ಸಾರ್ಥಕ ಗ್ರಂಥ ನನ್ನೂರು ನನ್ನವ್ವ

ಸಾರ್ಥಕ ಗ್ರಂಥ ನನ್ನೂರು ನನ್ನವ್ವ

‘ನನ್ನೂರು ನನ್ನವ್ವ’ ಡಾ ಭತಮುರ್ಗೆ ಚಂದ್ರಪ್ಪರವರು ಪ್ರಕಟಿಸಿದ ವಿಶಿಷ್ಟ ಗ್ರಂಥ. ಡಾ. ಭತಮುರ್ಗೆರವರು ತಮ್ಮ ಪಾಲಕರ ಕುರಿತಂತೆ ಜೀವನ ಗಾಥೆಯನ್ನು ಬಿಳಿ ಹಾಳೆಗಳ ಮೇಲೆ ಭಟ್ಟಿ ಇಳಿಸಿದ ಈ ಗ್ರಂಥ ನಿಜವಾಗಿಯೂ ಅನನ್ಯ.

ಸುಮಾರು ೨೪೮ ಪುಟಗಳು ಹೊಂದಿರುವ ಶ್ರೀ ಶ್ರೋ. ಬ್ರ ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠ ಬೀದರ ಇವರಿಗೆ ಅರ್ಪಿಸಿದ ಸುಂದರವಾಗಿ ಮುದ್ರಿಸಿಕೊಂಡು ಓದುಗರ ಕಣ್ಣರಳಿಸಲು ಕೈಗಳ ಬೆರಳಗಳ ಮೇಲೆ ನಲಿದಾಡುತ್ತಿದೆ ಈ ಕೃತಿ.

ಈ ಹೊತ್ತಿಗೆ ಮೂರು ಭಾಗಗಳಲ್ಲಿ ವಿಂಗಡಿಸಿಕೊಂಡು ಮೊದಲನೆಯ ಭಾಗದಲ್ಲಿ ನನ್ನೂರು ನನ್ನ ಜನ, ಭಾಗ ಎರಡರಲ್ಲಿ ‘ನನ್ನವ್ವ’ ಹಾಗೂ ಮೂರನೆ ಭಾಗದಲ್ಲಿ `ಒಲವು ಸ್ನೇಹ ಪ್ರೇಮ’ ಹೀಗೆ ಒಂದು ಐತಿಹಾಸಿಕ ದಾಖಲೆ ರೂಪದಲ್ಲಿ ಇದು ಅಚ್ಚಾಗಿ ಬೆಳಗಿದೆ.

ಡಾ. ಭತಮುರ್ಗೆರವರಿಗೆ ತನ್ನ ಊರು ತನ್ನ ಜನರ ಬಗ್ಗೆ ಅತ್ಯಂತ ಪ್ರೀತಿ ಕಾಳಜಿ ಇದೆ. ಪುಟ ತಿರುವುತ್ತಿರುವಂತೆ ಮೊದಲನೆ ಭಾಗದಲ್ಲಿಯೇ ಲೇಖಕರ ತಂದೆ ತಾಯಿಗಳ ಸುಂದರ ಚಿತ್ರ ಶ್ರೀ ಕೇತಕಿ ಸಂಗಮೇಶ್ವರ ದೇವಸ್ಥಾನ ಝಿರಾ ಸಂಗಮದಲ್ಲಿ ನಿಂತಿದ್ದು ಕ್ಲಿಕಿಸಿ ಓದುಗರ ಮನಸ್ಸಿಗೆ ಖುಷಿ ಕೊಡುವ ಹಾಗೆ ಪುಸ್ತಕದ ಪ್ರಾರಂಭದಲ್ಲಿಯೇ ಅಚ್ಚುಗೊಳಿಸಿದ್ದಾರೆ.

ಈ ಮೊದಲನೆಯ ಭಾಗದಲ್ಲಿ ಬರಹಗಾರರು ತಮ್ಮೂರಾದ ಗೋಧಿ ಹಿಪ್ಪರಗಾದ ಹೆಸರಿನ ಮಹತ್ವವನ್ನು ಓದುಗರಿಗೆ ತಿಳಿಸಿದ್ದಾರೆ. ಗೋಧಿ ಧಾನ್ಯ ಜಾಸ್ತಿಯಾಗಿ ಬೆಳೆಯುವ ಕಾರಣಕ್ಕಾಗಿ ಈ ಗ್ರಾಮಕ್ಕೆ ಗೋಧಿ ಪುರ್ಗಿ, ಗೋಧಿ ಹಿಪ್ಪರ್ಗಿ, ಗೋಧಿ ಹಿಪ್ಪರ್ಗಾ ಎಂದು ಕರೆಯುವ ವಾಡಿಕೆಯಾಗಿದೆ ಎನ್ನುತ್ತಾರೆ.

