ಮನ ಬಯಸುತಿದೆ
ಕಂಗಳು ತವಕಿಸುತಿವೆ
ಸಮಾಜದ ಮಾನ ಸಂಮಾನಕೆ
ನಿನ್ನಾ ಹುಡುಕಿದೆ
ಅಗಣಿತ ತಾರಾ ಮಂಡಲಗಳ ನಡುವೆ
ಚೆಲುವು ಮುದ್ದಿನ ರಚನೆಯೇ
ಹೃದಯೋಕ್ತಿಯನು ನುಡಿಯುತ
ಮಾಡಿದೆ ನೀ ಎನ್ನ ಮರುಳ
ನಿನ್ನಾ ಚಿತ್ರವೇ ಮನ ಮನದ ಪುಟದೊಳು
ಕ್ಷಣ ಕ್ಷಣಕು ಬಿಂಬಿಸಿ ಕಾಡುತಿಹುದು
ಹರಿವ ನೀರ ಕಲಕಲ ತರಂಗದೊಳು
ನೀನ್ನಾ ದನಿಯಲಿ ತೇಲಿ ತೇಲಿ ಬರುತಿಹುದು
ದಿವ್ಯ ಸ್ವರೂಪ ತಾಣದಲಿ
ಈ ಜಗವು ಮುಳುಗಿರಲು
ಹಿಡಿತವಿಲ್ಲದ ಈ ಮನ
ಆಸೆಗಳ ತುಂಬಿದ ಕಣಜ
ಹಾತೊರೆಯುತಿದೆ ಏಕಾಂತವನು
ಬಿರುಸಾದ ನುಡಿ ಮಾತುಗಳಿಲ್ಲದೇ
ಎನ್ನ ಜೀವನ ರಥಕೆ ಸಾರಥಿಯಾಗುಬಾ
ನೆಲ ಮುಗಿಲು ಒಂದು ಮಾಡು ಬಾ
ನನ್ನ ಬದುಕ ಹರುಷಕೆ
ಬೊಗಸೆ ತುಂಬ ತಾ ನಿನ್ನಾ ಪ್ರೀತಿಯ
ನೀನಿಲ್ಲದ ಈ ಮನ ಬಳೆ ಸದ್ದಿಲ್ಲದ ಕೋಣೆ
ಕ್ಯಾಷ ಇಲ್ಲದ ಚಕ್ಕು
ಎನ್ನ ಖಾತೆಯಲ್ಲೆಂದೂ
ನಿನ್ನ ಪ್ರೀತಿ ಕರುಣೆಯ ಜಮವಿರಲಿ
*****
ದಿನಾಂಕ : ೨೪-೧೨-೧೯೯೯ರ ಸಾಗರದ ಮಣ್ಣಿನ ವಾಸನೆ ವಾರಪತ್ರಿಕೆಯಲ್ಲಿ ಪ್ರಕಟ