ಚಿನ್ನೂ, ನಿಜಾ… ಹೇಳಲೇನೆ? ಎಲ್ಲರ ಮುಂದೆ ಧೈರ್ಯ, (ಭಂಡತನ?) ಪ್ರದರ್ಶಿಸುತ್ತಿದ್ದ ನನಗೆ ಒಳಗೊಳಗೆ ಭಯವಾಗತೊಡಗಿತ್ತು. ‘ಅತ್ಯಾಚಾರ… ನಂತರ ಕೊಲೆ…’ ಹೀಗೆ ಏನೇನೋ ವಿಷಯಗಳು ಕಣ್ಣುಗಳ ಮುಂದೆ ಸರಪಳಿಯಂತೆ ಬರತೊಡಗಿದ್ದವು. ಅಧೀರಳಾಗಿ ಬಿಟ್ಟಿದ್ದೆ.
ಅವ್ವಂಗೆ ಹೇಳಿದ್ರೆ ಆ ಕೆಲ್ಸ ಬಿಡು ಎಂದು ಹೇಳುತ್ತಾರೆ. ಅದು ಸಮಸ್ಯೆಗೆ ಪರಿಹಾರವಲ್ಲ. ಒಂದು ರೀತಿಯ ಪಲಾಯನ. ಯಾರೂ ಆಪ್ತರಿರಲಿಲ್ಲ. ಎಲ್ಲಾ ಹೇಳಿಕೊಂಡು ಎದೆ ಹಗುರ ಮಾಡಿಕೊಳ್ಳುವಂತಹ, ಅಳುತ್ತಿದ್ದ ನನಗೆ ಭುಜ ನೀಡಿ ಸಂತೈಸುವಂತಹ ಆತ್ಮೀಯರೂ ನೆನಪಾಗಲಿಲ್ಲ. ಮೊದಲ ಬಾರಿಗೆ ನಾನು ಜನಾರಣ್ಯದಲ್ಲಿ ಕ್ರೂರ ಮೃಗಗಳ ನಡುವೆ ಒಂಟಿಯಾಗಿದ್ದೇನೆ ಎಂದೆನ್ನಿಸಿ ನಡುಗಿದ್ದೆ. ಅತ್ತಿದ್ದೆ. ದಿಂಬು ಮಾತ್ರವೇ ನನ್ನ ಕಣ್ಣೀರನ್ನು ಹಿಂಗಿಸಿಕೊಳ್ಳುತ್ತದೆಂಬ ಭಾವನೆಯಿಂದ ಅದರಲ್ಲಿ ಮುಖ ಹುದುಗಿಸಿ ಅಳುತ್ತಿದ್ದೆ. ಈ ಎಲ್ಲಾ ಘಟನೆಗಳಿಂದ ನಾನು ಕುಸಿಯತೊಡಗಿದ್ದೆನಾ? ಊಹೂಂ… ಇಲ್ಲ… ಹಾಗಾಗಬಾರದು ಎಂದುಕೊಳ್ಳುತ್ತಿತ್ತು ನನ್ನ ಹಠಮಾರಿ ಮನಸ್ಸು. ಆಸ್ಪತ್ರೆಗೆ ಯಾಂತ್ರಿಕವಾಗಿ ಹೋಗಿಬರುತ್ತಿದ್ದೆ. ಅಲ್ಲಿರುವವರೆಗೂ ನನಗೆ ಯಾವುದೂ ನೆನಪಿಗೆ ಬರುತ್ತಿರಲಿಲ್ಲ. ಶಸ್ತ್ರ ಕ್ರಿಯೆಗಳು, ಸಂತಾನ ಹರಣ ಚಿಕಿತ್ಸಾ ಶಸ್ತ್ರ ಕ್ರಿಯೆಗಳು, ಕ್ಯಾಂಪುಗಳು ಹೀಗೆ ಎಲ್ಲಾ ಕಾರ್ಯಗಳು ನಡೆಯುತ್ತಿದ್ದವು ಹಗಲಿನಲ್ಲಿ. ರಾತ್ರಿಯಾದರೆ ನಾನು ಒಂಟಿಯಾಗಿ ಬಿಡುತ್ತಿದ್ದೆ. ಕೆಲಸಗಳಿಂದ ದೇಹ ಬಸವಳಿದು ಬಿಡುತ್ತಿತ್ತು. ಏನಾದ್ರೂ ಓದೋಣ, ಬರೆಯೋಣವೆಂದರೆ, ಚಿತ್ತ ಚಂಚಲವಾಗಿಬಿಡುತ್ತಿತ್ತು. ಹಾಸಿಗೆಯ ತುಂಬಾ ನಿದ್ದೆ ಬಾರದೇ ಹೊರಳಾಡುತ್ತಿದ್ದೆ. ನನ್ನ ದುಃಖಭರಿತ ತಲೆಯನ್ನೆರಗಿಸಿ ಅಳಲು ಭುಜವೊಂದು