ಅಪ್ಪಾ ಸಾಹೇಬರ ಭಾಷಣ
(ಮಹಾರಾಷ್ಟ್ರ ಸಾಹಿತ್ಯ ಸಮ್ಮೇಲನ)
ದಾದಾಸಾಹೇಬ, ತಾತ್ಯಾಸಾಹೇಬ, ಕಾಕಾಸಾಹೇಬ, ಬಾಪೂಸಾಹೇಬ ಅಣ್ಣಾಸಾಹೇಬ ಹಾಗೂ ಪ್ರತಿನಿಧಿ ಬಂಧುಭಗಿನಿಯರೆ, ಬೆಳಗಾವಿ ಶಹರದ ಮರಾಠಿ ಮಾತನಾಡುವವರ ಪರವಾಗಿ ಅತ್ಯಾನಂದದಿಂದ ಇಂದು ತಮ್ಮೆಲ್ಲರಿಗೆ ನಾನು ಸ್ವಾಗತ ಬಯಸುತ್ತೇನೆ. ದೂರದೂರದ ಪ್ರವಾಸ ಕೈಕೊಂಡು ನಮ್ಮ ಗ್ರಾಮಕ್ಕೆ ಬಂದದ್ದಕ್ಕಾಗಿ ತಮಗೆ ಎಷ್ಟು ಆಭಾರ ಸಲ್ಲಿಸಿದರೂ ಕಡಮೆಯೇ. ಯವ ಪ್ರಾಂತದ ಬಹುಜನ ಸಮಾಜಕ್ಕೆ ತಮ್ಮ ಸಾಹಿತ್ಯದ ಪರಿಚಯವಿಲ್ಲವೊ ಹಾಗು ಎಲ್ಲಿ ತಮ್ಮ ಭಾಷೆಯನ್ನು ಮಾತನಾಡುವವರ ಸಂಖ್ಯೆಕೂಡ ತೀರ ಕಡಿಮುಯಾಗಿದೆಯೊ ಅಂಥ ಅಪರಿಚಿತ ಪ್ರಾಂತಕ್ಕೆ ಈ ಪರಿಷತ್ತಿನ ನಿಮಿತ್ತವಾಗಿ ತಾವು ದರ್ಶನಲಾಭವನ್ನಿತ್ತದ್ದು ಮಹದ್ಭಾಗ್ಯವೆಂದೇ ಭಾವಿಸಬೇಕು. ಮರಾಠೀ ಸಾಹಿತ್ಯ ಪರಿಷತ್ತಿನ ನಿಮಿತ್ತವಾಗಿ ಮಹಾರಾಷ್ಟ್ರೇತರ ಪ್ರಾಂತಕ್ಕೆ ತಮಗೆ ಆಗಾಗ್ಗೆ ಹೋಗುವ ಪ್ರಸಂಗ ಬರುವದು ಸಹಜ. ಅಲ್ಲಿಯ ಭಾಷಾಭಿನ್ನತಿಯ ಅಜ್ಞಾನದ ಮೂಲಕ ಒದಗುವ ಅನನುಕೂಲಗಳನ್ನು ಸಹಿಸುವ ರೂಢಿ ತಮಗಿದ್ದದ್ದು ಇದರಲ್ಲೊಂದು ಸಮಾಧಾನದ ಸಂಗತಿ. ಮಿರಜಿಯ ಈಚೆಗೆ ಬಂದಾಗ ಈ ತ್ರಾಸು, ಹೆಚ್ಚಾಗಿ ತಮ್ಮ ಅನುಭನಕ್ಕೆ ಬಂದಿರಲು ಸಾಕು. ಆದರೆ ದಯಾಳುವಾದ ಇಂಗ್ಲಿಷ್ ಸರಕಾರದ ಪುಣ್ಯದಿಂದ ಹಿಂದುಸ್ತಾನದ ಎಲ್ಲ ಭಾಷೆಗಳಲ್ಲಿಯೂ ಚಹಕ್ಕ ಚಹ ಎಂದೇ ಅನ್ನುತ್ತಿರುವದರಿಂದ ಒಳಗಿನ ತಮ್ಮ ಚಹದ ಚಟ ಹಿಂಗಿಸಲು ತಮಗೆ ತ್ರಾಸ
ಆಗಿರಲಾರದಿಂದು ನಾನು ಅಶಿಸುತ್ತೇನೆ. ಬಂದು ಭಗಿನಿಯರೆ, ಯಾವಾಗಲೂ ಕರ್ಣಕಟುವಾದ ಕನ್ನಡ ಭಾಷಣಗಳನ್ನೇ ಕೇಳಿ ಕೇಳಿ ಬೇಸರಗೊಂಡ ನಮ್ಮ ಕಿವಿಗಳಿಗೆ, ತಮ್ಮ ಶುಭಾಗಮನದಿಂದ, ಉಚ್ಚಾರಿತ ಹಾಗು ಅನುಚ್ಚಾರಿತ ಅನುಸ್ವಾರಗಳಿಂದ ತುಂಬಿದ ಮರಾಠೀ ಭಾಷಣಗಳನ್ನು ಕೇಳುವ ಅಮೂಲ್ಯ ಸಂಧಿ ದೊರೆತೆದ್ದು ನಮ್ಮ ಸುದೈವವೆಂದೇ ಹೇಳಬೇಕು.
ಬೆಳಗಾವಿ ಶಹರ
ಈ ಪಟ್ಟಣವನ್ನು ಬಹಳ ಪ್ರಾಚೀನಕಾಲದಲ್ಲಿ ಜೈನಧರ್ಮದ ರಾಜರು ಸ್ಥಾಪಿಸಿದರೆಂದು ಹೇಳುತ್ತಾರೆ. ಆದರೆ ಇದರ ಉಲ್ಲೇಖ ಕ್ರಿ. ಶ. ೧೧೬೦ರ ಗುಲ್ಲಹಳ್ಳಿಯ ಶಿಲಾಲೇಖದಲ್ಲಿ ದೊರೆಯುತ್ತದೆ. ವೇಲುಗ್ರಾಮ ಇದು ೭೦ ಹಳ್ಳಿಯ ಫಿರ್ಕಾದ ಒಂದು ಮುಖ್ಯ ಸ್ಥಳವೆಂದು ಅದರಲ್ಲಿ ಕಾಣಿಸಲಾಗಿದೆ. ಆ ಕಾಲಕ್ಕೆ ಈ ಪಟ್ಟಣವು. ಕಲ್ಯಾಣದ ಚಾಲುಕ್ಯರ ಮಾಂಡಲೀಕ ರಾದ ಕದಂಬರಾಜರ ವಶದಲ್ಲಿತ್ತು. ಮುಂದೆ ಇದು ಶಟ್ಟಿರಾಜರವಶಕ್ಕೆ ಬಂದಮೇಲೆ ಸವದತ್ತಿಯನ್ನು ಬಿಟ್ಟು ಬೆಳಗಾವಿಯನ್ನೇ ಅವರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಆಮೇಲೆ ದೇವಗಿರಿಯೆ ಯಾದವರು ಇದನ್ನು ತಮ್ಮ ಸ್ವಾಧೀನದಲ್ಲಿಟ್ಟು ಕೊಂಡಿದ್ದರು. ಇವರ ತರುವಾಯ ಕೆಲವು ಕಾಲದ ಅದರ ಇತಿಹಾಸ ನಮಗೆ ಅಜ್ಞಾತವಾಗಿದೆ. ಮುಂದೆ ಕ್ರಿ. ಶ. ೧೪೭೧ರಲ್ಲಿ ಬಾದಶಹರು ವಿಜಯನಗರದ ಅರಸರಿಂದ ಈ ಶಹೆರವನ್ನು ವಶಪಡಿಸಿಕೊಂಡರೆಂದು ಫರಿಸ್ತನು ಹೇಳುತ್ತಾನೆ. ವಿಜಾಪುರದ ಸರದಾರನಾದ ಅಸದಖಾನನು ಕಟ್ಟಿಸಿದ ಬೆಳಗಾವಿ ಕೋಟೆಯಲ್ಲಿರುವ ಮಸೀದಿಯಮೇಲೆ ೧೫೧೯ನೆಯ ಇಸ್ವಿಯನ್ನು ಹಾಕಿದೆ. ಇದರ ಮೇಲಿಂದ ಬೆಳಗಾಂವಿ ಶಹರವು ಪ್ರಾಚೀನವೂ ಇತಿಹಾಸ ಪ್ರಸಿದ್ಧವೂ ಇರುವದೆಂಬದು ಸ್ಪಷ್ಟವಾಗುತ್ತದೆ. ಆದರೆ ಬೆಳಗಾಂವ ಎಂಬ ಹೆಸರು ಬಂದದ್ದು ಹೇಗೆ? ಈ ವಿಷಯದಲ್ಲಿ ಅನೇಕರು ಅನೇಕ ವಿಧವಾಗಿ ತರ್ಕಿಸುತ್ತಾರೆ. ಯಾದವನ ಮನೆತನದಲ್ಲಿ ವೇಣು ಎಂಬ ರಾಜನಿದ್ದ. ಅವನಿಂದಲೇ ಇದಕ್ಕೆ ವೇಣುಗ್ರಾಮ ಎಂಬ ಹೆಸರು ಬಂದು, ಅದೇ ಅಪಭ್ರಂಶವಾಗಿ ಈಗಿನ ಹೆಸರು ಬಂತು ಎಂದು ಕೆಲವರು ಹೇಳುತ್ತಾರೆ. ಇಲ್ಲಿಸುತ್ತುಮುತ್ತು ಬಿದಿರಿನ ಪೊದರುಗಳು ಅನೇಕವಾಗಿದ್ದು ಅದರ ಮೂಲಕ ವೇಣುಗ್ರಾಮು ಎಂಬ ಹೆಸರು ಬಂದು ಅದೇ ಬರಬರುತ್ತ, ವೇಲುಗ್ರಾಮ, ಬೇಲುಗ್ರಾಮ, ಬೆಲುಗಾಮ, ಬೆಳಗಾಂವ ಹೀಗೆ ಅಪಭ್ರಂಶ ರೂಪ ತಾಳಿರಬೇಕೆಂದು ಕೆಲವರ ಮತ. ಆದರೆ ಈ ಎರಡೂ ಅಭಿವ್ರಾಯಗಳು ನಮ್ಮ ಅಭಿಪ್ರಾಯಕ್ಕೆ ಹೊಂದುವದಿಲ್ಲ. ನಮ್ಮ ಅಭಿಪ್ರಾಯದ ಪ್ರಕಾರ ಬೆಲಗಾಮ ಇದು ಮಾರಾಠಿ ಶಬ್ದ. ಮುರವತ್ತು ಇಲ್ಲದವ ಬೇಮುರ್ದತ್, ಜಬಾಬದಾರಿ ಇಲ್ಲದವ ಬೇಜಬಾಬದಾರ ಇವು ಯಾವ ಪ್ರಕಾರ ಉರ್ದು ಸಂಮಿಶ್ರ ಮರಾಠಿಯಾಗಿವೆಯೋ ಅದೇ ಪ್ರಕಾರೆ ಯಾವ ಊರೆ ಜನರಿಗೆ ಬಂಧನ ಅಥವಾ
ಲಗಾಮು ಇಲ್ಲವೋ ಆ ಊರು ಬೇಲಗಾಮ ಎಂದು ಇರಬೇಕು. ಇದೇ ಮುಂದ ಅಪಭ್ರ್ರಂಶವಾಗಿ ಬೆಳಗಾಂವ ಎಂದು ಆಗಿರಬೇಕು. ಇಷ್ಟೊಂದು ಅರ್ಥದಿಂದಲೂ ಈ ಹೆಸರು ಈ ಊರಿಗೆ ಒಪ್ಪುತ್ತದೆ. ನಾವು ಎಷ್ಟೋ ತಲೆಗಳಿಂದ ಈ ಊರಲ್ಲಿದ್ದರೂ ಭಾಷೆ ಮತ್ತು ವಾಙ್ಮಯದ ವಿಷಯದಲ್ಲಿ ಪೂರ ದುರ್ಲಕ್ಷವುಳ್ಳವರಾಗಿದ್ದೇವೆ.ಆ ಕಾರಣದಿಂದಲೂ ಇದಕ್ಕೆ ಬಂದ ಹೆಸರು ಯಥಾರ್ಥವಾದದ್ದೆಂದೇ ಹೇಳಬಹುದು. ಚಾಲುಕ್ಯ, ಕದಂಬ, ರಟ್ಟ ಅಥವಾ ವಿಜಯನಗರ ಮುಂತಾದ ರಾಜರು ಕನ್ನಡಿಗರಾಗಿದ್ದು, ಮತ್ತು ಕ್ರಿ. ಶ. ೧೧೬೦ರಲ್ಲಿ ದಕ್ಷಿಣದಲ್ಲಿ ಮುಸಲ್ಮಾನರ ಪ್ರವೇಶವೂ ಇಲ್ಲದಿರುವಾಗ, ಈ ಉರ್ದು-ಮರಾಠಿ ಹೆಸರು ಈ ಊರಿಗೆ ಬಂದದ್ದು ಹೇಗೆ ಎಂದು ಕೆಲವರು ಸಂಶಯಪಡಬಹುದು. ಆದರೆ ‘ಮಧ್ಯಯುಗೀನ ಭಾರತ’ಕಾರರ ಪ್ರಮಾಣ ಸರಣಿಯಮೇರೆಗೆ ಹಿಂದುಸ್ಥಾನದ ಯಾವ ರಾಜರನ್ನೂ ಮರಾಠಿರಾಜರನ್ನಾಗಿ ಮಾಡಲು ಬರುತ್ತದೆ. ಆ ರಾಜರ ಶಿಲಾಲೇಖಗಳ ಭಾಷೆ ಹಾಗು ಲಿಪಿ ಕನ್ನಡವಿದ್ದರೂ ಅವನ್ನು ಕೊರೆದ ಶಿಲ್ಪಿಗರು ಕನ್ನಡಿಗರಿದ್ದಿರಬಹುದಾಗಲಿ, ರಾಜರು ಮರಾಠಿಗರೇ ಇದ್ದರೆಂದು ಹೇಳಬೇಕಾಗುತ್ತದೆ. ಮೇಲಿನ ಈ ಎಲ್ಲ ವಿವೇಚನೆಯ ಮೇಲಿಂದ ಬೆಳಗಾವಿಯನ್ನು ಕರ್ನಾಟಕದಲ್ಲಿ ದೂಡುವದು ಎಷ್ಟೊಂದು ಅನ್ಯಾಯದ್ದೆಂಬದು ತಮಗೆ ತಿಳಿದು ಬರುವದು. ಇಂದಿನ ಈ ಸಾಹಿತ್ಯ ಪರಿಷತ್ತು ಬೆಳಗಾವಿಯ ಇತಿಹಾಸದಲ್ಲಿಯೇ ಒಂದು ಮಹತ್ವದ ಸ್ಥಾನವನ್ನು ಪಡೆಯಬಹುದು.
ತಮ್ಮಂಥ ಮಹಾ ಮಹಾ ಇತಿಹಾಸಕಾರರು, ನಿಬಂಧಕಾರರು, ನಾಟಕಕಾರರು, ವರ್ತಮಾನಪತ್ರಕಾರರು, ಮತ್ತು ಟೀಕಾಕಾರರು ಇಲ್ಲಿ ಸೇರಿರುವಾಗ ಅವರೆದುರಿನಲ್ಲಿ ಬೆಳಗಾವಿಯವರು ಮಾಡಿದ ಸಾಹಿತ್ಯ ಸೇವೆಯ ಉಲ್ಲೇಖ ಮಾಡುವದು ಧಾರ್ಷ್ಟ್ಯವಾಗಬಹುದು. ಆದರೂ ಕಾಲೇಜದಿಂದ ಸೂಟಿಯಲ್ಲಿ ಹಿರಿಯಣ್ಣ ಮನೆಗೆ ಬಂದಾಗ ಚಿಕ್ಕತಮ್ಮ ತನ್ನ ಸಾಹಸ ಕೃತ್ಯಗಳನ್ನೆಲ್ಲ ಬಣ್ಣಿಸಲು ಹೇಗೆ ಉತ್ಸುಕನಾಗಿರುವನೊ ಹಾಗೆ ನಾನು ಕೂಡ. ನಮ್ಮ ಸಾಹಿತ್ಯ ಸೇವೆಯನ್ನು ತಮ್ಮದುರಿಗೆ ಹೇಳಲು ಉದ್ಯಕ್ತನಾಗಿದ್ದೇನೆ.
ಮಾತೃಭಾಷೆಯೊ ಭಾರ್ಯಾಭಾಷೆಯೊ?