ಲೇಖಕರ ತಮ್ಮ ಬಾಲ್ಯದ ಸಿಹಿ ಅನುಭವಗಳನ್ನು ಇಲ್ಲಿ ಬಿತ್ತರಿಸುತ್ತಾರೆ. ಅಂದಿನ ದಿನಗಳಲ್ಲಿ ಮಾದಪ್ಪ ಗಾದಗಿಯವರ ಚಹಾ ಹೋಟಲ, ನರಸಿಂಗ್ ಮಾಳೆಗಾಂವ ಹಾಗೂ ಧೂಳಯ್ಯ ಸ್ವಾಮಿಗಳ ಕಿರಾಣಿ ಅಂಗಡಿಗಳು ಗ್ರಾಮದಲ್ಲಿದ್ದು ಅವುಗಳೆ ಗ್ರಾಮದವರಿಗೆ ಸಂಜೀವಿನಿಯಾಗಿದ್ದವು. ಬೇರೆ ಬೇರೆ ಗ್ರಾಮಗಳಿಂದ ಈ ಗ್ರಾಮಕ್ಕೆ ಕಸಬುಗಾರರು ಬಂದು ಈ ಹಳ್ಳಿಯ ಜನತೆಯ ಸಾಮಾನ್ಯ ಆಸೆಗಳನ್ನು ಪೂರೈಸುತ್ತಿದ್ದರು ಗ್ರಾಮಕ್ಕೆ ಸಾರಿಗೆ ಸಂಚಾರ ವ್ಯವಸ್ಥೆ ಇರಲಿಲ್ಲ. ಆದರೆ ಕೆಲವು ವರ್ಷಗಳ ನಂತರ ‘ಆರತಿ ಸರ್ವಿಸ’ ಖಾಸಗಿ ಬಸ್ಸು ಈ ಗ್ರಾಮದ ಸಮೀಪ ಹಣಾದಿ ದಾರಿಗೆ ಬಂದು ಹೋಗತ್ತಿದ್ದವು. ಆದರೆ ಇವುಗಳಿಂದಲೂ ಜನರಿಗೆ ತೃಪ್ತಿ ಇರಲಿಲ್ಲ . ಮಳೆ ಅಧಿಕವಾದರಂತೂ ಹೊರಹೋಗುವುದು ಕಷ್ಟದ ಮಾತು. ಕ್ರಿ. ಶ. ೨೦೧೦ ರಲ್ಲಿ ಮಳೆ ಅಧಿಕವಾದಾಗ ನಾಲ್ಕು ತಿಂಗಳ ಕಾಲ ಮಕ್ಕಳು ಶಾಲೆಗೆ ಪರೀಕ್ಷೆಗೂ ಹಾಜರಾಗದಂತೆ ಪರಿಸ್ಥಿತಿ ಕೃತಿಕಾರರು ನೆನಪಿಸಿಕೊಳ್ಳುತ್ತಾರೆ.

ಈ ಗ್ರಾಮದಲ್ಲಿ ಶ್ರೀ ಅಣ್ಣಾರಾವ ಮಾಲಿ ಪಾಟೀಲರು ಶೈಕ್ಷಣಿಕ ಸೇವೆ ಮಾಡಿದ ಮಹಾನುಭಾವರು. ಇವರು ತಮ್ಮ ಗುರುಗಳಾದ ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪ್ರಭಾವಿತರಾಗಿ ಸಮಾಜ ಸೇವೆಯೇ ತಮ್ಮ ಧ್ಯೇಯ ಮಾಡಿಕೊಂಡರು. ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಧರ್ಮಾರ್ಥ ಪಾಠ ಶಾಲೆ ಪ್ರಾರಂಬಿಸಿ ಹಿಂದಿ, ಮೋಡಿ ಭಾಷೆಗಳ ಜ್ಞಾನವನ್ನು ಧಾರೆಯೆರೆದು ಜೊತೆಗೆ ಸಂಖ್ಯಾಶಾಸ್ತ್ರ ಪರಿಚಯ ಮಾಡುವ ಮೂಲಕ ಅನೇಕ ವಿದ್ಯಾರ್ಥಿಗಳ ಲೆಕ್ಕ ಶಾಸ್ತ್ರದಲ್ಲಿ ಪರಿಣಿತರಾದರು. ಈಗ ಈ ಶಾಲೆಯು ನೋಂದಾಯಿತ ಸಂಸ್ಥೆಯಾಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಾಗಿ ಒಂದು ಅಕಾಡೆಮಿಕ ಸಂಸ್ಥೆಯಾಗಿ ಈಗ ಬೆಳಗಿದೆ.