ಬೇಕಾಗಿದೆ. ಅಪ್ಪಿಕೊಂಡು ಸಾಂತ್ವನ ನೀಡಲು ಒಬ್ಬರು ಬೇಕಾಗಿದೆ ಎಂದೆನ್ನಿಸಹತ್ತಿತ್ತು. ಅವ್ವನನ್ನು ತಬ್ಬಿಕೊಂಡು ಮಲಗಲೂ ಮೊದಲಿನಿಂದಲೂ ಅವಕಾಶವೇ ಇರಲಿಲ್ಲ. ನೋವು ಹೇಳಿಕೊಂಡರೆ ಅವ್ವ ಸರ್ಕಾರಿ ನೌಕರಿ ಬಿಟ್ಟುಬಿಡು ಎಂದು ಹೇಳುತ್ತಿದ್ದಳು. ಅದು ಸಾಧ್ಯವಿರಲಿಲ್ಲ. ಕೆಲಸ ಬಿಟ್ಟು ಕುಳಿತ ಅವ್ವನ ಜವಾಬ್ದಾರಿ ನನಗಿತ್ತು.
ಹೀಗಿರುವಾಗ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಆತ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದ. ತುಂಬಾ ಚೆನ್ನಾಗಿ ಮಾತನಾಡುತ್ತಿದ್ದ. ಮಾತನಾಡುವ ಕಲೆ ಆತನಿಗೆ ಸಿದ್ದಿಸಿತ್ತು. ನನ್ನ ಸಮ ವಯಸ್ಕನಾಗಿದ್ದ. ನೋಡಲು ಆಕರ್ಷವಾಗಿದ್ದ… ಆತ್ಮೀಯತೆ ಬೆಳೆಯತೊಡಗಿತ್ತು. ಮನೆಗೆ ಕಾಫಿ ಕುಡಿಯಲು ಕರೆಯಲು ತಡವಾಗಿರಲಿಲ್ಲ. ನನ್ನ ಎಲ್ಲಾ ಈ ಸಮಸ್ಯೆಗಳನ್ನು ಹೇಳಿಕೊಂಡು ನಿಟ್ಟುಸಿರು ಬಿಡುವಷ್ಟು ಒಳ್ಳೆಯ ಸ್ನೇಹಿತನಾಗಿದ್ದ. ಅವನು ನಿಧಾನವಾಗಿ ನನ್ನ ಬೆಡ್‌ರೂಮಿನತನಕ ಬಂದಿದ್ದು ನನಗೆ ಅರಿವೇ ಆಗಿರಲಿಲ್ಲ. ಕಾಯದ ಅಗ್ನಿಕುಂಡಕ್ಕೆ ನಾನು ಪೂರ್ಣಾಹುತಿ ಆಗಿಬಿಟ್ಟಿದ್ದೆ. ಅಲ್ಲಿಯವರೆಗೂ ನನಗೆ ಅರಿವೇ ಆಗಿರದಷ್ಟು ಮೈ ಮರೆತಿದ್ದೆ. ಆಗಲೇ ನನಗರಿವಾಗಿದ್ದು, ಮನಸ್ಸಿಗೆ ಓಲೈಕೆ ಬೇಕೆಂದೆನಿಸುವಾಗ ದೇಹಕ್ಕೂ ಬೇಕಾಗಿತ್ತು. ನಾನು ಸನ್ಯಾಸಿಯಾಗಿರಲಿಲ್ಲ. ನಿಜ… ನನಗೆ ಸ್ಪಂದನೆಗಳಿರಲಿಲ್ಲ. ಪ್ರೀತಿಸಲು ಸಾಧ್ಯವೇ ಇರಲಿಲ್ಲ. ವೈದ್ಯಕೀಯ ಕಾಲೇಜಿನ ಮೈಸೂರಿನ ನನ್ನ ಮೊದಲ “ಪ್ರೇಮ” ನನ್ನನ್ನು ಕಾಡುತ್ತಿತ್ತು. ಆ ರೋಮಾಂಚನ, ಕಾಯುವಿಕೆ, ಎದೆಮಿಡಿತವೆಂದೂ ಬರಲೇ ಇಲ್ಲ. ಭಗ್ನವಾದ ಹೃದಯದೊಂದಿಗೇ ಭಾವನೆಗಳು ಸತ್ತು ಹೋಗಿದ್ದವು. ಹಾಗಾದರೆ ಇದು ಏನು?