ನಮ್ಮ ದುರದೃಷ್ಟಕ್ಕೆ ನಮ್ಮ ಅನೇಕರ ಮಾತೃಭಾಷೆ ಕನ್ನಡವಾಗಿದ್ದರೂ ನಾವು ದೊಡ್ಡವರಾಗಿ ಶಾಲೆ ಕಾಲೇಜುಗಳನ್ನು ಸೇರುತ್ತಲೇ ತಾಯಿಯ ಪ್ರೀತಿಗೆ ಎರವಾದೆವು; ಮುಂದೆ ನಮ್ಮ ಸುದೈವದಿಂದ ಮರಾಠೀ ಮಾತನಾಡುವ ಹೆಂಡಂದಿರೇ ನಮಗೆ ದೊರೆತು, ಅವರ ಗೃಹಪ್ರವೇಶದ ಜೊತೆಗೆ ಮರಾಠಿಯದೂ ಗೃಹಪ್ರವೇಶವಾಯಿತು. ಅಂದಿನಿಂದ ಅಹೊರಾತ್ರಿ, ಹೆಂಡತಿಯ ಜತಿಗೇ ನಮಗೆ ಹೆಚ್ಚು ಸಂಬಂಧ ಬರುತ್ತಿರುವ ಮೂಲಕ ನಾವು ಮಾತೃಭಾಷೆಗಿಂತ ಭಾರ್ಯಾಭಾಷೆಗೆ ವಿಶೇಷ ಮಹತ್ವ ಕೊಡುತ್ತ ಬಂದೆವು. ನಮ್ಮ ಭಾರ್ಯಾಭಾಷೆಯೇ ಮುಂದೆ ನಮ್ಮ ಮಕ್ಕಳ ಮಾತೃಭಾಷೆ ಆಯಿತೆಂಬದನ್ನು ತಮ್ಮಂಥ ಸುಜ್ಞರಿಗೆ ಒಡೆದು ಹೇಳುವ ಕಾರಣವಿಲ್ಲ. ಕೆಲವೊಂದು ಸಲ ನಮ್ಮ ಮನೆಯಲ್ಲಿ ಅತ್ತೆ-ಸೊಸಿಯರಲ್ಲಿ ಜಗಳವುಂಟಾದಾಗ ಮನೆಗೆ, ಕನ್ನಡ ಮಾರಾಠಿಯ ವಾದಕ್ಕೆ ಬಲಿಯಾದ ಸಭೆಯ ಕಳೆ ಬರುತ್ತದೆ. ಕೊನೆಗೆ ತಾಯಿ ಮುಪ್ಪಿನವಳಾದ್ದರಿಂದ ಭಾರ್ಯಾ ಭಾಷೆಯ ಮುಂದೆ ಮಾತೃಭಾವೆಯೆ ಆಟ ನಡಿಯದಂತಾಗುತ್ತದೆ. ನಮ್ಮಲ್ಲಿಯ ಅನೇಕರ ಮನೆಯಲ್ಲಿ ಶುಭಪ್ರಸಂಗದಲ್ಲಿಯಾದರೂ ಮರಾಠೀ ಭಾಷೆಯ ಉಚ್ಚಾರ ಘಟಿಸಲಿ ಎಂದು ನಮ್ಮ ಹೆಣ್ಣುಮಕ್ಕಳಿಗೆ ಗಂಡನ ಹೆಸರು ಹೇಳುವಾಗ ಮಾರಾಠೀ ಒಗಟಗಳನ್ನೇ ಹಾಕುವ ರೂಢಿಯನ್ನು ಹಚ್ಚಿದ್ದೇವೆ.
ಸಮಾಜದಲ್ಲಿಯ ಸಾಹಿತ್ಯಸೇವೆ
ಮನೆಯಲ್ಲಿಯ ಸಾಹಿತ್ಯ ಸೇವೆಯ ವಿಚಾರ ಈಗ ಹೇಳಿದ್ದಾಯಿತು. ಇನ್ನು ಸಾಮಾಜಿಕವಾಗಿ ನಾವು ಮರಾಠಿಭಾಷೆಯ ಸೇವೆಯನ್ನು ಯಾವ ರೀತಿಯಲ್ಲಿ ಮಾಡುತ್ತೇವೆಂಬುದನ್ನು ಸ್ವಲ್ಪದರಲ್ಲಿ ಹೇಳುತ್ತೇನೆ. ಕೆಲವು ಪ್ರಸಂಗದಲ್ಲಿ ನಿರ್ವಾಹವಿಲ್ಲದೆ ನಮಗೆ ಕನ್ನಡ ಮಾತನಾಡುವ ಅಗತ್ಯ ಬೀಳುತ್ತದೆ. ಆಗ ನಾವು ಮರಾಠೀ ಕ್ರಿಯಾಪದಗಳಿಗೆ ಕನ್ನಡ ಪ್ರತ್ಯಗಳನ್ನು ಹಚ್ಚಿ, ನಮ್ಮ ಭಾಷೆಯ ಪ್ರಭಾವ ಕನ್ನಡದ ಮೇಲೆ ಬೀಳುವಂತೆ ಮಾಡುತ್ತೇವೆ, ಕೋರ್ಟುಕಚೇರಿಗಳಲ್ಲಿ ಕೆಲಸ ಮಾಡುವ ನಮಲ್ಲಿ ಅನೇಕರಿಗೆ ಮೇಲಿಂದ ಮೇಲೆ ಇಂಧ ಪ್ರಸಂಗಗಳು ಬರುತ್ತವೆ. ಆಗ ಕನ್ನಡ ಬರುವದಿಲ್ಲ ಎಂದು ಹೇಳುವದು ನಮಗೇ ಕೇಡು. ಯಾಕಂದರೆ, ವಕೀಲಿಯ ಸನದು ಪಡೆಯುವಾಗ ಓದಲು, ಮಾತನಾಡಲು ಕನ್ನಡ ಚೆನ್ನಾಗಿ ಬರುತ್ತದೆ ಎಂದು ಹೇಳಲೇಬೇಕಾಗುತ್ತದೆ. ನಮ್ಮ ಉದ್ಯೋಗದ ಮುಖಾಂತರ ಕನ್ನಡವನ್ನು ಹೆಚ್ಚು ಸುಸಂಸ್ಕೃತವಾಗಿ ಮಾಡುವ ನಮ್ಮ ಪ್ರಯತ್ನವಂತೂ ಹೀಗೆ ನಡೆದೇ ಇದೆ. ಇಂಗ್ಲೀಷಿನಂತೆ ಕನ್ನಡದಲ್ಲಿಯೂ ಪುರುಷ ಪುಲ್ಲಿಂಗ, ಸ್ತ್ರೀ ಸ್ತ್ರೀಲಿಂಗ ಮಿಕ್ಕವೆಲ್ಲ ನಪುಂಸಕಲಿಂಗ ಎಂದು ನಿಯಮವಿದೆ. ಆದರೆ ನಾವು ಕನ್ನಡ ಮಾತನಾಡುವಾಗ ಮರಾಠಿಯೊಳಗಿನ ಲಿಂಗಭೇದಗಳನ್ನೂ ಅನೇಕ ಸಲ ಆ ಭಾಷೆಯಲ್ಲಿ ತುರುಕುತ್ತೇವೆ. ಆದರೆ ಒಂದೇ ಗಿಡದಿಂದ ಆದ ಕಂಭ ಪುಲ್ಲಿಂಗ ಜಂತೆ ಸ್ರೀಲಿಂಗ ಮೂಲ ಗಿಡ ಮಾತ್ರ ನಪುಂಸಕಲಿಂಗ ಇದು ಹೇಗೆ ಎನ್ನುವದೇ ನಮ್ಮ ಬುದ್ದಿಗೆ ಇನ್ನೂ ನಿಲುಕದ ವಿಷಯವಾಗಿದೆ. ಇದಕ್ಕೇನು ಮಾಡುವದು ?
ವರ್ತಮಾನಪತ್ರಗಳು
ಖುದ್ಧ ಬೆಳಗಾವಿಯ ಮರಾಠೀ ಸಾಹಿತ್ಯ ಸೇವಕರ ವಿಚಾರ ಹೇಳುವ ಮೊದಲು ಇಲ್ಲಿಯ ಮರಾಠೀ ವರ್ತಮಾನಪತ್ರಗಳ ನಾಮನಿರ್ದೀಶ ಮಾಡುವದು ಅಗತ್ಯ. ಇಂದು ಈ ಶಹರದಲ್ಲಿ ೫ ೬ ಮರಾಠೀ ವರ್ತಮಾನ ಪತ್ರಗಳು ಪ್ರತಿವಾರ ಪ್ರಸಿದ್ದವಾಗುತ್ತಿರುವದನ್ನು ನೋಡಿದರೆ, ಬೆಳಗಾಂವಿಯವರಿಗೆ ಮರಾಠೀ ಭಾಷೆಯ ಬಗ್ಗೆ ಎಷ್ಟೊಂದು ಅಭಿಮಾನವಿದೆ ಎನ್ನುವದು ಕಂಡು ಬರುತ್ತದೆ. ಆದರೆ ಇಲ್ಲಿ ಕಾಯದೆ ಮಂಡಳಗಳು ಇಲ್ಲದಿರುವದರಿಂದ, ಕೇವಲ ಮುನಸಿಪಾಲಿಟಿ ಹಾಗು ಲೋಕಲ್ ಬೋರ್ಡುಗಳಲ್ಲಿ ನಡೆಯುವ ಕೆಲಸದ ರಂಜಕ ವರ್ಣನೆಗಳನ್ನೇ ಜನರ ಮನಸ್ಸನ್ನು ಆಕರ್ಷಿಸಬೇಕಾಗುವದೆಂಬುದು ನಮ್ಮ ವರ್ತಮಾನಪತ್ರಗಳ ತಪ್ಪಲ್ಲ. ಕಡಮೆ ಇದ್ದರೂ ಔಷಧಧ ಜಾಹೀರುತುಗಳನ್ನೇ ಎದ್ದು ಕಾಣಿಸುವಂತೆ ಮಾಡಿ ವಾಚಕರ ಮನಸ್ಸನ್ನು ರಂಜಿಸಬೇಕಾಗುತ್ತದೆ. ಏನೇ ಆದರೂ ನಸ್ಟವನ್ನು ಸಹಿಸಿಕೂಡ ಮರಾಠೀ ಸಾಹಿತ್ಯ ಸೇವೆಯನ್ನು ಎಡೆಬಿಡದೆ ಮಾಡಬೇಕೆಂಬ ಧ್ಯೇಯದ ಹಾದಿಯಲ್ಲಿ ಕಾರ್ಯಮಾಡುತ್ತಿರುವ ನಮ್ಮ ವರ್ತಮಾನಪತ್ರಕಾರರನ್ನೂ ನಾವು ಅಭಿನಂದಿಸದೆ ಇರಲಾರೆವು.