ತೀರಾ ಕುಗ್ರಾಮವಾದ ಈ ಗ್ರಾಮದಲ್ಲಿ ಚಪ್ಪರ ಮನೆಗಳ ಜಾಸ್ತಿ. ಸೌಲಭ್ಯಗಳು ಅಷ್ಟಿರದಿದ್ದರೂ ಇಲ್ಲಿನ ಜನತೆ ರೀತಿ, ನೀತಿ, ಧರ್ಮ, ಸಾಂಸ್ಕೃತಿಕ, ಅಧ್ಯಾತ್ಮಿಕಕ್ಕೆ ಮೂಂಚುಣಿಯಲ್ಲಿದ್ದವರು. ಅನೇಕ ಊರಿನ ಗಣ್ಯರು ಮುಂದಾಳತ್ವ ವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾರ್ಗದರ್ಶಿಗಳಾಗಿತ್ತಿದ್ದರು. ಆಟ, ಕಲಾ ಪ್ರತಿಭೋತ್ಸವಗಳು ಜರುಗುತ್ತಿದ್ದವು. ಹೊಲಕ್ಕೆ ದೀಪ ಬೆಳಗುವುದಕ್ಕಾಗಲಿ, ಮೊಹರಂ ಹಬ್ಬದಲ್ಲಿ ಪೀರ್‌ಗೆ ಆರತಿ ಬೆಳಗುವುದಾಗಲಿ ಜನರು ಸಂಪ್ರಾದಾಯಗಳನ್ನು ಮರೆಯುತ್ತಿರಲಿಲ್ಲ. ಸಾಮರಸ್ಯದ ಬದುಕು ಇವರದು. ಮೊಹರಂ ಪದಗಳನ್ನು ಸಹ ಲೇಖಕರು ಇಲ್ಲಿ ಉಲ್ಲೇಖ ಮಾಡಿದ್ದಾರೆ. ಹೋಳಿಹಬ್ಬ, ಯುಗಾದಿ ಹಬ್ಬಗಳಲ್ಲಿನ ಲೇಖಕರು ತಮ್ಮ ಬಾಲ್ಯದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕೋಲಾಟ ಪದಗಳು ಸಹ ಇಲ್ಲಿ ಉಲ್ಲೇಖಿಸಲಾಗಿದೆ. ಕಾರಹುಣ್ಣಿಮೆ, ನಾಗರ ಪಂಚಮಿಯ ದಿನಗಳಲ್ಲಿನ ಭಾವೋತ್ಸವ ಮನ ನಂಬುವಂತೆ ವರ್ಣಿಸಿದ್ದಾರೆ. ಇವೆಲ್ಲವೂ ಕಣ್ಣು ಕಟ್ಟುವಂತಿವೆ. ನನಗೂ ನನ್ನೂರಿನ ಅನುಭವಗಳನ್ನು ನನಗೆ ಸ್ಮರಣೆಯಾಗುತ್ತವೆ. ಭೂಲಾಯಿ ಹಾಡುಗಳನ್ನು ಇಲ್ಲಿ ಹಿಡಿದಿಟ್ಟಿದ್ದಾರೆ. ಜೋಕುಮಾರ ಹುಣ್ಣಿಮೆ, ನವರಾತ್ರೋತ್ಸವ ದೀಪಾವಳಿ ಹಬ್ಬ, ಸೀಗಿ ಹುಣ್ಣಿಮೆಗಳ ದಿನಗಳಲ್ಲಿನ ಅನುಭವ ಓದುಗರ ಕಣ್ಣಿಗೆ ಮನಸ್ಸಿಗೆ ರುಚಿ ರುಚಿ ದೃಶ್ಯಗಳ ಲೇಖಕರು ತುಂಬಿಕೊಟ್ಟಿದ್ದಾರೆ.

ವೀರ ಹನುಮಾನ ಮಂದಿರ ಚಿತ್ರ ಹಾಗೂ ಜೀರ್ಣೋದ್ಧಾರಗೈದು ಸೇವೆ ಮಾಡಿದ ಶ್ರೀ ಹಾವಗಿರಾವ ಮಾಲಿ ಪಾಟೀಲರ ತ್ಯಾಗ ಬಿತ್ತರಿಸಿದ್ದಾರೆ. ಗ್ರಾಮದಲ್ಲಿನ ದೇವತೆ ಮಂದಿರಗಳು ಭಜನಾ ಮಂಡಳಿಗಳು, ಭಜನೆ ಗೀತೆಗಳನೆಲ್ಲ ಸುಂದರವಾಗಿ ಈ ಪುಟಗಳಲ್ಲಿ ಅಚ್ಚುಕಟ್ಟಾಗಿ ಅಕ್ಷರದಲ್ಲಿ ಚಿತ್ರಿಸಿದ್ದು ಸ್ತುತ್ಯ. ಬೀಡಿ ಸಿಗರೇಟ ಚಟಗಳಿಗೆ ಅಂಟಿಕೋಳ್ಳುವ ಜನರ ಮಧ್ಯಯೂ ಈ ಗ್ರಾಮ ಮಾದರಿಯ ಗ್ರಾಮವಾಗಿದೆ. ಧೂಳಪ್ಪನ ಬಗ್ಗೆ ಪ್ರಸ್ತಾಪಿಸುತ್ತಾರೆ. ಹೊಲಗಳಲ್ಲಿ ಸುಗ್ಗಿಯ ಕಾಲದಲ್ಲಿ ಕಳ್ಳರ ಭಯವಿತ್ತು. ಗ್ರಾಮದ ಗೌಡರಿಂದ ಕಳ್ಳರಿಗೆ ಭಯ ಕಾಡಿತ್ತು. ಇಷ್ಟೆಲ್ಲ ತೆರೆದ ಕಂಗಳಲ್ಲಿ ಲೇಖಕರು ಕಂಡಿದ್ದು ನಿಜಕ್ಕು ಇದೊಂದು ಚಾರಿತ್ರಿಕ ದಾಖಲೆ, ಜೊತೆ ಜೊತೆಗೆ ತಮ್ಮ ಅನುಭವಗಳನ್ನು ಬಿಚ್ಚುತ್ತ ಜನರ ತ್ಯಾಗ ಸಂಹಿಷ್ಣುತೆ ವ್ಯಕ್ತಿತ್ವ ಬಿತ್ತರಿಸಿದ್ದಾರೆ. ಗ್ರಾಮದ ಶ್ರೀ ಸಂಗ್ರಾಮಪ್ಪ ಪೋಲಿಸ ಪಾಟೀಲ, ಶರಣ ಶ್ರೀ ಕರಿಬಸಯ್ಯ ಸ್ವಾಮಿ ಹೀಗೆ ಮುಂತಾದ ಜೀವನ ಶೈಲಿಗಳನ್ನು ಅರುಹುತ್ತ ಗೋಧಿಹಿಪ್ಪರ್ಗಾ ಒಂದು ವಿಶಷ್ಟ ರೀತಿಯ ಗ್ರಾಮವೆಂಬುದನ್ನು ಅಕ್ಷರಗಳಿಗೆ ಶ್ರೀಮಂತಿಕೆ ನೀಡಿದ್ದಾರೆ.

