ಉಡುಪಿಯ ಅಜ್ಜರಕಾಡಿನ ತಮ್ಮ ಸ್ವಂತ ಮನೆಯಲ್ಲಿ ಸಂಜೀವ ಮಾಸ್ತರು ತಮ್ಮ ಪತ್ನಿಯೊಡನೆ, ತಮ್ಮ ನಿವೃತ್ತ ಜೀವನವನ್ನು ಆರಾಮವಾಗಿಯೇ ಕಳೆಯುತ್ತಿದ್ದರು. ಶಿಕ್ಷಕರಾಗಿದ್ದ ಅವರಿಗೆ ಸುಮ್ಮನಿರುವುದು ಸಾಧ್ಯವಾಗದೆ ಲೆಕ್ಕಮಾಡಿ ಹತ್ತು ಮಕ್ಕಳಿಗೆ ಪಾಠ ಹೇಳುತ್ತಿದ್ದರಾದುದರಿಂದ ಅಜ್ಜರಕಾಡಿನ ಸುತ್ತಮುತ್ತಲಿನವರಿಗೆ ಅವರು ಚಿರಪರಿಚಿತರಾಗಿದ್ದರು. ಸಂಜೆ ಆರರಿಂದ ಏಳೂವರೆಗಂಟೆಯ ತನಕ ಅವರನ್ನು ಅಜ್ಜರಕಾಡಿನ ಮೈದಾನಿನ ಮಧ್ಯದ ಸೀಟಿನಲ್ಲಿ ಮೂರು-ನಾಲ್ಕು ಗೆಳೆಯರೊಡನೆ ಪಟ್ಟಾಂಗ ಹೊಡೆಯುತ್ತಾ ಕುಳಿತಿರುವುದನ್ನು ಕಾಣಬಹುದಾಗಿತ್ತು. ಇದು ನಿತ್ಯದ, ಎಂದೂ ಬದಲಾಗದ ದಿನಚರಿ. ಅಜ್ಜರಕಾಡಿನಲ್ಲಿ ಅಜ್ಜರು ನಡೆಸುವ “ತೆಂಡೆಲ್ ಮೀಟಿಂಗ್.” (ಸುಮ್ಮನೆ ಕೂತು ಮಾತಾಡುವುದಕ್ಕೆ ತುಳುವಿನಲ್ಲಿ ಉಪಯೋಗಿಸುವ ಶಬ್ದ)
ಸಂಜೀವ ಮಾಸ್ತರ ಪತ್ನಿ ಜಯಂತಿ ತೀವ್ರ ವಾತರೋಗದಿಂದ ನರಳುತ್ತಿದ್ದುದರಿಂದ ಅವರಿಗೆ ಮನೆಯ ಕೆಲಸ ಮಾಡಲಾಗುತ್ತಿರಲಿಲ್ಲ. ಹಾಗಾಗಿ ಮನೆಯಲ್ಲಿ ಒಬ್ಬ ಕೆಲಸದವನನ್ನು ಇಟ್ಟುಕೊಂಡಿದ್ದರು. ಅವನು ಅಡುಗೆ ಮತ್ತು ಮನೆಯ ಒಳಗಿನ ಕೆಲಸವನ್ನೆಲ್ಲಾ ಮಾಡಿಕೊಂಡು ಇವರನ್ನೂ ತುಂಬಾ ಪ್ರೀತಿಯಿಂದಲೇ ನೋಡಿಕೊಂಡಿದ್ದ. ಹೊರಗಿನ ಕೆಲಸವನ್ನು ಒಬ್ಬಳು ಮುದುಕಿ ಬಂದು ಮಾಡಿಕೊಂಡು ಹೋಗುತ್ತಿದ್ದಳು. ಯಾವ ತಾಪತ್ರಯಗಳೂ ಇಲ್ಲದೇ ಅವರ ಜೀವನ ಸಾಗುತ್ತಿತ್ತು.
ಸಂಜೀವ ಮಾಸ್ತರರ ಮಕ್ಕಳಲ್ಲಿ ಒಬ್ಬಳು ಅಮೇರಿಕಾದಲ್ಲಿದ್ದಳು. ತುಂಬಾ ಬುದ್ಧಿವಂತೆಯಾಗಿದ್ದ ಅವಳು ಅಲ್ಲಿ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಆಗಾಗ ಊರಿಗೆ ಬಂದು ಹೋಗುವುದೇನೂ ಅವಳಿಗೆ ಸಾಧ್ಯವಿರಲಿಲ್ಲ. ಮಗ ವಿಮಾನ ದಳದಲ್ಲಿದ್ದ. ಇಬ್ಬರೂ ಹೆತ್ತವರ ಖರ್‍ಚಿಗೆ ಹಣ ಕಳುಹಿಸುತ್ತಿದ್ದರು. ನಿವೃತ್ತ ಜೀವನದಲ್ಲಿ ಸಾಮಾನ್ಯವಾಗಿರುವ ಹಣದ ಕೊರತೆಯೇನೂ ಅವರಿಗಿರಲಿಲ್ಲ. ಅವರಿಬ್ಬರೂ ಜತೆಯಾಗಿ, ಒಬ್ಬರಿಗೊಬ್ಬರು ಮಾನಸಿಕ ಸಂಗಾತಿಯಾಗಿ ಸಂತೃಪ್ತಿಯಿಂದ ಜೀವಿಸುವುದನ್ನು ನೋಡುವಾಗ ನೋಡಿದವರಿಗೆ ಸಂತೋಷವಾಗುತ್ತಿತ್ತು.
ಸಂಜೀವ ಮಾಸ್ತರು ಒಂದು ರೀತಿಯಲ್ಲಿ ಸಮಾಜ ಸೇವಾಸಕ್ತರೂ ಆಗಿದ್ದರು. ಕಷ್ಟದಲ್ಲಿದ್ದವರ ನೆರವಿಗೆ ಅವರು ಸದಾ ಸಿದ್ಧರಾಗಿರುತ್ತಿದ್ದರು. ನಮ್ಮ ಹಾಗೂ ಸಂಜೀವ ಮಾಸ್ತರರ ಸ್ನೇಹ ಸುರುವಾದದ್ದೇ ಅವರ ಈ ಸಹಾಯ ಮಾಡುವ ಗುಣದಿಂದ.
ನಾವು ಈ ಊರಿಗೆ ವರ್‍ಗವಾಗಿ ಬಂದಾಗ ನಮ್ಮ ಮಗುವಿಗೆ ಎರಡು ವರುಷ ನಾವು ಇಬ್ಬರೂ ಕೆಲಸಕ್ಕೆ ಹೋಗುವವರಾದುದರಿಂದ ನಮಗೊಂದು ‘ಬೇಬಿ ಸಿಟ್ಟಿಂಗ್’ನ ಅಗತ್ಯವಿತ್ತು. ನಮಗೆ ಸಿಕ್ಕಿದ ಮನೆಯ ಹತ್ತಿರವೇ ಇದ್ದ ಸಂಜೀವ ಮಾಸ್ತರರಿಗೆ ಏನಾದರೂ ಗೊತ್ತಿರಬಹುದೆಂದು ನಾವು ಅವರನ್ನು ಭೇಟಿಯಾಗಿದ್ದೆವು. ನಮ್ಮ ಸಮಸ್ಯೆಯನ್ನು ಕೇಳಿದವರೇ, “ಏನಮ್ಮಾ ನೀನು? ಇಲ್ಲಿ ಹತ್ತಿರದಲ್ಲಿ ಎಲ್ಲೂ ಬೇಬಿ ಸಿಟ್ಟಿಂಗ್ ಇಲ್ಲ. ಅಷ್ಟು ಚಿಕ್ಕ ಮಗುವನ್ನು ಅಲ್ಲೆಲ್ಲಾ ಬಿಡುವುದಕ್ಕಿಂತ ನಮ್ಮ ಮನೆಯಲ್ಲೇ ಬಿಟ್ಟು ಹೋಗು. ನಾನು, ಜಯಂತಿ ಯಾವಾಗಲೂ ಮನೆಯಲ್ಲಿರುತ್ತೇವೆ. ಕೆಲಸದ ಹುಡುಗನೂ ಇರುತ್ತಾನೆ. ನಮಗೂ ಒಂದು ಕಂಪೆನಿಯಾಯಿತು” ಎಂದಿದ್ದರು. ನಾವಿಬ್ಬರೂ ಎಷ್ಟೆಷ್ಟು ರೀತಿಯಿಂದ ಬೇಡವೆಂದರೂ ಕೇಳದೇ ನಮ್ಮ ಅನುರಾಧಾ ಸಂಜೀವ ಮಾಸ್ತರರ ಮನೆಯ ಸದಸ್ಯೆಯಾಗಿದ್ದಳು. ಹೀಗೆ ನಮ್ಮ ಅವರ ಸ್ನೇಹ ಬೆಳೆದಿತ್ತು. ಕ್ರಮೇಣ ನಾವೂ ಅವರ ಮನೆಯ ಸದಸ್ಯರೇ ಆಗಿದ್ದೆವು.
ಒಮ್ಮೆ ನಾವು ಒಂದು ತಿಂಗಳ ರಜೆಯಲ್ಲಿ ನಮ್ಮೂರಿಗೆ ಹೋಗಿ ಬಂದಾಗ ಸಂಜೀವ ಮಾಸ್ತರರ ಮನೆಯಲ್ಲಿ ಒಬ್ಬ ಹೊಸ ಸದಸ್ಯರು ಸೇರಿಕೊಂಡಿದ್ದರು. ಅವರ ಮನೆಗೆ ಬಂದು ಹೋಗುವವರ ಪರಿಚಯ ನಮಗಿತ್ತು. ಇವರಾರು ಅಪರಿಚಿತರು ಎಂದು ಯೋಚಿಸುತ್ತಿರುವಾಗ ಸಂಜೀವ ಮಾಸ್ತರರೇ, “ಈತ ನನ್ನ ಹಳೆಯ ಗೆಳೆಯ ವೀರೇಂದ್ರ ಶಾಲೆ ಬಿಡುವ ತನಕ ನಮ್ಮನ್ನು ಲಂಗೋಟಿ ಗೆಳೆಯರೆಂದೇ ಕರೆಯುತ್ತಿದ್ದರು. ಮತ್ತೆ ಅವನು ಬ್ಯಾಂಕಿಗೆ ಸೇರಿ ದೇಶವನ್ನೆಲ್ಲಾ ಸುತ್ತಾಡಿ ಬಂದ ನಾನು ಮಾಸ್ತರನಾಗಿ ಇಲ್ಲೇ ಉಳಿದು ಬಿಟ್ಟಿದ್ದೆ. ಈಗ ಈತ ನಮ್ಮ ಸಂಸಾರಕ್ಕೆ ಸೇರಿರುವ ಹೊಸ ಸದಸ್ಯ” ಎಂದು ಪರಿಚಯಿಸಿದಾಗ ನಮಗೆ ವಿಚಿತ್ರವೆನಿಸಿತ್ತು.