ನಿಜವಾದ ಸಾಹಿತ್ಯದ ಕೊರತೆ
ಇನ್ನು ರೂಢಿಯಲ್ಲಿ ಯಾವದಕ್ಎಕ ಸಾಹಿತ್ಯ ಎಂದು ನಾವು ಹೇಳುತ್ತೇವೊ ಅಂಥ ಮರಾಠೀ ಸಾಹಿತ್ಯ ಬೆಳಗಾವಿಯಲ್ಲಿ ಇನ್ನೂ ಹೊರಬಂದಿಲ್ಲ ಎಂಬ ಮಾತನ್ನು ನಾವು ಒಪ್ಪಲೇಬೇಕು. ಈ ಹಾದಿಯಲ್ಲಿ ಪ್ರಯತ್ನಗಳು ನಡೆಯದೆ ಇಲ್ಲ. ಮಹಾರಾಷ್ಟ್ರದಲ್ಲಿ ಇದೀಗ ಬೆಳಕಿಗೆ ಬಂದ ಮೌಜ ಮೊದಲ್ಗೊಂಡು ಕೇಸರಿ ನವಾಕಾಳಡವರೆಗೆ, ಯಾವದೇ ಮರಾಠೀ ಪತ್ರಿಕೆ ಇರಲಿ ಅಧ ಹಿಡಿದು ಇತಿಯವರೆಗೆ ಒಂದಕ್ಷರವನ್ನೂ ಬಿಡದೆ ಭಕ್ತಿಯಿಂದ ಓದುವ ಸದ್ಗೃಹಸ್ತರು ಬೆಳಗಾವಿಯಲ್ಲಿ ಬೇಕಾದಷ್ಟು ಜನರಿದ್ದಾರೆ. ಅದೇ ರೀತಿಯಾಗಿ ಶ್ರೀ. ಅಸ್ನೊಡಕರರ ಸೊಗಸಿನ ಕಥಗಳಷ್ಟೇ ಕೈ. ಹರಿನಾರಾಯಣ ಆಪಟೇಯವರ ಕಾದಂಬರಿಗಳನ್ನೂ ಪಠಣಮಾಡುವ ವಾಚಕರಿದ್ದಾರೆ. ಆದರೆ ಇಲ್ಲಿಯ ಲೇಖಕರ ಲೆಕ್ಕಣಿಕೆಗಳು ಮಾತ್ರ ಶ್ರೀ. ಆಸ್ನೋಡಕರ ಅಥವಾ ಆಪಟೆಯವರ ಲೆಕ್ಕಣಿಕೆಗಳನ್ನು ಅನುಕರಿಸಲು ಅಸಮರ್ಥವಾಗಿವೆ. ಕಾದಂಬರಿಗಳ ವಿಷಯದಲ್ಲಿ ಹೇಳುವ ಮಾತೇ ನಾಟಕಕ್ಕೂ ಅನ್ವಯಿಸುವುದು. ಮಾನಾಪಮಾನ ನಾಟಕದ ಗೂಢ ಪದಗಳು, ಬಾಲಗಂದರ್ವನ ಬಾಯಿಂದ ಕೇಳಿದಮೇಲೆಯೇ ವೇದೋಪನಿಷತ್ತುಗಳಂತೆ ವಂದ್ಯವಾಗಿವೆ. ಭಟ್ಟರು ಹೇಗೆ ಅರ್ಥ ತಿಳಿಯದಲೆ ಮಂತ್ರಗಳನ್ನು ಮುಖೋದ್ಗತವಾಗಿ ಹೇಳುತ್ತಾರೋ ಹಾಗೆಯೇ ನಾವು ಈ ಪದಗಳನ್ನು ಹೊತ್ತಿಲ್ಲದ ಹೊತ್ತಿನಲ್ಲಿ ಗುಣಗುಣಿಸುತ್ತೇವೆ. ಆದರೆ ಈ ನಾಟಕ ಪ್ರೀತಿ ಇಷ್ಪಕ್ಕೇ ಕೊನೆಗೊಂಡಿದೆಯಾಗಲಿ ಸ್ವತಂತ್ರ ನಾಟಕ ರಚನೆಯಲ್ಲಿ ಪರ್ಯವಸಾನಗೊಳ್ಳಲಿಲ್ಲ. ಕಾದಂಬರಿ ನಾಟಕಗಳದೇ ಈ ಹಣೆಬರಹವಾದಮೇಲೆ ಶಾಸ್ತ್ರೀಯ ವಿಷಯಗಳ ಮೇಲೆ ಸಾಹಿತ್ಯ ನಿರ್ಮಿತಿಯಾಗುವ ಮಾತಂತೂ ದೂರವೇ ಉಳಿಯಿತು. ಬೆಳಗಾಂವಿಯ ರೇಲ್ವೆಮಂಡಲದ ಒಂದು ಪುಸ್ತಕವು ಮಾತ್ರ ಮರಾಠಿಯಲ್ಲಿ ಪ್ರಕಟವಾಯಿತು. ಕನ್ನಡದಲ್ಲಿಯೂ ಇದರದೊಂದು ಆವೃತ್ತಿಯು ಹೊರಟಿದ್ದರಿಂದ ಇದಕ್ಕೆ ಮರಾಠೀಸಾಹಿತ್ಯ ಕೃತಿ ಅನ್ನಲು ಬಾರದು ಎಂದು ಕೆಲವರ ಆಕ್ಷೇಪಣೆ. ಅದರೆ ಇದು ಮೂಲದಲ್ಲಿ ಮರಾಠಿಯಲ್ಲಿಯೇ ಬರೆಯಲಾಗಿದ್ದು, ಅದರ ಭಾಷಾಂತರವಷ್ಟೇ ಕನ್ನಡದಲ್ಲಾದದ್ದರಿಂದ ಇದನ್ನು ಮರಾಠೀಸಾಹಿತ್ಯ ದಲ್ಲಿ ಸೇರಿಸಲು ಯಾವ ಅಭ್ಯಂತರವೂ ಇಲ್ಲವೆಂದು ನಾವು ಎದೆತಟ್ಟಿ ಹೇಳುವೆವು. ಆದರೂ ಒಂಟಿ ಕೋಗಿಲೆಯಿಂದ ವಸಂತಮಾಸ ಹೇಗೆ ನಿರ್ಮಾಣವಾಗುವದಿಲ್ಲವೋ ಹಾಗೆ ಒಂದೇ ಗ್ರಂಥದಮೇಲಿಂದ ಬೆಳಗಾವಿಯಲ್ಲಿ ಮರಾಠೀ ಸಾಹಿತ್ಯ ನಿರ್ಮಾಣವಾಗುವದೆಂದು ಹೇಳುವದು ತಪ್ಪಾಗುವದು.