ಅಂದು, ಆ ಕಾಲದಲ್ಲಿ ಹುಡುಗನಿಗೆ ಪ್ರೇಮ ಪತ್ರ ಬರೆದರೇನೆ ‘ಹಾದರ’ ವೆಂಬಂತೆ ಪರಿಗಣಿಸಲಾಗುತ್ತಿತ್ತು. ಆದರೆ ನಾನು ತೀರಾ ಅಧಃಪತನಕ್ಕಿಳಿದಿದ್ದೆ. ಎರಡು ತಿಂಗಳು ಮಾತ್ರ… ಆದರೂ ಹಾದರವೇ ಅಲ್ಲವೇ? ನನ್ನನ್ನು ನಾನು ಕ್ಷಮಿಸಿಕೊಳ್ಳುವ ಹಾಗಿರಲಿಲ್ಲ. ತಪ್ಪು ತಪ್ಪೇ… ಅಲ್ಲವಾ?
ಮುಂದೇನು? ಏನನ್ನೋ ಯೋಚಿಸಿದ್ದ ನಾನು ಅವನ ಮುಂದೆ ನನ್ನ ಕೋರಿಕೆಯನ್ನಿಟ್ಟಿದ್ದೆ. ಈಗ ನಾನು ನಾಯಿ ಮುಟ್ಟಿದ ಮಡಿಕೆಯಾಗಿದ್ದೆ. ಅವನು ಕೆಡಿಸಿದ ದೇಹವನ್ನು ಅವನೆ ಯಾಕೆ ಕಟ್ಟಿಕೊಳ್ಳಬಾರದು?
“ಮದ್ವೆ ಯಾವಾಗ?”
“ಮದ್ವೇನಾ?”
“ಹೂಂ… ನನ್ನ ನಿನ್ನ ಮದುವೆ…”
“ನಿನ್ನ ಜೊತೇನಾ?”
“ಹೌದು…”
“ಸಾಧ್ಯವೇ ಇಲ್ಲ. ನನ್ನ ಮದ್ವಯಾಗಲೇ ಪಕ್ಕಾ ಆಗಿದೆ. ಮೇ ತಿಂಗಳಿನಲ್ಲಿ ಮದುವೆ. ನೀನೂ ಇರಬೇಕು…”
“…..”
“ನಿನ್ನಂತಹ ಡಾಕ್ಟ್ರು… ಒಳ್ಳೆಯ ಸ್ನೇಹಿತರು ಬಂದರೆ ನನಗೆ…”
“ಸ್ನೇಹಿತೆನಾ? ಸ್ನೇಹಿತೆಯರಿಗೆಲ್ಲಾ ಹೀಗೇ ಮಾಡ್ತೀಯಾ?” ಅವನ ಮಾತನ್ನು ಅರ್ಧದಲ್ಲಿಯೇ ಕಡಿದು ಕೇಳಿದ್ದೆ. ನನ್ನ ಉಸಿರು ವೇಗವಾಗತೊಡಗಿತ್ತು… ಮೈ ಕೋಪದಿಂದ ಕಾವೇರತೊಡಗಿತ್ತು.
“ಛೇ…! ಎಲ್ಲರಿಗೂ ಹೀಗೆ ಮಾಡಲಾಗುತ್ತಾ? ನೀನಾಗಿಯೇ ನನ್ನನ್ನು ಅಪ್ಪಿಕೊಂಡಿದ್ದೆ… ಒಪ್ಪಿಕೊಂಡಿದ್ದೆ…”
“ನಿನಗೂ ಈ ವಯಸ್ಸಿನಲ್ಲಿ ಪುರುಷನ ಸಾಂಗತ್ಯ ಬೇಕಾಗಿತ್ತೇನೋ? ನಿನ್ನ ಪರಿತಸಿಸುತ್ತಿದ್ದ ದೇಹಕ್ಕೆ ಸಾಂತ್ವನ ಬೇಕಾಗಿತ್ತೇನೋ ಅಂದುಕೊಂಡಿದ್ದೆ…”
“ನೀನೇ ನೀನಾಗಿ ನನಗೆ ಮೈದಾನ ಮಾಡಿದ್ದೆ. ನನ್ನ ತಪ್ಪೇನೂ ಇರಲಿಲ್ಲ. ಇಂತಹ ಸಂಬಂಧಗಳು Passing Clouds ಇದ್ದ ಹಾಗೆ…”
ಫಟೀರನೆ ಅವನ ಕೆನ್ನೆಗೆ ಬಾರಿಸಿದ್ದೆ. ಕೋಪ, ಆವೇಶದಿಂದ ನಡುಗುತ್ತಿದ್ದೆ.