ಇನ್ನೂ ಎರಡನೆ ಭಾಗವಾದ ‘ನನ್ನವ್ವ’ ಈ ಭಾಗದ ಪುಟಗಳು ಬಿಚ್ಚುತ್ತಿರುವಂತೆ ಲೇಖಕರ ತಂದೆ ತಾಯಿ ಅಕ್ಕನವರ ಸುಂದರ ಭಾವಚಿತ್ರಗಳ ದರ್ಶನವಾಗತ್ತವೆ.

ಡಾ. ಭತಮುರ್ಗೆ ಚಂದ್ರಪ್ಪರವರಿಗೆ ತಮ್ಮ ತಾಯಿಯ ಬಗ್ಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಹಾಗೆ ನೋಡಿದರೆ ಪ್ರತಿ ಮಗುವಿಗೂ ತನ್ನ ತಾಯಿಯ ಬಗ್ಗೆ ಅಂತಃಕರಣ ಪ್ರೀತಿ ಇರುತ್ತದೆ. ಓರ್ವ ಕವಿ ಹೇಳುವ ಹಾಗೆ ಯಾರು ತನ್ನ ತಾಯಿಯನ್ನು ಪ್ರೀತಿಸಲಾರರೋ ಅವರು ಜಗತ್ತನ್ನು ಪ್ರೀತಿಸಲಾರರು ಎನ್ನುವಂತೆ ತಾಯಿ ಈ ಲೋಕದ ಪ್ರೀತಿಯ ಪುಂಜ ಅವಳಿಂದಲೇ ಬದುಕು ಅವಳಿಂದಲೇ ಲೋಕ ಅವಳೇ ಈ ಲೋಕದ ಮೂಲ ಬೇರು. ಎಲ್ಲರ ಪ್ರೀತಿಗಿಂತಲೂ ತಾಯಿಯ ಪ್ರೀತಿಯಲ್ಲಿ ಅದೇನೋ ಅಲೌಕಿಕತೆ ಇದೆ. ಅಂತಃಕರಣವನ್ನು ಹೃದಯಗಳನ್ನು ಬೆಸೆಯುವ ಸಂಪ್ರೀತಿ ಇದೆ. ತನ್ನ ಮಗುವಿಗಾಗಿ ಎಲ್ಲವನ್ನು ತ್ಯಜಿಸಿದ ಅವಳ ಮಮತೆಗೆ ನಾವು ಏನೂ ಕೊಟ್ಟರೂ ಅವಳ ಋಣ ತೀರಿಸಲಾಗದು. ಅಂತಲೇ ಲೇಖಕರ ಈ ಕೃತಿಯಲ್ಲಿ ‘ನನ್ನವ್ವ’ ಎಂದು ಭಾಗ ಮಾಡಿ ತನ್ನ ತಾಯಿಗಾಗಿ ಅವರು ನೂರು ಪುಟಗಳು ದಾನ ಮಾಡಿ ಅನುಭಗಳನ್ನು ಧಾರೆ ಎರೆದಿರುವುದು ನಿಜಕ್ಕು ಗಮನಾರ್ಹ ವಿಷಯವಾಗಿದೆ.

ಇವರ ತಾಯಿ ಪಾರಮ್ಮ ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಕ್ರಿ. ಶ. ೧೯೯೮ ರಂದು ಇದೇ ಗ್ರಾಮವಾದ ಗೋದಿ ಹಿಪ್ಪರ್ಗಾ ಗ್ರಾಮದಲ್ಲಿ ಗುರಪ್ಪ ಗುರಮ್ಮ ಎಂಬ ಒಂದೆ ಹೆಸರಿನ ಸತಿ ಪತಿಗಳ ಉದರದಲ್ಲಿ ಜನಿಸಿದರು. ತಾಯಿಯಲ್ಲಿದ್ದ ಬಾಲ್ಯ ಕಳೆದ ಪಾರಮ್ಮಳ ತಾಯಿ ಗುರಮ್ಮ ತನ್ನ ಪತಿಯಿಂದ ವಚನ ಪಡೆದು ಸಾವನಪ್ಪಿದ ಮೇಲೆ ಪತಿ ಗುರಪ್ಪ ಮಾತ್ರ ತನ್ನ ಜೀವಮಾನವೆಲ್ಲ ಮಕ್ಕಳ ಸುಖಕ್ಕಾಗಿ ಮದುವೆಯಾಗದೇ ಕಾಲಕಳೆದರು. ಇದು ನಿಜವಾಗಿಯೂ ತ್ಯಾಗದ ಪ್ರತೀಕವಾಗಿತ್ತು. ಅಜ್ಜಿ ಮತ್ತು ತಂದೆಯ ಶುಶ್ರೂಷೆಯಲ್ಲಿ ಬೆಳೆದ ಪಾರಮ್ಮ ಹಾಗೂ ಸಹೋದರರು ತಾಯ್ತನದ ಕೊರತೆ ಅನುಭವಿಸದೇ ಬೆಳೆದರು. ಅಜ್ಜಿಯಲ್ಲಿ ಅತೀವ ಪ್ರೀತಿ, ಅಂದು ಬಾಲ್ಯವಿವಾಹಗಳು ನಡೆಯುತ್ತಿರುವ ಹಾಗೆ ಪಾರಮ್ಮ ಅಕ್ಕನನ್ನು ಬಾಲ್ಯದಲ್ಲಿಯೇ ವಿವಾಹ ಮಾಡುತ್ತಾರೆ. ಪತ್ನಿ ಗುರಮ್ಮಳ ಮಾತು ನಡೆಸಿಕೊಡುವ ಹಾಗೆ ಗುರಮ್ಮಳ ಸಂಬಂಧಿಕರಿಗೆ ಗುರಪ್ಪ ತನ್ನ ಮಗಳ ಗಜರಾಬಾಯಿಗೆ (ಹಳ್ಳಿಖೇಡ ಬಿ.) ಧಾರೆ ಎರೆದು ಕೊಡುತ್ತಾರೆ ನಂತರದ ದಿನಗಳಲ್ಲಿ ಕಷ್ಟ ಕಳೆದು ಸುಖ ಅನುಭವಿಸಿದಾಗ ಪಾರಮ್ಮ ಹಳ್ಳಿಖೇಡ ತಾಯಿಯ ಮನೆಯಲ್ಲಿ ಕಳೆಯುತ್ತಾರೆ. ಬಾಲ್ಯದ ದಿನಗಳಲ್ಲಿ ಆಡಿದ ತನ್ನ ಗೆಳತಿಯರ ಸವಿನೆನಪು ಪಾರಮ್ಮನಲ್ಲಿ ಇನ್ನೂ ಈಗಲೂ ಮಾಸಿಲ್ಲ.

