ಇದು ಮಂತ್ರ; ಅರ್‍ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ;
ತಾನೆ ತಾನೆ ಸಮರ್‍ಥಛಂದ; ದೃಗ್ಬಂಧ-ದಿ-
ಗ್ಬಂಧ; ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ; ಉಸಿರ
ಹೆದೆಗೆ ಹೂಡಿದ ಗರಿಯು ಗುರಿಯ ನಿರಿಯಿಟ್ಟು ಬರು-
ತಿದೆ ತೂರಿ ಲೀಲೆಯಲನಾಯಾಸ. ಗರುಡನಂ-
ತೆರಗಿ ಬಂದಿತು-ಭ್ರಮೆಯೊ? ಹಮ್ಮದವೊ? ಸಂಜೊ! ಮರ-
ಣವೊ? ನಿದ್ದೆಯೋ! ಮೋಹನವೊ! ಎಚ್ಚರಕೆ ಕವಿದ
ಮರೆವೊ! ಕನಸೋ! ನನಸು-ಎಲ್ಲ ಹಾಲೋ ಹಾಲು!
ಎಲೆ ಹಾವೆ! ಹೊಟ್ಟೆ ಹೊಸೆಯುವ ಜಂತು! ನಿನಗೆ ಕಿವಿ-
ಯಿಲ್ಲ, ನಾಲಿಗೆಯೆರಡು; ಹಲ್ಲೊಳಿದೆ ವಿಷವು; ನಿ-
ನ್ನನ್ನ ಗಾಳಿಯು; ನೀನು ಪಾತಾಳಕಿಳಿದರೂ
ಮತ್ತೆ ಕಾಡುವೆ; ರಸಿಕನೆನೆ ಚಂದ ತಲೆದೂಗಿ
ನಾಳೆ ಕಾರುವೆ ಗರಳ! ಬಯಸುತಿರು, ಬಯಸುತಿರು..
ಕಂಡಿಲ್ಲವೇನೊ ಅಂಗೈಯ ಗರುಡನ ಗೆರೆಯ!
*****