ಸಾಹಿತ್ಯದ ದುರ್ಭಿಕ್ಷೆಗೆ ಕಾರಣ
ಮೇಲೆ ಹೇಳಿದ ಸಾಹಿತ್ಯದ ಅಭಾವಕ್ಕೆ ಅನೇಕ ಕಾರಣಗಳಿವೆ ಅವುಗಳಲ್ಲಿ ಕೆಲವನ್ನೇ ಇಲ್ಲಿ ಉಲ್ಲೇಖಿಸುತ್ತೇನೆ. ಒಂದು ಭಾಷೆಯಲ್ಲಿ ಸಾಹಿತ್ಯ ನಿರ್ಮಾಣವಾಗುವದಕ್ಕೆ ವಿಶಿಷ್ಟ ತರದ ವಾತಾವರಣವು ಅಗತ್ಯ; ಅಂಥ ವಾತಾವರಣವು ಬೆಳಗಾಂವಿಯಲ್ಲಿಲ್ಲ ಎಂದು ನಮ್ಮ ಅಭಿಪ್ರಾಯ. ಪುಣೆಯ ಸುತ್ತುಮುತ್ತಲೂ ಹಬ್ಬಿರುವ ಬೆಟ್ಟದಮೇಲೆ ನಿಂತು, ಯಾವ ಸಾಹಿತ್ಯಕನಾದರೂ ಸಿಂಹಗಡದಕಡೆಗೆ ದೃಷ್ಟಿಯನ್ನು ಚೆಲ್ಲಿದರೆ ಅವನಿಗೆ ಕೂಡಲೆ ‘ಗಡ ಆಲಾ ಪಣ ಸಿಂಹ ಗೇಲಾ’ ಎಂಬ ಕಾದಂಬರಿಯನ್ನು ಬರೆಯುವ ಸ್ಫೂರ್ತಿಯಾಗುತ್ತದೆ. ಅದರಂತೆಯೇ ಶನಿವಾರ ವಾಡೆಯನ್ನು ನೋಡುವವನಿಗೆ ಬಾಜೀರಾವ್‌ಮಸ್ತಾನಿ ಇಲ್ಲವೆ ರಾಘೋಬಾದಾದಾನ ಅಣ್ಣತಮ್ಮಂದಿರ ಜಗಳದ ಸ್ಮರಣೆಯಾಗುತ್ತದೆ. ನಾಮಶೇಷವಾದ ಬುಧವಾರವಾಡೆಯನ್ನು ನೋಡಿದವರಿಗೆ ವಾಸುದೇವ ಬಳವಂತ ಫಡಕೆಯ ಬಂಡಾಯದ ನೆನಪಾಗದೆ ಇರದು. ಈ ಸ್ಥಿತಿ ಬೆಳಗಾವಿಗಿಲ್ಲ. ಮರಾಠಿಗರ ಮತ್ತು ಪೇಶವೆಯರ ಇತಿ ಹಾಸಗಳೇ ನಮ್ಮ ಲಕ್ಷ್ಯವನ್ನು ಹೆಚ್ಚಾಗಿ ಸೆಳದದ್ದರಿಂದ ಬೆಳಗಾವಿಯ ಪ್ರಾಚೀನ ಇತಿಹಾಸವನ್ನು ನಾವು ಕಣ್ಣೆತ್ತಿಸಹ ನೋಡಲಿಲ್ಲ. ಮೇಲಾಗಿ ಆ ಇತಿಹಾಸದಲ್ಲಿ ಇರುವದಾದರೂ ಏನು? ವಿಜಯನಗರದ ಆಳಿಕೆನಂತರ ಬೆಳಗಾವಿಯ ಇತಿಹಾಸವೆಂದರೆ ಈ ಊರು ಒಬ್ಬನ ಆಧೀನದಿಂದ ಇನ್ನೊಬ್ಬನ ಅಧೀನಕ್ಕೆ ಹೋದದ್ದೇ ಕಂಡು ಬರುವದು. ಮಲೆನಾಡಿನ ಮರ ಹೇಗೆ ಬೆಳವಲದಲ್ಲಿ ಬೆಳೆಯುವದಿಲ್ಲವೋ ಹಾಗೆ ಇಲ್ಲಿ ಮರಾಠೀ ಸಾಹಿತ್ಯದ ಗತಿ ಆಗಿದ್ದರೆ ಆಶ್ಚರ್ಯಪಡುವ ಕಾರಣವಿಲ್ಲ.
ಅದರಂತೆಯೇ, ನಾವು ಕರ್ತೃತ್ವಹೀನರು ನಮ್ಮ ಕೈಯಿಂದ ಯಾವ ಮಹತ್ಕಾರ್ಯವೂ ಆಗಲಾರದು, ಮಹಾರಾಷ್ಟ್ರ್ರೀಯರೇ ನಮ್ಮ ಮಾರ್ಗದರ್ಶಕರಾಗಬೇಕು, ನಾವು ಮಾತ್ರ ಕೇವಲ ಅವರನ್ನು ಅನುಕರಿಸುವದಕ್ಕೆ ತಕ್ಕವರು. ನಮ್ಮಕಿಂತಲೂ ಅವರು ಶ್ರೇಷ್ಠರು ಎಂಬ ಭಾವನೆ ಯಾವದಕ್ಕೆ ಇಂಗ್ಲೀಹಿನಲ್ಲಿ Inferiority Complex (ಸ್ವಯಂ ತುಚ್ಛತೆಯ ಭಾವನೆ) ಎಂದು ಹೇಳುವರೊ ಅದು ನಮಗೆ ಬಡಿದು ಕೊಂಡಿದೆ. ನಮ್ಮಲ್ಲಿಯ ಸಾಹಿತ್ಯದ ಅಭಾವಕ್ಕೆ ಇದೂ ಒಂದು ಕಾರಣವಾಗಿರಬಹುದು.
ಇನ್ನೊಂದು ಕಾರಣವನ್ನೂ ಹೇಳಬಹುದು. ನಮ್ಮ ಮರಾಠೀ ವಾಚನವು, ಕಾದಂಬರಿ, ನಾಟಕ ಮತ್ತು ವರ್ತಮಾನಪತ್ರ ಇವುಗಳನ್ನು ದಾಟಿ ಮುಂದೆ ಹೋಗಿಲ್ಲ. ಅಂತೆಯೇ ಅದು ನಮ್ಮ ಮೆದುಳಿನಲ್ಲಿ ರಸವಾಗಿ ಬೆರೆತಿಲ್ಲ. ಇತ್ತ ನಮಗೆ ಸರಿಯಾಗಿ ಕನ್ನಡ ಮಾತನಾಡುವದಕ್ಕೂ ಬಾರದು. ಇತ್ತ ಮರಾಠಿ ಬರೆಯುವದಕ್ಕೂ ಬಾರದು ಹೀಗೆ ಕರುಣಾಜನಕವಾಗಿದೆ ನಮ್ಮ ಸ್ಥಿತಿ.
ಇವೆಲ್ಲದರ ಜತಿಗೆ ನಾಲ್ಕನೆಯದೊಂದು ಕಾರಣ ಇರುವ ಸಂಭವವೂ ಇದೆ. ಅದು ಯಾವದೆಂದರೆ ಕ್ರಮವಿಭಾಗದ ತತ್ವ ಸಾಹಿತ್ಯ ಕ್ಷೇತ್ರದಲ್ಲಂತೂ ಇದು ಪೂರ್ಣತ್ವಕ್ಕೇ ಮುಟ್ಟಿದೆ. ಲೇಖಕ ಬೇರೆ, ಮುದ್ರಕ ಬೇರೆ, ಪ್ರಕಾಶಕ ಬೇರೆ ಈ ಮೂರು ವಿಭಾಗಗಳಂತೂ ಸರಿಯೆ ಮುಂದೆ ಸಾಹಿತ್ಯದ ಪ್ರಸಾರದ ದೃಷ್ಟಿಯಿಂದ ಪುಸ್ತಕವನ್ನು ಕೊಳ್ಳುವವರು ಬೇರೆ ಅದನ್ನು ಓದುವವರು ಬೇರೆ ಮತ್ತು ಅವರಲ್ಲಿ ಬರದಂತೆ ಆಚರಿಸುವವರು ಬೇರೆ, ಹೇಗೆ ಮತ್ತೆ ಈ ಶ್ರಮವಿಭಾಗ ಪರಂಪರೆ ಮುಂದರಿದದ್ದು ಕಂಡುಬರುವದು ಈ ತತ್ತ್ವಕ್ಕನು ಸಾರವಾಗಿ ನಮ್ಮ ಕಡೆಗೆ ಪುಸ್ತಕಗಳನ್ನು ಕೊಳ್ಳುವದು ಮತ್ತು ಅವನ್ನು ಓದುವದು ಇವೆರಡೇ ಕೆಲಸಗಳು ಬಂದಿರಬೇಕು ಎಂದಿಸನಿಸುವದು.
ಮೇಲಿನ ಕಾರಣಗಳನ್ನೆಲ್ಲ ತೂಗಿ ನೋಡಲಾಗಿ ನಮಗೆ ಮನವರಿಕೆ ಯಾಗುವ ಮಾತು ಇದು: ಕರ್ನಾಟಕದ ವಾತಾವರಣದಲ್ಲಿ ಮರಾಠೀ ಸಾಹಿತ್ಯ ಹುಟ್ಟೀತು ಎಂದು ಅಪೇಕ್ಷಿಸುವದೆಂದರೆ ಹುಣಸೆಯ ಟೊಂಗೆಗೆ ಮಾವಿನ ಆಂಟುಮಾಡಿ ಅದರಿಂದ ಮಧುರ ಫಲನನ್ನು ಅಪೇಕ್ಷಿಸಿದಂತೆಯೇ ಇದೆ.
