ಪ್ರತಿಯೋರ್ವ ಮಾನವನಲ್ಲಿ ತೀರಾ ಅವಶ್ಯವಾಗಿ ಇರಲೇಬೇಕಾದ ಸದ್ಗುಣಗಳಲ್ಲಿ ‘ಕ್ಷಮಾಗುಣ’ ಅತ್ಯಂತ ಪ್ರಮುಖವಾಗಿದೆ. ‘ಕ್ಷಮೆ’ ನಮ್ಮಲ್ಲಿದ್ದರೆ ಅದೊಂದು ನಮ್ಮ ಆದರ್ಶಕ್ಕೆ ಇಂಬಾಗಲು ಸಾಧ್ಯ. ನಿತ್ಯ ಬಾಳಿನಲ್ಲಿ ಕ್ಷಮಾಗುಣವೊಂದನ್ನು ಇಟ್ಟುಕೊಂಡು ಬಾಳಿದರೆ ನಮ್ಮನ್ನು ತೀವ್ರವಾಗಿ ದ್ವೇಷಿಸುವವರನ್ನು ನಾವು ಕ್ಷಮಿಸಬಹುದಾಗಿದೆ. ನಮ್ಮ ಕ್ಷಮೆ ನಮ್ಮ ಉತ್ತಮ ಬಾಂಧವ್ಯಕ್ಕೆ ಸರಪಳಿಯಾಗುತ್ತದೆ.
‘ಕ್ಷಮಾಗುಣವೇ ಕವಚ, ಕೋಪವೇ ಶತ್ರು, ಸ್ನೇಹಿತನೇ ದಿವ್ಯೌಷಧಿ. ದುರ್ಜನನೇ ಕ್ರೂರ ಸರ್ಪ,’ ವೆಂಬುದು ಸುಭಾಷಿತ ಹೇಳುತ್ತದೆ. ಭೃಗು ಮಹರ್ಷಿ ಶ್ರೀ ಮನ್ನಾರಾಯಣನಿಗೆ ಎದೆಗೆ ಒದ್ದಾಗಲೂ ಕ್ಷಮಿಸುತ್ತಾನೆ. ಶ್ರೀ ಕೃಷ್ಣ ಪೂತನಿಯನ್ನು ಸಂಹರಿಸಿ ಅವಳಿಗೆ ಮುಕ್ತಿಯನ್ನು ದಯಪಾಲಿಸುತ್ತಾನೆ. ಕ್ಷಮೆ ನಮ್ಮೆಲ್ಲರ ಉದಾತೆಗೆ ಸಾಕ್ಷಿಯಾಗುತ್ತದೆ. ಬಾಳಿನಲ್ಲಿ ಯಾರ ಹತ್ತಿರ ಕ್ಷಮೆಯ ಗುಣವಿಲ್ಲವೋ ಅಂಥವರು ಆ ಗುಣವನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳು ಪುಟ್ಟ ಪುಟ್ಟ ಕಾರಣಕ್ಕೂ ತಪ್ಪು ಮಾಡುತ್ತವೆ. ಆಗ ಆ ಚಿಣ್ಣರಿಗೆ ಸಮಾಧಾನದಿಂದ ತಿದ್ದಬೇಕೆ ವಿನಃ ಅವರಿಗೆ ಶಿಕ್ಷೆ ವಿಧಿಸಬಾರದು. ಇನ್ನೊಬ್ಬರ ತಪ್ಪುಗಳ ಬಗ್ಗೆ ಕಂಡು ಅವರನ್ನು ನಾವು ಕ್ಷಮಿಸಿದಾಗ ಅವರ ಹೃದಯದಲ್ಲಿ ನಮಗಾಗಿ ಉನ್ನತ ಸ್ಥಾನ ಕಾಯ್ದಿರುತ್ತದೆ. ಮತ್ತೆಂದೂ ಅಂತಹ ತಪ್ಪುಗಳು ಪುನಃ ಅವರು ಮಾಡದೆ ಇರುತ್ತಾರೆ.
ನಮ್ಮ ದಾರ್ಶನಿಕರು, ಸಂತರು, ರಾಜಕೀಯ ಸಂತರು ಕ್ಷಮೆಯನ್ನು ರೂಢಿಸಿಕೊಂಡಿದ್ದರು. ಗಾಂಧೀಜಿಯವರಲ್ಲಿ ಅಗಾಧವಾದ ಕ್ಷಮಿಸುವ ಗುಣವಿತ್ತು. ಇನ್ನೊಬ್ಬರ ತಪ್ಪು ತಿದ್ದಲೂ ತಾವೇ ಉಪವಾಸ ಮಾಡುವ ಮೂಲಕ ಕಷ್ಟ ಅನುಭವಿಸುತಿದ್ದರು.
ಏಸು ಸ್ವಾಮಿಗಳು ಶಿಲುಬೆಗೆ ಏರುತ್ತಿರುವಾಗಲೂ ತನ್ನನ್ನು ಶಿಲುಬೆಗೆ ಹಾಕಿದವರಿಗೆ ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡರು. ‘ಸ್ವರ್ಗದಲ್ಲಿರುವ ತಂದೆಯೇ ಇವರನ್ನು ಕ್ಷಮಿಸು, ತಾವೇನು ಮಾಡುತ್ತಿರುವೆವೆಂದು ಅರಿಯದ ಇವರು ಮುಗ್ಧರು’ ಎಂದು ದೇವರಲ್ಲಿ ಮೊರೆ ಇಟ್ಟರು.