ದಿನ ಕಳೆದಂತೆ ವೀರೇಂದ್ರರೂ ನಮಗೆ ಪರಿಚಿತರಾಗಿದ್ದರು. ಆತ್ಮೀಯರಾಗಿದ್ದರು. ಅವರು ನಿವೃತ್ತರಾದ ಮೇಲೆ ಅವರಿಗೆ ಪತ್ನಿ ವಿಯೋಗವಾಗಿ ಈಗ ಎರಡು ವರುಷದ ಮೇಲಾಗಿತ್ತು.
ಪತ್ನಿಯ ಮರಣಾನಂತರ ವೀರೇಂದ್ರ ಕೆಲವು ದಿನ ದೊಡ್ಡ ಮಗನ ಜತೆಗಿದ್ದರು. ಅಲ್ಲಿ ಅವರಿಗೆ ಸರಿ ಹೋಗದೇ ವಾಪಾಸು ಬಂದವರು ಮಣಿಪಾಲದಲ್ಲಿ ಮನೆ ಮಾಡಿಕೊಂಡಿದ್ದರು. ಒಬ್ಬ ಅಡುಗೆಯವನನ್ನು ಇಟ್ಟುಕೊಂಡು ಸ್ವಲ್ಪ ದಿನ ತೆಗೆದಿದ್ದರು. ಅವನ ಉಪಟಳ ತಡೆಯಲಾರದೇ ಅವನನ್ನು ಕಳುಹಿಸಿ ಹೊರಗೆ ಹೋಟೇಲಿನ ಊಟ ತಿಂಡಿ ತಿಂದುಕೊಂಡು ದಿನ ದೂಡುತ್ತಿದ್ದರು. ಅವರ ಚಿಕ್ಕಮಗ ದುಬಾಯಿಯಲ್ಲಿದ್ದ. ಮದುವೆಯಾಗಿರಲಿಲ್ಲ. ಅವನು ತಂದೆಯ ಖರ್‍ಚಿಗೆ ತಿಂಗಳು ತಿಂಗಳು ಮೂರು ಸಾವಿರ ರೂಪಾಯಿ ಕಳುಹಿಸುತ್ತಿದ್ದ. ಅವರು ನಿವೃತ್ತಿಯಾಗುವಾಗ ಸಿಕ್ಕಿದ್ದ ಪ್ರಾವಿಡೆಂಟ್ ಫಂಡ್ ಹಾಗೂ ಗ್ರಾಚ್ಯುಟಿಯ ಹಣವನ್ನು ಅವರು ಠೇವಣಿ ಇಟ್ಟುದುದರಿಂದ ತಿಂಗಳು ತಿಂಗಳು ಸುಮಾರು ಎರಡು ಸಾವಿರ ಚಿಲ್ಲರೆ ಬಡ್ಡಿಯೂ ಬರುತ್ತಿತ್ತು.
ಇಷ್ಟೆಲ್ಲಾ ಇದ್ದರೂ ಮನೆಯಲ್ಲಿ ಒಬ್ಬನೇ ಇರುವ ಒಂಟಿತನವನ್ನು ಅವರಿಂದ ಸಹಿಸಲಾಗದೇ ಜೀವನವೇ ಬೇಡವೆನ್ನುವಷ್ಟು ಅವರು ಬೇಸರ ಪಟ್ಟುಕೊಂಡಿದ್ದ ಸಮಯದಲ್ಲಿ ಅವರಿಗೆ ಸಂಜೀವ ಮಾಸ್ತರರ ಭೇಟಿಯಾಗಿತ್ತು. ಗೆಳೆಯನನ್ನು ನೋಡಿದಾಗ ದುಃಖ ತಡೆಯಲಾಗದೇ “ಸಂಜೀವ, ನನಗೊಂದು ಉಪಕಾರ ಮಾಡುತ್ತೀಯ? ಯಾರಾದರೂ ಪೇಯಿಂಗ್ ಗೆಸ್ಟ್ ಥರಾ ನನ್ನನ್ನು ಇಟ್ಟುಕೊಳ್ಳುವವರಿದ್ದರೆ ಹೇಳು, ಹಾಗಾದರೂ ನಾನು ಸಾಯುವವರೆಗೆ ಸುಖವಾಗಿರುತ್ತೇನೆ. ನನಗಂತೂ ಈ ಜೀವನವೇ ಬೇಡವಾಗಿದೆ” ಎಂದಾಗ ಅಪರೂಪಕ್ಕೆ ಸಿಕ್ಕಿದ ಗೆಳೆಯನನ್ನು ನೋಡಿ ಸಂತೋಷವಾಗುವುದಕ್ಕಿಂತ ಅವನ ಕಷ್ಟವನ್ನು ತಿಳಿದು ವಿಪರೀತ ಬೇಸರವಾಗಿತ್ತು.
ಆಗ ಅವರು ಗೆಳೆಯನೊಡನೆ “ವೀರೇಂದ್ರ, ಯಾಕೆ ನೀನು ವೃದ್ಧಾಶ್ರಮಕ್ಕೆ ಸೇರಬಾರದು?” ಎಂದು ಸಹಜವಾಗಿಯೇ ಕೇಳಿದ್ದರು. ಈ ಪ್ರಶ್ನೆಗೆ ಉತ್ತರವಾಗಿ ವೀರೇಂದ್ರ ಒಂದು ದೊಡ್ಡ ಭಾಷಣವನ್ನೇ ಬಿಗಿದಿದ್ದರು.
“ಸೇರಬಹುದು. ಎರಡೋ ಮೂರೋ ಸಾವಿರ ಕೊಟ್ಟರೆ ನಮ್ಮನ್ನು ಒಂದು ವಸ್ತುವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ನನಗೆ ಅಲ್ಲಿಯ ಆ ಕಟ್ಟುನಿಟ್ಟು ಗಂಟೆಗಳ ಮುಳ್ಳಿನ ಜತೆಗೆ ಜೀವಿಸುವ ಜೀವನ ಇಷ್ಟವಿಲ್ಲ. ಒಂದು ವಸತಿ ಗೃಹದಲ್ಲಿ ಜೀವಿಸುವಂತೆ, ಯಾವ ರೀತಿಯ ಆತ್ಮೀಯತೆ ಇಲ್ಲದೆಯೂ ಎಲ್ಲರ ಜತೆಗೆ ಆತ್ಮೀಯತೆಯ ಮುಖವಾಡ ಹಾಕಿಕೊಂಡು ಜೀವಿಸುವ ಕೃತಕ ಜೀವನ ನನಗೆ ಇಷ್ಟವಿಲ್ಲ. ನಮಗೇನು ಮಾಡಬೇಕೋ ಅದನ್ನು ಮಾಡಲಾಗದೆ, ಅವರೇನು ಮಾಡಬೇಕೆಂದು ಬಯಸುತ್ತಾರೋ ಅದನ್ನು ನಮಗೆ ಬೇಡವಾದರೂ ಮಾಡಿಕೊಂಡು ಇರುವುದರಿಂದ ಏನು ಸಂತೋಷ ಸಿಕ್ಕೀತು? ನನಗೆ ವೃದ್ಧಾಶ್ರಮದ ಆರಾಮವೂ ಬೇಕು. ಜತೆಗೆ ನನಗೆ ಬೇಕಾದ ಹಾಗೆ ಜೀವಿಸುವ ಸ್ವಾತಂತ್ರ್ಯವೂ ಬೇಕು. ಅದಕ್ಕೇ ಅಲ್ಲವೇ ನಾನು ಮಗನ ಮನೆಯಿಂದ ವಾಪಾಸು ಬಂದದ್ದು ಅವರವರ ಸಂಸಾರದ ಹೊರೆ ಅವರವರಿಗಿದೆ. ನನ್ನನ್ನು ನೋಡಿಕೊಳ್ಳುವಷ್ಟು ಪುರುಸೋತ್ತು ಅವರಿಗಿಲ್ಲ ಅದು ಅವರ ತಪ್ಪಲ್ಲ. ಈಗಿನ ನಮ್ಮ ಜೀವನದ ರೀತಿಯ ತಪ್ಪು. ವ್ಯವಸ್ಥೆಯ ತಪ್ಪು ಜೀವನ ಸಾಗಿಸಲು ಇಬ್ಬರೂ ದುಡಿಯಬೇಕಾದ ಸಂದರ್‍ಭದಲ್ಲಿ ಅವರವರ ಕೆಲಸಗಳೇ ಅವರವರಿಗೆ ಭಾರವಾಗಿರುವಾಗ, ಅವರ ಮಕ್ಕಳನ್ನೇ ‘ಬೇಬಿ ಸಿಟ್ಟಿಂಗ್’ಗಳಿಗೆ ನರ್ಸರಿಗಳಿಗೆ ತಳ್ಳುವ ಈ ದಿನಗಳಲ್ಲಿ ನಮ್ಮ, ಭಾರ ಹೊರುವುದು ಅವರಿಗೆ ಹೇಗೆ ಸಾಧ್ಯವಾಗುತ್ತದೆ? ಅವರಿಗೆ ಹೊಂದಿಕೊಂಡು ಹೋಗುವುದು ನಮಗೆ ಸಾಧ್ಯವಿಲ್ಲ. ನಾವಿನ್ನೂ ಹಿಂದಿನ ಕಾಲದಿಂದ ಹೊರಬಂದಿಲ್ಲ. ಹೆತ್ತವರನ್ನು ಸಾಕುವುದು ಮಕ್ಕಳ ಕರ್ತವ್ಯವೆಂದು ನಾವು ಹೇಳಿದರೂ ಅವರವರ ಕರ್ತವ್ಯಗಳನ್ನು ನಿಭಾಯಿಸುವುದರಲ್ಲಿ ಅವರು ಯಂತ್ರಗಳಾಗಿರುವಾಗ ನಮ್ಮ ಭಾರ ಹೊರುವ ಹೆಚ್ಚಿನ ಕರ್‍ತವ್ಯ ಅವರಿಗೆ ಬೇಡವಾಗುವುದು ಸಹಜ. ಹೊರೆ ಜಾಸ್ತಿಯಾದಾಗ ಯಾರಾದರೂ ಸರಿ ಅದನ್ನು ಜರುಗಿಸಲೇ ನೋಡುವರಲ್ಲದೇ ಹೆಚ್ಚಿನ ಭಾರದೊಡನೆ ಜಗ್ಗಿಕೊಂಡು, ಬೆಳೆಯುತ್ತಿರುವ ನಾಗರೀಕತೆಯ ನಾಗಾಲೋಟದೊಡನೆ ದೌಡಾಯಿಸಲಾಗದೇ ಹಿಂದೆ ಬೀಳುವುದನ್ನು ಯಾರು ಬಯಸುತ್ತಾರೆ? ನಾವೇ ನಮ್ಮ ಹೊರೆಯನ್ನು ಅವರ ಮೇಲೆ ಹೊರಿಸದಿರುವುದೇ ಸರಿ”
ಸಂಜೀವ ಮಾಸ್ತರರಿಗೆ ಗೆಳೆಯನ ಈ ಭಾಷಣದಿಂದ ತಾವೀತನಕ ಯೋಚಿಸದಿರುವ ಎಷ್ಟೋ ಸತ್ಯಗಳ ದರ್ಶನವಾಗಿ ಚಿಂತನಕ್ಕೆ ಎಡೆಮಾಡಿಕೊಟ್ಟಿತ್ತು. ಅನುಭವಗಳಷ್ಟು ದೊಡ್ಡ ಶಿಕ್ಷಕರು ಬೇರೆ ಯಾರೂ ಇಲ್ಲ.
