ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ
ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು
ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು
ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ
ಕತ್ತಲೆಯನರಸಿಗರು ತಾರೆಗಳು ಚಮಕಿಸುವ
ತಮ್ಮ ಕಿರುವೆರಳನ್ನು, ನಲಿಯುವವು. ಮೆಟ್ಟಿಹರು
ಪಾಮರರು ಸಲ್ಲದಾಸೆಯ, ಬೀಡುಬಿಟ್ಟಹರು
ಮುಗಿಲಮಂಡಲದಾಚೆ ಕನಸಿಗರು ರೋಧಿಸುತ.
ನಿನ್ನ ಬರವಿಂದೆನ್ನ ಹೃದಯಮಂದಿರವು ಸಹ
ವಿಮಲವಿರಬಹುದೆಂದು ಕಾಯುವೆನು. ಎಲೆ ಚೆಲುವೆ!
ಇರಬಹುದು ಕೆಲವರೊರೆವಂತೆ ನೀ ಬರಿ ಕನಸು.
ನಿತ್ಯಳೆಂದುಸಿರುತಿರು; ಅಡಗಲೆನ್ನಯ ದಾಹ
ನಾನು ಜೀವಿಸುವನಕ ಇಂತೆಸಗು; ಮರು ಕ್ಷಣವೆ
ನೀನಿಹುದು ಶುದ್ಧ ಸುಳ್ಳೆಂದು ಡಂಗುರ ಹೊಯಿಸು!
*****