ಮಗೂ
ಯಾವುದೇ ಕಾರಣಕ್ಕೂ
ಮೂಗು ಉದ್ದ
ಬೆಳೆಯೆಬಿಡಬೇಡ
ಸೀದಿದ್ದು, ಸಿಟ್ಟಿದ್ದು, ಕೆಟ್ಟಿದ್ದು
ವಾಸನೆ ಬಡಿದರೆ ಮೂಗಿಗೆ
ಮೂಗು ಮುಚ್ಚಿಕೋ
ಮೂಲ ಹುಡುಕ ಹೋಗಬೇಡ.
ಇವರು ಬೆಳಕಿನ ಮಂದಿ
ಸೂರ್ಯನೇ ಇವರ ದೊಂದಿ
ಕೆಟ್ಟ ಕುತೂಹಲಕ್ಕೆ.
ದಿಟ್ಟಿಸಿ ನೋಡಬೇಡ
ಪ್ರಖರ ಬೆಳಕಿಗೆ ಸುಟ್ಟುಹೋದೀಯಾ
ನೋಡಿದರೂ ನೋಡದಂತಿರುವುದೇ
ಜಾಣರ ಲಕ್ಷಣ
ಕೈ ತೋರಿಸಿ ಆಗಬೇಡ ಅವಲಕ್ಷಣ.
ಉಪ್ಪು, ಹುಳಿ, ಕಾರ
ಸಮವಿಲ್ಲವೆಂದು ಗೊಣಗಬೇಡ
ನಾಲಿಗೆ ನಿನ್ನದೇ
ರುಚಿ – ಅರುಚಿ
ಬಡಿಸುವವನ ಹಕ್ಕು
ಟೀಕಿಸಲು ನಿನಗೆಂಥಾ ಸೊಕ್ಕು.
ಮುಚ್ಚಳಗಳಿಲ್ಲದ ಕಿವಿಗೆ
ಏನೂ ಬಂದುಬೀಳುತ್ತದೆ
ಬರಿಗಾಳಿ, ಧೂಳು, ಹಾಳು – ಮೂಳು
ಬೇಕೋ – ಬೇಡವೋ
ಬಂಧಿಸಿ ಓಳಗೇ ಇರಿಸು
ಹೊರ ಹಾರಿ ಹೋಗದಂತೆ ಎಚ್ಚರವಹಿಸು
ಮಗು ಇಲ್ಲಿ
ತಿಳಿದೂ ತಿಳಿಯದವರಂತಿರಬೇಕು
ಇದ್ದರೂ ಇರದಂತಿರಬೇಕು
ಬದುಕಿಯೂ ಸತ್ತಂತಿರಬೇಕು!
*****