್ನುಡಿ. ಇದು ಸಕಾಲ ಕೂಡಾ. ಹೆಣ್ತನದ ಶ್ರೇಷ್ಟತೆಯನ್ನು, ವೈಶಾಲ್ಯತೆಯನ್ನು ಸಾಮರ್ಥ್ಯವನ್ನು ಜಗತ್ತಿಗೆ ಶ್ರುತಪಡಿಸುವ ಕಾಲ. ಇಡೀ ಜೀವನ ಕಾಲ ತನ್ನವರಿಗಾಗೇ ಮೀಸಲಿಡುವ ಹೆಣ್ಣಿಗೆ ತನ್ನತನವನ್ನು ತೆರೆದಿಡುವ, ಸಮಾಜಮುಖಿ ಕೊಡುಗೆಗಳತ್ತ ತಾನು ಮುನ್ನುಗುವ, ತನ್ನ ಮೇಲಾಗುವ ಎಲ್ಲ ದೌರ್ಜನ್ಯಗಳನ್ನು ಎದ್ದು ನಿಂತು ಎದುರಿಸುವ ಮನೋಬಲದ ಅಗತ್ಯತೆ ಇದೆ. ಈ ಪ್ರಯತ್ನ ಶತಮಾನಗಳಿಂದ ನಡೆಯುತ್ತಾ ಬರುತ್ತಿದ್ದರೂ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಎಲ್ಲಿಯವರೆಗೆ ಮಹಿಳೆ ತನ್ನನ್ನು ಅಬಲತೆಯ ದೇಹವನ್ನಾಗಿ ಪರಿಗಣಿಸುತ್ತಾಳೋ ಅಲ್ಲಿಯವರೆಗೆ ಆಕೆಗೆ ಜಗತ್ತಿನ ದಬ್ಬಾಳಿಕೆಗಳೆಲ್ಲ ಮುಕುರಿಹಾಕಿಕೊಂಡೆ ಕಾಯುತ್ತವೆ. ಹಾಗಾಗಿ ಇದು ಸಂಧಿಕಾಲ. ಆಕೆ ಎಚ್ಚೆತ್ತುಕೊಳ್ಳಬೇಕಾದ ಕಾಲ.
ಯಾಕೆಂದರೆ ಸ್ತ್ರೀ ಎರಡನೇ ದರ್ಜೆ ಎಂಬ ಸಾಮಾಜಿಕ ನಿಲುವನ್ನು ಸ್ವತಃ ಸ್ತ್ರೀ ವರ್ಗವೂ ಒಪ್ಪಿಕೊಂಡೇ ಬದುಕುತ್ತಿರುವ ಚಾಣಾಕ್ಷತನದ ವ್ಯೂಹವೊಂದು ಅನಾದಿಕಾಲದಿಂದಲೂ ರಚಿಸಲ್ಪಟ್ಟಿದೆ. ಹಾಗಾಗಿ ಹೆಣ್ಣು ಎಲ್ಲಕ್ಕೂ ಗಂಡಿಗೆ ತಲೆ ಬಾಗುತ್ತಾ, ಕೈಚಾಚುತ್ತಾ ಬದುಕು ಸವೆಸುವ ಕಾಲ ಸುಶಿಕ್ಷಿತ ಇಂದಿನ ಜಗತ್ತಿನಿಂದಲೂ ಮಾಯವಾಗಿಲ್ಲ. ಸುಶಿಕ್ಷಿತ ಪುರುಷ ಜಗತ್ತು ಕೂಡಾ ಸಮಾನತೆಯನ್ನು ವಿರೋಧಿಸುವ ಹೆಣ್ಣಿನ ಅಧೀನತೆಯನ್ನು ಆಪೇಕ್ಷಿಸುವ ಗಣವೇ ಆಗಿದೆ. ಇನ್ನು ಅನೇಕ ಸ್ತ್ರೀ ಸಂಕುಲದ ಶಿಕ್ಷಿತ ಮಹಿಳಾ ಮಣಿಗಳು ಸಮಾನತೆಯ ವ್ಯಾಖ್ಯಾನವನ್ನು ವಿಚಿತ್ರ ರೀತಿಯಲ್ಲಿ ಪ್ರತಿಪಾದಿಸುತ್ತಾ, ಗಂಡಿನ ವಾದಕ್ಕೆ ಪುರಸ್ಕರಿಸುತ್ತಾ ಗಂಡಿನೆದುರು ತಾವು ಮಹಾನ್ ಸ್ತ್ರೀ ರತ್ನಗಳ ತ್ಯಾಗಕ್ಕೆ ಹೆಸರಾದವರು ಎಂಬಿತ್ಯಾದಿ ಪೋಸು ಧರಿಸುವ ಇರಾದೆ ಹೊಂದಿದ ಅದೆಷ್ಟೋ ಹೆಣ್ಣುಗಳು ನಮ್ಮ ನಿಮ್ಮೆಲ್ಲರ ನಡುವೆಯೇ ಕಂಡುಬರುತ್ತಾರೆ. ಹೆಣ್ಣಿನ ಸಂಕಟಗಳು ಕಣ್ಣ ಮುಂದಿನ ದೃಶ್ಯವಾದರೂ ಗಂಡಿನ ದುರ್ಗುಣಗಳು ತಿಳಿದು ಇವಳಿಂದಲೇ ಹಾಗಾಯಿತು ಎನ್ನುವ ಹೆಣ್ಣುಗಳು ಕೂಡಾ ಇಲ್ಲದಿಲ್ಲ. ಸಾವಿರ ಸಂಖ್ಯೆಯಲ್ಲಿ ಗಂಡಿನ ದೌರ್ಜನ್ಯಗಳು ನಡೆಯುತ್ತಿದ್ದರೂ, ಒಂದೆರಡು ಸ್ತ್ರೀ ದುರ್ನಡತೆಯ ಘಟನೆಗಳು ನಡೆದರೂ, ಸುದ್ದಿಯಾಗುವುದು ಹೆಣ್ಣು ಮಾಡಿದ ಕುಕೃತ್ಯವೇ ವಿನಃ ಗಂಡಿನದಲ್ಲ. ಈ ಸಂಗತಿಗಳನ್ನು ವಿಸ್ತರಿಸುವ ಪಸರಿಸುವ ಕೆಲಸ ಮಾಡುವಲ್ಲಿ ಗಂಡಿನಷ್ಟೇ ಹೆಣ್ಣು ತೊಡಗಿಕೊಳ್ಳುವಳು ಎಂಬುದು ಗಮನಾರ್ಹ. ಹಾಗಾದರೆ ನಿಜಕ್ಕೂ ಆಗಬೇಕಾದುದೇನು? ಹೆಣ್ಣಿಗೆ ಹೆಣ್ಣು ಬೆಂಬಲಿಸಬೇಕಾದ, ಪ್ರೋತ್ಸಾಹಿಸಬೇಕಾದ, ಪರಸ್ಪರ ಸ್ನೇಹ ಸಖ್ಯವನ್ನು ವೃದ್ದಿಸಿಕೊಳ್ಳಬೇಕಾದ ಅನಿವಾರ್ಯತೆ. ಅಂತೆಯೇ ಹೆಣ್ಣು ಹೆಣ್ಣನ್ನು ಸಮರ್ಥಿಸುವ ಅಗತ್ಯದ ಕಾಲವೂ ಇದಾಗಿದೆ.
ಬರಿಯ ತಿಂಗಳೊಪ್ಪತ್ತಿಗೆ ಎಲ್ಲ ಸಮಾರಂಭಗಳು ಮುಗಿದು ಮಹಿಳಾ ದಿನ ಆಚರಿಸಿದ ಕುರುಹೇ ಇಲ್ಲದಂತೆ ಸ್ತ್ರೀ ಸಮುದಾಯದ ಚಟುವಟಿಕೆಗಳೆಲ್ಲ ಮುಗಿದು ಹೋಗದಂತೆ ಸದಾ ಜಾಗೃತ ಸ್ತ್ರೀ ಪ್ರಜ್ಞೆಯನ್ನು ಸೃಷ್ಟಿಸಬೇಕಾದ ಹೆಣ್ಣುಮಕ್ಕಳಿಗೆ ಯೋಗ್ಯ ಜೀವನ ಕೌಶಲ್ಯವನ್ನು ಒದಗಿಸುವ, ಜೀವನ ಮೌಲ್ಯಗಳ ಬೆಳೆಸುವ ಆ ಮೂಲಕ gender bias ತೊಡೆದು ಹಾಕುವಷ್ಟು ಛಲಬಲಜ್ಞಾನವುಳ್ಳ , ಭಾರತದ ಸಾಮಾಜಿಕ ಬೌಂಡರಿಯಲ್ಲಿಯೇ ಎಲ್ಲಿ ಬೀಸಿದರೂ ಪುನಃ ಕೇಂದ್ರ ಸೇರುವ ಸಶಕ್ತ Female baby cropಳನ್ನು ಬೆಳೆಸಬೇಕಾದ, ಸ್ನೇಹ ವಾತ್ಸಲ್ಯ ಪ್ರೀತಿ ಮಮತೆ ಇವೆಲ್ಲವ ಒಳಗೊಂಡ ಶುದ್ಧ Female Feelingಗಳ ಸುಧಾರಿತ intuition ಗಳನ್ನೊಳಗೊಂಡ, ಸ್ವಪ್ರಜ್ಞೆಯ ಅರಿವುಳ್ಳ ಯುವ ಮಹಿಳಾ ಜಗತ್ತು ರೂಪುಗೊಳ್ಳಬೇಕಾದ ಕಾಲವಿದು.
