ಎತ್ತ ಸಾಗಿದೆ ಈ ಬದುಕು
ಇದಕ್ಕಿಲ್ಲ ಕಿಂಚಿತ್ತು ದೈವ ಬೆಳಕು
ಹಗಲು ರಾತ್ರಿಗಳ ಚಂಚಲ ಮನದತ್ತ ಸಾಗಿ
ತನ್ನ ಮರೆತು ಕೆದುರುತ್ತಿದೆ ಹುಳಕು
ತನು ಇದು ದೈವ ಮಂದಿರ
ಇದನು ಗುಡಿಸಿ ಪವಿತ್ರ ಗೊಳಿಸು
ಬಹಿರ್‍ಮುಖ ಮನವ ಎಳೆದು ತಂದು
ಆತ್ಮ ಜತೆಗೂಡಿ ಶಿವನ ಪ್ರತಿಷ್ಠಾಪಿಸು
ವಿಷಯ ಸುಖಗಳದತ್ತ ವಾಲದಿರು
ಹೃದಯ ಭಾವಗಳ ಆರಾಧಿಸು
ಎದೆಯ ಗೂಡಿನಲಿ ಆತ್ಮ ದೇವ
ಅವನ ಪೂಜಿಸಿ ನಿತ್ಯ ವಿರಾಜಿಸು
ಸಂಸಾರ ಸಾಗರ ಬಲು ಭಾರಿ
ಎಳೆಯುತ್ತಿದೆ ನಿನ್ನ ಬಾರಿ ಬಾರಿ
ಬದುಕು ಮಾಡುವದಷ್ಟೇ ಛಲವಿರಲಿ
ಪರಮಾತ್ಮನ ಕಾಣುವ ಬಲವಿರಲಿ
ಕ್ಷಣವೂ ಬಿಡದೆ ದೇವ ಧ್ಯಾನಿಸು
ಅವನ ಮೂರುತಿ ನಿತ್ಯ ಆರಾಧಿಸು
ಯಾವ ಕ್ಷಣವೂ ಆಗಲಿದೆ ಪ್ರಭುದರ್‍ಶನ
ಮಾಣಿಕ್ಯ ವಿಠಲನಿಗೆ ಕಾತರಿಸು
*****