ಮನೆಗೆ ಬಂದ ಮೇಲೂ ಸಂಜೀವ ಮಾಸ್ತರು ಗೆಳೆಯನ ಮಾತುಗಳನ್ನು ಮೆಲುಕು ಹಾಕುತ್ತಲೇ ಇದ್ದರು. ಇದು ಜೀವನದ ನಗ್ನಸತ್ಯ. ಮಕ್ಕಳು, ಹೆತ್ತವರು ಎನ್ನುವ ಸಂಬಂಧದ ಚೌಕಟ್ಟೇ ಬದಲಾಗುತ್ತಿರುವ ಸತ್ಯ. ಈ ಸತ್ಯವನ್ನು ಒಪ್ಪಿಕೊಳ್ಳದಿದ್ದರೆ ಕೊನೆಯ ಕಾಲದಲ್ಲಿ ನಿರಾಸೆಯನ್ನೇ ಎದುರಿಸಬೇಕಾದೀತು. ಮಕ್ಕಳನ್ನು ಸಾಕುವ ಕರ್ತವ್ಯ ನಮ್ಮದು. ನಾವು ಅನುಭವಿಸಿದ ಒಂದು ಕ್ಷಣದ ಸುಖಕ್ಕೆ ತೆರಬೇಕಾದ ಬೆಲೆ. ನಾವು ಅವರನ್ನು ಹೊತ್ತು ಹೆತ್ತು ಬೆಳೆಸಿದ್ದಕ್ಕೆ ಅವರು ನಮ್ಮನ್ನು ಸಾಕಬೇಕೆಂಬ ಬಯಕೆಯಿಂದ ನಾವು ಅವರ ಮೇಲೆ ನಮ್ಮ ಭಾರ ಹೊರಿಸಿದರೆ ನಾವು ನಮ್ಮ ಕರ್ತವ್ಯವನ್ನು ಸ್ವಾರ್ಥದ ದೃಷ್ಟಿಯಿಂದಷ್ಟೇ ಮಾಡಿರುವೆವು ಎಂದರ್ಥವಾಗುತ್ತದೆ. ಆಗ ತಂದೆ ತಾಯಿ ಎನ್ನುವ ಪವಿತ್ರತೆ ಉಳಿಯುವುದಿಲ್ಲ.
“ವೀರೇಂದ್ರ ಮಕ್ಕಳ ಜತೆಗಿರಲು ಹೋಗಿ ನೋವು ಅನುಭವಿಸಿ ಬಂದುದರಿಂದ ಮಕ್ಕಳ ಮೇಲಿನ ಅವನ ಪ್ರೀತಿಗೆ ಗ್ರಹಣ ಹಿಡಿದಂತಾಗಿದೆ. ನಾವು ಮಕ್ಕಳಿಂದ ದೂರವೇ ಉಳಿದಿರುವುದರಿಂದ ಮಕ್ಕಳ ಮಮತೆಗೇನೂ ಕೊರತೆಯಿಲ್ಲ. ನಮ್ಮ ಮಕ್ಕಳು ಅಪರೂಪಕ್ಕೊಮ್ಮೆ ಬರುತ್ತಾರೆ. ಆಗ ಮನೆಯಲ್ಲಿ ಗೌಜಿ ಗದ್ದಲ ತುಂಬುತ್ತದೆ. ಅವರು ಬಂದು ಹೋದಮೇಲೆ ನಾಲ್ಕು ದಿನ ಬೇಸರವೆನಿಸುತ್ತದೆ. ಮತ್ತೆ ಅದೇ ಜೀವನವಾಗುತ್ತದೆ. ಜಯಂತಿ ಇಲ್ಲದಿದ್ದರೆ ನನ್ನ ಅವಸ್ಥೆಯೂ ವೀರೇಂದ್ರನಂತೆ ಆಗುತ್ತಿತ್ತೇನೋ? ವೀರೇಂದ್ರನಿಗೆ ಜತೆಗಾರ್ತಿಯಿಲ್ಲದೇ ಪಾಪ ಎಷ್ಟೊಂದು ಒಂಟಿತನ ಅನುಭವಿಸುತ್ತಿದ್ದಾನೆ. ಕೊನೆಯ ಕಾಲದಲ್ಲಿ ಪತಿ ಪತ್ನಿಯರು ಹೆಚ್ಚು ಹೆಚ್ಚು ಆತ್ಮೀಯರಾಗುವುದು ಇದಕ್ಕೇ ಇರಬೇಕು. ಈ ಆತ್ಮೀಯತೆಯ ಸಂತೃಪ್ತಿ ನನಗಿದೆ. ವೀರೇಂದ್ರ ಅದರಿಂದ ವಂಚಿತನಾಗಿದ್ದಾನೆ.
‘ವೀರೇಂದ್ರ ಯಾವಾಗಲೂ ತುಂಬಾ ಗಮ್ಮತ್ತಿನ ಮನುಷ್ಯ, ಆಟ, ಊಟ, ತಿರುಗಾಟ, ಗೆಳೆಯರು, ಮಾತುಕತೆ, ತಮಾಷೆ ಎಲ್ಲಾ ಬೇಕಿತ್ತು ಅವನಿಗೆ. ಆದರೆ ಈಗ ಜೀವಿಸುವ ಇಚ್ಛೆಯೇ ಅವನಿಂದ ಮಾಯವಾಗಿದೆ.’
ಗೆಳೆಯನ ಪರಿಸ್ಥಿತಿ ಸಂಜೀವ ಮಾಸ್ತರರನ್ನು ಎರಡು ದಿನ ವಿಪರೀತ ಕಾಡಿತ್ತು. ಯೋಚಿಸಿ ಯೋಚಿಸಿ ಕೊನೆಗೆ ಯಾಕೆ ತಾನೇ ಅವನಿಗೆ ಆಶ್ರಯ ಕೊಡಬಾರದು ಎನ್ನುವ ನಿಲುವಿಗೆ ಅವರು ತಲುಪಿದ್ದರು. ಆದರೆ ಅದಕ್ಕೆ ಜಯಂತಿಯಿಂದ ಒಪ್ಪಿಗೆ ಬೇಕು. ಇದು ತಾನೊಬ್ಬನೇ ನಿರ್ಧರಿಸುವ ವಿಚಾರವಲ್ಲ. ಒಬ್ಬ ಹೊರಗಿನ ವ್ಯಕ್ತಿ ಸದಾ ತಮ್ಮೊಂದಿಗೇ ಇರಬೇಕಾಗಿ ಬಂದಾಗ ಬೇರೆ ಹಲವಾರು ಅನಾನುಕೂಲತೆಗಳು ಎದುರಾಗಬಹುದು. ತಮ್ಮ ಮನೆಯೇನೋ ದೊಡ್ಡದಿದೆ. ಒಂದು ಕೋಣೆಯಲ್ಲಿದ್ದುಕೊಳ್ಳುತ್ತಾನೆ. ಅವನೊಬ್ಬ ಊಟ ಮಾಡಿದರೆ ತಮ್ಮ ಗಂಟೇನೂ ಕರಗಿ ಹೋಗದು. ಆದರೆ ನಮ್ಮ ಏಕಾಂತಕ್ಕೆ ಧಕ್ಕೆಯಾಗುತ್ತದೆ. ಈಗಿನಂತೆ ಸ್ವಚ್ಛಂದವಾಗಿರಲು ಸಾಧ್ಯವಿಲ್ಲವಾಗುತ್ತದೆ. ತನಗೇನೋ ಆತ ಗೆಳೆಯ. ಗೆಳೆಯನಿಗೆ ಉಪಕಾರ ಮಾಡಲು ಹೋಗಿ ಮನೆಯ ಶಾಂತಿ, ಸಮಾಧಾನ ಕೆಡಬಾರದಲ್ಲ?
ಮರುದಿನ ಬೆಳಿಗ್ಗೆ ಉಪಾಹಾರ ಸೇವಿಸುತ್ತಾ ಸಂಜೀವ ಮಾಸ್ತರು ಪತ್ನಿಯ ಮುಂದೆ ತನ್ನ ಮನಸ್ಸಿಗೆ ತೋರಿದ್ದನ್ನು ಬಿಚ್ಚಿಟ್ಟಿದ್ದರು.