ಐಟಿಬಿಟಿ ಮಹಿಳಾ ಜಗತ್ತು, ಗಾರ್ಮೆಂಟುಗಳ ಮಹಿಳಾ ವೇದಿಕೆಗಳು, ದೇವದಾಸಿ ಸಂಘಟನೆಗಳು, ಲೈಂಗಿಕ ಕಾರ್ಯಕರ್ತರು ಹೀಗೆ ಹತ್ತು ಹಲವಾರು ಸಂಘಗಳು ಒಂದಿಲ್ಲೊಂದು ರೀತಿಯಲ್ಲಿ ಸಮಾವೇಶಗಳನ್ನು ಕಾರ್ಯಕ್ರಮಗಳನ್ನು ನಡೆಸಿ, ಪೋಟೋಗಳಿಗೆ ಪೋಸುಕೊಟ್ಟು ಪತ್ರಿಕೆಗಳಲ್ಲಿ ಪ್ರಕಟವಾದ ಮಾತ್ರಕ್ಕೆ ದಿನಾಚರಣೆಯ ಮಹತ್ವ ಮುಗಿದು ಹೋಗುವುದು ನಮ್ಮಲ್ಲಿಯ ದುರ್ದೈವ. ತುಳಿತಕ್ಕೊಳಗಾಗುವ, ಅಬಲೆಯರ ಕೂಗು ಈ ವಿಜೃಂಬಣೆಯಲ್ಲಿ ಮೂಕವಾಗಿ ಹೋಗುವುದು ಸುಳ್ಳೇನೂ ಅಲ್ಲ. ಪ್ರಚಾರಕ್ಕೆಳೆಸದೆ ಸದ್ಯದ ಸಂದರ್ಭದ ನೋವಿನೆಡೆಗೆ ಅದರ ನಿವಾರಣೆಯೆಡೆಗೆ ನುಗ್ಗಬೇಕಾದ ಕಾಲವಿದು.
ಮಹಿಳಾದಿನವೆಂದರೆ ಏನೆಂಬುದನರಿವಿಲ್ಲದ ನಿತ್ಯ ನರಕದ ಬದುಕ ನಡೆಸುತ್ತಾ ಶೋಷಣೆಯನ್ನು ಗುರುತಿಸಲಾರದಷ್ಟು ಮುಗ್ಧರಾದ ಸ್ತ್ರೀ ಸಮುದಾಯವೂ ಇದೆ. ಅವರಲ್ಲಿಯೂ ಅರಿವನ್ನು ಸ್ವಂತಿಕೆಯ ಅರ್ಥವನ್ನು ಮೂಡಿಸಬೇಕಾದ ಕಾಲವಿದು.