ತಂದೆಯೂ ಹಣಮಂತಪ್ಪ ರತ್ನವ್ವರ ಐದು ಮಕ್ಕಳಲ್ಲಿ ಒಬ್ಬರಾಗಿ ಗೋಧಿ ಹಿಪ್ಪರ್ಗಾದಲ್ಲಿ ಜನಿಸಿದ್ದಾರೆ. ಇವರ ಪೂರ್ವಾಜರು ಸೋನಾಳ ಗ್ರಾಮದವರು. ಭತಮುರ್ಗೆ ಅಡ್ಡ ಹೆಸರು ಬರಲು ಲೇಖಕರು ಕಾರಣ ಹೇಳುತ್ತಾರೆ. ಹಣಮಂತಪ್ಪನವರ ಸಂಸಾರದಲ್ಲಿ ಏರು ಪೇರುಗಳಾಗಿ ಮನೆಯಲ್ಲಿ ಕಡು ಬಡತನ. ಇಂಥ ಸಮಯದಲ್ಲಿ ಲೇಖಕರ ತಂದೆ ಧೂಳಪ್ಪರವರ ಪೋಷಣೆಗೆ ದನ ಕಾಯವ ಚಾಕರಿ ಮಾಡಿದರು. ಗೌಡರ ಮನೆಯಲ್ಲಿಯೇ ಅವರು ಹೇಳಿದ ಕಾರ್ಯಗಳನ್ನು ನಿಭಾಯಿಸುತ್ತ ಕಾಲ ಕಳೆದರು. ಹೊಟ್ಟೆಗೆ ಹಿಟ್ಟಿಲ್ಲ ಮೈಗೆ ಬಟ್ಟೆ ಇಲ್ಲ. ಅಂತಹದರಲ್ಲಿ ಹೊಲದಲ್ಲಿ ಬೆಳೆದ ಜೋಳದ ಸೀತನಿ ಸುಟ್ಟು ತಿಂದು ಬದುಕಿದ್ದ ದಿನಗಳವು.

ಧೂಳಪ್ಪನವರ ಅನೇಕ ಅನುಭವಗಳನ್ನು ಪುತ್ರ ಲೇಖಕರ ಮುಂದೆ ಹಂಚಿ ಕೊಂಡಿದ್ದು ಅಂತಹ ಕೆಲವು ವಿಷಯ ಲೇಖಕರೂ ಕೃತಿಯ ಮೂಲಕ ನಮಗೂ ಒದಗಿಸಿದ್ದಾರೆ. ಸೂಫಿ ಸಂತ ಇಮಾಮ ಸಾಬರ ಪವಾಡ ಧೂಳಪ್ಪರ ಮೂಲಕ ನಾವು ಅನುಭವಿಸಿದ್ದಾಗಿದೆ. ಕಷ್ಟದ ದಿನಗಳು ಅನುಭವಿಸುತ್ತಿರುವಾಗಲೇ ಪಾರಮ್ಮಳನ್ನು ಕೈಹಿಡಿದು ಧೂಳಪ್ಪ ಗೃಹಸ್ಥ ಜೀವನಕ್ಕೆ ಪ್ರವೇಶಿಸಿದಳು. ವಿವಾಹದ ನಂತರ ಚಾಕರಿ ಬಿಟ್ಟು ಸ್ವಂತ ಬದುಕು ಪ್ರಾರಂಬಿಸಿದಳು. ಕೆಲಸವಿಲ್ಲದಿದ್ದಾಗ ಪಕ್ಕದ ಊರುಗಳಿಗೆ ತೆರಳಿ ದಿನಗೂಲಿ ಮಾಡುತ್ತಿದ್ದರು ವೀರಶೆಟ್ಟೆಪ್ಪಾ ಮೈಲಾರೆ ಚಳಕಾಪೂರ ಹೊಳೆ ದಂಡಿಗೆ ಹತ್ತಿರ ನೆಲವಾಡದ ಶ್ರೀ ಯಾದವರಾವ ಪಾಟೀಲ ಹೊಲಗಳಲ್ಲಿ ಕೂಲಿ ಮಾಡಿದ್ದ ಕಷ್ಟ ದಿನಗಳೆಲ್ಲ ಅಂದು ಕಣ್ಣಿನ ಕಡಲಾಗಿತ್ತು.