ಆಶ್ಚರ್ಯ ಗಾಬರಿಯಿಂದ ನೋಡಿದ್ದ. ತನ್ನದೇನು ತಪ್ಪಿಲ್ಲವೆಂಬಂತೆ… ನನಗೆ ಮತ್ತು ಕೋಪ ಹೆಚ್ಚಾಗತೊಡಗಿತ್ತು. ಉದ್ವೇಗ, ಸಿಟ್ಟಿನಿಂದ ನನ್ನ ದನಿ ನನಗೇ ತಿಳಿಯದಷ್ಟು ಕರ್ಕಶವಾಗಿತ್ತು.
“ಗೆಟ್… ಔಟ್… ಯೂ ಸ್ಕೌಂಡ್ರೆಲ್…” ಎಂದು ಚೀರಿದ್ದೆ. ಅವನು ಹೋಗಿದ್ದ. ಮತ್ತೆ ಬರುವುದಿಲ್ಲವೆಂಬುದು ಖಾತ್ರಿಯಾಗಿತ್ತು. ಕುಸಿದು ಕುಳಿತು ಬಿಟ್ಟಿದ್ದೆ. ಅದೆಷ್ಟು ಹೊತ್ತು ಹಾಗೇಯೇ ಕುಳಿತಿದ್ದೆನೋ ನನಗೆ ತಿಳಿದಿರಲಿಲ್ಲ. ವಾಸ್ತವಕ್ಕೆ ಬಂದಾಗ ನನಗೆ ಪಾಪಪ್ರಜ್ಞೆ, ಪಶ್ಚಾತ್ತಾಪ… ಅಸಹ್ಯವೆನ್ನಿಸತೊಡಗಿತ್ತು. ಅಳುವುದೊಂದನ್ನು ಬಿಟ್ಟು ಬೇರೇನೂ ಮಾಡಲಾರದಂತವಳಾಗಿದ್ದೆ!
ಚಿನ್ನೂ,
ನಾನು ಮಾಡಿದ್ದ ಈ ಪಾಪ ಕೃತ್ಯ ನನ್ನ ಮುಂದಿನ ಬದುಕಿನ ಅಂತ್ಯವನ್ನು ಸೂಚಿಸುವಂತಿತ್ತು. ಭವಿಷ್ಯವನ್ನು ಕತ್ತಲು ಮಾಡಿತ್ತು. ಕನಸು ಕಾಣುತ್ತಿದ್ದ ಮನಸ್ಸಿಗೆ ಘಾತ ಮಾಡಿತ್ತು. ದೀಪಗಳೇ ಇಲ್ಲದ ಕತ್ತಲು ದಾರಿಯಲ್ಲಿ ನಿಂತಿದ್ದೆ. ಮುಂದೇನು ಎಂದು ಕಾಣುವಂತಿರಲಿಲ್ಲ.
ಆ ಕ್ಷಣ ಹೆದರಿಬಿಟ್ಟಿದ್ದೆ. ಅವಮಾನ ನಿರಾಶೆಗಳು ನನ್ನನ್ನು ಬಿಟ್ಟಿರಲೇ ಇಲ್ಲ. ಮೈಸೂರಿನಲ್ಲಿದ್ದಾಗ ಅಸಿಸ್ಟೆಂಟ್ ಪ್ರೊಫೆಸರ್ ಮೇಲೆ ಆಗಿದ್ದ ‘Crush’, `First Love’ ಅಥವಾ ಅವರೆಂದಿದ್ದ ಹಾಗೆ Infatuation ಚಿನ್ನೂ. ಆ ಘಟನೆ ನನಗೆ ನಿರಾಶೆಯ ಜೊತೆಗೆ ಅವಮಾನದಿಂದ ಸಾಯುವಂತೆ ಮಾಡಿತ್ತು. ನನ್ನ ಹೃದಯ ಒಡೆದು ಚೂರಾಗಿತ್ತು. ನಯವಾದ ಮಧುರವಾದ ಕೋಮಲ ಭಾವನೆಗಳು ಸತ್ತು ಹೋಗಿದ್ದವು. ಸತ್ತ ಭಾವನೆಗಳ ಶವಯಾತ್ರೆ ಮಾಡಿ ಸಂಸ್ಕಾರವನ್ನು ಮಾಡಿದ್ದೆನಾದರೂ ಆದರೆ ನೆನಪು ಉಳಿದುಬಿಟ್ಟಿತ್ತು. ಆಗಾಗ್ಗೆ ನನ್ನನ್ನು ಕಾಡಲು…
