ನನ್ನ ಮನೆಯ ನೆತ್ತಿಯ ಮೇಲೆ
ಸೂರ್ಯ ಇನ್ನೂ ಹುಟ್ಟಿರಲಿಲ್ಲ.
ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ
ಚಳಿಯಲ್ಲಿ ನಡುಗುತ್ತ ಮಲಗಿದ್ದ
ಹಸಿವಿನಿಂದ ಚಡಪಡಿಸುತ್ತಿರುವ
ಮಕ್ಕಳಿಗೆ ಹೇಗೆ ಹೇಳಲಿ ನಾನು
ನಮ್ಮ ರಂಜಾನಿನ ಉಪವಾಸ
ಇನ್ನೂ ಮುಗಿದಿಲ್ಲ ಎಂದು.
ಹಾಳಾದ ಚಳಿಗೆ ಮತ್ತಷ್ಟು ಹಸಿವು
ಅಳಬೇಡ ಕಂದ ಇಂದು ಪವಿತ್ರಹಬ್ಬ
ರಂಜಾನಿನ ಪುಣ್ಯದಿನ ನಮಾಜಿಗೆ ಹೋಗು
ಅಲ್ಲಾಹ್ ಬಡವರ ಕೈ ಬಿಡಲಾರ.
ಪುಟ್ಟ ಮಕ್ಕಳು ಪ್ರಾರ್ಥನೆ ಮಾಡಿದರೆ
ಕರುಣಾಮಯನಿಗೆ ಬೇಗ ಮುಟ್ಟುತ್ತದೆ
ಅಳಬಾರದು ಬೇಟಾ ಇಂದು ಪುಣ್ಯದಿನ
ಎದ್ದು ನಮಾಜಿಗೆ ಹೋಗು ಮಸೀದಿಗೆ
ಅಮ್ಮಿ ಹೇಳುವ ಮಾತುಗಳು,
ಕಿವಿಗಪ್ಪಳಿಸಿ ಹಿಂತಿರುಗಿ ಹೋದವು.
ದೇವರು ನಮಗೆ ಬಡವರಾಗಿ
ಹುಟ್ಟಿಸಿದ ಸಿಟ್ಟಿಗೆ ಮುಷ್ಟಿ ಬಿಗಿಯಾದವು.
ತಿಂಗಳುಪವಾಸದ ನಂತರ ಪವಿತ್ರ ಹಬ್ಬ
ಪಕ್ಕದ ಶ್ರೀಮಂತರ ಮನೆಯಿಂದ
ಕರಿದ ಮೀನು, ಚಿಕನ್ನು, ಮಟನ್ನು
ಭಕ್ಷಾನ್ನಗಳ ಘಮಘಮ ವಾಸನೆಗೆ
ಮಕ್ಕಳ ಹಸಿವಿನ ಕಿಚ್ಚು ಹೆಚ್ಚಾಗದಿರಲಿ ರಬ್ಬೆ.
ಗುಡಿಸಲ ಬಾಗಿಲು ಭದ್ರ ಮುಚ್ಚಿದಳು
ದೇವರಲ್ಲಿ ಪರಿಪರಿಯಾಗಿ ಪ್ರಾರ್ಥಿಸಿದಳು.
ನನ್ನ ಮಕ್ಕಳು ನೊಂದಾರು ಪ್ರಭುವೇ!
ಪಕ್ಕದ ಮಕ್ಕಳ ಹೊಸ ಬಟ್ಟೆಗಳು
ಅವರ ಕಣ್ಣಿಗೆ ಬೀಳದಿರಲಿ ರಬ್ಬೇ!
ಯಾಕಾದರೂ ನೀನು ಹಬ್ಬಗಳ ಮಾಡಿದೆ?
ಮಾಡಿದರೂ ಮಾಡಿದೆ ಬಿಡು
ನಮ್ಮನ್ನು ಬಡವರಾಗೇಕೆ ಹುಟ್ಟಿಸಿದೆ?
ಸರ್ವಶಕ್ತ ನೀನಂತೆ, ಒಂದು ಸಲ ನೀನು
ಲೋಕದ ಬಡತನದ ಬೇರುಗಳ ಸಹಿತ
ಬುಡದಿಂದ ಕಿತ್ತೆಸೆಯಬಾರದೇ?
`ನೆರೆಮನೆಯವರು ಹಸಿದಿರುವಾಗ
ಬೀರಿಯುವಂತೆ ತಿನ್ನುವುದು ಪಾಪ’
ಎಂದು ಪೈಗಂಬರರು ಹೇಳುತ್ತಿದ್ದರಲ್ಲವೇ
ಮನುಜ ಮನುಜರ ನಡುವಿನ
ಅಸಮತೆಯ ಗೋಡೆ ಕೆಡವಬಾರದೇ?
ನೋವಿನ ಉಸಿರು ಭಾರವಾದಾಗ
ಬದುಕು ಅಸಹನೀಯವಾದಾಗ
ಆ ಸೃಷ್ಟಿಕರ್ತನಿಗೇ ಕೇಳುತ್ತೇನೆ
ಜಗದಲಿ ಹಬ್ಬಗಳನ್ನೇಕೆ ಮಾಡಿದೆ?
ನೀನು ಹೇಳದಿದ್ದರೆ ನಿನ್ನ ದೇವಲೋಕದಲಿ
ನ್ಯಾಯಕ್ಕಾಗಿ ಜಿಹಾದ್ ಹೂಡುತ್ತೇನೆ
ಹೇಳು ಹಬ್ಬಗಳನ್ನೇಕೆ ಮಾಡಿದೆ
ಬಡತನವನ್ನೇಕೆ ಹುಟ್ಟು ಹಾಕಿದೆ.
*****