ಒಂದೆಡೆ ಮಹಿಳಾವಾದಿಗಳೆನ್ನಿಸಿಕೊಂಡವರು ಸುಶಿಕ್ಷಿತ ಸ್ತ್ರೀ ಸಮುದಾಯ ತನ್ನೆಲ್ಲಾ ಅಸ್ತ್ರ ಶಸ್ತ್ರಗಳ ತೆಗೆದು ಪುರುಷ ಪ್ರಧಾನತೆಯನ್ನು ಮೀರಿ ಸ್ವತಂತ್ರ ಸ್ತ್ರೀ ಅಸ್ಮಿತೆಯ ಬೆಳೆಸಿಕೊಳ್ಳುತ್ತ ಸಾಗುತ್ತಿದ್ದಾರೆ. ಆದರೆ ಅದೇ ಹಳ್ಳಿಯ ಹೆಂಗಳೆಯರು ದಿನ ಬೆಳಗಾದರೆ ಮತ್ತದೇ ಗಂಡಿನ ಒಣದರ್ಪದ ನುಡಿಗಳಿಗೋ ಇಲ್ಲ ಹೊಡೆತಕ್ಕೋ ಬಾಯಿಗೆ ಸೆರಗಿಟ್ಟು ಉಗುಳುನುಂಗಿ ಬದುಕುತ್ತಿದ್ದಾರೆ. ಮನೆಯಲ್ಲಿಯ ಅವರ ಇಡೀ ದಿನದ ಕತ್ತೆ ದುಡಿತಕ್ಕೆ ಯಾವ ಮನ್ನಣೆಯೂ ಇಲ್ಲದೇ ಆಕೆ ಹೊರಗೆಲಸ ಇಲ್ಲವೇ ಹೊಲದ ಕೆಲಸಕ್ಕೆ ಹೋಗಿ ಬರುವ ಗಂಡನ ಬೇಕುಬೇಡಗಳ ಪೂರೈಸುತ್ತಾ ತನ್ನ ಅನಾರೋಗ್ಯವನ್ನು ಮುಚ್ಚಿಟ್ಟು ಅಕಾಲ ಮರಣ ಹೊಂದುವ ಸ್ತ್ರೀಯರ ಸಂಖ್ಯೆ ಕಡಿಮೆಯಾಗಿಲ್ಲ. ಕೂಲಿ ಕಾರ್ಮಿಕ ಹೆಂಗಸರು ದುಡಿಯಲೊಲ್ಲದ ಗಂಡನನ್ನು ಸಾಕುತ್ತ ಏಗುತ್ತ ಆತನ ಉಪಟಳವನ್ನು ಸಹಿಸುತ್ತಾ ಜೀವಂತ ಸುಡಲ್ಪಡುತ್ತಿದ್ದಾರೆ. ಸ್ವಂತಕ್ಕಾಗಿ ಜೀವಿಸುವುದ ಮರೆತುಹೋದ ಅವರೆಲ್ಲರಿಗೂ ಆತ್ಮಬಲ ನೀಡುವ, ಪರಿಸ್ಥಿತಿಯನ್ನು ಎದುರಿಸಿ ಗೆಲ್ಲುವ ಮನೋದಾರ್ಢ್ಯವನ್ನು ನೀಡಬೇಕಾದ ಕಾಲವಿದು.
ಸ್ತ್ರೀ ವಾದದ ಅಂತಿಮ ಉದ್ದೇಶವೇ ಶೋಷಣಾರಹಿತ ಆರೋಗ್ಯವಂತ ಸಮಾನ ತಳಹದಿಯ ಸಮಾಜ ನಿರ್ಮಾಣ.ಹಾಗಾಗಿ ಮಹಿಳಾ ದಿನಾಚರಣೆ ತನ್ನ ನಿಜವಾದ ದ್ಯೇಯೋದ್ದೇಶಗಳ ಮುಖ್ಯ ಪಾತಳಿಯಲ್ಲಿಟ್ಟು ಸಮಾನತೆ, ಹೊಂದಾಣಿಕೆ, ದಬ್ಬಾಳಿಕೆ ಬಿಡುಗಡೆ ಇತ್ಯಾದಿಗಳ ಕುರಿತು ಗಮನಹರಿಸಬೇಕಾಗಿದೆ. ನಮ್ಮ ಇಂತಹ ಬರಹಗಳೆಲ್ಲ ಬರಿಯ ಬೌದ್ಧಿಕ ವಲಯಕ್ಕೆ ತಲುಪಬಹುದಲ್ಲದೇ ಅಗತ್ಯದ ವಲಯವನ್ನು ತಲುಪಲಾರದು. ಹಾಗಾಗಿ ಕಾರ್ಯರೂಪಕ್ಕೆ ಕೈನೀಡದ ಬರಹವೂ ಸತ್ವವಿಲ್ಲದ ಸಾರವೇ ಆಗಿಹುದು. ಇದು ಬರಿಯ ವೇದಿಕೆಗಳಲ್ಲಿ ಬರಹಗಳಲ್ಲಿ ಮಾತ್ರವಲ್ಲದೇ ನೊಂದವರ ಕಣ್ಣೊರೆಸುವ ಕಾರ್ಯದಲ್ಲಿ ಪ್ರಾಯೋಗಿಕವಾಗಿಯೂ ತೊಡಗಿದ್ದಲ್ಲಿ `Time is Now’ ಎಂಬ ನುಡಿಗೆ ಅರ್ಥಬರುವುದು.
*****