ಒಡಲು-ಒಡೆಯನು ತೀರಿಕೊಳಲು ಹುಟ್ಟಿದ ಮನೆಗೆ
ಬಂದ ಹೆಣ್ಣಿನ ಹಾಗೆ. ಅವಳಣ್ಣ ತಮ್ಮದಿರು
ತಮ್ಮದೆನುವೊಲು ಅವಳ ಆಸ್ತಿಪಾಸ್ತಿಯ ಬಳಿಸಿ
ಬಿಂಕದೋರುವರು; ಅವಳೋ ಇವರ ಒಗೆತನವ
ಕಿಳ್ಳಿಕೇತನು ಗೊಂಬೆ ಕುಣಿಸುವೊಲು ಕುಣಿಸುವಳು.
ಸರಸದುರವಣಿಗೆ ಮೆರವಣಿಗೆ. ಕಣ್ಣೀರು ತ-
ಣ್ಣೀರು. ಮಡದಿಯರಿಗೊಡೆಯರಿದ್ದೂ ಇಲ್ಲ.
ಅವಳಿಗೆ ಮೊದಲೆ ಇಲ್ಲ; ಇದು ದಿನದಿನದ ಬದುಕು.
ಒಡ ಹುಟ್ಟೆ! ತಂತಮ್ಮ ಒಗೆತನದ ಬಗೆಯ ಕಾ-
ಣಿರೆ? ಜಂಭದಲಿ ಏನು ಸುಖವೊ ಕಾಣೆನು. ಒಡೆಯ-
ನಿಲ್ಲದಿಹ ಮನೆಯ ಜನ ಕಡಿದಾಡುವರು ಕೂಡು-
ವರು, ಅಂತೆ, ಯಾರ ಬದುಕೋ ಯಾರು ಬಳಸುವರೊ!
ಎದೆಯ ಹೊಕ್ಕರಣೆಯಲಿ ಹೊಕ್ಕು ನೋಡಿರಿ ತಳದ
ನೆಲೆ, ತಣಿವು ನಲಿವುಗಳ ನಿಲವು ನಿಲುಕುವ ಬಗೆಯ.
*****