ನಂತರ ಆ ಅವಮಾನ ನಿರಾಶೆಯ ಕಿಚ್ಚು ನನ್ನ ಸ್ನಾತಕೋತ್ತರ ಪದವಿ ಪಡೆಯಲು ಕಾಲೇಜಿಗೆ ಸೇರಿದಾಗಲೂ ಮುಂದುವರೆದಂತೆ ಭಾಸವಾಗಿತ್ತು. ಸಹಿಷ್ಣುತೆಯ ಬಗ್ಗೆ ಪಾಠವನ್ನು ಹೇಳಿಕೊಟ್ಟಿದ್ದ ನನ್ನ ಆ ದಿನಗಳ ಸ್ನೇಹಿತೆ ಶೋಭಾಳ ನೆನಪಾದರೂ ಅವಮಾನ ದುಃಖ, ನಿರಾಶೆಯ ಹತಾಶೆಯ ಕಿಚ್ಚು ಅದೆಲ್ಲವನ್ನೂ ಮರೆಸಿ ಸ್ಫೋಟಕವಾಗಿತ್ತು ಆ ಕಿಚ್ಚು. ಮತ್ತೆಂದೂ ನನಗೆ ಆ ಸಹಿಷ್ಣುತೆಯ ಕೋಟೆಯನ್ನು ಕಟ್ಟಲು ಆಗಲೇ ಇಲ್ಲ.
ಅದರೊಂದಿಗೇ ಕಳೆದು ಹೋಗಿದ್ದ ನನ್ನ ಸಹನೆ ಮನಃಶಾಂತಿಯನ್ನು ಮತ್ತೆ ಪಡೆಯಲು ಪ್ರಯತ್ನ ಮಾಡತೊಡಗಿದ್ದೆ. ನನ್ನ ವೈದ್ಯಕೀಯ ವೃತ್ತಿಯಲ್ಲಿ ಅದೆಲ್ಲವನ್ನು ಮರೆಯುವಂತೆ ನನ್ನನ್ನು ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದು ಬದ್ಧತೆ, ಸಿದ್ಧತೆ, ಮಗ್ನತೆಯನ್ನು ತಯಾರಿ ಮಾಡಿಕೊಳ್ಳ ತೊಡಗಿದ್ದೆ. ಆದರೆ ಅಲ್ಲಿ ಹಂತ ಹಂತವಾಗಿ ನಡೆಯತೊಡಗಿದ್ದ ಭ್ರಷ್ಟಾಚಾರ, ಅನ್ಯಾಯ ಅಸೂಯೆಗಳು ಅಸಹನೀಯವಾಗಿದ್ದವು. ಆ ಎರಡೂವರೆ ವರ್ಷಗಳಲ್ಲಿ, ರಾಜಕೀಯ ಪುಢಾರಿಯಿಂದಾದ ಅವಮಾನ, ಅತ್ಯಾಚಾರದ ಸುಳ್ಳು ವದಂತಿ ಎಬ್ಬಿಸಿದ ಅಸಹ್ಯ ಷಡ್ಯಂತ್ರ, ನಂತರ ನಾನಿಲ್ಲದಾಗ ನನ್ನ ಮನೆಯನ್ನು ಕಳ್ಳತನದಿಂದ ಲೂಟಿ ಮಾಡಿದ್ದು, ಇವೆಲ್ಲವೂ ನನ್ನನ್ನು ತತ್ತರಿಸುವಂತೆ ಮಾಡಿದ್ದವು.
ಅಂತಸ್ತು, ಜಾತೀಯ ರಾಜಕೀಯ ನಡೆದರೂ ನನ್ನನ್ನು ಅಷ್ಟಾಗಿ ಕಾಡಿರಲಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ಮುನ್ನುಗ್ಗುತ್ತಿದ್ದೆ. ಕೆಟ್ಟದ್ದೋ ಒಳ್ಳೆಯದ್ದೋ ಗೊತ್ತಿಲ್ಲ. ಎಂದೂ ಬೆನ್ನು ತೋರಿಸಿರಲಿಲ್ಲ. ಬೆನ್ನ ಹಿಂದೆ ಮಾತನಾಡುವವರ ಬಗ್ಗೆಯೂ ಎಂದೂ ಕಿವಿಗೊಟ್ಟಿರಲಿಲ್ಲ. ಆದರೆ ನನಗೆ ನಾನೇ ಮಾಡಿಕೊಂಡ ಹೇಯ ಕೃತ್ಯ ನನ್ನನ್ನು ಪಾಪ ಭೀತಿಯಿಂದ ಕಂಗಾಲಾಗುವಂತೆ ಮಾಡಿದ್ದವು. ಎಷ್ಟು ಕುಗ್ಗಿ ಹೋಗಿದ್ದೆನೆಂದರೆ ಮತ್ತೆ ತಲೆ ಎತ್ತಿ ನಿಲ್ಲಲು ಸಾಧ್ಯವೇ ಇಲ್ಲವೆಂಬಂತೆ ನಮ್ಮ ಆಸ್ಪತ್ರೆಯ ಹಿರಿಯ ನರ್ಸ್ ಒಬ್ಬರು.
