‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ
ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ-
ದೆನುವಂತೆ ಆಗಿಹನು ಋಣಗೂಳಿಗಿವ ಮೂಲ
ಓದುವದದೇಕಿವನು ಕೊಂಡು ಗ್ರಂಥಗಳನ್ನು?
ಕುರುಡರಿಗೆ ಸಾಲೆ! ಭಲೆ! ಏನು ತಿಳಿಯುವದಣ್ಣ,
ಆಳರಸುಮನೆತನಕೆ ! ಇದು ಎಂಥ ಅಳಿಗಾಲ?
ಕುರುಡ ಮಕ್ಕಳಿಗೆ ವಿದ್ಯೆಯನು ಕೊಡಿಸುವ ಶೂಲ-
ವೊಂದು ತಾಗಿತು ಒಂದು ಅಲ್ಲದೇನಿಹುದಿನ್ನು?’
ತಂದೆಯಾಡಿದ ಮಾತ ಕೇಳಿ ಕುರುಡನು ತೊರೆದ
ಪಿತೃಗೃಹದ ನರಕವನು. ದಾನಕೊಡಬಹುದೆಂದು,-
ದಾನಿಗಳಿರಲು ಜಗದಿ,- ಹಾಡುತೊಲಿಸಿದ ಜಗವ
ಜನರೆಂದರ್ ‘ಇವನೆ ಕವಿ, ಇವನು ಬಾಯಿಂದೊರದ
ಪದವೆ ಕಾವ್ಯವು ರತುನವನ್ನೆ ಬಿಸುಟೊಗೆದನವ
ಮೂರ್‍ಖ ತಂದೆಯು’ ಎಂದು ಜನ್ಮಾಂಧರಾರಿಂದು?
*****