ಮಹಾರಾಷ್ಟ್ರದ ಸಂತ ಶ್ರೀ ಏಕನಾಥ ಮಹಾರಾಜರು ಗೋದಾವರಿ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಇವರ ಸಹನೆ ಪರೀಕ್ಷಿಸುವ ನಿಟ್ಟಿನಲ್ಲಿ ಓರ್ವ ದುಷ್ಕರ್ಮಿ ಇವರ ಮೇಲೆ ಪದೇ ಪದೇ ಉಗುಳಿದರೂ ಪುನಃ ಪುನಃ ನದಿಯಲ್ಲಿ ಮಿಂದು ಬರುವುದು ಕಂಡು ಆ ದುಷ್ಟ ವ್ಯಕ್ತಿ `ತನ್ನಿಂದ ತಪ್ಪಾಗಿದೆ’ ಎಂದು ಏಕನಾಥರ ಪಾದಕ್ಕೆರಗಿದನು. ಆಗ ಸಂತರು ನಕ್ಕು, ನಿನ್ನಿಂದ ನನಗೆ ಇಂದು ಒಂದು ನೂರಾ ಒಂದು ಸಲ ಗಂಗೆಯಲ್ಲಿ ಸ್ನಾನ ಮಾಡುವ ಯೋಗಾಯೋಗ ಕೂಡಿ ಬಂತು. ನೀನೇ ಶ್ರೇಷ್ಠ ಎಂದು ಕ್ಷಮಿಸಿದಾಗ ಆ ದುರುಳನ ಕಂಗಳಲ್ಲಿ ನೀರಾಡಿತ್ತು. ಮತ್ತು ಅವನೆಂದೂ ಮುಂದಿನ ದಿನಗಳಲ್ಲಿ ಕೆಟ್ಟ ಕಾರ್ಯಗಳನ್ನು ಮಾಡದೇ ಜೀವನ ಸಾರ್ಥಕಪಡಿಸಿಕೊಂಡನು. ಅಂತೆಯೇ ಕ್ಷಮೆಯ ಗುಣ ಶ್ರೇಷ್ಠವಾಗಿದೆ. ಅಸಾಧಾರಣ ಶಕ್ತಿ ಇದೆ. ಕ್ಷಮೆ ಇರುವವರ ಮನಸ್ಸು ಸದಾ ಶಾಂತಿಯಿಂದ ತುಂಬಿರುತ್ತದೆ. ಇನ್ನೊಬ್ಬರ ಕೇಡಾಗಲಿ, ಕೆಟ್ಟ ಚಿಂತನೆಯಾಗಲಿ ಮಾಡಲಾರರು. ಪ್ರಕೃತಿಯಲ್ಲಿ ಎಲ್ಲ ಕಡೆಗೂ ಕ್ಷಮೆಯೇ ತುಂಬಿಕೊಂಡಿದೆ.
ನಿತ್ಯ ಬಾಳಿನಲ್ಲಿ ಸಣ್ಣ ಪುಟ್ಟ ತಪ್ಪುಗಳು ಹೆರವರಿಂದ ಮದುವೆಯ ಸಮಾರಂಭಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ನಡೆದರೆ ಅವುಗಳನ್ನು ಕ್ಷಮಿಸುವ ಉದಾತತೆ ನಮ್ಮಲ್ಲಿರಬೇಕು.
ಸ್ವಾಮಿ ಚೈತನ್ಯರೊಂದು ಕಡೆ ಇತರರ ತಪ್ಪುಗಳನ್ನು ದೊಡ್ಡ ದನಿಯಿಂದ ಹೇಳುವೆ. ‘ನಿನ್ನ ತಪ್ಪುಗಳನ್ನು ಸದಾ ಮುಚ್ಚಿಡಲು ಯತ್ನಿಸುತ್ತಿ ಮೊದಲು ನಿನ್ನ ತಪ್ಪುಗಳನ್ನು ಇತರರ ಮುಂದೆ ಹೇಳಿ ಕ್ಷಮೆ ಕೇಳು’ ಎನ್ನುತ್ತಾರೆ. ಅಂತಲೇ ನಮ್ಮ ತಪ್ಪುಗಳ ಬಗ್ಗೆಯೂ ಪರಿಜ್ಞಾನವಿರಬೇಕು. ಇಂಥ ತಪ್ಪುಗಳ ಕ್ಷಮಿಸುವ ಔದಾರವಿರಬೇಕು. ಪ್ರಕೃತಿಯಲ್ಲಿ ಕ್ಷಮಿಸುವ ಗುಣ ವಿರುವುದರಿಂದಲೇ ಭೂತಾಯಿ ಎಲ್ಲರ ಅನ್ಯಾಯ, ಅತ್ಯಾಚಾರ, ಪಾಪಗಳನ್ನು ಸಹಿಸಿಕೊಳ್ಳುತ್ತಾಳೆ. ಅಂತಲೇ ಅವಳಿಗೆ ಕ್ಷಮಯಾ ಧರಿತ್ರಿ’ ಎಂದು ಕರೆದರು. ಹೀಗಿರುವಾಗ ಮತ್ತೆ ನಮ್ಮ ಬದುಕಿಗೆ ಇನ್ನೊಂದು ಉದಾಹರಣೆ ಬೇಕೆ!
*****