“ಜಯಂತಿ, ನನಗೆ ವೀರೇಂದ್ರನನ್ನು ನೋಡುವಾಗ ತುಂಬಾ ಬೇಸರವಾಗುತ್ತದೆ. ಅವನಿಗೆ ಹೆಂಡತಿಯಿಲ್ಲ. ಮಕ್ಕಳಿದ್ದೂ ಇಲ್ಲದಂತಿದ್ದಾನೆ. ಕೊನೆಯ ಕಾಲದಲ್ಲಿ ಎಲ್ಲರಿದ್ದೂ ಯಾರಿಗೂ ಬೇಡದವರಾಗಿರುವುದೆಂದರೆ ತುಂಬಾ ನೋವಿನ ಸಂಗತಿ, ಅವನಿಗೆ ವೃದ್ಧಾಶ್ರಮಕ್ಕೆ ಸೇರಲು ಮನಸ್ಸಿಲ್ಲ. ಅವನಿಗೆ ಮುಖ್ಯವಾಗಿ ಬೇಕಾಗಿರುವುದು ಮೂರು ಹೊತ್ತಿನ ಊಟ, ಎರಡು ಹೊತ್ತಿನ ಟೀ, ಬೇಕಾದಂತೆ ಇರುವ ಸ್ವಾತಂತ್ರ್ಯ ಅದನ್ನು ನಾವು ಅವನಿಗೆ ಯಾವ ಯೋಚನೆಯೂ ಇಲ್ಲದೇ ಕೊಡಬಹುದು. ಆದರೆ ಅವನಿಗೆ ನೆಮ್ಮದಿ ಕೊಡಬೇಕಾದರೆ ನಾವು ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ. ನಿನಗೆ ಮನಸ್ಸಿಲ್ಲದಿದ್ದರೆ ನನ್ನ ಒತ್ತಾಯವಿಲ್ಲ. ಆದರೂ ನನ್ನ ಮನಸ್ಸಿಗೆ ನಾವೇ ಅವನಿಗೆ ಆಶ್ರಯ ಕೊಟ್ಟರೇನು ಎಂದೆನಿಸಿತ್ತು. ಅದನ್ನು ನಿನ್ನ ಮುಂದಿಟ್ಟೆ ನೀನು ಬೇಡವೆಂದರೆ ಬೇಡ.”
ಜಯಂತಿ ಸ್ವಲ್ಪಹೊತ್ತು ಏನೂ ಮಾತಾಡಿರಲಿಲ್ಲ. ಪತಿಯ ಮುಖವನ್ನು ದಿಟ್ಟಿಸಿದಾಗ ಅಲ್ಲಿ ಗೆಳೆಯನಿಗೆ ಸಹಾಯ ಮಾಡಬೇಕೆಂಬ ಮನದಾಳದ ಬಯಕೆ ಪ್ರತಿಬಿಂಬಿಸಿತ್ತು.
‘ನಮ್ಮ ಮಧ್ಯೆ ಮೂರನೆಯವನೊಬ್ಬ ಬಂದಿರುವುದನ್ನು ಅಷ್ಟು ಬೇಗ ಒಪ್ಪಿಕೊಳ್ಳುವುದು ಹೇಗೆ? ಆದರೆ, ನಾಳೆ ನಾನು ಸತ್ತು ಅವರು ಉಳಿದರೆ ಅವರ ಅವಸ್ಥೆಯೂ ಹೀಗೇ ಅಲ್ಲವೇ? ಈಗ ಮಕ್ಕಳು ಪ್ರೀತಿ ತೋರಿಸುತ್ತಾರೆ. ನಾಳೆ ಅವರ ಜತೆಗೇ ಹೋಗಿ ನಿಲ್ಲಬೇಕಾದ ಪರಿಸ್ಥಿತಿ ಬಂದರೆ ಹೀಗೇ ಇರುವರೆಂದು ಹೇಗೆ ನಂಬಲಿ? ಇವರಿಗಂತೂ ಒಬ್ಬರಿಗೇ ಇರುವುದು ಸಾಧ್ಯವೇ ಇಲ್ಲ. ನಾವೀಗ ಒಂದು ಒಳ್ಳೆಯ ಕೆಲಸ ಮಾಡಿದರೆ ನಾಳೆ ನಮಗೂ ಯಾರಾದರೂ ಸಹಾಯ ಮಾಡಿಯಾರು. ಬರಲಿ. ಇವರಿಗೂ ಜತೆಯಾಗುತ್ತದೆ’ ಎಂದು ಅನಿಸಿದಾಗ ಜಯಂತಿ.
“ನೀವು ಎಷ್ಟು ಮೃದು ಹೃದಯಿಗಳೆಂದು ನನಗೆ ಗೊತ್ತು. ಎಷ್ಟು ಬಡ ವಿದ್ಯಾರ್ಥಿಗಳಿಗೆ ನೀವು ಆಶ್ರಯ ಕೊಟ್ಟಿಲ್ಲ? ನನಗೇನೂ ಇದು ಹೊಸತಲ್ಲ. ನೀವು ಒಂದು ಒಳ್ಳೆಯ ಕೆಲಸ ಮಾಡುವಾಗ ನಾನು ಅಡ್ಡಬರಲು ಇಚ್ಛಿಸುವುದಿಲ್ಲ. ಆದರೆ ಅವರು ಇಲ್ಲಿ ಬರುವ ಮೊದಲು ಮಕ್ಕಳ ಹತ್ತಿರ ಒಂದು ಮಾತು ಕೇಳಲಿ, ಮತ್ತೆ ನಾವು ಅವರ ಹಣ ತಿಂದು ಹಾಕಿದೆವು ಎನ್ನಬಾರದು. ಮಕ್ಕಳಿಗೂ ಗೊತ್ತಿರಬೇಕು ಅವರೆಲ್ಲಿದ್ದಾರೆಂದು.”
ಸಂಜೀವ ಮಾಸ್ತರರಿಗೆ ಹೆಂಡತಿಯ ಮಾತು ಕೇಳಿ ತುಂಬಾ ಸಮಾಧಾನವಾಗಿತ್ತು. ಆ ದಿನ ವೀರೇಂದ್ರ ಅಜ್ಜರಕಾಡಿನಲ್ಲಿ ಭೇಟಿಯಾದಾಗ ಕಣ್ಣಲ್ಲಿ ನೀರು ಹಾಕಿಕೊಂಡು, “ಸಂಜೀವ, ನನಗೆ ನಿಜವಾಗಿಯೂ ಬದುಕಲು ಮನಸ್ಸಿಲ್ಲ ನಾನು ಕೈ ಸುಟ್ಟುಕೊಂಡು ಹೊಟ್ಟೆ ತುಂಬಿಸುವುದು ನನ್ನಿಂದ ಸಾಧ್ಯವಿಲ್ಲ. ಹೊಟೇಲಿನ ಊಟ ನನಗೆ ಹಿಡಿಸುವುದಿಲ್ಲ. ಇದಕ್ಕಿಂತ ರೈಲು ಕಂಬಿಯಡಿಗೆ ತಲೆಕೊಟ್ಟು ಸಾಯುವುದು ಮೇಲು” ಎಂದಾಗ ಸಂಜೀವ ಮಾಸ್ತರ ಕಣ್ಣು ತುಂಬಿಬಂದಿತ್ತು.
“ವೀರೇಂದ್ರ, ಅಷ್ಟು ನಿರಾಶನಾಗಬೇಡ, ನಿನ್ನ ಸಮಸ್ಯೆಗೆ ಪರಿಹಾರ ಹುಡುಕಿದ್ದೇನೆ. ನೀನು ಬೇರೆಲ್ಲೂ ಹೋಗಬೇಡ. ನಮ್ಮ ಮನೆಗೆ ಬಂದಿರು. ಆದರೆ ಬರುವ ಮೊದಲು ನಿನ್ನ ಮಕ್ಕಳನ್ನು ಒಂದು ಮಾತು ಕೇಳು.”
ವೀರೇಂದ್ರರಿಗೆ ತನ್ನ ಕಿವಿಯನ್ನು ನಂಬಲಿಕ್ಕೇ ಆಗಿರಲಿಲ್ಲ. ಆಶ್ಚರ್ಯದಿಂದ ಮರಗಟ್ಟಿ ಹೋಗಿದ್ದರು. ಅವರು ಪ್ರತಿಕ್ರಿಯಿಸಬೇಕಾದರೆ ಐದು ನಿಮಿಷಗಳೇ ತಾಗಿದ್ದವು.
“ನಿಜ ಹೇಳುತ್ತೀಯಾ ಸಂಜೀವಾ? ನಿನಗೆ ತೊಂದರೆ ಯಾಗುವುದಿಲ್ಲವೇ?”
“ತೊಂದರೆಯೇನು ಬಂತು. ನಾವಿಬ್ಬರು ತಿನ್ನುವುದನ್ನು ಮೂವರು ಹಂಚಿಕೊಂಡು ತಿಂದರಾಯಿತು. ಜೀವನವೆಂದರೆ ಹಂಚಿಕೊಂಡು ಬಾಳುವುದು ಅಲ್ಲವೇ?”
“ಸಂಜೀವ, ಮಕ್ಕಳನ್ನು ಕೇಳುವ ಅಗತ್ಯವಿಲ್ಲ. ಅವರು ಹಣ ಕಳುಹಿಸುತ್ತಾರೆ ನಿಜ. ಆದರೆ ಹಣವನ್ನೇ ತಿಂದುಕೊಂಡಿರಲು ಸಾಧ್ಯವಿಲ್ಲವಲ್ಲ? ಹಣ ಒಂಟಿತನವನ್ನು ತೊಲಗಿಸುತ್ತಿಲ್ಲವಲ್ಲ?”
ಹೀಗೆ ವೀರೇಂದ್ರ ಸಂಜೀವ ಮಾಸ್ತರರ ಸಂಸಾರದಲ್ಲಿ ಸೇರಿಕೊಂಡಿದ್ದರು. ಸಂಜೀವ ಮಾಸ್ತರರ ಮನೆಗೆ ಬಂದಮೇಲೆ ವೀರೇಂದ್ರ ಮೊದಲಿನ ಹುರುಪು ಪಡೆದಾಗ ಹೆಚ್ಚಿನ ಸಂತೋಷವಾದದ್ದು ಸಂಜೀವ ಮಾಸ್ತರರಿಗೇ. ಅವರಿಬ್ಬರ ಅನ್ನೋನ್ಯತೆಯನ್ನು ಕಂಡು ಜಯಂತಿಗೂ ತಾನು ಈ ವ್ಯವಸ್ಥೆಗೆ ಒಪ್ಪಿಗೆ ಕೊಟ್ಟುದು ಸರಿಯೇ ಆಯಿತೆಂದು ತೃಪ್ತಿಯಾಗಿತ್ತು.
