ಸಂಜೆಗಾಳಿಗೆ ಜಳಕ ಮಾಡಿಸೆ
ಹನಿತು ಮಳೆ ಹೊಳೆಯೋಡಿತು
ಬಾನ್ ಬೆಸಲೆ ಶಶಿ ನೋಡಿ ನಗುತಿರೆ
ತಿರೆಗೆ ತಂಗದಿರಾಯಿತು.
ಮುಗಿಲ ರೆಂಬೆಯ ಮೇಲೆ ಮಿಂಚಿನ
ಹಕ್ಕಿ ರೆಕ್ಕೆಯ ಕೆದರುತ
ಹವಣಿಸಿದೆ ಉಡ್ಡೀನ ಲೀಲೆಗೆ
ಚಂದ್ರಲೋಕವ ಬಯಸುತ.
ಕಪ್ಪೆ ಜೀರುಂಡೆಗಳು ಮೇಳದಿ
ಜಪಿಸುತಿವೆ ಬಲ್ ಮಂತ್ರವ
ಅದರ ಮಹಿಮೆಯೊ ಎನ್ನೆ ತೋರುತ
ಸುತ್ತ ದೃಶ್ಯದ ತಂತ್ರವ.
ಓರೆಯಾದೀ ಸೊದೆಯ ಬೋಗುಣಿ
ಸುರಿಯುತಿಹ ಬೆಳುದಿಂಗಳ
ಕುಡಿದು ಮದವೇರಿಹುದೊ ಪುರವೆನೆ
ದೀಪವೆಸೆದಿವೆ ಚಂಚಲ.
ವಿಶ್ವಮೋಹನನುಸಿರು ಮಿಡಿದೆ-
ನ್ನ ಹಂಗೋಳದ ಬದ್ಬುದ
ಚಿತ್ರದಂಚಿನೊಳವನ ಮಾಯೆಯ
ಮೆರಸುತಿದೆ ಬಹು ವಿಧ ವಿಧ.
*****