“ಡಾಕ್ಟ್ರೇ… ನೀವು ಯಾವುದಕ್ಕೂ ಹೆದರಬೇಕಾಗಿಲ್ಲ. ನಿಮ್ಮೆ ಒಳ್ಳೇ ಹೆಸ್ರಿದೆ… ಸುತ್ತಮುತ್ತಲ ಹಳ್ಳಿಗಳಲ್ಲಿ ಜನ ನಿಮ್ಮನ್ನು ಬಹಳಾನೇ ಇಷ್ಟಪಡ್ತಾಯಿದ್ದಾರೆ. ಆದ್ರೆ ಈ ಆಸ್ಪತ್ರೆಲಿ ಒಳ್ಳೆಯವ್ರು ಒಂದು ಹೆಸ್ರು ಮಾಡಿದ್ರೂಂದ್ರೆ ನಮ್ಮವ್ರು ಸಹಿಸಿಕೊಳೋಲ್ಲ. ಮೊದ್ಲಿಂದ್ದೂ ಇದು ನಡ್ಕೊಂಡು ಬಂದಿದೆ. ಹುಟ್ಟಾಗಿನಿಂದಾನೂ ಇಲ್ಲೇ ಬೇರು ಬಿಡ್ಕೊಂಡು ಇದ್ದಾರಲ್ಲ ಅವರನ್ನು ಕೀಳೋಕೆ ಆಗೋಲ್ಲ. ಹೊಸಬ್ರು ಬಂದ್ರೆ ಇಲ್ಲಿ ಬದ್ಕೋಕೆ ಬಿಡೋಲ್ಲ. ಈ ಊರಿಂದಾನೆ ಓಡೋಕೆ ಏನೇನಾಗ್ಬೇಕೋ ಅದನ್ನೆಲ್ಲಾ ಮಾಡ್ತಾರೆ. ನಾಯಿಗಳಿದ್ದ ಹಾಗೇನೇ ಅಂದೊಳ್ಳಿ. ತಮ್ಮ ಎಲೆಯ ಊಟ ಬೇರೆಯವ್ರು ಮಾಡಿಬಿಟ್ರೆ? ಎನ್ನೋ ಭಯ ಅವರಿಗೆ… ನೀವು ಹೆದರ್ಕೋಬೇಡಿ ಡಾಕ್ಟರಮ್ಮಾ…”
ಅಂದರೆ ನನ್ನ ಉಳಿವು ಅಳಿವು ಸೆಣಸಾಟದಲ್ಲಿ ನನಗೆ ವಯಸ್ಸಾಗುತ್ತಿದೆ ಎಂಬುದೇ ಮರೆತುಹೋಗಿತ್ತು. ನನಗಾಗಲೇ ಇಪ್ಪತ್ತೆಂಟು ವರ್ಷಗಳು ಮುಗಿದಿದ್ದವು. ಮದುವೆಯಾಗುವುದಿಲ್ಲವೆಂದು ನಿರ್ಧರಿಸಿದ್ದುದರಿಂದ ಅಷ್ಟು ತಲೆಕೆಡಿಸಿ ಕೊಂಡಿರಲಿಲ್ಲ. ನನಗೂ ಹಿಂಸಿಸಿ ಮಾನಸಿಕವಾಗಿ ಹಿಂಡಿ ಹಿಪ್ಪೆಯಂತೆ ಮಾಡತೊಡಗಿದ್ದ ಘಟನೆಗಳು ಕಂಗಾಲಾಗುವಂತೆ ಮಾಡತೊಡಗಿದ್ದವು. ಸಾಂತ್ವನ ನೀಡಲು ನನ್ನನ್ನು ಅರ್ಥ ಮಾಡಿಕೊಳ್ಳಲು ಯಾರಾದರೊಬ್ಬರು ಇದ್ರಿದ್ರೆ? ಅಳು ತುಂಬಿದ ತಲೆಯೂರಲು ಭುಜವೊಂದು ಬೇಕಿತ್ತು ಎಂದು ಆ ವ್ಯಕ್ತಿಯ ಆಕರ್ಷಕ ಮಾತುಕತೆಗಳಿಗೆ ಮರುಳಾಗಿ ಬಿಟ್ಟೆನೆ? ನಾನು ನಿಜವಾಗಿಯೂ ಬಯಸಿದ್ದೇನು? ಪುರುಷನ ಸಾಂಗತ್ಯವನ್ನೇ? ನನಗೆ ಮನಸ್ಸೊಂದೇ ಅಲ್ಲ ದೇಹವೂ ಇದ್ದು ಅದಕ್ಕೂ ವಾಂಛಗಳಿದ್ದವೆಂಬುದರ ಬಗ್ಗೆ ವೈದ್ಯಳಾಗಿಯೂ ತಿಳಿಯದೇ ಹೋಯಿತೆ? ನಮಗೆ ಅರಿಷಡ್ವರ್ಗಗಳ ಬಗ್ಗೆ ತಿಳಿದಿರುತ್ತದೆ. ಆದರೆ ಅವುಗಳನ್ನು ಜಯಿಸಿರುವುದಿಲ್ಲ ಅಲ್ಲವಾ?
