ನನ್ನ ಹಾಡಿಗದೊಂದು ನಿಲುವಂಗಿ ಹೊಲಿದೆ
ಹಳೆಪುರಾಣವ ಬಳಸಿ
ಬುಡದಿಂದ ತುದಿಗೆ,
ಹೊಲಿದೆ ಬಣ್ಣದ ಜರಿಕಸೂತಿ ಹೆಣಿಗೆ.
ಯಾರೋ ಪೆದ್ದರು
ನಿಲುವಂಗಿ ಕದ್ದರು,
ತಮ್ಮದೇ ಎನ್ನುವಂತೆ ಅದ ತೊಟ್ಟು ಮೆರೆದರು
ಲೋಕದೆದುರು;
ಚಿಂತಿಲ್ಲ ಹಾಡೇ, ತೊಡಲಿ ಅವರೇ,
ಬೆತ್ತಲೆ ನಡೆವ ಕೆಚ್ಚೆ ಹೆಚ್ಚಿನದು ಅಲ್ಲವೇ?
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಐರ್‌ಲೆಂಡಿನ ಪುರಾಣಕಥೆಗಳನ್ನು ಬಳಸಿಕೊಂಡು ಏಟ್ಸ್ ಅನೇಕ ಕವನಗಳನ್ನು ಬರೆದ. ಬೇರೆ ಕವಿಗಳು ನಾಚಿಕೆಗೇಡನ್ನುವ ರೀತಿಯಲ್ಲಿ ಅದನ್ನು ಅನುಕರಿಸತೊಡಗಿದರು. ಇನ್ನು ಅಂಥ ಅಲಂಕಾರಾತ್ಮಕ ಶೈಲಿಯನ್ನು ಬಳಸದೆ ದಿಟ್ಟವಾದ, ಪ್ರಾಮಾಣಿಕವಾದ, ಹೆಚ್ಚು ನೇರವಾದ ಶೈಲಿಯಲ್ಲಿ ಬರೆಯುವುದಾಗಿ ಕವಿ ಹೇಳುತ್ತಾನೆ.