ಬಡವರ ಸೊಸೆಯಾಗಿ ಬಂದ ಪಾರಮ್ಮಳಿಗೆ ಜೀವನವೊಂದು ಸವಾಲಾಗಿತ್ತು. ಆತ್ಮ ವಿಶ್ವಾಸದಿಂದ ದುಡಿಯುವುದು ಜೊತೆಗೆ ಸಂಬಂದಿಕರ ಪ್ರೀತಿ ಗಳಿಸಿಕೊಂಡರು. ಧೂಳಪ್ಪನ ಜೊತೆ ಜೊತೆಯಾಗಿ ದುಡಿಯುವ ಪಾರಮ್ಮ ಪುಟ್ಟ ಮಗು ಜನಿಸಿದಾಗಲೂ ಕಾಯಕವೇ ದೇವರೆಂದು ದುಡಿದರು. ಭಕ್ತಿಯಿಂದ ದುಡಿಯಬೇಕು. ಕೈಯಲ್ಲಿ ಕೊಟ್ಟಿರುವ ಖುರುಪಿಯೇ ಅನ್ನದ ಚೀಲವೆಂದರು. ಎಂಥ ಕ್ಷಣಗಳಲ್ಲೂ ಲೇಖಕರ ತಂದೆ ತಾಯಿ ಜಗಳವಾಡದೇ ಪ್ರೀತಿಯಿಂದ ಬಾಳಿದರು.

ತವರಿನ ಶ್ರೀವಂತಿಕೆ ಪ್ರದರ್ಶಿಸದೇ ಹರಿದ ಸೀರೆಯುಟ್ಟು ಬದುಕನ್ನು ಸ್ವಾಗತಿಸಿದಳು. ಅವ್ವನ ಕುಂಚಿ ಅಪ್ಪನ ಘೊಂಗಡಿ ಮಳೆಗಾಲ ಚಳಿಗಾಲ ಬೇಸಿಗೆ ಕಾಲ ಎದುರಿಸುತ್ತಿತ್ತು. ಜೊತೆಗೆ ಹೊಲದ ಸೀತೆನೆ ಬಾಳಿನ ತುಸು ಹೊತ್ತಿಗೆ ತುತ್ತಿಗೆ ಆಸರೆಯಾಗುತ್ತಿತ್ತು.

ಅವ್ವ ಗಳಿಸಿದ ಹಣಕ್ಕೆ ತಂದೆ ಬೇಡುವರಲ್ಲ, ಧೂಳಪ್ಪ ತೊಟ್ಟಿರುವ ಬನಿಯನ್ ಕಿಸೆಗಳಲ್ಲಿ ಹಣ ಕುಣಿದಾಡುತ್ತಿತ್ತು.

ಹಗಲೆಲ್ಲ ಊರಲೆಲ್ಲ ಬನಿಯಾನ್ ಧೋತರ್ ಸಾಥಿಯಾದ ಅಪ್ಪನಿಗೆ ಮುದುವೆಗೆ ಸಮಾರಂಭಗಳಲ್ಲಿ ಖಮಿಷ್ ಅವರ ಮೈಯಲ್ಲಿ ನಲಿದಾಡುತ್ತಿತ್ತು. ಪರಿಶ್ರಮವೇ ಹಾಸು ಹೊದ್ದುಕೊಂಡಿದ್ದವರು. ಜೋಳದ ರಾಗಿ ತೊಗರಿ ರಾಶಿ ಮಾಡವಾಗ ತಾಯಿ ಜೊತೆಯಾಗಿ ತಂದೆಗೆ ಸಹಕರಿಸುವಳು. ಜೋಳ ಕಿತ್ತಿ ಕಿತ್ತಿ ಅಂಗೈಗಳು ಹುಣ್ಣಾದರೂ ಯಾರ ಮುಂದೆ ಹೇಳಿದವರಲ್ಲ. ಗೂಡು ಮುರಿಯುವುದು ಹಂತಿ ಕಟ್ಟುವುದು ಮಡುವಾಗ ಆ ಪದಗಳು ಹಾಡುತ್ತಿದ್ದರೆ ಕಷ್ಟವನ್ನೆಲ್ಲ ಮರೆಯುತ್ತಿದ್ದರೆಂದು ಆ ಹಂತಿಯ ಪದಗಳು ಸಹ ಲೇಖಕರು ಇಲ್ಲಿ ಉಲ್ಲೇಖಿಸಿರುವುದು ಸ್ತುತ್ಯ.

ಬರಡು ಭೂಮಿಯಲ್ಲಿ ಉಳುಮೆ ಮಾಡುವಾಗ ವರವಾಗಿ ಬಂದ ಕಾರಂಜಾ ಜಲಾಶಯದ ಬಲದಂಡೆ ಕಾಲುವೆ ಕಾಮಧೇನುವಾಗಿ ಇವರ ಪಾಲಿಗೆ ಬಂತು. ಆ ದಿನಗಳಲ್ಲಿ ದುಡಿಯುವಾಗ ಲೇಖಕರು ಹೊಲಕ್ಕೆ ಹೋದಾಗ ಪಾಲಕರು ತೋರುತ್ತಿದ್ದ ಪ್ರೀತಿ ಈ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಓದುಗರೆ ಇವೆಲ್ಲ ಸವಿಯಬೇಕು.