ಒಂದು ತಿಂಗಳು ಕಳೆಯುತ್ತಲೇ ವೀರೇಂದ್ರ ಗೆಳೆಯನ ಕೈಗೆ ಹಣ ಕೊಡಲು ಹೋಗಿದ್ದರು. ಆಗ ಸಂಜೀವ ಮಾಸ್ತರು,
“ವೀರೇಂದ್ರ, ನಾನು ಹಣಕ್ಕಾಗಿ ನಿನ್ನನ್ನು ನಮ್ಮ ಜತೆಗೆ ಇರಿಸಿಕೊಂಡಿಲ್ಲ. ನನಗೆ ಹಣದ ಅಗತ್ಯವೂ ಇಲ್ಲ. ಅಲ್ಲದೇ ನಿನಗೆಂದು ನಾವೇನೂ ಹೆಚ್ಚಿಗೆ ಖರ್ಚುಮಾಡುತ್ತಿಲ್ಲ. ನೀನು ಹಣ ಕೊಟ್ಟು ಗೆಳೆತನದ ಅವಮಾನ ಮಾತ್ರ ಮಾಡಬೇಡ”
“ಹಾಗಲ್ಲ ಸಂಜೀವ, ನನಗೂ ಮಕ್ಕಳು ಹಣ ಕಳುಹಿಸುತ್ತಾರೆ. ನನ್ನ ಉಳಿತಾಯದ ಹಣದ ಮೇಲೆ ಬಡ್ಡಿಯೂ ಬರ್‍ತಿದೆ. ಅದನ್ನು ನಾನು ಖರ್ಚು ಮಾಡಬೇಕಲ್ಲ? ಅದನ್ನೆಲ್ಲಾ ಕೂಡಿಹಾಕಿ ನಾನೇನು ಮಾಡಲಿ?”
ಅದನ್ನು ನಿನಗೆ ಹೇಗೆ ಬೇಕೋ ಹಾಗೆ ಉಪಯೋಗಿಸು. ನನಗೆ ಮಾತ್ರ ನಿನ್ನ ಹಣ ಬೇಡ. ಇನ್ನೆಂದೂ ಆ ಪ್ರಸ್ತಾಪ ತೆಗೆಯಬೇಡ” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದಾಗ ವೀರೇಂದ್ರರಿಗೆ ಏನು ಮಾಡುವುದೆಂದೇ ತಿಳಿದಿರಲಿಲ್ಲ. ಧರ್ಮಕ್ಕೆ ಊಟ ಮಾಡಿ ನಾನು ಹೇಗೆ ಗೆಳೆಯನಿಗೆ ಭಾರವಾಗಿರಲಿ, ಹಣ ತೆಗೆದುಕೊಳ್ಳಲು ಒಪ್ಪದಿದ್ದ ಮೇಲೆ ಮನೆಗೆ ಏನಾದರೂ ತಂದು ಹಾಕಬೇಕೆಂಬ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು.
ಸಂಜೀವ ಮಾಸ್ತರರೇ ವೀರೇಂದ್ರರಿಗೆ ಪರಿಹಾರ ಸೂಚಿಸಿದ್ದರು.
“ವೀರೇಂದ್ರ, ನಿನಗೆ ಹಣ ಖರ್ಚು ಮಾಡಲೇ ಬೇಕೆಂದಿದ್ದರೆ ಒಂದು ಕೆಲಸ ಮಾಡು, ತಿಂಗಳು ತಿಂಗಳು ನಿನಗೆ ಸಾಧ್ಯವಾದಷ್ಟು ಹಣವನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ದಾನಮಾಡು. ಅಲ್ಲಿರುವವರ ಉಪಯೋಗಕ್ಕಾದರೂ ಆಗುತ್ತದೆ.”
“ಅದು ಕೊಡುವಾ. ಆದರೆ ನಾನು ನಿನಗೇನಾದರೂ ಕೊಡಲೇಬೇಕು. ಹಣ ಬೇಡವಾದರೆ ಏನಾಗಬಹುದೆಂದಾದರೂ ಹೇಳು ಮಾರಾಯಾ”
“ನನಗೆ ಏನು ಬೇಕು? ದೇವರ ದಯೆಯಿಂದ ನಾವು ಬದುಕಿರುವವರೆಗೆ ಬೇಕಾಗುವುದೆಲ್ಲಾ ನಮ್ಮ ಹತ್ತಿರ ಇದೆ. ಮತ್ತೇನು ಬೇಕಾಗುತ್ತದೆ?”
“ಹಾಗೆಂದರೆ ಹೇಗೆ ಸಂಜೀವಾ? ನಾನು ತಿಂಗಳಿಗೆ ಮನೆಬಾಡಿಗೆ ಬಾಕಿ ಖರ್ಚೆಂದು ಕಡಿಮೆಯೆಂದರೆ ನಾಲ್ಕು – ಐದು ಸಾವಿರ ಖರ್ಚು ಮಾಡುತ್ತಿದ್ದೆ. ಅದನ್ನು ಈಗ ನಾನು ಯಾವುದಕ್ಕೆ ಬಳಸಲಿ? ದಯವಿಟ್ಟು ಏನಾದರೂ ತಗೋ. ನನಗೂ ಬಿಟ್ಟಿ ಊಟ ಮಾಡುತ್ತಿದ್ದೇನೆಂಬ ಕೊರಗು ಇರುವುದಿಲ್ಲ.”
“ನೀನು ಹಣದ ಸುದ್ದಿ ಎತ್ತಿದರೆ ನನಗೆ ಬೇಸರವಾಗುತ್ತದೆ. ಹಣ ಕೊಟ್ಟು ಇರುವುದಾದರೆ ನೀನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರು. ನಿನ್ನಿಂದ ಹಣ ತಗೊಂಡು ನಾನು ಯಾರಿಗೆ ಗಂಟು ಕಟ್ಟಿಡಬೇಕು?”
ವೀರೇಂದ್ರ ಗೆಳೆಯನ ಮಾತಿಗೆ ಬಾಯಿ ಮುಚ್ಚಲೇಬೇಕಾಗಿತ್ತು. ಆದರೂ ಮನೆಗೆ ಏನಾದರೂ ತಂದುಕೊಡಬೇಕೆನ್ನುವ ಆಸೆ ಮಾತ್ರ ಗಟ್ಟಿಯಾಗಿ ನಿಂತಿತ್ತು. ವೀರೇಂದ್ರ ಸದಾ ಮನೆಯೊಳಗೆ ಸುತ್ತಾಡಿ ಮನೆಯಲ್ಲಿ ಏನು ಇಲ್ಲವೆಂದು ಹುಡುಕಲು ತೊಡಗಿದ್ದರು.
ಸಂಜೀವ ಮಾಸ್ತರರ ಮನೆಯಲ್ಲಿ ಅವರು ಹೇಳಿದಂತೆ ಬೇಕಾದುದೆಲ್ಲಾ ಇತ್ತು. ಏನು ತರಲಿ ಎಂದು ವೀರೇಂದ್ರರು ತಲೆಕೆಡಿಸಿಕೊಂಡಿದ್ದರು.
ಒಂದು ದಿನ ರಾತ್ರಿ ನೀರು ಕುಡಿಯಲೆಂದು ಎದ್ದು ಬಂದವರು ತಣ್ಣಗಿನ ನೀರು ಕುಡಿಯಲೆಂದು ಫ್ರಿಡ್ಜ್‌ನ ಬಾಗಿಲು ತೆಗೆದಾಗ ಸಣ್ಣಗೆ ಶಾಕ್ ಆದಂತೆ ಕೈಗೆ ಮಿರಿಮಿರಿಯಾದ ಅನುಭವವಾಯಿತ್ತು. ಕೆಲಸದ ಹುಡುಗ ಬಾಟಲುಗಳಲ್ಲಿ ನೀರು ತುಂಬಿಟ್ಟಿದ್ದ. ಒಂದು ಬಾಟಲು ತೆಗೆದಾಗ ಅದು ಅಷ್ಟೇನೂ ತಣ್ಣಗಾಗಿರಲಿಲ್ಲ. ಒಳಗೆ ಫ್ರೀಜರ್‌ನ ಬಾಗಿಲು ತೆರೆದು ನೋಡಿದಾಗ ಐಸೂ ಕಟ್ಟಿರಲಿಲ್ಲ. ಏನೋ ಸರಿಯಿಲ್ಲವೇನೋ ಎಂದು ನೀರು ಕುಡಿದು ಮಲಗಿದ್ದರು. ಮಧ್ಯೆ ಎಚ್ಚರವಾಗಿದ್ದರಿಂದ ಕೂಡಲೇ ನಿದ್ದೆ ಬಾರದೆ ಹೊರಳಾಡುತ್ತಿರುವಾಗಲೂ ತಾನು ಗೆಳೆಯನಿಗೆ ಏನಾದರೂ ಕೊಟ್ಟು ಋಣಮುಕ್ತನಾಗಲೇಬೇಕೆಂಬ ಯೋಚನೆ ಕಾಡುತ್ತಿತ್ತು.
ಮರುದಿನ ಬೆಳಿಗ್ಗೆ ಮತ್ತೊಮ್ಮೆ ನೀರು ಕುಡಿಯಲು ಬಾಟಲು ತೆಗೆದಾಗಲೂ ನೀರು ಅಷ್ಟೇನೂ ತಣ್ಣಗಾಗಿರಲಿಲ್ಲ. ಪುನಃ ಫ್ರಿಡ್ಜಿನ ಒಳಗೆಲ್ಲಾ ಪರೀಕ್ಷಿಸಿ ನೋಡಿದಾಗ ಯಾಕೋ ಫ್ರಿಡ್ಜ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೆನಿಸಿತ್ತು. ಹಾಗೆ ನೋಡುತ್ತಿರುವಾಗ ಕಾಳ್ಗತ್ತಲಲ್ಲಿ ಮಿಂಚು ಹೊಡೆದಂತೆ ಅವರಿಗೊಂದು ಯೋಚನೆ ಹೊಳೆದು ಆ ಯೋಚನೆಯಿಂದ ಹೃದಯಕ್ಕೆ ಸಂತೋಷವಾಗಿ ಅವರ ಸಮಸ್ಯೆಗೆ ಪರಿಹಾರ ದೊರಕಿತ್ತು.
ಬೆಳಿಗ್ಗೆ ಉಪಹಾರ ಸೇವಿಸುವಾಗ ಗೆಳೆಯನೊಡನೆ ನಗುತ್ತಾ ಕೇಳಿದ್ದರು: “ಸಂಜೀವಾ, ನಿನ್ನ ಫ್ರಿಡ್ಜ್‌ಗೆ ಎಷ್ಟು ಪ್ರಾಯವಾಗಿದೆ?”