ನಮ್ಮ ನ್ಯೂನತೆಯ ವಿವೇಚನೆಯನ್ನು ಇಷ್ಟೊಂದು ಕೂಲಂಕಷವಾಗಿ ಮಾಡಿದ ಕಾರಣವಿಷ್ಟೇ: ಬಳಗಾವಿಯ ಜನರು ಮರಾಠೀ ಸಾಹಿತ್ಯ ಪರಿಷತ್ತನ್ನೇನೋ ಕರೆದರು, ಆದರೆ ಅವರಲ್ಲಿ ಮಾದರಿಗೂ ಒಬ್ಬ ಗ್ರ೦ಥಕರ್ತನಿಲ್ಲವಲ್ಲ ಎಂದು ನೀವು ಟೀಕಮಾಡಬಾರದೆಂಬುದೇ ನನ್ನ ಉದ್ದೇಶ. ಭಕ್ತಿಮಾರ್ಗದಲ್ಲಿ ಭಗವಂತನ ದಾಸರ ದಾಸರು ಅಥವಾ ದಾಸಾನುದಾಸರು ಹೇಗೆ ಇರುವವರೋ, ಹಾಗೆ ನೀವು ಸಾಹಿತ್ಯಸೇವಕರಾದರೆ ಸಾಹಿತ್ಯಸೇವಕರ ಸೇವಕರು ನಾವು ಎಂದು ವಿನಮ್ರಭಾವದಿಂದ ಹೇಳಿಕೊಳ್ಳುತ್ತೇವೆ.
ನಮ್ಮ ಕನ್ನಡ ಮಿತ್ರರು ನಮ್ಮ ಮರಾಠಿಯ ಅಭಿಮಾನಕ್ಕಾಗಿ ನಮ್ಮನ್ನು ದೂಷಿಸುತ್ತಾರೆ. ಹತ್ಹತ್ತು ತಲೆಮಾರುಗಳು ಕರ್ನಾಟಕದಲ್ಲಿ ಕಳೆದರೂ, ನಮ್ಮ ಅಸ್ತಿತ್ವವೇ ಕರ್ನಾಟಕದ ಮೇಲೆ ಅವಲಂಬಿಸಿದ್ದರೂ, ನಾವಿನ್ನೂ ಮಹಾರಾಷ್ಟ್ರದ ಅಭಿಮಾನಿಗಳಾಗಿರುವದನ್ನು ನೋಡಿ ಅವರು ಆಶ್ಚರ್ಯಪಡುತ್ತಾರೆ. ನಾವು ಮಹಾರಾಷ್ಟ್ರದ ಅಭಿಮಾನಿಗಳೆಂದು ಹೇಳಿ ಕೊಳ್ಳಲು ನಮಗೂ ಗೌರವವೆನಿಸುತ್ತದೆ. ಈ ವಿಷಯದಲ್ಲಿ ಮರಾಠೀ ರಾಜದ ಸಂಸ್ಥಾಪಕನಾದ ಶಿವಾಜಿ ಕೂಡ ನಮ್ಮಿಂದ ಪಾಠಕಲಿಯುವ ಹಾಗಿದೆ. ಯಾಕಂದರ ಶಿವಾಜಿ ಮಹಾರಾಜನ ಮೂಲಪುರುಷ ಸುಜಿನ ಸಿಂಹನೆಂಬವನು ರಜಪೂತಸ್ಥಾನದವನು. ತಾನು ರಜಪೂತನೆಂಬುದದನ್ನು ಮರೆತು, ಮರಾಠರ ರಾಜನೆಸಿಸಿಕೊಳ್ಳುವದೇ ಭೂಷಣ ಎಂದು ಶಿವಾಜಿ ಭಾವಿಸಿದನು. ರಾಮದಾಸರು ಕೂಡ ‘ಮರಾಠಾತಿತುಕಾ ಮೇಳವಾವಾ’ ಎಂದು ತಪ್ಪು ಉವದೇಶವನ್ನೇ ಮಾಡಿದರು. ಈ ಕಾಲದಲ್ಲಿ ಶಿವಾಜಿ ಮಹಾರಾಜರು ಬದುಕಿ ಇದ್ದರೆ ಅಧವಾ ನಾವು ಯಾರಾದರೂ ಅವರ ಕಾಲದಲ್ಲಿ ಜನ್ಮಿಸಿದ್ದರೆ ರಾಜಪುತಾನೆಯಿಂದ ಶಿಕ್ಷಕನನ್ನು ಕರೆಯಿಸಲು ಅವರಿಗೆ ಸಲಹೆ ಕೊಡುತ್ತಿದ್ದೆವು. ಆದದ್ದಾಗಿ ಹೋಯಿತು. ಈಗ ಆ ಮಾತನಾಡಿ ಏನು ಪ್ರಯೋಜನ? ಶಿವಾಜಿಮಹಾರಾಜರೂ ಅವರ ಪೂರ್ವಜರೂ ಮಾರಾಠರೊಡನೆ ಸಮರಸವಾಗಿದ್ದರೆಂಬ ಮಾತು ಸುಳ್ಳಲ್ಲ.
ಕೇಸರಿಕಾರರ ಅಬಿನಂದನ
ಇತ್ತೀಚೆ ಆರೇಳು ವರ್ಷ ದೇಶಸೇವೆಯ ಬಿರುಗಾಳಿಯೇ ಎದ್ದಿದೆ. ಆ ಝಂಜಾವಾತದಲ್ಲಿ ಸಿಕ್ಕು ನಾವು ಕೂಡಿ ಕನ್ನಡಿಗರೊಡನೆ ಎಲ್ಲಿ ಬೆರತು ಹೋಗುತ್ತೇವೋ ಎಂದು ಹೆದರಿಕೆಯುಂಟಾಗಿತ್ತು. ಆದರೆ ಈ ಸಂಕಟದೊಳಗಿಂದ ಕೇಸರೀಕಾರರು ಹಾಗು ಅವರಂಥ ಇತರ ಮಹಾರಾಷ್ಟ್ರೀಯ ಮಿತ್ರರು ನಮ್ಮನ್ನು ಪಾರುಮಾಡಿದರು.