ಯಾವ ಕಾರ್ಯಗಳಿಗೂ ಸಿದ್ದರಿದ್ದ ಅಪ್ಪ ಧೂಳಪ್ಪ ಕೆಲಸವಿಲ್ಲದ್ದಾಗ ಅತೃಪ್ತಿಯಿಂದಿರುತ್ತಿದ್ದರು. ಆದರೂ ಜೀವನ ಸಂಪ್ರೀತಿಯಂದ ತುಂಬಿತ್ತು. ಇಂಥದರಲ್ಲಿ ತಾಯಿ ಪಾರಮ್ಮಳಿಗೆ ಕ್ಯಾನ್ಸರ್ ಕಾಯಿಲೆ ಬಂತು ಅದಕ್ಕೆ ತಡ ಮಾಡದೆ ಚಿಕಿತ್ಸೆ ನೀಡಿದ ಫಲ ಅವ್ವಳು ಬದುಕುಳಿದಳು.

ಇಂಥ ಕಷ್ಟಗಳಲ್ಲಿಯೇ ಮಗು ಚಂದ್ರುಗೆ ಶಿಕ್ಷಣ ನೀಡಿ ಮೆರೆದರು. ಪ್ರಾರಂಭದಲ್ಲಿಯೇ ಹಲವರ ಸಹಾಯ ಪಡೆದು ಬೋರ್ಡಿಂಗ್ ಶಾಲೆಗೆ ಸೇರಿಸಿದರು. ಮಗನು ದೂರ ಹೋದಾಗ ಕಣ್ಣೀರಿಟ್ಟರು. ಅನೇಕ ವಿಧ ವಿಧ ಸಿಹಿ ತಿಂಡಿಗಳು ನೀಡುತ್ತಿದ್ದರು. ಪಾರಮ್ಮ, ಶ್ರೀ ವಿರುಪಾಕ್ಷ ಶಿವಾಚಾರ್ಯರಿಂದ ದೀಕ್ಷೆ ಪಡೆದು ಸತ್ಸಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಳು. ಹೀಗೆ ಬದುಕನ್ನು ಪರಿಶ್ರಮ, ಪ್ರಾಮಾಣಿಕತೆಗಳಿಂದ ಶ್ರೀಮಂತಗೊಳಿಸಿ ಧೂಳಪ್ಪ, ಪಾರಮ್ಮ ತೃಪ್ತಿ ಪಟ್ಟರು. ಲೇಖಕರು ಇಂಥ ಅನಂತ ಅನುಭವಗಳನ್ನು ಈ ಕೃತಿಯ ಸೆರಗಿನಲ್ಲಿ ತುಂಬಿದ್ದಾರೆ. ಪಾಲಕರ ಕನಸಿನ ಫಲವಾಗಿ ಚಂದ್ರಪ್ಪ ಅಷ್ಟೇ ಶೃದ್ಧೆಯಿಂದ ಅಭ್ಯಸಿಸಿದ್ದರು. ಪಿಎಚ್‌ಡಿ ಅಧ್ಯಯನ ಮುಗಿಯುವವರೆಗು ಮದುವೆಯಾಗದೆ ಉಳಿದಾಗ ನಂತರದ ದಿನಗಳಲ್ಲಿ ಅಕ್ಕ ತನ್ನ ಮಗಳನ್ನು ಜಗದೇವಿಗೆ ಲೇಖಕರಿಗೆ ಧಾರೆಯೆರೆಯುತ್ತಾಳೆ. ಒಂದು ಕಡೆ ಲೇಖಕರೆ ಹೇಳುವಂತೆ ನನ್ನವ್ವ ಹೆತ್ತ ತಾಯಿ ನನ್ನಕ್ಕ ಸಾಕಿದ ತಾಯಿ ಎಂದು ಹೇಳಿದ್ದು ಕೃತಿಕಾರರ ಹೃದಯ ವಿಶಾಲತೆ ಇಲ್ಲಿ ಎತ್ತಿ ತೋರುತ್ತದೆ. ಹೀಗೆ ನನ್ನವ್ವ ಭಾಗದಲ್ಲಿ ಲೇಖಕರ ಬದುಕಿನ ಇಡೀ ಅನುಭವ ಪ್ರೀತಿ ಬದುಕಿನ ಚಿತ್ರಣ, ತಾಯಿ ತಂದೆಯರ ಕಷ್ಟ ಎಲ್ಲವೂ ಎಳೆ ಎಳೆಯಾಗಿ ಬಿಡಿಸಿದ್ದಾರೆ. ಈ ಭಾಗ ಸಾರ್ಥಕವಾಗಿ ಮೆರೆದಿದೆ.

