ಶತ ಶತಮಾನಗಳಿಂದ
ಅದೇ ದಡ
ಅದೇ ಕಡಲು
ಕಡಲ ಸಿಟ್ಟಿಗೆ
ಮತ್ತೆ ಮತ್ತೆ
ಹಲ್ಲೆಗೊಳಗಾಗುವ
ದಡದ ಒಡಲು.
ಕಬಂಧ ಬಾಹುಗಳ ಚಾಚಿ
ದಡವನೇ ಬಾಚಿ
ನುಂಗುವ ಹುನ್ನಾರ ಕಡಲಿನದು
ದೈತ್ಯ ಕಡಲಲೆ
ಎಷ್ಟಾದರೂ ತಟ್ಟಲಿ
ಹೇಗಾದರೂ ಮುಟ್ಟಲಿ
ಮತ್ತೆ ಮತ್ತೆ ಬೆನ್ನಟ್ಟಲಿ
ಒಂದಿಷ್ಟೂ ಬೇಸರಿಸದೆ
ಮೌನದಲಿ ನಿಂತು
ಎಲ್ಲ ಸಹಿಸುವ
ನಿರ್ಲಿಪ್ತ ನೀತಿ ದಡದ್ದು
ಕಡಲ ಕ್ರೌರ್ಯ ಕಡಲಿಗೆ
ದಡದ ಸಹನೆ ದಡಕ್ಕೆ
ಕಡಲು ಸೊಕ್ಕಿ ಭೋರ್ಗರೆದು
ಮತ್ತೆ ಮತ್ತೆ
ದಡವನಪ್ಪಳಿಸುತ್ತದೆ
ಏನಾದರೇನು? ಎಂತಾದರೇನು?
ದಡ ತಟಸ್ಥ ನಿಲ್ಲುತ್ತದೆ.
ನೋಡಿದೂ ಮುಗಿಸಿಬಿಡುವೆನೆಂಬ
ಠೇಂಕಾರ ಕಡಲಿನದು
ಎಷ್ಟು ನೋವಾದರೇನು?
ಪ್ರತಿಯೊಂದು ರಾತ್ರಿಗೂ
ಒಂದು ಹೊಸ ಬೆಳಗಿಲ್ಲವೇ?
ಮತ್ತ ಅರಳುವೆನು
ಎಂಬ ಆಶಾವಾದ
ಸೋತು ನಿಂತ ದಡದ್ದು!
*****