ಅಂದು ಅಂದರೆ ಆ ದಿನಗಳಲ್ಲಿ ಒಬ್ಬ ಯುವತಿ, ಯುವಕನೊಬ್ಬನಿಗೆ ‘ಪ್ರೇಮಪತ್ರ’ ಬರೆದು ಸಿಕ್ಕಿ ಹಾಕಿಕೊಂಡರೆ ಬೆತ್ತಲು ಮಾಡಿ ಸಮಾಜದ ಮುಂದೆ ನಿಂತ ಅನುಭವ, ಮನೆಯವರ, ಅಕ್ಕಪಕ್ಕದವರ ಬಾಯಿಗೆ ತುತ್ತಾಗುವ ಮೊದಲೇ ನಿರ್ಧಾರ ತೆಗೆದುಕೊಳ್ಳುತ್ತಿದ್ದ. ಆ ಯುವತಿ ಆ ಯುವಕನನ್ನು ಮದುವೆಯಾಗಿ ಎಲ್ಲರ ಬಾಯಿ ಮುಚ್ಚಿಸುವುದು ಇಲ್ಲವೇ ನಿಂದನೆಗಳಿಗೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಕಾಲವದು. ಹೆದರಿಕೆ, ಪಾಪ ಭೀತಿ, ಪಶ್ಚಾತ್ತಾಪದಿಂದ ನೊಂದುಕೊಂಡು ದಾರಿ ಕಾಣದೆ ತತ್ತರಿಸುವ ದಿನಗಳಾಗಿದ್ದವು. ಮೈಲಿಗೆ, ಸೂತಕವೆಂಬಂತೆ ಭಾವನೆಗಳನ್ನು ಸುಟ್ಟುಹಾಕಿಬಿಡುತ್ತಿದ್ದರು. ಆದರೆ ಇಂದು ಸೂತಕವೂ ಇಲ್ಲ. ಮೈಲಿಗೆಯೂ ಇಲ್ಲ ಪಶ್ಚಾತ್ತಾಪವಂತೂ ಇರುವುದೇ ಇಲ್ಲ. ಎಲ್ಲವನ್ನು ತೊಳೆದು ಹಾಕಿ ತೊಡೆದು ಹಾಕಿ ಮತ್ತವನ್ನೇ ಉಡುತ್ತಾರೆ. ಬೆಳಿಗ್ಗೆ ಮದುವೆ ಸಂಜೆಗೆ ವಿವಾಹ ವಿಚ್ಛೇದನ. ದಶಕಗಳು ಬದಲಾದಂತೆ ಎಲ್ಲವೂ ಬದಲಾಗುತ್ತಿವೆ. ಅಂತಹ ದಿನಗಳಲ್ಲಿ ನಾನು ಮಾಡಿದ್ದು ಘೋರ ಅಪರಾಧ, ಅಸಹ್ಯ ಅನೀತಿಕರ ಅಂದುಕೊಂಡು ಬಿಟ್ಟಿದ್ದೆ. ನನಗೆ ಸಾವಲ್ಲದೇ ಬೇರೆ ಮಾರ್ಗವೇ ತೋರಿರಲಿಲ್ಲ. ಅತ್ತು ಕಣ್ಣು ಮುಖ ಊದಿಕೊಂಡಂತಾಗಿದ್ದವು. ನಿದ್ದೆಯಿಲ್ಲದೇ ಚಿಕ್ಕದಾಗಿ ಕೆಂಪೇರಿದ್ದ ಕಣ್ಣುಗಳು.