ಗೆಳೆಯನ ಪ್ರಶ್ನೆಗೆ ಆಶ್ಚರ್ಯ ಪಟ್ಟು “ಯಾಕೆ? ಅದರ ಪ್ರಾಯ ಕಟ್ಟಿಕೊಂಡು ನಿನಗೇನಾಗಬೇಕು? ಹತ್ತಿರ ಹತ್ತಿರ ನಲ್ವತ್ತು ವರ್ಷಗಳಾಗಿರಬಹುದು.”
“ಏನೋ ಸರಿಯಾಗಿ ಕೆಲಸ ಮಾಡ್ತಿಲ್ಲವೆಂದು ಅನಿಸಿತು.”
“ಎಲ್ಲೋ ಸಿಲಿಂಡರ್ ಖಾಲಿಯಾಗಿರಬೇಕು. ಅದರ ಗ್ಯಾಸ್ ಹಾಕಿಸಿದರಾಯ್ತು. ಅದು ಒಳ್ಳೆ ಕಂಪೆನಿಯ ಫ್ರಿಡ್ಜ್ ಇನ್ನೂ ನಲ್ವತ್ತು ವರ್ಷ ಉಪಯೋಗಿಸಬಹುದು”
“ಅದ್ದೇಗೆ ಸಾಧ್ಯ ಮಾರಾಯ? ನಮ್ಮಂಥ ಮುದುಕರಿಗೆ ಯಾವುದಾದರೂ ಅಂಗ ಬದಲಾಯಿಸಿದರೆ ನಾವೇನಾದರೂ ಯೌವನ ಪಡೆಯುವುದು ಸಾಧ್ಯವೇ? ಬಿದ್ದು ಹೋಗುವ ಮರಗಳ ಜಾಗದಲ್ಲಿ ಬೇರೆ ಹೊಸ ಸಸಿ ನೆಡಲೇಬೇಕು”
“ಯಾರಿಗೂ ಇನ್ನೊಂದು ಮರದ ಅಗತ್ಯವಿಲ್ಲದ ಮೇಲೆ ಯಾಕೆ ಹೊಸ ಸಸಿ ಬೆಳೆಸಲು ಕಷ್ಟಪಡಬೇಕು?”
“ಯಾರಿಗಾದರೂ ಮುಂದೆ ಉಪಯೋಗವಾಗುವುದಲ್ಲ? ಅದೂ ಅಲ್ಲದೇ ಇದ್ದಷ್ಟು ದಿನ ಬೇಕಾದ ಅನುಕೂಲತೆಗಳೆಲ್ಲಾ ಬೇಕೇ ಬೇಕಲ್ಲ?”
“ಬೇಕು. ಅದಕ್ಕೇ ಹಾಳಾದ್ದನ್ನು ಸರಿಮಾಡಿಸಿದರೆ ಆಯಿತು.”
ಇಬ್ಬರೂ ಮುಂದೆ ಮಾತಾಡಿರಲಿಲ್ಲ. ಸರಿಮಾಡಿಸಿದರಾಯಿತು. ಎಂದು ಸಂಜೀವ ಮಾಸ್ತರು ಯೋಚಿಸಿದ್ದರೆ, ಹೊಸತು ತರಬೇಕು ಎಂದು ವೀರೇಂದ್ರ ನಿಶ್ಚಯಿಸಿದ್ದರು.
ಬೆಳಗ್ಗಿನ ಉಪಾಹಾರ ಮುಗಿಸಿದ ಮೇಲೆ ವೀರೇಂದ್ರ ಮನೆ ಬಿಟ್ಟಿದ್ದರು. ಜಯಂತಿಯನ್ನು ಡಾಕ್ಟರರ ಹತ್ತಿರ ಚೆಕ್‌ಅಪ್‌ಗೆ ಕರೆದುಕೊಂಡು ಹೋಗಬೇಕಾಗಿದ್ದುದರಿಂದ ಸಂಜೀವ ಮಾಸ್ತರೂ ಮನೆಯಿಂದ ಹೊರಬಿದ್ದಿದ್ದರು.
ವೀರೇಂದ್ರ ಊರೆಲ್ಲಾ ಸುತ್ತಿ ಎಲ್ಲಾ ಅಂಗಡಿಗಳಲ್ಲಿರುವ ಪ್ರಿಡ್ಜ್‌ಗಳನ್ನು ನೋಡಿ ವಿಡಿಯೋಕಾನ್‌ರವರ ಎರಡು ಬಾಗಿಲುಗಳಿರುವ ಫ್ರಿಡ್ಜ್‌ನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿ ಅದರ ಬಿಲ್ಲುತೆತ್ತು, ಸಂಜೀವ ಮಾಸ್ತರ ಮನೆಗೆ ತಲುಪಿಸುವಂತೆ ವಿಳಾಸ ತಿಳಿಸಿ ಮನೆಗೆ ಬರುವಾಗ ಅವರಿಗೆ ಮನಸ್ಸಿಗೆ ತುಂಬಾ ತೃಪ್ತಿಯೆನಿಸಿತ್ತು. ಬಂದವರು ಗೆಳೆಯನಿಗೇನೂ ಹೇಳಿರಲಿಲ್ಲ. ಬಂದಮೇಲೆ ಹೇಳಿದರಾಯಿತು ಎಂದು ಯೋಚಿಸಿ ಊಟ ಮಾಡಿ ಗಡದ್ದಾಗಿ ನಿದ್ದೆ ಹೊಡೆದಿದ್ದರು.
ಸಂಜೆ ಸಂಜೀವ ಮಾಸ್ತರು ಹೆಂಡತಿಯ ಜತೆಗೆ ಕೂತು ಟೀ ಕುಡಿಯುತ್ತಿರುವಾಗ ವೀರೇಂದ್ರರು ಅವರ ಜತೆ ಸೇರಿ, “ಡಾಕ್ಟರು ಏನೆಂದರು?” ಎಂದು ವಿಚಾರಿಸಿದಾಗ ಜಯಂತಿ ‘ಏನನ್ನುತ್ತಾರೆ? ಪ್ರಾಯವಾದ ಮೇಲೆ ಬಂದ ಸೀಕಿಗೆಲ್ಲಾ ಪರಿಹಾರವಿದೆಯೇ? ಆದಷ್ಟು ವಾಕಿಂಗ್ ಮಾಡಿ ಲವಲವಿಕೆಯಿಂದಿರಿ ಎಂದರು. ಇವರಿಗೆ ಆಗಾಗ ನನ್ನನ್ನು ಡಾಕ್ಟರಿಗೆ ತೋರಿಸದಿದ್ದರೆ ನಿದ್ದೆಯೇ ಬರೋದಿಲ್ಲ. ಇದೊಂದು ಕರ್ತವ್ಯವೆಂಬಂತೆ ಕಟ್ಟುನಿಟ್ಟಾಗಿ ತೋರಿಸಿಕೊಂಡು ಬತ್ತಾರೆ.’
“ಹೌದು ಅಷ್ಟು ಮಾಡದಿದ್ದರೆ ನಾಳೆ ನೀನು ನನ್ನನ್ನು ಬಿಟ್ಟು ಹೋದರೆ ನನ್ನ ಗತಿ ಕೂಡಾ ವೀರೇಂದ್ರನಂತೇ ಆಗುತ್ತದೆ. ನನ್ನ ಆಯುಷ್ಯ ಮುಗಿಯುವವರೆಗೆ ನೀನಿರಲೇಬೇಕು. ಅದಕ್ಕೇ ಆಗಾಗ ಸರ್ವಿಸ್ ಮಾಡಿಸಿ ನೀನು ಸರಿಯಾಗಿರುವಂತೆ ನೋಡಿಕೊಂಡಿರುವುದು. ವೀರೇಂದ್ರನ ಗತಿ ನನಗೆ ಬರಬಾರದು.”
“ನನಗೇನಾಗಿದೆ ಈಗ ಸಂಜೀವಾ? ನೀನು ನನಗೆ ಆಶ್ರಯ ಕೊಟ್ಟು ನನ್ನ ಕೊನೆಯ ಕಾಲದ ಜೀವನವನ್ನು ಸಲೀಸು ಮಾಡಿರುವೆ. ಮಕ್ಕಳ ಮನೆಯಲ್ಲಿ ನಾನಿಷ್ಟು ತೃಪ್ತಿಯಲ್ಲಿರುತ್ತಿರಲಿಲ್ಲ.”
ಅಷ್ಟರಲ್ಲಿ ಮನೆಯ ಮುಂದೆ ಒಂದು ವ್ಯಾನ್ ಬಂದು ನಿಂತಿತ್ತು. ನಾಲ್ಕಾಳು ಸೇರಿ ಕಡುನೀಲಿ ಬಣ್ಣದ ಪ್ರಿಡ್ಜನ್ನು ಹೊತ್ತುಕೊಂಡು ಮನೆಯೊಳಗೆ ಬರುವುದನ್ನು ನೋಡಿ ಸಂಜೀವ ಮಾಸ್ತರು ಗಡಬಡಿಸಿ ಹೊರಬಂದಾಗ ವೀರೇಂದ್ರರೂ ಅವರ ಜತೆಗೆ ನಗುತ್ತಾ ಹೊರಬಂದಿದ್ದರು.
“ಯಾವ ವಿಳಾಸಕ್ಕೆ ಈ ಫ್ರಿಡ್ಜ್ ತಲಪಿಸಬೇಕು? ನಾವೇನೂ ಹೊಸ ಫ್ರಿಡ್ಜ್ ಖರೀದಿಸಿಲ್ಲ. ವಿಳಾಸ ತಪ್ಪಿರಬೇಕು ತೋರಿಸಿ”
ಸಂಜೀವ ಮಾಸ್ತರು ಅವರನ್ನು ತಡೆದಾಗ ಅವರು, “ಇದೇ ವಿಳಾಸ ಸರ್. ಇವರೇ ಖರೀದಿಸಿದ್ದು” ಎಂದು ವೀರೇಂದ್ರರನ್ನು ತೋರಿಸಿದಾಗ ಸಂಜೀವ ಮಾಸ್ತರರಿಗೆ ವಿಚಿತ್ರವೆನಿಸಿತ್ತು.
“ಯಾಕೆ ನಿನ್ನ ರೂಮಿನಲ್ಲಿ ಇಟ್ಟುಕೊಳ್ಳುವೆಯೇನು? ನಾಳೆ ನಮ್ಮ ಫ್ರಿಡ್ಜ್ ರಿಪೇರಿಯವನು ಬರ್‍ತಾನೆ. ಅದನ್ನೇ ಉಪಯೋಗಿಸಬಹುದಲ್ಲ?”
