ಗುಡಿಯಾ ಆಟದ ಗೊಂಬೆಯಲ್ಲ
ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ
ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ
ನೋವಿನ ಕಡಲು ಒಡಲಲಿಟ್ಟುಕೊಂಡು
ನಾಪತ್ತೆಯಾದ ಪತಿ ಮರಳಿ ಬರುವ
ಹಾದಿ ಕಾಯ್ದಳು ದೀರ್‍ಘ ಕಾಲದ ತನಕ
ಕನಸು ಹುಸಿಹೋಯ್ತು ರೆಪ್ಪೆ ಭಾರವಾಯ್ತು.
ಹನಿಹನಿ ಉದುರಿಸಿ ಕಣ್ಣ ಕಿಂಡಿ ಬರಿದಾಯ್ತು
ಕೊನೆಗೆ ವಿದಾ ಹೇಳಿ ಮನದ ಕದವಿಟ್ಟುಕೊಂಡಳು.
ಮೌನ ಕಡಲಿಗೆ ಮರುಮಾತಿಲ್ಲದೆ ಶರಣಾದಳು
ಈಜಿದಳು ಭಯಂಕರ ಅಲೆಗಳಿಗೆ ಎದುರಾಗಿ
ನಕ್ಕಿದ್ದೇಷ್ಟೋ! ಬಿಕ್ಕಿದ್ದೆಷ್ಟೋ! ವಿರಹ
ಹಾಡಿದ್ದೇಷ್ಟೋ ಹಲುಬಿದ್ದೇಷ್ಟೋ ಗೀತೆ.
ಹರಿಯರಾಣತಿಯಂತೆ ಮರುಮದುವೆಯಾದಳು
ವಿಧಿಗೆ ತಲೆಬಾಗಿದಳು ಪುಟ್ಟ ಗುಡಿಯಾ
ಹೊತ್ತುನಿಂತಳು ಇವನ ಫಲಭಾರ
ಹೊಸ ಬದುಕಿನ ಬಾಗಿಲಲ್ಲಿ ಗಸ್ತುನಿಂತಳು.
ಮರಳಿ ಬಂದಿದ್ದ ಮೊದಲ ಪತಿ ಆರೀಫ್
ಮೈ ಮನಗಳಲ್ಲಿ ತೌಫಿಕನ ಬೆಳಕಿನ ಚುಳಕ
ವಿಧಿಯಾಟಕ್ಕೆ ಬೇಸ್ತು ಬಿದ್ದಳು ಗುಡಿಯಾ
ಸಂಕೀರ್‍ಣ ಬದುಕಿಗೆ ಎರವಾದಳು.
ಮೂಡಿದ ಮಿಡಿಗೆ ಅಗಲಿಕೆಯ ಭಯವೆ?
ಜೇನ ಸುರಿಯುವ ಬೊಚ್ಚು ಬಾಯಿಯ ಕೂಸು
ಹೆತ್ತಮ್ಮನ ಗುರುತಿಸಿ ಕೇಕೆ ಹಾಕುವ ಮುನ್ನ
ಒದ್ದು ಅಮ್ಮನ ಎದೆ ಹಾಲು ಹೆಕ್ಕುವ ಮುನ್ನ
ಜಮಾತಿನ ತೀರ್‍ಮಾನ ಹೊರಬಿತ್ತು
“ಕರುಳ ಬಳ್ಳಿಯನ್ನು ಇವನಿಗೊಪ್ಪಿಸಿ
ಮರಳಿ ಹೋಗಬೇಕು ಅವನಲ್ಲಿಗೆ”
ತೀರ್‍ಮಾನ ಕೇಳಿದ ಮೀನಾರಿನ ಮೈಕು
ಅಲ್ಲಾಹು ಎಂದು ಮೌನವಾಯಿತು.
ಭೂಮಿ ಎದೆ ಬರಿಯುವಂತೆ ರೊದಿಸಿದ
ಗುಡಿಯಾಳ ಆರ್‍ತ ಬಿಕ್ಕುಗಳ ಶಬ್ದ
ತಟ್ಟಲಿಲ್ಲವೆ ಜಮಾತಿನ ಹೃದಯಕೆ?
ಭೂಮಿ-ಆಗಸಕೆ, ತಾಯಿ ಮಗುವಿಗೆ
ಹಾಕಬಹುದೇ ಬಹಿಷ್ಕಾರ?
ಕಂಪಿಸಿದ ಗುಬ್ಬಿ ಹೃದಯ ಹಾಲಹಲ
ಕ್ರೌಂಚ ಪಕ್ಷಿಯ ಮೌನ ರೋದನ
ತಟ್ಟಲಾರದೇ ಜಮಾತಿನ ಕಟ್ಟೆಗೆ?
ಹೆಣ್ಣಿನ ಮಾತೃತ್ವ ಆಟದ ವಸ್ತುವೇನೆ?
ನಿಷೇಧದ ಬೇಲಿಗಳ ಕಿತ್ತೆಸೆದು
ಸೊಕ್ಕಿದ ಕೊಕ್ಕುಗಳ ಕತ್ತರಿಸಿ
ಶಕ್ತಿ ಒಗ್ಗೂಡಿಸಿ ಹೊರಗೆ ಬಾ ಗುಡಿಯಾ
ಬದುಕು ಮಾಧ್ಯಮದ ವಿಷಯವಲ್ಲ
ಚಪ್ಪರಿಸುವ ಸುದ್ದಿಯಲ್ಲ.
ಎದ್ದು ಹೇಳುಬಾ ನಿನ್ನದೇ ನಿರ್‍ಧಾರ.
ಕಿಕ್ಕಿರಿದ ಜಮಾತಿನ ಮಧ್ಯೆ
ಸಿಕ್ಕಲಾರರೇ ಒಬ್ಬರಾದರೂ ಸಂತರು
ನಿನ್ನ ನೋವ ಕರಗಿಸಿ
ಸಂತೈಸುವ ಪೈಗಂಬರರು.
*****