ಊಹೂಂ… ಅತ್ತರೂ ಪಶ್ಚಾತ್ತಾಪ ಪಟ್ಟರೂ, ಆತ್ಮರಕ್ಷಣೆ ಮಾಡಿಕೊಳ್ಳುವುದು ಸರಿಯೆಂದೆನ್ನಿಸಿರಲಿಲ್ಲ… ಅವ್ವ “ಮುಖ” ನೋಡಿದ ಕೂಡಲೇ ಏನನ್ನಾದರೂ ಕಂಡು ಕೇಳಿಯೇ ಬಿಡುತ್ತಾಳೆ. ಇಲ್ಲಿಂದ ಅಲ್ಲಿಗೆ ವದಂತಿಗಳು ಹರಡಲು ಗಂಟೆಗಳು ಬೇಕಾಗಿರಲಿಲ್ಲ. ಯಾರವನು? ಎಂದು ಕಾಳಿಯಂತೆ ಎದುರಿಗೇ ಬಂದು ನಿಂತುಕೇಳಿದರೆ ಸುಳ್ಳು ಹೇಳಲು ಸಾಧ್ಯವೇ ಇಲ್ಲ… ಏನು ಮಾಡಲಿ? ಎಲ್ಲಿಗೆ ಹೋಗಲಿ? ಉತ್ತರ ಕಂಡುಕೊಳ್ಳಲಾಗದೆ ಕತ್ತರಿಸಿ ಹೋಗತೊಡಗಿದ್ದೆ. ಎದೆ. ಮೈಮನ ಸುಡುತ್ತಿದ್ದ ಪಶ್ಚಾತ್ತಾಪ!
ರಾತ್ರಿಯಿಂದ ಬೆಳಿಗ್ಗೆಯವರೆಗೆ ಹೀಗೆ ಕುಳಿತ್ತಿದ್ದೆ. ಹೊರಗಡೆ ಹಾಲಿನವ ಬಾಗಿಲು ಬಡಿಯುತ್ತಿದ್ದ. ಸಾವರಿಸಿಕೊಂಡು ನಿಧಾನವಾಗಿ ಮೇಲೆದ್ದು ಬಾಗಿಲು ತೊರೆದು ಹಾಲು ಹಾಕಿಸಿಕೊಂಡು ಒಳಗೆ ಬಂದೆ. ಕಾಫಿ ಮಾಡಿಕೊಳ್ಳಲು ಮನಸ್ಸು ಬಾರಲಿಲ್ಲ. ಮೆಡಿಕಲ್ ರೆಪ್ರೆಸೆಂಟೀವ್ ಕೊಟ್ಟಿದ್ದ ಖಿನ್ನತೆಯ ನಿವಾರಣೆಗಾಗಿ ಉಪಯೋಗಿಸುವ ಮಾತ್ರೆಗಳು ಮೇಜಿನ ಮೇಲಿದ್ದುದು ಕಂಡು ಬಂದಿತ್ತು. ನನ್ನ ಪಾಪ ಪ್ರಾಯಶ್ಚಿತ್ತಕ್ಕೆ ಈಗ ಇರುವುದೊಂದೇ ಮಾರ್ಗವೆಂದು ಕಂಡು ಬಾಟಲಿಗಳಿದ್ದ ಅಷ್ಟೂ ಮಾತ್ರೆಗಳನ್ನು ನುಂಗಿದ್ದೆ. ಸೀರೆಯನ್ನು ಸರಿಯಾಗಿ ಉಟ್ಟು ಮಂಚದ ಮೇಲೆ ಮಲಗಿಬಿಟ್ಟೆ. ಇಲ್ಲಿಯವರೆಗೂ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡು ಅಳತೊಡಗಿದ್ದೆ. ಯಾವಾಗ ಕಣ್ಣು ಮುಚ್ಚಿದ್ದೆನೋ ತಿಳಿದಿರಲಿಲ್ಲ. ನನಗೆ ಅರ್ಧ ಮಂಪರು ಅರ್ಧ ಎಚ್ಚರ ಸ್ಥಿತಿಯಲ್ಲಿದ್ದಾಗ ನಾನು ಆಸ್ಪತ್ರೆಯಲ್ಲಿದ್ದೆ. ಯಾರಾರೋ ಮಾತನಾಡಿಕೊಳ್ಳುತ್ತಿದ್ದ ಮಾತುಗಳು ಎಲ್ಲೋ ದೂರದಿಂದ ಹೇಳುತ್ತಿರುವಂತೆ ಕೇಳತೊಡಗಿದ್ದವು.
*****
ಮುಂದುವರೆಯುವುದು