ಸಂಜೀವ ಮಾಸ್ತರು ಮುಗ್ಧರಾಗಿ ಕೇಳಿದಾಗ ವೀರೇಂದ್ರ ಏನೂ ಮಾತಾಡದೇ ಅದನ್ನು ಸೀದಾ ಊಟದ ಕೋಣೆಗೇ ತಂದಿಳಿಸಿ ಹಳೆ ಫ್ರಿಡ್ಜ್‌ನ್ನು ಬದಿಗೆ ಸರಿಸಿ ಹೊಸತನ್ನು ಅಲ್ಲಿ ಪ್ರತಿಷ್ಠಾಪಿಸಿ ಡೆಲಿವರಿಚಲನ್‌ಗೆ ಸಹಿ ಹಾಕಿ ಬಂದವರನ್ನು ಕಳುಹಿಸಿಕೊಟ್ಟಿದ್ದರು.
ಸಂಜೀವ ಮಾಸ್ತರಿಗೆ ಗೆಳೆಯನ ಉದ್ದೇಶ ಅರ್ಥವಾಗಿತ್ತು, ಋಣಮುಕ್ತನಾಗುವ ಕೆಲಸ ಮಾಡಿದ್ದಾನೆ. ನೊಂದುಕೊಂಡು, “ವೀರೇಂದ್ರ, ಅಂತೂ ನಿನ್ನ ಹಟ ಬಿಡಲಿಲ್ಲ. ಯಾಕೆ ಹೀಗೆ ಮಾಡಿದೆ? ಗೆಳೆತನಕ್ಕೆ ಬೆಲೆ ಕಟ್ಟಿಯೇ ಬಿಟ್ಟೆ.”
“ಛೇ, ಹಾಗೆ ಹೇಳಬೇಡ. ನನ್ನ ಮನೆಗೆ ಒಂದು ಹೊಸ ಫ್ರಿಡ್ಜ್ ತಂದೆನೆಂದು ಎಣಿಸಿಕೋ. ಹಿಂದಿನದ್ದು ಹಾಳಾಗಿತ್ತು. ಎಷ್ಟು ರಿಪೇರಿ ಮಾಡಿದರೂ ಅದು ಅಷ್ಟೇ. ಇದು ನೋಡು ಎಷ್ಟು ಚೆನ್ನಾಗಿದೆ. ಐಸ್ ಕಟ್ಟೋದಿಲ್ಲ. ಆದರೆ ತಣ್ಣಗಾಗುತ್ತೆ. ಈ ಹಳೆಯದನ್ನು ಯಾರಿಗಾದರೂ ಕೊಟ್ಟುಬಿಡು.”
“ನೀನು ಈ ಕೆಲಸ ಮಾಡಿದ್ದು ಸರಿಯಿಲ್ಲ ವೀರೇಂದ್ರ ಇನ್ನೂ ಹೆಚ್ಚೆಂದರೆ ನಾಲ್ಕೈದು ವರ್ಷದಲ್ಲಿ ಸಾಯುವವರಿಗೆ ಅದೇ ಸಾಕಿತ್ತು. ಸಾಯುವಾಗ ಮನೆಯಲ್ಲಿ ಹೊಸ ಸಾಮಾನುಗಳಿದ್ದರೆ ಅನಾವಶ್ಯಕ ವೈಮನಸ್ಸು ಹುಟ್ಟಲು ಕಾರಣವಾಗುತ್ತದೆ. ಅದೂ ಅಲ್ಲದೆ ಜಯಂತಿಗೆ ಹಳೆಯ ವಸ್ತುಗಳ ಮೇಲೆ ವಿಪರೀತ ವ್ಯಾಮೋಹ. ಅದನ್ನು ಯಾರಿಗೂ ಕೊಡೋದಿಲ್ಲ.”
“ಅದಕ್ಕೇನು? ನೀನು ನಿನ್ನ ಮರಣ ಪತ್ರದಲ್ಲಿ ಈ ಫ್ರಿಡ್ಜನ್ನು ವೃದ್ಧಾಶ್ರಮಕ್ಕೆ ನಮೂದಿಸಿ ಬಿಡು ರಗಳೆಯಿಲ್ಲ”
“ಈ ಫ್ರಿಡ್ಜ್‌ಗಾಗಿ ನಾನು ನನ್ನ ಮರಣ ಪತ್ರ ಬದಲಾಯಿಸಬೇಕೇ? ನೀನಂತೂ ಹಟಸಾಧಿಸಿ ಋಣ ಕಳೆದುಕೊಂಡೆ.”
“ಹಟವೇನೋ ಸಾಧಿಸಲಿಲ್ಲ. ಸಂಜೀವ, ನನ್ನ ಹತ್ತಿರ ನನ್ನ ಕೊನೆಯ ಕಾಲದ ಖರ್ಚಿಗೆಂದೇ ಇಟ್ಟ ಹಣವಿದೆ. ಅದನ್ನು ಖರ್ಚು ಮಾಡದೇ ನಾನಾದರೂ ಯಾಕೆ ಕೂಡಿಡಲಿ? ಇದು ನಮ್ಮೆಲ್ಲರ ಉಪಯೋಗಕ್ಕಾಯಿತು. ನಾನು ಬೇಗ ಸತ್ತರೆ ನನ್ನ ನೆನಪಿಗೆ ನಿನ್ನ ಮನೆಯಲ್ಲಿರುತ್ತದೆ.”
ವೀರೇಂದ್ರ ಫ್ರಿಡ್ಜ್ ತಂದು ಹಾಕಿದ ಆರೇ ತಿಂಗಳಲ್ಲಿ ಒಂದು ದಿನ ರಾತ್ರಿ ಮಲಗಿದಲ್ಲೇ ನಿಶ್ಚೇತನರಾಗಿದ್ದರು. ಬೆಳಗ್ಗೆ ಕೆಲಸದವನು ಟೀ ಕೊಡಲು ಹೋದಾಗ ಶಾಂತವಾಗಿ ಮಲಗಿದ್ದ ವೀರೇಂದ್ರರನ್ನು ಎಬ್ಬಿಸಲು ನೋಡಿದಾಗ ಅವರ ತಣ್ಣಗೆ ಕೊರೆಯುತ್ತಿದ್ದ ದೇಹ ಸ್ಪರ್ಶದಿಂದ ಕಂಗಾಲಾಗಿ ಸಂಜೀವ ಮಾಸ್ತರರನ್ನು ಕರೆತಂದಿದ್ದ.
ಕೊನೆಯ ಕಾಲಕ್ಕೆ ಯಾವ ಕಷ್ಟಗಳಿಲ್ಲದೇ ಜೀವ ತೊರೆದ ಗೆಳೆಯನನ್ನು ನೋಡು ಸಂಜೀವ ಮಾಸ್ತರರಿಗೆ ಸಾವಿನಲ್ಲೂ ಸುಖವಿದೆ ಎಂದು ಅನಿಸಿತ್ತು. ಕೂಡಲೇ ಬೆಂಗಳೂರಿನಲ್ಲಿದ್ದ ಅವರ ಮಗನನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಸಂಜೆಯಾಗಬೇಕಾದರೆ ದೊಡ್ಡ ಮಗನ ಸಂಸಾರ ಬಂದಿಳಿದಿತ್ತು. ದುಬೈಯಲ್ಲಿದ್ದವನು ಬರುವುದು ಸಾಧ್ಯವಾಗಿರಲಿಲ್ಲ.
ಮಗ ಸೊಸೆ ಬಂದವರೇ ವೀರೇಂದ್ರರ ಮೇಲೆ ಬಿದ್ದು ರೋದಿಸುವುದನ್ನು ನೋಡಿದಾಗ ಸಂಜೀವ ಮಾಸ್ತರರಿಗೆ ಈ ತೋರಿಕೆಯ ನಾಟಕ ಅಗತ್ಯವಿದೆಯೇ ಎಂದು ಅನಿಸಿದ್ದರೂ ಸುಮ್ಮನಾಗಿದ್ದರು. ಇರುವಾಗ ಸರಿಯಾಗಿ ನೋಡಲಿಲ್ಲ. ಸತ್ತಾಗ ಈ ಗೋಳು.
ಯಾರಿಗೂ ಕಾಯುವ ಅಗತ್ಯವಿಲ್ಲದೇ ಅವಸರದಲ್ಲಿ ಶವಸಂಸ್ಕಾರವೂ ಮುಗಿದಾಗ ಸಂಜೀವ ಮಾಸ್ತರರಿಗೆ ಅನಿಸಿದ್ದು, “ಯಾರು ನೋಡಲಿ ಬಿಡಲಿ, ಸಾವು ತನ್ನಿಂದ ತಾನೇ ಬಂದು ಜೀವನದ ಎಲ್ಲಾ ಜಂಜಾಟಗಳಿಗೂ, ಸುಖ ಸಂತೋಷಗಳಿಗೂ ವಿರಾಮ ಹಾಕೇ ಹಾಕುತ್ತದೆ. ಗೆಳೆಯನಿಗೂ ಭಾರವಾಗದೇ ಜಾಗ ಖಾಲಿಮಾಡಿ ಬಿಟ್ಟ ಪುಣ್ಯಾತ್ಮ”.
ಸಂಜೀವ ಮಾಸ್ತರು ಆ ದಿನ ಮಕ್ಕಳನ್ನು ಅಲ್ಲೇ ಉಳಿಸಿಕೊಂಡಿದ್ದರು. ವೀರೇಂದ್ರರ ಬಟ್ಟೆ ಬರೆಗಳನ್ನು ಯಾರಿಗಾದರೂ ದಾನ ಮಾಡಬಹುದೆಂದು ಅದನ್ನೆಲ್ಲಾ ಒಟ್ಟು ಸೇರಿಸಿ ಸೂಟ್‌ಕೇಸ್‌ನಲ್ಲಿ ತುಂಬಲು ಸೊಸೆ ಮಂಚದ ಅಡಿಯಿಂದ ಸೂಟ್‌ಕೇಸನ್ನು ಎಳೆದು ಅದರ ಬಾಯಿ ತೆರೆದಾಗ ಆಶ್ಚರ್ಯವೆನಿಸುವ ಹಾಗೆ ಅವರ ಬ್ಯಾಂಕ್ ಪಾಸ್ ಪುಸ್ತಕ, ಅವರ ಹತ್ತಿರವಿದ್ದ ಹಣದ ಲೆಕ್ಕವನ್ನೆಲ್ಲಾ ತೆರೆದಿಟ್ಟುಬಿಟ್ಟಿತ್ತು. ಅವರ ಖಾತೆಯಲ್ಲಿ ಇಪ್ಪತ್ತೈದು ಸಾವಿರ ಚಿಲ್ಲರೆ ಹಣವಿತ್ತು. ಜತೆಗೆ ಒಂದು ಲಕ್ಷಕ್ಕೆ ವಿಜಯಾ ಬ್ಯಾಂಕಿನ ವಿಜಯಶ್ರೀ ಯೂನಿಟ್ಟಿನ ಸರ್ಟಿಫಿಕೇಟುಗಳಿದ್ದವು. ಒಂದು ಪರ್ಸಿನಲ್ಲಿ ಸುಮಾರು ಆರು ಸಾವಿರ ಚಿಲ್ಲರೆ ಹಣವಿತ್ತು.
