ಉಧೋ! ಉಧೋ! ಏಳಿರೆನ್ನು!
ಇದೋ! ಇದೋ! ಎದ್ದೆವೆನ್ನು!
ಎಲ್ಲು ಇಲ್ಲ ದೇವರು.
ನಾವೆ ನಮ್ಮ ದೇವರು.
ತಾಳಬೇಕು,-ಬಾಳಲು.
ಸಹಿಸಬೇಕು,-ಆಳಲು.
ಬಿನ್ನವಿಸಲು,- ಕೊಡುವದಿಲ್ಲ !
ಗರ್‍ಜಿಸೆ-ಕೊಡದಿರುವದಿಲ್ಲ !
ಹಣಕಾಸೆಳೆ ಬೈಲಿಗೆ.
ಕೈಯ್ಯ ಹಚ್ಚು ಧೈಲಿಗೆ.
ಹಣದ ಮೇಲೆ ನಿಂತ ಕಲೆ,-
ಮರೆ ಮೋಸದಿ ಒಗೆದ ಬಲೆ.
ಹಣವು ತಂದ ಚೆಲುವು-ಹೆಣ !
ದೇಶಕಿರುವ ದಾಸ್ಯವ್ರಣ,
ಸುಟ್ಟು ಬಿಡೂ! ಬಿಡೂ! ಬಿಡು!
ಮುಂದೆ ಮುಂದೆ ಹೆಜ್ಜೆಯಿಡು !
ಆಳು ನಾವು-ಜೋಳದಾಳು,
ಕುಡಿವೆವು ಕಣ್ಣೀರ ಕಾಳು,
ಧರ್‍ಮವೆ ಮನೆತುಂಬ ಹೊಗೆ,
ಶ್ರದ್ದೆ ನಮ್ಮ ಹುಗಿವ ಹಗೆ,
ಹಿಂದಿರುವದು ಹಿಂದೆಯಿತ್ತು
ಇಂದು ಮಾತ್ರ ಸಿಡಿಲು ಬಿತ್ತು.
ಊದು ಕಹಳೆ, ಹೊಡೆ ನಗಾರಿ,-
ನಾಳೆ ಬಾಳ್ವೆಯೆಂದು ಸಾರಿ !
ಮನೆ ಮನೆಯಲಿ ಹೊನ್ನು ನಾಳೆ.
ಮನೆಮನೆಯಲಿ ಚೆಲುವು ನಾಳೆ.
ನಾಳೆ ವಿದ್ಯೆ, ನಾಳೆ ಬೆಳಗು.
ನಾಳೆ ಜ್ಯೋತಿ ಹೊರಗು ಒಳಗು.
ಇಂದು ಬಾಳಿದೆಲ್ಲ ಹಾಳು.
ತಿರುಗ ಮುರುಗ ಬರಿಯ ಗೋಳು.
ನಾಳನಾಳದಲ್ಲಿ ನಾಳೆ.
ತುಂಬಿ ಬರಲು,- ಬಹುದು ವೇಳೆ :
ಊದು ಕಹಳೆ ಹೊಡೆ ನಗಾರಿ,-
ನಾಳೆ ಬಾಳ್ವೆಯೆಂದು ಸಾರಿ !
*****