ಈ ಗಿಣಿಯೆ ಆ ಗಿಣಿಯೆ
ಯೇ ಗಿಣಿಯೆ
ಕಡು ಕೆಂಪಿನ ಕೊಕ್ಕಿದೆಯೆ
ಹರಳಿನ ಕಣ್ಣಿದೆಯೆ
ಆಚೀಚೆಗೆ ಹೊರಳಿದೆಯೆ
ಕೊಂಕುವ ದುಂಡನೆ ಕತ್ತಿದೆಯೆ
ಈ ಗಿಣಿಯೆ ಆ ಗಿಣಿಯೆ
ಯೆ ಗಿಣಿಯೆ
ಎಲ್ಲೆಲ್ಲೂ ಗಿಣಿಯೆ
ಚಿನ್ನದ ಕಣಿಯೆ
ಈ ಕೋಗಿಲೆ ಆ ಕೋಗಿಲೆ
ಯೇ ಕೋಗಿಲೆ
ಎಲೆಮರೆ ಹೂವಾಗಿ
ಕುಹೂ ಕುಹೂ ಕೂಗಾಗಿ
ಯಾರನು ಕರೆಯುವುವು
ಈ ಇಂಥ ನಸುಕಿನಲಿ
ಈ ಕೋಗಿಲೆ ಆ ಕೋಗಿಲೆ
ಯೇ ಕೋಗಿಲೆ
ಎಲ್ಲೆಲ್ಲೂ ಕೋಗಿಲೆ
ಸಂಗೀತದ ಸೆಲೆ
ಈ ಮಲ್ಲಿಗೆ ಆ ಮಲ್ಲಿಗೆ
ಯೇ ಮಲ್ಲಿಗೆ
ಬಿಳಿಯೆಂದರೆ ಬೆಳ್ಳಂಬಿಳಿ
ಬಾ ಎಂದರೆ ಎಲ್ಲರ ಬಳಿ
ದಾರಿ ತುಂಬ ಸುಗಂಧ ಚೆಲ್ಲಿ
ಕಾಯುವುವು ಚೆಲುವೆಯರ
ಈ ಮಲ್ಲಿಗೆ ಆ ಮಲ್ಲಿಗೆ
ಯೇ ಮಲ್ಲಿಗೆ
ಎಲ್ಲೆಲ್ಲೂ ಮಲ್ಲಿಗೆ
ಮುಟ್ಟಿದರೂ ಮೆಲ್ಲಗೆ
ಈ ಮಂಜು ಆ ಮಂಜು
ಯೇ ಮಂಜು
ಮರಗಿಡ ತೊಯ್ದಂದು
ಇಬ್ಬನಿ ಬಿದ್ದಂದು
ಮನೆ ಮಾಡಿನ ಹೊಗೆ ಹೊರಟ ವೇಳೆ
ಜೇಡನ ಬಲೆ ಮುತ್ತಿನ ನೆಲೆ
ಪ್ರತಿ ಹುಲ್ಲಿಗೆ ಮಣಿಮಾಲೆ
ಈ ಮಂಜು ಆ ಮಂಜು
ಯೇ ಮಂಜು
ಎಲ್ಲೆಲ್ಲೂ ಮಂಜು
ಬಿಳಿ ಹತ್ತಿಯ ಹಿಂಜು
*****