ಮಗ ಪಾಸ್ ಪುಸ್ತಕವನ್ನು ಸಮೀಕ್ಷಿಸಿದಾಗ ಅದರಲ್ಲಿ ತಮ್ಮ ದುಬ್ಬಾಯಿಂದ ಕಳುಹಿಸುತ್ತಿದ್ದ ಹಣ ತಿಂಗಳು ತಿಂಗಳಿಗೆ ಜಮಾ ಆಗುತ್ತಿತ್ತು. ತಾನೂ ಒಮ್ಮೊಮ್ಮೆ ಕಳುಹಿಸುತ್ತಿದ್ದ ಹಣವೂ ಖಾತೆಗೆ ಸೇರಿತ್ತು. ಅದಲ್ಲದೇ ಅವರ ಡೆಪಾಸಿಟ್‌ನ ಬಡ್ಡಿಯೂ ಅದಕ್ಕೆ ಜಮಾ ಆಗುತ್ತಿರುವುದು ಕಂಡುಬಂದಿತ್ತು. ಅವರು ಕಳೆದ ಆರು ತಿಂಗಳಿಂದ ಹೆಚ್ಚಿಗೇನೂ ಹಣ ತೆಗೆದಿರಲಿಲ್ಲ. ತಿಂಗಳು ತಿಂಗಳು ಸಾವಿರ ರೂಪಾಯಿಗಳು ಶಾಂತಿಕೇತನ ವೃದ್ಧಾಶ್ರಮಕ್ಕೆ ಎಂ.ಟಿ. ಯಾಗುತ್ತಿತ್ತು.
ಆರು ತಿಂಗಳ ಹಿಂದೆ ಒಂದೇ ಬಾರಿಗೆ ಹನ್ನೆರಡು ಸಾವಿರ ತೆಗೆಯಲಾಗಿತ್ತು. ಯಾಕೆ ತೆಗೆದಿರಬಹುದೆಂದು ತಲೆ ಕೆಡಿಸಿಕೊಂಡಾಗ ಅವರ ಬ್ಯಾಗಿನಲ್ಲಿ ಸಿಕ್ಕಿದ ವಿಡಿಯೋಕಾನ್ ಫ್ರಿಡ್ಜ್ ತೆಗೆದುಕೊಂಡ ಬಿಲ್ಲು ಉತ್ತರ ಹೇಳಿತ್ತು.
ಮರುದಿನ ಬೆಳಿಗ್ಗೆ ವೀರೇಂದ್ರರ ಸೊಸೆ ಮನೆಯೆಲ್ಲಾ ಸುತ್ತಾಡಿ ಫ್ರಿಡ್ಜನ್ನು ಪತ್ತೆಹಚ್ಚಿ ಕೆಲಸದ ಹುಡುಗನ ಹತ್ತಿರ ವಿಚಾರಿಸಿದಾಗ ಅದನ್ನು ಯಜಮಾನರ ಗೆಳೆಯರೇ ತಂದು ಇಟ್ಟುದುದೆಂದು ಖಾತ್ರಿ ಮಾಡಿಕೊಂಡಿದ್ದಳು.
ವೀರೇಂದ್ರರ ಸಾಮಾನುಗಳನ್ನು ಹಿಡಿದುಕೊಂಡು ಹೊರಡುವಾಗ ಅವರ ಮಗ ಸಂಜೀವ ಮಾಸ್ತರರೊಡನೆ ತಂದೆಯವರು ಒಂದು ಫ್ರಿಡ್ಜ್ ತೆಗೆದುಕೊಂಡ ಬಿಲ್ಲು ಇದೆ. ಅದೇ ಫ್ರಿಡ್ಜಾ? ಅದನ್ನು ನಾವು ತೆಗೆದುಕೊಂಡು ಹೋಗುತ್ತೇವೆ” ಅಂದಾಗ ಸಂಜೀವ ಮಾಸ್ತರರಿಗೆ ಏನೂ ಹೇಳಲಾಗದೇ ನಾಲಗೆ ಮರಕಟ್ಟಿಹೋದಂತಾಗಿತ್ತು. ಅವರು ಹೌದೆಂದು ತಲೆ ಅಲ್ಲಾಡಿಸಿ, ಅಲ್ಲಿಂದೆದ್ದು ಹೊರಗೆ ಹೋದಾಗ ಅಲ್ಲೇ ಇದ್ದ ನನಗೆ ಅದರ ಹಿಂದಿನ ಕಥೆ ಗೊತ್ತಿದ್ದುದರಿಂದ ‘ಅದನ್ನು ಯಾರೂ ಮುಟ್ಟಬೇಡಿ’ ಎಂದು ಚೀರಬೇಕೆನಿಸಿದರೂ ನನ್ನ ನಾಲಗೆಯೂ ಅಲ್ಲಾಡದೇ ಮುಷ್ಕರ ಹೂಡಿತ್ತು.
ಅವರು ಅದನ್ನೆತ್ತಿ ವ್ಯಾನಿಗೆ ಹಾಕಿಸಿಕೊಂಡು ಹೊರಟು ಹೋಗಿದ್ದರು. ಇಷ್ಟು ದಿನ ನೋಡಿಕೊಂಡಿದ್ದುದಕ್ಕೆ ಉಪಕಾರ ಸ್ಮರಣೆಯನ್ನೂ ಮಾಡದೇ, ಒಂದು ವೃದ್ಧಾಶ್ರಮದಿಂದ ತಂದೆ ಸತ್ತಬಳಿಕ ಅವರ ಸಾಮಾನುಗಳನ್ನು ತೆಗೆದುಕೊಂಡು ಹೋಗುವಂತೆ ಹೋದ ಮಗಸೊಸೆಯನ್ನು ಹೃದಯ ಬಿರಿಯುವ ನೋವಿನಿಂದ ನೋಡುತ್ತಾ ಸಂಜೀವ ಮಾಸ್ತರು ಸ್ತಂಭೀಭೂತರಾಗಿ ನಿಂತಿದ್ದರು. ವೀರೇಂದ್ರರಂಥ ನತದೃಷ್ಟ ತಂದೆಯವರಿಗಾಗಿ ಅವರ ಕಣ್ಣಿನಿಂದ ಉರುಳಿದ ನಾಲ್ಕು ಹನಿ ಕಣ್ಣೀರು ಭೂಮಿಗೆ ಸೇರಿಹೋಗಿತ್ತು. ಜಯಂತಿ ಕಲ್ಲು ಗೊಂಬೆಯಾಗಿ ನಿಂತಿದ್ದರು.
ವೀರೇಂದ್ರರ ಖಾತೆಯಲ್ಲಿದ್ದ ಹಣ ತೆಗೆಯುವ ಪ್ರೊಸೀಜರ್ ಕೇಳಲೆಂದು ಮಗ ಅವರ ಖಾತೆಯಿದ್ದ ಬ್ಯಾಂಕಿಗೆ ಹೋದಾಗ ಅಲ್ಲಿಯ ಬ್ರಾಂಚ್ ಮೆನೇಜರ್, “ವೀರೇಂದ್ರ ನಮಗೆಲ್ಲಾ ತುಂಬಾ ಆತ್ಮೀಯರಾಗಿದ್ದರು. ಅವರ ಮರಣದ ಸುದ್ದಿ ತಿಳಿದು ನಮಗೆಲ್ಲಾ ತುಂಬಾ ಬೇಸರವಾಗಿದೆ. ಅಂದಹಾಗೆ ಅವರು ನಮ್ಮ ಸೇಫ್ ಕಸ್ಟಡಿಯಲ್ಲಿಡಲು ಒಂದು ಸೀಲು ಮಾಡಿದ ಕವರು ಕೊಟ್ಟಿದ್ದರು. ನಾನು ಸತ್ತಮೇಲೆ ಮಗ ಬಂದಾಗ ಕೊಡಿ ಅಂದಿದ್ದರು. ತೆಗೆದುಕೊಂಡು ಹೋಗಿ” ಎಂದು ಆ ಕವರನ್ನು ತರಿಸಿಕೊಟ್ಟಾಗ, ಮಗ ಆಗಲೇ ಅದನ್ನು ಒಡೆದು ಓದಿದ್ದ.
ಅದು ವೀರೇಂದ್ರರ ರಿಜಿಸ್ಟರ್ ಮಾಡಿದ್ದ ವಿಲ್ಲಿನ ಪ್ರತಿಯಾಗಿತ್ತು. ಅದನ್ನೋದಿದವನಿಗೆ ನಾಲಗೆಯ ದ್ರವವೆಲ್ಲಾ ಆರಿಹೋದಂತಾಗಿ ಮುಖವೆಲ್ಲಾ ಬಿಳಚಿಕೊಂಡಾಗ ಪತ್ನಿ ಅವನಿಂದ ಕಸಿದುಕೊಂಡು ಅದರ ಮೇಲೆ ಕಣ್ಣಾಡಿಸಿದ್ದಳು.
ಅದರಲ್ಲಿ ಅವರ ಒಂದು ಲಕ್ಷದ ವಿಜಯಶ್ರೀ ಯೂನಿಟ್ಟಿನ ಬಗ್ಗೆ ಬರೆದಿತ್ತು. ಅದರಲ್ಲಿದ್ದ ಸಂಪೂರ್ಣ ಹಣವನ್ನು ಶಾಂತಿನಿಕೇತನ ವೃದ್ಧಾಶ್ರಮಕ್ಕೆ ದಾನವಾಗಿ ಅದರಲ್ಲಿ ನಮೂದಿಸಲಾಗಿತ್ತು.
*****
(೧೯೯೬)