ಗಾನ ಗಂಧರ್‍ವ ಸೃಷ್ಟಿಸಿದ
ಸಂಗೀತ ಲೋಕದಲ್ಲಿ ಎದ್ದೆದ್ದು
ಬಡಿದ ಘನ ಗಂಭೀರ
ಸಮುದ್ರದಲೆಗಳು ಸ್ಥಬ್ಧವಾಗಿವೆ.
ಮಿಲೆ ಸುರ್ ಮೇರ್ ತುಮ್ಹಾರಾ
ತೊ ಸುರ್ ಬನೇ ಹಮಾರಾ
ಭಾರತವನ್ನೊಂದುಗೂಡಿಸಿದ ತತ್ವ
ಎಂತಹ ಮೋಡಿ ಆ ಗಾರುಡಿಗನದು?
ರೋಣದ ನೆಲದಲ್ಲಿ ಹುಟ್ಟಿದ
ಭಾರತ ರತ್ನದ ಧ್ವನಿಗೆ
ಬೇರೆ ಸರಿಸಾಟಿ ಬೇಕೆ?
ತನ್ನ ಧ್ವನಿಗೆ ತಾನೇ ಒಡೆಯ.
ನಾದ ದೇವತೆಯನು ನಂಬಿ
ಭಾಗ್ಯದ ಲಕ್ಷ್ಮೀಯನ್ನು ಕರೆದು
ಲೀನವಾದ ನಾದ ಬ್ರಹ್ಮ
ದೇಶದಲಿ ಆತ್ಮಸಾಕ್ಷಿ ಬಿಂಬಿಸಿದ
ತಕರಾರಿಲ್ಲದ ಸೌಜನ್ಯವಂತ ಸಂತ.
ಸುಡುಬಿಸಿಲಲಿ ಬರಿಗಾಲಿನ
ನಡಿಗೆ, ಗುರುಮನೆಗೆ ನೀರುಹೊತ್ತು
ಸಂಗೀತ ಕಲಿತ ಆ ಭೀಮ
ಶರೀರ ವೃದ್ಧವಾದರೇನಂತೆ
ಗಾಯಕನಿಗೆ ವೃದ್ಧಾಪ್ಯವಿಲ್ಲ.
ಬಡಕಲು ಶರೀರದ ಭೀಮ
ನಾದಬ್ರಹ್ಮನ ಕಿರುಣಾ ಘರಾಣಾ
ಭಾವಕ್ಕೆ ದನಿ ತುಂಬಿದ ಅಮರ ಕಾವ್ಯ
ಪರವಶಗೊಳಿಸಿದ ಬಂದಿಶ್ ಮಾಂತ್ರಿಕ.
ನಾದದಲಿ ಭೀಷ್ಮ ಪಿತಾಮಹ
ಸಂಗೀತ ಲೋಕದ ತಾನಸೇನ
ಭೈರವಿ ಹಾಡಿ ಬದುಕಿಗೆ ವಿದಾಯ
ಹೃದಯದಲಿ ನೆಲೆ ನಿಂತವನು
ಗಡಿಗಳ ಸಿಮೋಲ್ಲಂಘನ.
ಮರೆಯದ ಮಾಣಿಕ್ಯದ ಕಣ್ಮರೆ
ನಾದ ಲೋಕವೊಂದರ ಯುಗಾಂತ್ಯ
ಮಾಧುಟ್ಯ ಸೂರ್‍ಯನ ಅಂತ್ಯ
ಸಾಧನೆಗೆ ಸೀಮೆಗಳ ನಿರ್‍ಬಂಧವಿಲ್ಲ
ಗಾಯನಶಾಶ್ವತ, ದೇಹ ನಶ್ಚರ.
ಮೌನವಾಗಿ ಲೀನವಾಗಿದೆ
ಹಿಮಾಲಯದ ಮೇರು ಶಿಖರ.
ಸೂರ್‍ಯ ಅಸ್ತಂಗತನಾದ ಸುದ್ದಿ ಕೇಳಿ
ಅಲ್ಲಾಡದೇ ನಿಂತಿವೆ ನೋಡು
ಗಿರಿ, ಶಿಖರ, ಗಾಳಿ, ನದಿ, ಲೋಕ
ಸಾವು ನಿಶ್ಚಿತ, ಧ್ವನಿ ಅಮರ.
*****
(ಭೀಮ್ ಸೇನ್ ಜೋಶಿಯವರು ನಿಧನರಾದ ಸಂದರ್‍ಭ)