ಲೋಕಮಾನ್ಯರು ಜೀವಿಸಿರುವಾಗ ಅವರ ಕೇಸರೀ ಪತ್ರಿಕೆ ಜನರಿಗೆ ಮಾರ್ಗದರ್ಶಕ, ಸರಕಾರಕ್ಕೆ ಲೋಕಮತ ನಿದರ್ಶಕ ಎಂಬ ರೀತಿಯಲ್ಲಿ ನಡೆದಿತ್ತು. ಆದರೆ ಈಗ ಆ ಸ್ಥಿತಿ ಇಲ್ಲ. ಬಹುಕಾಲದಿಂದ ಗೋಪುರದಲ್ಲಿ ದೊಡ್ಡ ಗಡಿಯಾರವನ್ನಿಟ್ಟು, ಅದು ಆಮೇಲೆ ನಿಂತುಹೋದರೆ, ಹಾಯ್ದಾಡುವ ಜನರು ಪುನಃ ಪುನಃ ಮರೆವಿನಿಂದ ಅದರ ಕಡೆಗೇ ಹೇಗೆ ನೋಡುವರೊ ಆ ರೀತಿಯಾಗಿ ಲೋಕಮಾನ್ಯರು ನಿಧನಹೊಂದಿದ ಮೇಲೂ ಅವರ ಕೇಸರಿ ತಮಗೆ ಮಾರ್ಗದರ್ಶಕವಾಗಬಹುದೆಂದು ಜನರು ಈಗಲೂ ಇಚ್ಛಿಸುತ್ತಾರೆ. ದುರ್ದೈವದಿಂದ ಈ ಅವರ ಇಚ್ಛೆ ಸಫಲವಾಗುವದಿಲ್ಲ ಎಂದು ಬೇರೆ ಹೇಳುವ ಕಾರಣವಿಲ್ಲ. ಸರಕಾರಕ್ಕೆ ತಿಳಿವಳಿಕೆ ಕೊಡುವ ಕಾರ್ಯವು ಸಹ ಕೇಸರಿಯಿಂದ ಈಗ ಆಗುತ್ತಿಲ್ಲ. ವಾರಜ ಹಾರಿದ ಕನ್ನಡಿಯಂತೆ ಅದು ನಿರುಪಯುಕ್ತವಾಗಿದೆ. ಆದರೆ ನಮ್ಮ ಮಟ್ಟಿಗೆ ಅದು ನಿಜವಾಗಿಯೇ ಉಪಕಾರಿ ಯೆನಿಸಿಕೊಂಡಿದೆ. ತನ್ನ ಸ್ವಂತ ಖರ್ಚಿನಿಂದ ಕರ್ನಾಟಕದಲ್ಲಿ ಒಬ್ಬ ಸುದ್ದಿಗಾರನನ್ನಿಟ್ಟು ಕರ್ನಾಟಕದ ಯಾವ ಮೂಲೆಯಲ್ಲಿ ಏನೇ ಕೊಳೆ ಇದ್ದರೂ ಅದನ್ನು ಪ್ರತಿವಾರ ತಪ್ಪದೆ ಪ್ರಕಟಿಸಿ, ಕರ್ನಾಟಕದ ಕಡೆಗೆ ಪ್ರೇಮಾದರಗಳಿಂದ ನೋಡುವ ನಮ್ಮ ಪ್ರವೃತ್ತಿಯಿಂದ ಪರಾವೃತ್ತಿಗೊಳಿಸುವ ಪುಣ್ಯ ಕಾರ್ಯಮಾಡಿದ್ದಾರೆ. ಟೈಮ್ಸ್ ಪತ್ರಿಕೆಯವರು ‘Through Indian eyes ಎಂಬ ಶಿರೋನಾಮದ ಕಳಗೆ ಯಾನ ಸಂಗತಿಗಳನ್ನು ಬರೆದು ತಮ್ಮವರಿಗೆ ಉಪಕಾರ ಮಾಡುತ್ತಿದ್ದಾರೋ ಅದೇ ಬಗೆಯಲ್ಲಿ ಕೇಸರಿಕಾರರು ‘ಕರ್ನಾಟಕದ ಬಾತಮೀಪತ್ರ’ ಪ್ರಸಿದ್ಧಿಸಿ ನಮ್ಮ ಮೇಲೆ ಉಪಕಾರ ಮಾಡುತ್ತಿದ್ದಾರೆ ‘ನಿಂದಕರ ಮನೆ, ನೆರೆಯಲ್ಲಿರಬೇಕು’ ಎನ್ನುವದರ ಬದಲಾಗಿ ನಿಂದಕ ಪತ್ರಿಕೆ ಎಂದರೆ ಕೇಸರಿ’ ಎನ್ನುವಂತಾಗಿದೆ ಕನ್ನಡಿಗರು! ಕೇಸರಿಯ ಬರವಣಿಗೆಯಿಂದ ಕನ್ನಡಿಗರ ಹಾಗು ಕರ್ನಾಟಕದೊಳಗಿನ ಮರಾಠಿಗರ ಹಿತಸಂಬಂಧಗಳು ಒಂದೇ ಎಂಬ ಭಾವನೆಯಳಿದು, ನಮ್ಮ ವೈಶಿಷ್ಟ್ಯವನ್ನು ಉಳಿಸಿಕೊಳ್ಳಲು ಸಹಾಯಕವಾಗಿದೆ. ಹಿಂದುಸ್ಥಾನದಲ್ಲಿ ಇಂಗ್ಲೀಷರು ಯಾವ ವಿಧವಾಗಿ ಇರುತ್ತಾರೋ ಹಾಗೆ ಕರ್ನಾಟಕದಲ್ಲಿ ನಾವು ಇರುತ್ತೇವೆ ಎಂದು ಅನೇಕರು ತಿಳಿಯುತ್ತಾರೆ; ಆದರೆ ಇದು ಸಂಪೂರ್ಣ ಯೋಗ್ಯ ಎಂದು ಯಾರೂ ಭಾವಿಸಕೂಡದು.
ಈ ವಾದದಲ್ಲಿ ಕೇಸರಿಕಾರರ ಆಭಾರ ಮನ್ನಸುವದು ಮತ್ತು ಅವರನ್ನು ಅಭಿನಂದಿಸುವದು ಮರೆತು ಹೋದೀತು. ಯಾವದೇ ಮಾತು, ಮತ, ಹಾಗು ಠರಾವುಗಳನ್ನು ಸುಲಭ ಹಾಗು ಸುಸ್ಪಷ್ಟವಾದ ಭಾಷೆಯಲ್ಲಿ ಇಡದೆ ಅನೇಕ ತೊಡಕಿನ ಸಂಯುಕ್ತ ಕ್ರಿಯಾಪದಗಳನ್ನೂ, ಸಾಮಾಸಿಕ ಪದಗಳನ್ನು ಬಳಸಿ ಬೇಕಾದ ಅರ್ಧವು ಹೊರಡುವಂತೆ ಬರೆಯುವ ಪದ್ಧತಿಯನ್ನು ಪ್ರಾರಂಭಿಸಿದ್ದಕ್ಕಾಗಿ ಈ ಪರಿಷತ್ತು ಅವರನ್ನು ಅಭಿನಂದಿಸದೆ ಇರಲಾರದು. ಯಾಕಂದರೆ ಈ ಲೇಖಪದ್ದತಿ ಬಳಸಿದ್ದಕ್ಕಾಗೆಯೇ ಪತ್ರಿಕೆಯ ಆಕಾರ ಬೆಳೆಯಿಸಬೇಕಾಯಿತೆಂಬದನ್ನು ಅನೇಕರು ಬಲ್ಲರು. ಅವರು ಹಣವನ್ನು ಸದುಪಯೋಗಕ್ಕೆ ಹಚ್ಚಿ ಕರ್ನಾಟಕದಲ್ಲಿ ಸ್ವತಂತ್ರ ಒಬ್ಬ ಸುದ್ದಿಗಾರನ ಸ್ಥಾನವನ್ನು ನಿರ್ಮಿಸಿ ಅವನು ಕಳಿಸುವ ಸುದ್ದಿ ಸಮಾಚಾರಗಳನ್ನು ಕಾಲಕಾಲಕ್ಕೆ ಕೇಸರಿಯಲ್ಲಿ ಪ್ರಕಟಸಿದ ಮಹೋಪಕಾರಕ್ಕಾಗಿ ಕರ್ನಾಟಕ ಮರಾಠಿಗರ ವತಿಯಿಂದ ನಾನು ಅವರ ಆಭಾರ ಮನ್ನಿಸುತ್ತೇನೆ.
ಸರಸ್ಪತಿಯ ಪೂಜಕರೆ, ಇಂದಿನ ಮಂಗಲ ಪ್ರಸಂಗದಲ್ಲಿ ಇನ್ನೊಂದು ಸಮಾಧಾನದ ಸಂಗತಿಯನ್ನುಲ್ಲೇಖಿಸದೆ ಇರಲಾರೆ. ಸರಕಾರೀ ನವಕರಿಗಳಿಗಾಗಿ ಮತ್ತು ಲೋಕನಿಯುಕ್ತ ಸಭೆಗಳಲ್ಲಿಯ ಪೊಳ್ಳು ಗೌರವದ ಸ್ಥಾನಗಳಿಗಾಗಿ ನಮ್ಮ ಬ್ರಾಹ್ಮಣ ಬ್ರಾಹ್ಮಣೇತರರಲ್ಲಿ ತಿಕ್ಕಾಟಗಳುಂಟಾಗುವ ಮಾತು ಸುಪ್ರಸಿದ್ಧ! ಆದರೆ ಈ ಸಾಹಿತ್ಯ ಪರಿಷತ್ತಿನ ಮಟ್ಟಿಗೆ ನಾವು ಬ್ರಾಹ್ಮಣ ಮತ್ತೂ ಬ್ರಾಹ್ಮಣೇತರರು ಒಂದಾಗಿ ಸರಸ್ವತಿಯ ರಥವನ್ನು ಜೋಡಿಯಿಂದ ಎಳೆಯಲು ಹೆಗಲು ಒಡ್ಡಿದ್ದೇವೆ ಎಂಬದು ಕೌತುಕಾಸ್ಪದವಾದದ್ದು! ಇರಲಿ ಮಿತ್ರರೆ ಬೆಳಗಾಂವಿಯಲ್ಲಿ ಮರಾಠೀ ಸಾಹಿತ್ಯ ನಿರ್ಮಾಣವಾಗುವದಿಲ್ಲ ಎಂದು ಮನಸ್ಸು ಬೇಸರಮಾಡಿಕೊಳ್ಳ ಬೇಡಿರಿ. ಸಾಹಿತ್ಯ ಸೇವಕರ ಸೇವೆಯನ್ನು ಸಲ್ಲಿಸಲು ಇಲ್ಲಿ ಅಕ್ಕಿ, ತುಪ್ಪ ಸಮೃದ್ಧಿಯಾಗಿ ದೊರೆಯುತ್ತವೆ. ಇಷ್ಟಾಗಿ ಕೆಲವು ಕೊರತೆಗಳು ಇದ್ದರೆ ತಾವು ಅವನ್ನು ಗಮನಿಸಲಾರಿರಿ ಎಂದು ಆಶಿಸುತ್ತೇನೆ.
