ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ-
ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ;
ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ-
ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ!
ನನಸೆಂದು ತೋರಿ ಹಾರೈಸಿದುದು ಕನಸಾಗೆ,
ಕನಸು ಕನ್ನಡಿಯ ಗಂಟೆಂದೆನಲೊ, ಕಣಸೆಂದು
ಹಿಗ್ಗಿ ನುಗ್ಗಲೊ, ಜೀವ ತಾನಪೂರ್‍ವವ ಕಂಡು
ಸಂಕೋಚ ವಿಸ್ತಾರದಲ್ಲಿ ತೇಂಕಾಡುವದು.
ನೇತ್ರ ಪಲ್ಲವಿಗೆ ಭುಲ್ಲಯಿಸಿರುವ ಮುಗ್ಧ ಮಾ-
ಧುರ್‍ಯವೇ! ಕನ್ನಿಕೆಯ ಕಾಲುಂದುಗೆಯ ಅಂದ-
ದೊಳು ಕುಣಿಸದಿರು ಬಗೆಯ; ನಲ್ಲ ನಿನ್ನೊಳಗೆ ಅನು-
ರಾಗಿಯಿರಬಹುದು, ನಿನ್ನನು ಹುಡುಕಿ ನಾಳೆ ಬರ-
ಬಹುದು, ಬಹನು. ಅರಸನ ಕಂಡ ಪುರುಷನ ಮರೆತೆ
ನೋಡು. ಕಾಮಿನಿಯೆ! ಅಡಿಯಾಗು, ವಾಹನವಾಗು.
*****