ತನ್ನಾಳ ಅಗಲ ಶಕ್ತಿ
ತಿಳಿಯದಿವರು
ದಡಗಳ ಕಟ್ಟಿ
ನನಗೇ ಮಿತಿಯೊಡ್ಡುವರೇ?
ತೀರಗಳಾಚೆಯ ಬದುಕಿಗೆ
ತೆರೆಯೆಳೆಯುವರೇ?
ರೋಷಾವೇಶದಿ ಹೂಂಕರಿಸಿ
ಕಡಲು
ದೈತ್ಯಾಕಾರದ ತೆರೆಗಳನ್ನೆಬ್ಬಿಸಿ
ದಡಕ್ಕೆ ಬಡಿದು
ಕಣ್ಣರಳಿಸಿ
ಏನಿದೆ ಇಲ್ಲಿ
ಬರೀ ರಸ ಹೀರಿ ಒಗೆದ ಕಸ
ಬೇಡೆಂದು ನಾನೇ ಒತ್ತರಿಸಿದ
ಒಡೆದ ಖಾಲಿ ಕಪ್ಪೆಚಿಪ್ಪು?
ಇದ ನೋಡಲು ತೀರಕೆ
ಬಂದನೇ ಬೆಪ್ಪು?
ನನ್ನೊಳಗಿನೊಳ ಕೋಣೆಯಲಿ
ಅದೆಷ್ಟು ಹವಳ ಮುತ್ತು!
ನನಗಷ್ಟೇ ಗೊತ್ತು
ನನ್ನ ಅಪೂರ್ವ ಶಕ್ತಿ
ಎಲ್ಲ ಶೂನ್ಯಕೂ ಮುಕ್ತಿ!
ಇದ್ದಕ್ಕಿದ್ದಂತೆ
ಅರಿವು ಮೂಡಿ
ಒಳಸರಿದು
ತನ್ನಾಳದಾಳಕೆ ಇಳಿಯುವಾಗ
ನಾರದ ಗಾಳಿಯ ಗಾಳಿಮಾತು
ನಕ್ಷತ್ರಿಕ ಸೂರ್ಯನ ಸುಳ್ಳುಮಾತು
ಮಾಯಾವಿನಿ ಭೂಮಿಯ
ಭರವಸೆಯ ನುಡಿಕೇಳಿ
ಮತ್ತೆ ರೋಷ ಉಕ್ಕುಕ್ಕಿ
ತನ್ನೊಳಹೊರಗಿನ ಬಗೆಗೆಲ್ಲಾ
ತನಗೇ ತಿಳಿದಿದ್ದರೂ
ಅದೇ ಹೊರಧುಮ್ಮಿಕ್ಕುವ
ಶಾಂತವಾಗಿ ಒಳ ಮೆಲ್ಲನೆ
ಸರಿಯುವ,
ಮತ್ತೆ ಸಿಟ್ಟೇರಿ ಭೋರ್ಗರೆವ
ಹುಚ್ಚರಾಟ
ಈ ಬೆಪ್ಪು ಕಡಲಿಗೆ!
*****