ಸದ್ಗೃಹಸ್ಥರೆ, ನನ್ನ ಭಾಷಣ ಪ್ರಮಾಣ ಮೀರಿ ಬಿಳೆಯಿತೆಂಬದರ ಅರಿವು ನನಗಿದೆ. ಆದರೆ ಅದನ್ನು ಮುಗಿಸುವ ಪೂರ್ವದಲ್ಲಿ ಸ್ವಾಗತಮಂಡಳದ ಪರವಾಗಿ ೨-೩ ಆವಶ್ಯಕ ಠರಾವುಗಳನ್ನು ಸ್ವಲ್ಪದರಲ್ಲಿ ವಿವೇಚಿಸುತ್ತೇನೆ.
ಒಂದನೆಯ ಠರಾವು ಹೀಗಿರಬೇಕು:-ಪುಣೆ ಅಥವಾ ಮಹಾರಾಷ್ಟ್ರದ ಯಾವದೇ ಭಾಗದಲ್ಲಿ ಗುಜರಾಥೀ ಸಾಲೆ ಸ್ಥಾಪಿತವಾದರೆ, ಯಾವ ತತ್ತ್ವದ ಮೇಲೆ ಅದನ್ನು ವಿರೋಧಿಸಲಾಗುವದೋ ಅದೇ ತತ್ತ್ವದ ಮೇಲೆ ಕರ್ನಾಟಕದಲ್ಲಿ ಸ್ಥಾನಿತವಾಗುವ ಮರಾಠಿ ಸಾಲೆಯನ್ನು ವಿರೋಧಿಸುವದು ಶುದ್ಧ ಅನ್ಯಾಯದ್ದೂ ದ್ವೇಷಮೂಲಕವಾದದ್ದೂ ಎಂದು ಈ ಪರಿಷತ್ತಿನ ಪ್ರಾಮಾಣಿಕ ಅಭಿಪ್ರಾಯವಿದೆ. ಇಂಥ ಠರಾವನ್ನು ಯಾಕೆ ಮಾಡಬೇಕೆಂಬುದರ ಕಾರಣಗಳನ್ನು ನಾನು ಇಲ್ಲಿ ಚರ್ಚಿಸುವದಿಲ್ಲ. ನಮಗೆ ಒಪ್ಪಿಗೆಯಾದ ವಿಷಯ ಇನ್ನೊಬ್ಬರಿಗೂ ಒಪ್ಪಿಗೆ ಯಾದೀತೆಂದು ಹೇಳಲು ಬರುವದಿಲ್ಲ. ಇನ್ನು ನಾನು ಸೂಚಿಸುವ ಎರಡನೆಯ ಠರಾವು ಅಷ್ಟು ವಾದಗ್ರಸ್ತವಾಗಿಲ್ಲ ಅದು ಹೀಗೆ:-ಮರಾಠೀ ಸಾಹಿತ್ಯದ ವಿಶೇಷ ಪ್ರಸಾರಕ್ಕಾಗಿ ಮುಂದಿನ ಮೂರು ವರ್ಷಗಳ ಮರಾಠೀ ಸಾಹಿತ್ಯ ಸಮ್ಮೇಲನಗಳನ್ನು ಅನುಕ್ರಮವಾಗಿ ಅಂದಮಾನ, ಫಿಜಿ ನಡುಗಡ್ಡೆಗಳು ಹಾಗು ದಕ್ಷಿಣ ಆಫ್ರಿಕಾ ಈ ಭಾಗಗಳಲ್ಲಿ ನೆರೆಯಿಸಬೇಕು. ಮತ್ತು ಅದಕ್ಕಾಗಿ ಅಲ್ಲಿ ವಾಸವಾಗಿರುವ ಮಾರಾಠಿಗರೊಡನೆ ಈಗಿನಿಂದಲೇ ಪತ್ರವ್ಯವಹಾರವನ್ನು ಪ್ರಾರಂಭಿಸಬೇಕು.
ನಾನು ಈಗ ಸೂಚಿಸುತ್ತಿರುವ ಮೂರನೆಯ ಠರಾವು ಸರ್ವರಿಗೂ ರುಚಿಸೀತು ಎಂದು ಹೇಳಲಾರೆ. ಕಾರ್ಯದ ಮಹತ್ವವನ್ನು ಲಕ್ಷಿಸಿದರೆ ಈ ಠರಾವುಕೂಡ ಸ್ತೀಕೃತವಾಗಬಹುದೆಂದು ಆಶಿಸುತ್ತೇನೆ. ಆ ಠರಾವು ಹೀಗಿದೆ :-ಬೆಳಗಾಂವಿ ಶಹರದಲ್ಲಿ ಮರಾಠೀ ಭಾಷೆ ಸ್ಥಿರವಾಗಿ ಉಳಿಸಿ ಕೊಳ್ಳುವದಕ್ಕಾಗಿ ಪ್ರತಿವರ್ಷ ಕನಿಷ್ಠ ಇಲ್ಲಿಯ ನೂರು ಹುಡುಗಿಯರನ್ನು ಮಹಾರಾಷ್ಟ್ರದ ವರರ ಜೊತೆಗೆ ವಿವಾಹ ಜರುಗಿಸಬೇಕು. ಮತ್ತು ಅದೇ ಪ್ರಕಾರ ಮಹಾರಾಷ್ಟ್ರದ ನೂರು ಹುಡುಗಿಯರನ್ನು ಬೆಳಗಾವಿ ಮತ್ತು ಸುತ್ತುಮುತ್ತಲಿನ ಊರುಗಳ ವರರೆ ಜೊತೆಗೆ ಮದುವೆಮಾಡಿಕೊಡಬೇಕು. ಇಂಥ ಹೆಣ್ಣು ಮಕ್ಕಳು ಅತ್ತೆಮನೆ ತವರುಮನೆಗಳಿಗೆ ಹೋಗುವ ಬರುವ ಖರ್ಚು ಹೆಚ್ಚು ಬರದಂತೆ ನೋಡಿಕೊಳ್ಳುವದು ಅಗತ್ಯ. ಸಾಹಿತ್ಯ ಸಮ್ಮೇಲನದ ಅಧ್ಯಕ್ಷರ ಶಿಫಾರಸ್‌ಪತ್ರ ( Certificate ) ತೋರಿಸಿದರೆ, ಇಂಥ ಹೆಣ್ಣು ಮಕ್ಕಳಿಗೆ ಅರ್ಧದರದಲ್ಲಿ ಪ್ರವಾಸಮಾಡುವ ಸೌಕರ್ಯವನ್ನು ಒದಗಿಸಲು ರೇಲ್ವೆ ಕಂಪನಿಗಳಗೆ ವಿನಂತಿಮಾಡಿಕೊಳ್ಳಬೇಕು. ಈ ಠರಾವನ್ನು ಇದೇ ಭಾಷೆಯಲ್ಲಿ ಮುಂಡಿಸಿದರೆ ಕೆಲವರಿಗೆ ಅದುತ್ರಾಸದಾಯವಾಗಬಹುದು. ಕೇಸರೀಕಾರರ ಭಾಷಾ ಪದ್ದತಿಯ ಮೇರೆಗೆ ಅದಕ್ಕೊಂದು ವಾಕ್ಯ ಹೀಗೆ ಜೋಡಿಸಬಹುದು. ‘ಯಾರಿಗೆ ಈ ಠರಾವು ಒಪ್ಪಿಗೆ ಇದೆಯೋ ಅವರು ಅದನ್ನು ಆಚರಣೆಯಲ್ಲಿ ತರಲು ಶಕ್ಯವಾದರೀತಿಯಲ್ಲಿ ಪ್ರಯತ್ನಿಸಬೇಕು ಎಂದು ಈ ಪರಿಷತ್ತು ಸೂಚಿಸುತ್ತದೆ’
ಸಭಗೃಹಸ್ಥರೆ, ನನಗೆ ಹೇಳಬೇಕಾದದ್ದನ್ನೆಲ್ಲ ಹೇಳಿದ್ದೇನೆ. ನಮ್ಮಿಂದ, ಸಾಹಿತ್ಯ ಭಕ್ತರ ಆದರಸತ್ಕಾರ ಆಗಬೇಕಾದ ಪ್ರಮಾಣದಲ್ಲಿ ಆಗಲಿಕ್ಕಿಲ್ಲ ಎಂಬ ಮಾತನ್ನು ನಾನು ಅರತಿದ್ದೇನೆ. ಆದರೂ ನಮ್ಮಲ್ಲಿ ತೋರುವ ನ್ಯೂನತೆಗಳನ್ನು ಮನಸ್ಸಿನಲ್ಲಿ ತರದೆ ನಮ್ಮ ಅಲ್ಪ ಸೇವೆಯನ್ನು ಸ್ವೀಕರಿಸುವರೆಂದು ಆಶಿಸಿ, ಪುನಃ ಒಂದು ಸಲ ಸ್ವಾಗತ ಬಯಸುತ್ತೇನೆ.
*****