ಇನ್ನು ಕೊನೆಯದಾಗಿ ಒಲವು ಸ್ನೇಹ ಪ್ರೇಮವೆಂಬ ಮೂರನೆಯ ಭಾಗದಲ್ಲಿ ಅನೇಕ ಆತ್ಮೀಯರನ್ನು ಪರಿಚಯಿಸಿದ್ದಾರೆ. ಡಾ. ದೀಪಾ ಹೆಚ್. ಮೈಲಾರೆ ಶ್ರೀ ಎಸ್. ಎಂ. ದೀಪಕ, ಪ್ರೊ. ವಿ.ಬಿ. ಚಂದ್ರಶೇಖರ, ಪ್ರೊ. ಬಸವರಾಜ ಹೆಗ್ಡೆ, ಬಸವರಾಜ ಸಿ. ರಾಜೋಳೆ, ಡಾ. ಸುಭಾಷ ಜಿ. ಶೆಟಕಾರ್, ಗುರುಬಸಪ್ಪ ಭದಭದೆ, ಮಾರುತಿರಾವ ಜಿ. ತಾಂದಳೆ, ಸಿದ್ರಾಮಪ್ಪ ಎಸ್. ಮುದ್ದಾ, ಶಿವರುದ್ರಯ್ಯ ಸ್ವಾಮಿ, ಶ್ರೀಮತಿ ಪಾರಮ್ಮ ಗೌಡತಿ, ಶ್ರೀಮತಿ ಭಾರತಿಬಾಯಿ ಭಾಭುರಾವ ಹೊಡಮನಿ, ಬಸಪ್ಪ ಜಿ. ಟೇಕೂರು, ಶ್ರೀಮತಿ ಶಾಂತಮ್ಮ ಶಿವರಾಜ ಸ್ವಾಮಿ ಖೇಡಕರ ಮುಂತಾದವರ ಬಗ್ಗೆ ಆತ್ಮೀಯವಾಗಿ ವಿವರಿಸಿ ತಮ್ಮ ದೊಡ್ಡ ಗುಣಕ್ಕೆ ಮೆರಗು ನೀಡಿದ್ದಾರೆ. ಇವರ ಬೀದರಿನ ಭಾಷೆ ಗಂಡು ಭಾಷೆಯಾಗಿ ಮೆರೆಸಿದೆ.

ಡಾ. ಭತಮುರ್ಗೆಯವರು ಶ್ರೀ ಸಿದ್ಧಾರೂಢ ಮಠ ಸಂಸ್ಥಾನದಲ್ಲಿ ಪ್ರಾಧ್ಯಪಕರಾಗಿ ಕಾರ್ಯ ನಿರ್ವಹಿಸುತ್ತ ಇವರು ಶೋ. ಬ್ರ. ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ಕುರಿತಂತೆ ಮಹಾ ಪ್ರಬಂಧ ಮಂಡಿಸಿದ್ದಾರೆ.

ಒಟ್ಟಿನಲ್ಲಿ ಬಡತನ ಕುಟುಂಬದಲ್ಲಿ ಜನಿಸಿ ಕೆಸರಿನಲ್ಲೂ ಕಮಲ ಉದ್ಭವಿಸಿದಂತೆ ಧೂಳಪ್ಪ ಪಾರಮ್ಮನವರ ಕನಸುಗಳನ್ನು ಅರಳಿಸಿ ಡಾಕ್ಟರೇಟ್ ಪದವಿ ಸಂಪಾದಿಸಿದ ಚಂದ್ರಪ್ಪ ನಿಜಕ್ಕೂ ತಮ್ಮ ಬಾಳು ಸಾರ್ಥಕಗೊಳಿಸಿದ್ದಾರೆ. ಪೂರ್ಣಿಮಾ ಪ್ರಕಾಶನದಿಂದ ಪ್ರಕಾಶನಗೊಂಡ ಈ ಕೃತಿಗೆ ಶ್ರೀ ಪಂಚಾಚಾರ್ಯ ಆರ್ಶಿವಚನ ನೀಡಿದ್ದಾರೆ. ಪ್ರೊ. ವಿರೇಂದ್ರ ಸಿಂಪಿ ಹಿರಿಯ ಸಾಹಿತಿಗಳು ಮುನ್ನುಡಿ ಬರೆದಿದ್ದಾರೆ. ಡಾ. ಜಾನಾಬಾಯಿ ಬುಳ್ಳಾ ಪ್ರಾಧ್ಯಪಾಕರು ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ಇವರು ಈ ಕೃತಿಗೆ ಚೆಂಬೆಳಕ ರೂಪದಲ್ಲಿ ಹಿನ್ನುಡಿ ಬರೆದಿದ್ದಾರೆ. ಸುಂದರವಾಗಿ ಮುದ್ರಿತಗೊಂಡು ಬೀದರ ಸಾಹಿತ್ಯ ಕ್ಷೇತ್ರದಲ್ಲಿ ದಾಖಲಿಸಿಕೊಂಡ ಚರಿತ್ರಾರ್ಹ ಈ ಗ್ರಂಥ ನಿಜಕ್ಕೂ ಬದುಕಿನ ಭಾವಗಳನ್ನು ಬಿತ್ತರಿಸುವ ಉತ್ತಮೋತ್ತಮ ಕೃತಿಯಾಗಿದೆ. ಡಾ. ಭತಮುರ್ಗೆಯವರಿಂದ ಇನ್ನು ಇಂಥ ಬೀದರಿನ ಗಟ್ಟಿ ಭಾಷೆಯ ಶಬ್ದಗಳು ಹೊತ್ತು ಆಡು ನುಡಿಗಳಿಗೆ ಶ್ರೀಮಂತಗೊಳಿಸಿದಂಥ ಕೃತಿಗಳು ಬರಲೆಂದು ಮನದುಂಬಿ ಹಾರೈಸುವೆ. ಅವರಿಗೂ ಅವರ ಪಾಲಕ ವೃಂದದವರಿಗೂ ಆಯುಷ್ಯ ಆರೋಗ್ಯ ನೀಡಿ ದೇವರು ಕಾಪಾಡಲೆಂದು ಬೇಡುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ರಾಂತಿದರ್‍ಶಿ
Next post ತನ್ನ ಇನಿಯಳನ್ನು ಹಳಿದವರ ಬಗ್ಗೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…