ನಾನು ಕಾಮುಕನೆಂದು ಹಳಿಯುವರು. ಗ್ರಂಥಗಳ-
ನೋದಿ ನರಕವೆ ಲೇಸು ಈ ಪಶುವಿಗೆನ್ನುವರು.
ನಾಲ್ಕು ದಿನ ತಮ್ಮ ಮಲಬದ್ಧತೆಯ ಕಳೆದವರು
ಇವನು ವ್ರಣಕಾಯನೆಂದೊರಯುವರು ಪಂಥಗಳ
ಡಾಂಭಿಕರು ಜರೆಯುವರು ಅಂಥ ಇಂಥವುಗಳಾ
ವಂಧಾನದವನೆಂದು. ಈ ಜನರ ಕೊಲ್ಲಲೆನೆ
ಒಂದು ಕೊಂತವು ಸಾಕು, ಜೋಡೆಯೊಡನೊಂದು ದಿನ
ಸುಮ್ಮನಿಹೆ ನಗೆಗೇಡು, ಕೊಲಲಿಂಥ ತಂತುಗಳ?
ಕಾಮಾಂಧನೆನಬೇಡಿ ನಾನಿರಲು ಕಾಮಾಂಧ,
ನೀವಹುದು ಧರ್‍ಮಾಂಧ, ವಿದ್ಯಾಂಧ, ಶ್ರದ್ಧಾಂಧ,
ಜನ್ಮಾಂಧ! ನಿಮಗೇನು ಹೊನ್ನು ಗೋರಿಯ ಕಟ್ಟಿ
ಕೈಮುಗಿದು ನಿಂತಿಲ್ಲ ಕಾಳನವ. ಸದೆಬಡೆದು
ನನ್ನೊಡನೆ ಮಣ್ಣಿನಲಿ ಕೊಡೆದೆಳೆಯುವನು ಮೆಟ್ಟಿ
ನಿಮ್ಮೌಪನಿಷದ-ಪ್ರಾಣಗಳನಂಗಕೆ ತೊಡೆದು!
*****