ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು.
ತಾಯಿ ಗಿಡದ ಹೃದಯ ಕಂಪಿಸಿ ನಡುಗಿತು. ಉದರಿದ ಎಲೆಗಳನ್ನು ಅಟ್ಟಿತು ಬೆನ್ನುಗಾವಲಿಗೆ.
“ಹಕ್ಕಿಗಳಿಗೆ ಹಾರಿ ಹೋಗಿ ಹೂವಿನ ಪಾಡೇನಯಿತೆಂದು ತಿಳಿದು ಬನ್ನಿ ಎಂದು ಬೇಡಿಕೊಂಡಿತು. ಹೂವಿನ ಗಂಧಕ್ಕೆ ಗಾಳಿಯ ಮನ ಸೋತಿತು. ಗಾಳಿಯ ಪ್ರೇಮ ಸುಳಿಯಲ್ಲಿ ಹೂವು ಸಿಲುಕಿತು. ಬಹುದೂರ, ಬಹುದೂರ ರಾಜಕುಮಾರಿ ಹೂವಿನೊಡನೆ ಗಾಳಿಕುದರೆ ಏರಿ ಸಾಗಿತು. “ಗಾಳಿ, ನೀ ನನ್ನ ಕೈ ಬಿಡುವುದಿಲ್ಲ ಅಲ್ಲವೆ?” ಎಂದು ಹೂ ಮೆಲ್ಲಗೆ ಕೇಳಿತು. “ನನ್ನ ಹೀಗೆ ಕನಸಿನ ಲೋಕದಲ್ಲಿ, ಆಗಸದ ನಕ್ಷತ್ರದ ಹಾದಿಯಲ್ಲಿ ಕರದೊಯ್ಯುವಿಯಾ? ಪ್ರಿಯಾ, ನಿನ್ನನೆಂದೂ ಬಿಟ್ಟಿರಲಾರೆ” ಎಂದಿತು ಹೂವು.
ಗಾಳಿಗೆ ಮೈ ಉಬ್ಬಿಹೋಯಿತು. ತನ್ನ ಸಮಾನರಾರು ಇಲ್ಲವೆನಿಸಿತು. ಹೆಮ್ಮೆಯಿಂದ ಹೂವಿಗೆ ಹೇಳಿತು.
“ನಿನಗೆ ಮೋಡ ಬೇಕೆ? ಸೂರ್‍ಯ ಬೇಕೆ? ಚಂದ್ರ ಬೇಕೆ? ಮಿಂಚು ಬೇಕೇ? ಮಳೆ ಬೇಕೆ? ಏನಾದರು ಕೂಡಬಲ್ಲೆ” ಎಂದು ಎದೆ ಉಬ್ಬಿ ಹೇಳಿತು.
ಹೂವು ಹೃದಯ ತುಂಬಿ ಹೇಳಿತು,
“ನನಗೆ ನೀನಿರೆ ಮತ್ತೇನು ಬೇಕು ಹೇಳು”, ಎಂದಿತು. ಗಾಳಿ ತನ್ನ ಪ್ರತಾಪ ತೋರಲು ಭೋರೆಂದು ಬೀಸಿತು.
ಹೂವಿಗೆ ಝೂಲೀ ಬಂತು. ಗಾಳಿಯ ಅಪ್ಪುಗೆ ಕತ್ತು ಹಿಚಿಕಿದಂತಾಯಿತು. ಹೃದಯ ನಡುಗಿತು. ಕಣ್ಣು ಕಟ್ಟಿತು. ಒಂದು ಕ್ಷಣದಲ್ಲಿ ಬೆಟ್ಟ ಗುಡ್ಡದ ಮೇಲೆ ದೊಪ್ಪನೆ ಬಿದ್ದಿತು. ಹೂವು ಕಣ್ಣು ತೆರೆದು ನೋಡಿತು. ಕೆಳಗೆ ಗಿರಿ ಕಂದರ. ಅಲ್ಲಿ ತಾಯಿ ಗಿಡ, ಉದರಿದ ಎಲೆಗಳು, ಹಕ್ಕಿ ಬಳಗ ಎಲ್ಲ ಸೇರಿ ಕಾತುರದಿಂದ ಹೂವಿನ ಬರುವಿಗಾಗಿ ಕಾಯುತ್ತ ಕಣ್ಣೀರಿಡುತ್ತಿದ್ದವು. ಏನೂ ತೋಚದೆ ಹೂವು ಜಲಪಾತದಿಂದ ಧುಮಿಕಿಬಿಟ್ಟು ಗಿಡದ ಮಡಿಲು ಬಂದು ಸೇರಿತು. ಗಿಡದ ತುಂಬಾ ಇಬ್ಬನಿ ತುಂಬಿದ ಅಶ್ರುಗಳು ಹೂವನ್ನು ಸ್ವಾಗತಿಸಿದವು.
*****